ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಸೆಳೆಯಲು ವಿವಿಧ ಕಸರತ್ತು

ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ನಿಲಯಗಳು ಆರಂಭ, ಕೋವಿಡ್‌ ಕಾರಣಕ್ಕೆ ಕುಸಿದಿದ್ದ ಹಾಜರಾತಿ
Last Updated 22 ಮೇ 2022, 15:53 IST
ಅಕ್ಷರ ಗಾತ್ರ

ಚಾಮರಾಜನಗರ: 2022–23ನೇ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆಯೇ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯಗಳು(6ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ) ಆರಂಭವಾಗಿವೆ.

ಕೋವಿಡ್‌ ಕಾರಣಕ್ಕೆ ಎರಡು ವರ್ಷಗಳಿಂದ ಹಾಸ್ಟೆಲ್‌ಗಳಲ್ಲಿ ಮಕ್ಕಳ ಹಾಜರಾತಿ ಕುಸಿದಿತ್ತು. ಈ ಬಾರಿ ಕೋವಿಡ್‌ ಸಮಸ್ಯೆ ಇಲ್ಲದಿರುವುದರಿಂದ ಹಾಸ್ಟೆಲ್‌ಗೆ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ.

ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಹಾಸ್ಟೆಲ್‌ಗಳನ್ನು ಹೊಂದಿವೆ. ಮೆಟ್ರಿಕ್‌ ಪೂರ್ವ ಹಾಗೂ ನಂತರದ ಹಾಸ್ಟೆಲ್‌ಗಳು ಸೇರಿ 99 ಹಾಸ್ಟೆಲ್‌ಗಳಿವೆ. ಸಾಮಾನ್ಯವಾಗಿ ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಿಗೆ ಬೇಡಿಕೆ ಇರುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗುತ್ತಾರೆ. ಮೆಟ್ರಿಕ್‌ ಪೂರ್ವದ ಹಾಸ್ಟೆಲ್‌ಗಳಿಗೆ ಸೇರುವವರ ಸಂಖ್ಯೆ ಕಡಿಮೆ. ಎರಡು ವರ್ಷಗಳಿಂದ ಒಟ್ಟಾರೆ ಹಾಸ್ಟೆಲ್‌ಗಳಲ್ಲಿ ಹಾಜರಾತಿ ಶೇ 60ಕ್ಕಿಂತ ಹೆಚ್ಚಿರಲಿಲ್ಲ.

‌ಸಮಾಜ ಕಲ್ಯಾಣ ಇಲಾಖೆ (40), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (12) ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳು (7) ಒಟ್ಟಾಗಿ 59 ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗಳನ್ನು ಹೊಂದಿವೆ. 4,270 ವಿದ್ಯಾರ್ಥಿಗಳು ಮಂಜೂರಾಗಿದ್ದರೆ ಸದ್ಯ 1,147 ಹಾಜರಾತಿ ಇದೆ. ಹಾಸ್ಟೆಲ್‌ಗಳಿಗೆ ದಾಖಲಾಗಿರುವ ಮಕ್ಕಳಲ್ಲಿ ಹಲವರಲ್ಲಿ ಇನ್ನೂ ಬಂದಿಲ್ಲ.

ಹಾಸ್ಟೆಲ್‌ಗಳಿಗೆ ಮಂಜೂರಾದ ಸಂಖ್ಯೆಯಷ್ಟು ವಿದ್ಯಾರ್ಥಿಗಳನ್ನು ದಾಖಲಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಬಿ.ಬಿ.ಕಾವೇರಿ ಅವರು ಇತ್ತೀಚೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಜಿಲ್ಲೆಯಲ್ಲಿ ಬಹುತೇಕ ಎಲ್ಲ ಹಾಸ್ಟೆಲ್‌ಗಳು ಉತ್ತಮ ಕಟ್ಟಡಗಳನ್ನು ಹೊಂದಿವೆ. ಮೂಲಸೌಕರ್ಯಗಳೂ ಚೆನ್ನಾಗಿವೆ. ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯ ಬಗ್ಗೆ ಅಲ್ಲೊಂದು ಇಲ್ಲೊಂದು ದೂರು ಬರುವುದು ಬಿಟ್ಟರೆ ದೊಡ್ಡ ಸಮಸ್ಯೆಗಳು ಇಲ್ಲ. ಹಾಗಿದ್ದರೂ ಹಾಸ್ಟೆಲ್‌ಗಳ ಸಾಮರ್ಥ್ಯದಷ್ಟು ಮಕ್ಕಳು ದಾಖಲಾಗುತ್ತಿಲ್ಲ. ಕೋವಿಡ್‌ ಕಾರಣಕ್ಕೆ ಎರಡು ವರ್ಷ ದಾಖಲಾತಿ ಪ್ರಕ್ರಿಯೆಗೆ ಸರ್ಕಾರವೂ ಹೆಚ್ಚು ಗಮನ ನೀಡಿರಲಿಲ್ಲ.

ಈ ಬಾರಿ ಅಧಿಕಾರಿಗಳು, ವಾರ್ಡನ್‌ಗಳು ಹಾಗೂ ಸಿಬ್ಬಂದಿ ಹೆಚ್ಚು ಮಕ್ಕಳನ್ನು ದಾಖಲಿಸಲು ಪ್ರಯತ್ನ ಪಡುತ್ತಿದ್ದಾರೆ. ಮನೆ ಮನೆ ಭೇಟಿ, ಭಿತ್ತ ಪತ್ರ, ಧ್ವನಿವರ್ಧಕದ ಮೂಲಕ ಪ್ರಚಾರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಪೋಷಕರ ಹಿಂದೇಟು:ಕೋವಿಡ್ ಸೋಂಕು ಕಡಿಮೆಯಾದರೂ ಪೋಷಕರು ಮಕ್ಕಳನ್ನು ವಿದ್ಯಾರ್ಥಿ ನಿಲಯಕ್ಕೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.

‘ಹಿಂದೆ ಗ್ರಾಮೀಣ ಭಾಗಗಳಲ್ಲಿ ಶಾಲಾ ಕಾಲೇಜುಗಳ ಸಂಖ್ಯೆ ಕಡಿಮೆ ಇತ್ತು. ಹಾಗಾಗಿ, ಮಕ್ಕಳು ಹಾಸ್ಟೆಲ್‌ನಲ್ಲಿ ಇದ್ದು ಓದುತ್ತಿದ್ದರು. ಈಗ ಶಾಲಾ ಕಾಲೇಜುಗಳ ಸಾಕಷ್ಟು ಸಂಖ್ಯೆಯಲ್ಲಿದೆ. ಸಾರಿಗೆ ಸೌಕರ್ಯಗಳು ಇವೆ. ಹಾಗಾಗಿ, ಹತ್ತಿರದ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಇದರಿಂದಾಗಿ ಹಾಸ್ಟೆಲ್‌ನಲ್ಲಿ ಇರಿಸಲು ಪೋಷಕರು ಬಯಸುತ್ತಿಲ್ಲ’ ಎಂಬುದು ಅಧಿಕಾರಿಗಳ ಹೇಳಿಕೆ.

ವಸತಿ ಶಾಲೆಗಳಿಗೆ ಬೇಡಿಕೆ: ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ, ಇಂದಿರಾಗಾಂಧಿ, ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಗಳು ಸೇರಿದಂತೆ 21 ವಸತಿ ಶಾಲೆಗಳಿವೆ. ಇಲ್ಲಿ ಉತ್ತಮ ಸೌಲಭ್ಯಗಳಿದ್ದು, ಕಲಿಕಾ ಪರಿಸರವೂ ಚೆನ್ನಾಗಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವೂ ಚೆನ್ನಾಗಿ ಬರುತ್ತಿದೆ. ಹೀಗಾಗಿ ಪೋಷಕರು ಮಕ್ಕಳನ್ನು ಅದರಲ್ಲೂ ಹೆಣ್ಣು ಮಕ್ಕಳನ್ನು ಸೇರಿಸುತ್ತಿದ್ದಾರೆ. ಇಲ್ಲಿಯೇ ವಸತಿ ವ್ಯವಸ್ಥೆ ಇರುವುದರಿಂದ ಬೇರೆ ಹಾಸ್ಟೆಲ್‌ಗಳ ಅಗತ್ಯವಿರುವುದಿಲ್ಲ. ಈ ಕಾರಣಕ್ಕೂ ಬೇರೆ ಹಾಸ್ಟೆಲ್‌ಗಳಿಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ ಅವರು.

20 ಆಶ್ರಮ ಶಾಲೆಗಳು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ 20 ಆಶ್ರಮ ಶಾಲೆಗಳಿವೆ. ಬುಡಕಟ್ಟು ಸಮುದಾಯದ ಮಕ್ಕಳಿಗೆ 1ರಿಂದ 5ನೇ ತರಗತಿವರೆಗೆ ವಸತಿ ಸಹಿತ ಶಿಕ್ಷಣ ನೀಡಲಾಗುತ್ತದೆ. ಪ್ರತಿ ಶಾಲೆಯಲ್ಲೂ 125 ಮಕ್ಕಳ ದಾಖಲಾತಿಗೆ ಅವಕಾಶ ಇದೆ. ಸದ್ಯ 869 ಮಕ್ಕಳು ಇದ್ದಾರೆ. ಇಲಾಖೆಯ ಅಧಿಕಾರಿಗಳನ್ನು ಹೆಚ್ಚು ಬುಡಕಟ್ಟು ಮಕ್ಕಳನ್ನು ದಾಖಲಿಸುವುದಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇಲ್ಲೂ ದಾಖಲಾತಿ ಹೆಚ್ಚುವ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ.

ಜನರು ಏನಂತಾರೆ...?

ಕಟ್ಟಡ ದುರಸ್ತಿ ಮಾಡಿ

ಸಂತೇಮರಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ ಕಟ್ಟಡ ಶಿಥಿಲವಾಗಿರುವುದರಿಂದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಬಾಡಿಗೆ ಕಟ್ಟಡದಲ್ಲಿ ಎಲ್ಲ ಸೌಲಭ್ಯಗಳು ಇರುವುದಿಲ್ಲ. ಹಾಗಾಗಿ, ಹಾಸ್ಟೆಲ್‌ ಕಟ್ಟಡವನ್ನು ದುರಸ್ತಿ ಮಾಡಬೇಕು. ಇಲ್ಲವೇ ಹೊಸ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು.

– ರೇವಣ್ಣ, ಕೆಂಪನಪುರ, ಚಾಮರಾಜನಗರ ತಾಲ್ಲೂಕು

ಸೌಕರ್ಯಗಳಿವೆ

ನಾವು ಗ್ರಾಮೀಣ ಪ್ರದೇಶದವರು. ಮಕ್ಕಳು ದಿನವೂ ದೂರದ ಊರಿನಲ್ಲಿರುವ ಶಾಲಾ ಕಾಲೇಜಿಗೆ ಹೋಗುವುದಕ್ಕೆ ಕಷ್ಟವಾಗುತ್ತದೆ. ಹಾಗಾಗಿ, ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳನ್ನು ಬಿಟ್ಟು ವಿದ್ಯಾಭ್ಯಾಸ ಮಾಡಿಸುತ್ತಿದ್ದೇವೆ. ಈಗ ಹಾಸ್ಟೆಲ್‌ಗಳಲ್ಲಿ ಎಲ್ಲ ಸೌಕರ್ಯ ಲಭ್ಯವಿವೆ.

–ರಂಗಸ್ವಾಮಿ,ಪಿ.ಜಿ.ಪಾಳ್ಯ, ಕೊಳ್ಳೇಗಾಲ ತಾಲ್ಲೂಕು

ಸಾರಿಗೆ ವ್ಯವಸ್ಥೆ ಕಲ್ಪಿಸಿ

ಹನೂರಿನಿಂದ ಹೊರವಲಯದಲ್ಲಿರುವ ಚಿಂಚಳ್ಳಿ ಗ್ರಾಮದಲ್ಲಿ ಹೊಸ ಹಾಸ್ಟೆಲ್‌ ನಿರ್ಮಾಣವಾಗಿದೆ. ಇಲ್ಲಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲ. ಹಾಗಾಗಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳಿಗೆ ಹೋಗುವುದಕ್ಕೆ ಕಷ್ಟವಾಗುತ್ತದೆ. ಮಕ್ಕಳ ಅನುಕೂಲಕ್ಕಾಗಿ ವಾಹನ ವ್ಯವಸ್ಥೆ ಕಲ್ಪಿಸಬೇಕು

– ಪ್ರದೀಪ್, ಹನೂರು.

ಪೋಷಕರ ಆತಂಕ

ಕೋವಿಡ್ ನಂತರ ಹಾಸ್ಟೆಲ್‌ಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಇಷ್ಟ ಪಡುತ್ತಿಲ್ಲ. ಈಗ ಸೋಂಕಿನ ಹಾವಳಿ ಇಳಿದಿದ್ದು, ವಿದ್ಯಾರ್ಥಿ ನಿಲಯಗಳು ಆರಂಭದಿಂದಲೇ ಉತ್ತಮ ಸೌಲಭ್ಯ ಒದಗಿಸಿದರೆ, ಹೊಂದಿಕೊಳ್ಳುವುದು ಸುಲಭ ಆಗಲಿದೆ. ಆದರೆ, ಮನೆಯ ಸುತ್ತಮುತ್ತ ಶಾಲೆಗಳು ಇರುವುದರಿಂದ ಬಹುತೇಕರು ಹಾಸ್ಟೆಲ್‌ಗಳತ್ತ ಮುಖ ಮಾಡುವುದಿಲ್ಲ.

–ವೈ.ಎನ್.ಪ್ರೀತಿ, ವಿದ್ಯಾರ್ಥಿನಿ,ಯಳಂದೂರು

ವಸತಿ ಶಾಲೆ ಚೆನ್ನಾಗಿದೆ

ಮೊರಾರ್ಜಿ ವಸತಿ ಶಾಲೆಗಳಲ್ಲಿ ಉತ್ತಮ ಪರಿಸರದ ಜೊತೆಗೆ ಶೈಕ್ಷಣಿಕ ಚಟುವಟಿಕೆ ಸಹ ಚೆನ್ನಾಗಿದೆ. ಹಾಗಾಗಿ, ಮಗಳನ್ನು ಅಲ್ಲಿಗೆ ಸೇರಿಸಿದ್ದೇನೆ. ಚೆನ್ನಾಗಿ ಓದುತ್ತಿದ್ದಾಳೆ

–ಶ್ರೀನಿವಾಸ್, ಹಂಗಳ, ಗುಂಡ್ಲುಪೇಟೆ ತಾಲ್ಲೂಕು

––

ದಾಖಲಾತಿ ಹೆಚ್ಚಿಸಲು ಎಲ್ಲ ಪ್ರಯತ್ನ

ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಹಾಸ್ಟೆಲ್‌ಗಳಲ್ಲಿ ದಾಖಲಾತಿ ಪ್ರಮಾಣ ಕುಸಿದಿತ್ತು. ಈ ಬಾರಿ ಕೋವಿಡ್‌ ಸಮಸ್ಯೆ ಇಲ್ಲ. ಶಾಲೆ ಈಗಷ್ಟೆ ಆರಂಭವಾಗಿದೆ. ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಈ ಹಿಂದೆ ದಾಖಲಾದವರು ಕೂಡ ಪೂರ್ಣ ಪ್ರಮಾಣದಲ್ಲಿ ಹಾಸ್ಟೆಲ್‌ಗಳಿಗೆ ಬಂದಿಲ್ಲ. ವಾರ್ಡನ್‌ಗಳು ಹಾಗೂ ಸಿಬ್ಬಂದಿ ಮನೆ ಮನೆಗೆ ತೆರಳಿ ಹಾಸ್ಟೆಲ್‌ಗಳ ಬಗ್ಗೆ, ಅಲ್ಲಿರುವ ಸೌಕರ್ಯಗಳ ಬಗ್ಗೆ ಪೋಷಕರು ಹಾಗೂ ಮಕ್ಕಳಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಹೆಚ್ಚಿನ ಪ‍್ರಮಾಣದಲ್ಲಿ ದಾಖಲಾಗುವ ನಿರೀಕ್ಷೆ ಇದೆ.

ನಮ್ಮಲ್ಲಿ 21 ವಸತಿಶಾಲೆಗಳೂ ಇರುವುದರಿಂದ ಹೆಚ್ಚಿನ ಪೋಷಕರು ಮಕ್ಕಳನ್ನು ಅಲ್ಲಿಗೆ ಸೇರಿಸಲು ಬಯಸುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶವೂ ಚೆನ್ನಾಗಿದೆ.

–ನಂದಾ ಹಣಬರಟ್ಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ

––

ದಾಖಲಾತಿ ಹೆಚ್ಚಳ ನಿರೀಕ್ಷೆ

ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಒಟ್ಟು 31 ಹಾಸ್ಟೆಲ್‌ಗಳಿವೆ. ಈ ಪೈಕಿ 12 ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗಳು. ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಿಗೆ ಹೆಚ್ಚು ಬೇಡಿಕೆ ಇದೆ. ಕೋವಿಡ್‌ ಕಾರಣಕ್ಕೆ ಎರಡು ವರ್ಷಗಳಿಂದ ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸ್ವಲ್ಪ ಕಡಿಮೆ ಇತ್ತು. ಈ ಬಾರಿ ಹೆಚ್ಚಳವಾಗಲಿದೆ. ಈಗಾಗಲೇ ಹಾಸ್ಟೆಲ್‌ಗಳನ್ನು ತೆರೆಯಲಾಗಿದ್ದು, ಮಕ್ಕಳು ಬರುತ್ತಿದ್ದಾರೆ. ಹೊಸ ದಾಖಲಾತಿಗಳೂ ನಡೆಯುತ್ತಿದೆ. ಪ್ರಚಾರ ಕಾರ್ಯವನ್ನೂ ಮಾಡುತ್ತಿದ್ದೇವೆ.

– ಬಿ.ರೇವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ

––

ದಾಖಲಾತಿಗೆ ವಿಶೇಷ ಆಂದೋಲನ

ಇಲಾಖೆ ವ್ಯಾಪ್ತಿಯಲ್ಲಿ ಏಳು ಮೆಟ್ರಿಕ್‌ ಪೂರ್ವ ಹಾಸ್ಟೆಲ್‌ಗಳಿವೆ. ಇದರ ಜೊತೆಗೆ ಬುಡಕಟ್ಟು ಮಕ್ಕಳಿಗಾಗಿ 20 ಆಶ್ರಮ ಶಾಲೆಗಳೂ ಇವೆ. ಇಲ್ಲಿ ಮಕ್ಕಳ ದಾಖಲಾತಿಗಾಗಿ 13 ದಿನಗಳ ವಿಶೇಷ ಆಂದೋಲನ ಕೈಗೊಳ್ಳಲಾಗಿದೆ. ವಾರ್ಡನ್‌ಗಳು ಹಾಗೂ ಶಿಕ್ಷಕರು ಪೋಡುಗಳು, ಗಿರಿಜನ ಕಾಲೊನಿಗಳಿಗೆ ತೆರಳಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಶಿಕ್ಷಣ ಇಲಾಖೆಯ ಸಹಕಾರದಿಂದ ಕಲಿಕಾ ಚೇತರಿಕಾ ವರ್ಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಶಿಕ್ಷಕರಿಗೆ ತರಬೇತಿಯನ್ನೂ ನೀಡಲಾಗುತ್ತಿದೆ. ಈ ಬಾರಿ ಹೆಚ್ಚು ಮಕ್ಕಳು ದಾಖಲಾಗುವ ನಿರೀಕ್ಷೆ ಇದೆ. ಜೂನ್‌ ತಿಂಗಳ ಅಂತ್ಯಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ.

– ಮಂಜುಳಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ

––

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್‌ ಪ್ರಕಾಶ್‌ ವಿ., ಬಿ.ಬಸವರಾಜು, ಮಹದೇವ್‌ ಹೆಗ್ಗವಾಡಿಪುರ, ಮಲ್ಲೇಶ ಎಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT