ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರೇ ಸರ್ಕಾರಕ್ಕೆ ಸಾಲಕೊಡುವಂತಾಗಬೇಕು: ಸಚಿವ ಶಿವಾನಂದ ಎಸ್.ಪಾಟೀಲ‌

Published 20 ಜನವರಿ 2024, 4:26 IST
Last Updated 20 ಜನವರಿ 2024, 4:26 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ‘ಬರಗಾಲದ ವೇಳೆ ಸರ್ಕಾರ ಸಾಲಮನ್ನಾ ಮಾಡುವುದು ಸಾಮಾನ್ಯ. ಆದರೆ, ಯಾವಾಗಲೂ ಸರ್ಕಾರಕ್ಕೆ ಸಾಲಮನ್ನಾ ಮಾಡಲು ಸಾಧ್ಯವಿಲ್ಲ. ರೈತರು ವೈಜ್ಞಾನಿಕವಾಗಿ ಕೃಷಿ ಮಾಡುವ ಮೂಲಕ ಸರ್ಕಾರಕ್ಕೆ ಸಾಲ ಕೊಡುವ ಸ್ಥಿತಿ ಸೃಷ್ಟಿಯಾಗಬೇಕು’ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ‌ ಶುಕ್ರವಾರ ಹೇಳಿದರು. 

ತಾಲ್ಲೂಕಿನ ಬೇಗೂರು ಉಪ ಮಾರುಕಟ್ಟೆ ಪ್ರಾಗಂಣದಲ್ಲಿ ಹತ್ತಿ ಮಾರುಕಟ್ಟೆಗಾಗಿ ಮುಚ್ಚು ಹರಾಜುಕಟ್ಟೆ, ಸಿ.ಸಿ.ರಸ್ತೆ, ಅಸ್ಪಾಲ್ಟ್ ರಸ್ತೆ, ಸಿಸಿ ಚರಂಡಿ, ಆಡಳಿತ ಕಚೇರಿ ಮತ್ತು ಶೌಚಾಲಯ ನಿರ್ಮಾಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

‘ಎಲ್ಲ ವಸ್ತುಗಳ ಧಾರಣೆ ನಿಗದಿಯಾಗಿದೆ. ಆದರೆ, ರೈತ ಬೆಳೆದ ಬೆಳೆಗಳಿಗೆ ಮಾತ್ರ ಇನ್ನೂ ಸ್ಥಿರ ಧಾರಣೆ ನಿಗದಿಯಾಗಿಲ್ಲ. ಈ ಪರಿಸ್ಥಿತಿ ಹೋಗಬೇಕು. ದೇಶದ ಪ್ರಧಾನ ಮಂತ್ರಿಯಾಗಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳು ಮನಸ್ಸು ಮಾಡಿದರೆ ರೈತರ ಬೆಳೆಗಳಿಗೆ ಸ್ಥಿರ ಧಾರಣೆ ನಿಗದಿ ಮಾಡಲು ಸಾಧ್ಯ. ರೈತರು ಉಚಿತವನ್ನು ಬಯಸುವುದಿಲ್ಲ, ಬೆಳೆಗಳಿಗೆ ಬೆಂಬಲ ಬೆಲೆ ನೀಡಿದರೆ ಖಂಡಿತವಾಗಿ ರೈತರ ಬದುಕು ಹಸನಾಗುತ್ತದೆ’ ಎಂದರು.

₹6 ಕೋಟಿ ಅನುದಾನ: ‘ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ರೈತನ ಏಳಿಗೆಯ ದೂರದೃಷ್ಟಿ ಇಟ್ಟು, ಈ ಭಾಗದಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳಿಗೆ ಯೋಗ್ಯ ದರ ಕೊಡಿಸುವ ಜವಾಬ್ದಾರಿಯಿಂದ ಹತ್ತಿ ಮಾರುಕಟ್ಟೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರು. ಅದರ ಫಲವಾಗಿ ಈಗ ಹತ್ತಿ ಮಾರುಕಟ್ಟೆಗೆ ₹6 ಕೋಟಿ ಅನುದಾನ ನೀಡಿದ್ದೇವೆ. ಅವಶ್ಯಕತೆ ಬಿದ್ದರೆ ಇನ್ನೂ ಹೆಚ್ಚಿನ ಅನುದಾನ ಮಂಜೂರು ಮಾಡಲಾಗುವುದು’ ಎಂದರು. 

‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಆಸಕ್ತಿ ವಹಿಸಿ ನಮ್ಮ ಇಲಾಖೆಗೆ ನಬಾರ್ಡ್ ಯೋಜನೆಯಡಿ ₹390 ಕೋಟಿ ಅನುದಾನ ನೀಡಿದ್ದಾರೆ. ಅದರಡಿ ರಾಜ್ಯದಲ್ಲಿರುವ ಮಾರುಕಟ್ಟೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ’ ಎಂದರು.

ಹತ್ತಿ ಸಂಸ್ಕರಣ ಘಟಕಕ್ಕೆ ಕ್ರಮ: ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಿದ ನಂತರ ಎಲ್ಲ ಎಪಿಎಂಸಿಗಳು ದುಃಸ್ಥಿತಿಗೆ ತಲುಪಿವೆ. ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ವಾಪಸ್‌ ಪಡೆದಿದ್ದರೂ, ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮಾತ್ರ ಉಳಿಸಿದೆ. ಇದರಿಂದ ರೈತರ ಶೋಷಣೆಯಾಗುತ್ತಿದೆ. ರೈತರ ಆದಾಯ ದ್ವಿಗುಣಗೊಂಡಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಎಪಿಎಂಸಿ ಕಾನೂನು ಜಾರಿಗೆ ತಂದು ಸ್ಪರ್ಧಾತ್ಮಕ ಬೆಲೆಯನ್ನು ರಾಜ್ಯ ಸರ್ಕಾರ ಕೊಡಿಸಲಿದೆ’ ಎಂದರು. 

‘ಬೇಗೂರಿನಲ್ಲಿ ಹತ್ತಿರ ವ್ಯಾಪಾರದ ಬದಲು ಹತ್ತಿ ಸಂಸ್ಕರಣೆ ಆಗುವ ವ್ಯವಸ್ಥೆ ಮಾಡಲಾಗುವುದು. ಶೀಥಲೀಕರಣ ಘಟಕ ಸ್ಥಾಪನೆಗೆ ಮನವಿ ಬಂದಿದ್ದು, ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

3 ತಿಂಗಳಲ್ಲಿ ಅನುಮೋದನೆ: ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ‘ದಿವಂಗತ ಮಹದೇವಪ್ರಸಾದ್ ಅವರ ವಿಶೇಷ ಕಾಳಜಿಯಿಂದ 1997ರಲ್ಲಿ ಗುಂಡ್ಲುಪೇಟೆ ಹಾಗೂ ತೆರಕಣಾಂಬಿಯಲ್ಲಿ ಎಪಿಎಂಸಿ ಮಾರುಕಟ್ಟೆಗಳು ಸ್ಥಾಪನೆಯಾಗಿವೆ. ಈ ಭಾಗದಲ್ಲಿ ಹತ್ತಿಯನ್ನು ಹೆಚ್ಚು ಬೆಳೆಯುತ್ತಿದ್ದುದರಿಂದ ಹತ್ತಿ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದರು. ನಂತರ ಇದು ನನೆಗುದಿಗೆ ಬಿದ್ದಿತ್ತು. ಇದೀಗ ಸಚಿವ ಶಿವಾನಂದ ಪಾಟೀಲ ಅವರ ಸಹಕಾರದಿಂದ ಮೂರು ತಿಂಗಳಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿ ಅನುದಾನ ಬಿಡುಗಡೆಯಾಗಿದೆ. ಇದು ಕ್ಷೇತ್ರದ ಜನರು ಖುಷಿ ಪಡುವ ವಿಚಾರ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಮಾರುಕಟ್ಟೆ ರಾಜ್ಯ ನಿರ್ದೇಶಕ ಗಂಗಾಧರ್ ಸ್ವಾಮಿ, ಸೂಪರಿಂಟೆಂಡೆಂಟ್‌ ರಘುನಂದನ್, ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಎಪಿಎಂಸಿ ಅಧ್ಯಕ್ಷ ಕೆ.ಎಸ್.ಶಿವಪ್ರಕಾಶ್, ಉಪಾಧ್ಯಕ್ಷ ವೆಂಕಟನಾಯಕ, ಸದಸ್ಯರಾದ ಆರ್.ಎಸ್.ನಾಗರಾಜು, ಭಾಗ್ಯ, ವಿರೂಪಾಕ್ಷ, ಎಚ್.ಬಿ.ನಾಗರಾಜು, ಅರಸಶೆಟ್ಟಿ, ಬಸವರಾಜಪ್ಪ, ಪಿ.ಮಹದೇವಪ್ಪ, ಎಂ.ಜಿ.ನಾಗರತ್ನ, ರಾಜು, ಮಹದೇವಪ್ಪ, ಎಸ್.ನಾಗಪ್ಪ, ಎಪಿಎಂಸಿ ಕಾರ್ಯದರ್ಶಿ ಎಸ್.ಶ್ರೀಧರ್, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕಬ್ಬಹಳ್ಳಿ ಮಹೇಶ್, ಕೆರೆಹಳ್ಳಿ ನವೀನ್ ರೈತ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.  

ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ಹಾಲಿನನಾಗರಾಜು ಸೇರಿದಂತೆ ಇತರರು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಶಾಸಕ ಎಚ್‌.ಎಂ.ಗಣೇ್‌ಶ್‌ ‍ಪ್ರಸಾದ್‌ ಜೊತೆಗಿದ್ದರು
ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳಾದ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ಹಾಲಿನನಾಗರಾಜು ಸೇರಿದಂತೆ ಇತರರು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಶಾಸಕ ಎಚ್‌.ಎಂ.ಗಣೇ್‌ಶ್‌ ‍ಪ್ರಸಾದ್‌ ಜೊತೆಗಿದ್ದರು
ಮಿಶ್ರ ಬೆಳೆ ಪದ್ಧತಿ ಅನುಸರಿಸಲು ಸಲಹೆ ₹6 ಕೋಟಿ ವೆಚ್ಚದಲ್ಲಿ ಕಾಮಗಾರಿ ಮೂರು ತಿಂಗಳಲ್ಲಿ ಅನುದಾನ
ಎಪಿಎಂಸಿಗೆ ಭೇಟಿ ಪರಿಶೀಲನೆ
ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಶೇ 10ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂದು ರೈತರು ದೂರು ಬಂದಿದ್ದರಿದ ಸಚಿವರು ಗುಂಡ್ಲುಪೇಟೆಯ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ‘ಶೇ 8ರಿಂದ 10ರಷ್ಟು ಕಮಿಷನ್ ತೆಗೆದುಕೊಳ್ಳುತ್ತಿದ್ದ ವರ್ತಕರೊಬ್ಬರ ಪರವಾನಗಿಯನ್ನು ಈಗಾಗಲೇ ಅಮಾನತು ಗೊಳಿಸಲಾಗಿದೆ. ವರ್ತಕರು ರೈತರ ಶೋಷಣೆ ಮಾಡದೆ ಕಾನೂನು ಬದ್ದವಾಗಿ ಹಣ ತೆಗೆದುಕೊಳ್ಳಬೇಕು. ಶೇ 10ರಷ್ಟು ತೆಗೆದುಕೊಳ್ಳುವುದು ಕಂಡು ಬಂದರೆ ಅಂತಹ ವರ್ತಕರ ಪರವಾನಹಿಯನ್ನು ಅಮಾನತು ಮಾಡಲಾಗುವುದು’ ಎಂದು ಎಚ್ಚರಿಸಿದರು.  ರೈತ ಸಂಘಟನೆಗಳಿಂದ ಮನವಿ: ಗುಂಡ್ಲುಪೇಟೆಯಲ್ಲಿ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ ಸಂಘ ಮತ್ತು ಹಸಿರುಸೇನೆಯ (ವಾಸುದೇವ ಮೇಟಿ ಬಣ) ಪದಾಧಿಕಾರಿಗಳು ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT