ಮಂಗಳವಾರ, ಸೆಪ್ಟೆಂಬರ್ 21, 2021
28 °C
ಚಿಕನ್, ಮೊಟ್ಟೆ ದರ ಏರಿಕೆ; ಹಣ್ಣುಗಳ ದರ ಯಥಾಸ್ಥಿತಿ

ನವರಾತ್ರಿ: ಹೂವಿನ ಧಾರಣೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನವರಾತ್ರಿ ಹಬ್ಬದ ಪ್ರಭಾವ ಮಾರುಕಟ್ಟೆಯ ಮೇಲೂ ಆಗಿದೆ. ಹೂವುಗಳ ಮಾರುಕಟ್ಟೆಯಲ್ಲಿ ಈ ವಾರ ಎಲ್ಲ ಬಗೆಯ ಹೂವುಗಳ ಬೆಲೆ ಹೆಚ್ಚಳವಾಗಿದೆ. ಆಯುಧ ಪೂಜೆ ಹಾಗೂ ಸೋಮವಾರ, ಶುಕ್ರವಾರದ ವಿಶೇಷ ಪೂಜೆಗೆ ಹೂವುಗಳ ಬೇಡಿಕೆ ಇನ್ನಷ್ಟು ಹೆಚ್ಚಲಿದೆ. 

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕೆಜಿ ಚೆಂಡು ಹೂ ₹10, ಕನಕಾಂಬರ ₹600, ಮಲ್ಲಿಗೆ ₹200, ಕಾಕಡ ₹160, ಮೊಳ್ಳೆ ₹ 120, ಗುಲಾಬಿ (100ಕ್ಕೆ) ₹30, ಸುಗಂಧ ರಾಜ ಹಾರ ₹ 5, ಸುಗಂಧರಾಜ ಹೂ ₹ 30 ಹೆಚ್ಚಳವಾಗಿದೆ. 

‘ಮುಂದಿನ ಒಂದು ವಾರ ಬೆಲೆ ಏರಿಕೆಯಾಗುವ ನಿರೀಕ್ಷೆ ಇದೆ. ಹಬ್ಬದ ದಿನ ಸಮೀಪವಿದೆ. ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು ನಡೆಯಲಿವೆ. ಹೀಗಾಗಿ, ಹೂವುಗಳ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಬಿಡಿ ಹೂವುಗಳ ವ್ಯಾಪಾರಿ ಮಹೇಶ್ ‘ಪ್ರಜಾವಾಣಿ’ಗೆ ಹೇಳಿದರು.

ತರಕಾರಿ ಮಾರುಕಟ್ಟೆಯಲ್ಲಿ ಕೆಲ ತರಕಾರಿಗಳು ಮಾತ್ರ ತುಟ್ಟಿಯಾಗಿದೆ. ಕಳೆದ ವಾರಕ್ಕಿಂತ ಈರುಳ್ಳಿ, ಟೊಮೆಟೊ ₹5. ಕ್ಯಾರೆಟ್‌, ಮರಗೆಣಸು, ಬೀಟ್‌ರೂಟ್‌, ಹಸಿಮೆಣಸಿನ ಕಾಯಿ ₹10, ಶುಂಠಿ ₹20, ಬೆಳ್ಳುಳ್ಳಿ ₹40 ಹೆಚ್ಚಳವಾಗಿದೆ. ಗೋರಿಕಾಯಿ ₹5, ನಿಂಬೆ ಹಣ್ಣು ₹1 ದರ ಇಳಿಕೆಯಾಗಿದೆ.

‘ಕೆಲ ತರಕಾರಿಗಳ ಧಾರಣೆ ಹೆಚ್ಚಳವಾಗಿದೆ. ಈರುಳ್ಳಿ ಕಳೆದ ವಾರದಿಂದ ಏರಿಕೆ ಕಾಣುತ್ತಿದೆ. ಶುಂಠಿ ಈ ವಾರ ತುಟ್ಟಿಯಾಗಿದೆ. ಉಳಿದ ತರಕಾರಿಗಳ ಬೆಲೆ ಯಥಾಸ್ಥಿತಿ ಮುಂದುವರಿದಿದೆ’ ಎನ್ನುತ್ತಾರೆ ಹಾಪ್‌ಕಾಮ್ಸ್‌ ವ್ಯಾಪಾರಿ ಮಧು.

ಚಿಕನ್, ಮೊಟ್ಟೆ ಬೆಲೆ ಹೆಚ್ಚಳ: ಮಾಂಸ ಮಾರುಕಟ್ಟೆಯಲ್ಲಿ ಮೊಟ್ಟೆ ಧಾರಣೆ ಕಳೆದ ವಾರಕ್ಕಿಂತ ಈ ವಾರ ₹5 ಹಾಗೂ ಚಿಕನ್‌ ₹20 ಏರಿಕೆಯಾಗಿದೆ. ಕಳೆದ ವಾರದಿಂದ ಮೊಟ್ಟೆ ಬೆಲೆ ಇಳಿಕೆಯಾಗಿಲ್ಲ. ₹ 417 ಇದ್ದ ಬೆಲೆ ಈ ವಾರ ₹ 422 ಆಗಿದೆ. ಮೀನುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮಹಾಲಯ ಅಮಾವಾಸ್ಯೆ ಬಳಿಕ ಚಿಕನ್‌, ಮೊಟ್ಟೆಗೆ ಮಾತ್ರ ಬೇಡಿಕೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

‘ಅಕ್ಟೋಬರ್‌ ತಿಂಗಳ ಮೊದಲ ವಾರದಲ್ಲಿ ಹಬ್ಬವಿದೆ. ಎರಡು ವಾರಗಳಿಂದ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಇದೇ ಬೆಲೆ ಮುಂದುವರಿಯುವ ನಿರೀಕ್ಷೆ ಇದೆ’ ಎನ್ನುತ್ತಾರೆ ಮೊಟ್ಟೆ ವ್ಯಾಪಾರಿಗಳು.

ಹಣ್ಣುಗಳ ದರ ಯಥಾಸ್ಥಿತಿ: ಹಣ್ಣುಗಳ ಮಾರುಕಟ್ಟೆಯಲ್ಲಿ ಕಳೆದ ವಾರದ ಬೆಲೆಯೇ ಮುಂದುವರಿದಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು