ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಣ್ಣು ಪರೀಕ್ಷೆಗೆ ಮನಸ್ಸು ಮಾಡದ ರೈತರು, ಗುರಿಯಷ್ಟೇ ಸಾಧಿಸುತ್ತಿರುವ ಕೃಷಿ ಇಲಾಖೆ

Published 4 ಡಿಸೆಂಬರ್ 2023, 9:05 IST
Last Updated 4 ಡಿಸೆಂಬರ್ 2023, 9:05 IST
ಅಕ್ಷರ ಗಾತ್ರ

ಚಾಮರಾಜನಗರ: ಹವಾಮಾನ ಬದಲಾವಣೆಯ ಕಾರಣದಿಂದ ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ರೈತರು ವರ್ಷದಿಂದ ವರ್ಷಕ್ಕೆ ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇದರ ಜೊತೆಗೆ, ತಜ್ಞರ ಮಾರ್ಗದರ್ಶನವಿಲ್ಲದೆ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಭೂಮಿಯ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗುತ್ತಿದ್ದು ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ಮಾಹಿತಿಯ ಕೊರತೆಯಿಂದ ರೈತರು ಮಣ್ಣಿನ ಸಂರಕ್ಷಣೆಯ ಬಗ್ಗೆ ಗಮನ ಹರಿಸಿಲ್ಲ. ತಮ್ಮ ಜಮೀನಿನ ಗುಣ ಲಕ್ಷಣಗಳ ಅರಿವೂ ಅವರಿಗಿಲ್ಲ. ಮಣ್ಣು ಪರೀಕ್ಷೆಯ ಮೂಲಕ ಅದನ್ನು ಅರಿಯಲೂ ಮುಂದಾಗುತ್ತಿಲ್ಲ. 

ಕೃಷಿ ಇಲಾಖೆಯು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ರೈತರ ಜಮೀನಿನ ಮಣ್ಣು ಪರೀಕ್ಷೆ ನಡೆಸಿ ಮಣ್ಣು ಆರೋಗ್ಯ ಕಾರ್ಡ್‌ ವಿತರಿಸುತ್ತಿದೆ. ಆದರೆ, ಅದು ಎಲ್ಲ ರೈತರಿಗೆ ಅಲ್ಲ. ಸರ್ಕಾರ ನಿಗದಿ ಪಡಿಸಿದ ಗುರಿಯಷ್ಟು ಮಾತ್ರ. ಈ ವರ್ಷ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯ ಅಡಿಯಲ್ಲಿ 10 ಸಾವಿರ ಮಣ್ಣು ಪರೀಕ್ಷೆಯ ಗುರಿಯನ್ನು ಜಿಲ್ಲೆಗೆ ನೀಡಲಾಗಿದ್ದು, ಕೃಷಿ ಇಲಾಖೆಯು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸುತ್ತಿದೆ. 

ಜಿಲ್ಲೆಯಲ್ಲಿ ಮಣ್ಣು ಪರೀಕ್ಷೆಗಾಗಿ ಒಂದು ಪ್ರಯೋಗಾಲಯ ಇದೆ. ಅಲ್ಲಿ ನಿರಂತರವಾಗಿ ಪರೀಕ್ಷೆ ನಡೆಸುತ್ತಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಂಗ ಸಂಸ್ಥೆ, ಹರದನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲೂ ಒಂದು ಪ್ರಯೋಗಾಲಯ ಇದೆ. ಅಲ್ಲೂ ಮಣ್ಣು ಪರೀಕ್ಷೆ ನಡೆಯುತ್ತಿದೆ. ನೀರು ಪರೀಕ್ಷೆ ನಡೆಸುವ ಸೌಲಭ್ಯವೂ ಇಲ್ಲಿದೆ. 

ಜಿಲ್ಲೆಯಲ್ಲಿ 2019–20ರಲ್ಲಿ 4,755, 2020–21ರಲ್ಲಿ 101, 202–22, 2022–23ರಲ್ಲಿ ತಲಾ 5000 ಮಣ್ಣು ಪರೀಕ್ಷೆಗಳ ಗುರಿಯನ್ನು ನೀಡಲಾಗಿದ್ದು, ಇಲಾಖೆ ಅದನ್ನು ಸಾಧಿಸಿದೆ. ಸಂಬಂಧಿಸಿದ ರೈತರಿಗೆ ಮಣ್ಣಿನ ಆರೋಗ್ಯ ಪತ್ರದ ಜೊತೆಗೆ, ಮಣ್ಣಿನ ಫಲವತ್ತತೆ ಸುಧಾರಿಸಲು ಅನುಸರಿಸಬೇಕಾದ ಸಲಹೆಗಳನ್ನೂ ನೀಡಿದೆ.

ರೈತರ ನಿರಾಸಕ್ತಿ: ಜಿಲ್ಲೆಯಲ್ಲಿ 2.16 ಲಕ್ಷ ರೈತರು ಇದ್ದಾರೆ. ಆದರೆ, ಬಹುತೇಕರು ಮಣ್ಣಿನ ಸಂರಕ್ಷಣೆ, ಮಣ್ಣು ಪರೀಕ್ಷೆಯ ಬಗ್ಗೆ ಏನೂ ತಿಳಿದಿಲ್ಲ. ಆ ಬಗ್ಗೆ ಅರಿಯುವ ಪ್ರಯತ್ನವನ್ನೂ ಮಾಡಿಲ್ಲ. ಅದರ ಅಗತ್ಯದ ಬಗ್ಗೆಯೂ ತಿಳಿದಿಲ್ಲ.

ಇಲಾಖೆಯ ಅಧಿಕಾರಿಗಳು ನಡೆಸುವ ಪರೀಕ್ಷೆಯನ್ನು ಬಿಟ್ಟರೆ, ರೈತರೇ ಸ್ವಯಂ ಪ್ರೇರಿತರಾಗಿ ಮಣ್ಣಿನ ಪರೀಕ್ಷೆಗೆ ಮುಂದಾಗುವುದು ಕಡಿಮೆ. ವರ್ಷಕ್ಕೆ 20ರಿಂದ 25 ರೈತರು ಸ್ವಯಂ ಪ್ರೇರಿತರಾಗಿ ಮಣ್ಣಿನ ಪರೀಕ್ಷೆಗೆ ಮುಂದಾಗುತ್ತಾರೆ ಎಂದು ಹೇಳುತ್ತಾರೆ ಅಧಿಕಾರಿಗಳು. ವೈಜ್ಞಾನಿಕವಾಗಿ ಕೃಷಿ ಮಾಡುವವರು ಈ ಬಗ್ಗೆ ಕಾಳಜಿ ವಹಿಸುತ್ತಾರೆ. ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರತಿ ತಿಂಗಳು 40ರಿಂದ 50 ಪರೀಕ್ಷೆಗಳು ನಡೆಯುತ್ತವೆ.  

‘ಮಣ್ಣಿನ ಪರೀಕ್ಷೆಯ ಪ್ರಾಮುಖ್ಯದ ಬಗ್ಗೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿಲ್ಲ. ಮಣ್ಣಿನ ಮಾದರಿಗಳನ್ನು ಎಲ್ಲಿ ಸಂಗ್ರಹಿಸುತ್ತಾರೆ? ಪರೀಕ್ಷೆ ವರದಿ ಬಂದ ನಂತರ ಏನು ಮಾಡುತ್ತಾರೆ ಎಂಬುದರ ಬಗ್ಗೆ ನಮಗೆ ಗೊತ್ತಾಗುವುದಿಲ್ಲ’ ಎಂದು ಹೇಳುತ್ತಾರೆ ರೈತರು. 

ಸಾವಯವ ಇಂಗಾಲ ಕುಂಠಿತ: ಜಿಲ್ಲಾ ವ್ಯಾಪ್ತಿಯಲ್ಲಿ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಗಣನೀಯವಾಗಿ ಕುಸಿದಿದೆ. ಸಾವಯವ ಇಂಗಾಲದ ಪ್ರಮಾಣ ಕನಿಷ್ಠ 0.5ಕ್ಕಿಂತ ಹೆಚ್ಚಿರಬೇಕು. ಆದರೆ, ಕೆಲವು ಕಡೆಗಳಲ್ಲಿ ಇದು 01., 0.2 ನಷ್ಟಿದೆ. ಕಾಡಂಚಿನ ಪ್ರದೇಶಗಳಲ್ಲಿ ಸ್ವಲ್ಪ ಉತ್ತಮವಾಗಿದೆ.

ಅತಿಯಾದ ರಸಗೊಬ್ಬರದ ಬಳಕೆ, ಮಣ್ಣಿನ ಗುಣಲಕ್ಷಣಗಳನ್ನು ಅರಿಯದೆ ಕೃಷಿ ಮಾಡುವುದು, ಅತಿಯಾದ ನೀರಿನ ಬಳಕೆಯಿಂದ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ ವಿಜ್ಞಾನಿಗಳು. 

ಪೂರಕ ಮಾಹಿತಿ: ಮಹದೇವ್‌ ಹೆಗ್ಗವಾಡಿಪುರ, ನಾ.ಮಂಜುನಾಥಸ್ವಾಮಿ, ಅವಿನ್‌ ಪ್ರಕಾಶ್‌ ವಿ.

ಚಾಮರಾಜನಗರದಲ್ಲಿರುವ ಕೃಷಿ ಇಲಾಖೆಯ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಮಣ್ಣಿನ ಮಾದರಿ ತಂದಿದ್ದ ರೈತರೊಬ್ಬರು ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದು
ಚಾಮರಾಜನಗರದಲ್ಲಿರುವ ಕೃಷಿ ಇಲಾಖೆಯ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಮಣ್ಣಿನ ಮಾದರಿ ತಂದಿದ್ದ ರೈತರೊಬ್ಬರು ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದು
ಕೃಷಿ ಇಲಾಖೆಯ ಪ್ರಯೋಗಾಲಯಕ್ಕೆ ಬಂದ ಮಣ್ಣಿನ ಮಾದರಿಯನ್ನು ಜೋಡಿಸುತ್ತಿರುವ ಸಿಬ್ಬಂದಿ 
ಕೃಷಿ ಇಲಾಖೆಯ ಪ್ರಯೋಗಾಲಯಕ್ಕೆ ಬಂದ ಮಣ್ಣಿನ ಮಾದರಿಯನ್ನು ಜೋಡಿಸುತ್ತಿರುವ ಸಿಬ್ಬಂದಿ 
ರೈತರೊಬ್ಬರ ಜಮೀನಿನಲ್ಲಿ ಮಣ್ಣನ್ನು ಪರಿಶೀಲಿಸುತ್ತಿರುವ ಕೃಷಿ ವಿಜ್ಞಾನಿಗಳು
ರೈತರೊಬ್ಬರ ಜಮೀನಿನಲ್ಲಿ ಮಣ್ಣನ್ನು ಪರಿಶೀಲಿಸುತ್ತಿರುವ ಕೃಷಿ ವಿಜ್ಞಾನಿಗಳು
ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಜಮೀನಿನಲ್ಲಿ ನೀರು ನಿಂತಿರುವುದು ಹಾಗಾಗಿ ಈ ಮಣ್ಣಿನಲ್ಲಿ ವ್ಯವಸಾಯ ಮಾಡಲು ಆಗುತ್ತಿಲ್ಲ
ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಜಮೀನಿನಲ್ಲಿ ನೀರು ನಿಂತಿರುವುದು ಹಾಗಾಗಿ ಈ ಮಣ್ಣಿನಲ್ಲಿ ವ್ಯವಸಾಯ ಮಾಡಲು ಆಗುತ್ತಿಲ್ಲ
ರೈತರಿಗೆ ಗೊತ್ತಿಲ್ಲ ಅಧಿಕಾರಿಗಳು ಹೇಳುತ್ತಿಲ್ಲ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿರುವ ಬಗ್ಗೆ ರೈತರಿಗೆ ಹೆಚ್ಚು ಮಾಹಿತಿ ಇಲ್ಲ. ಸ್ವಯಂ ಪ್ರೇರಿತರಾಗಿ ಮಣ್ಣು ‍ಪರೀಕ್ಷೆ ಮಾಡಲು ಅವರು ಮುಂದಾಗುತ್ತಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳೂ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಇಲಾಖೆ ನೀಡಿರುವ ಗುರಿಯನ್ನು ಅಧಿಕಾರಿಗಳು ಸಾಧಿಸುತ್ತಿದ್ದಾರೆ. ಆದರೆ ‍‍ಪರೀಕ್ಷೆಯ ನಂತರ ಏನೂ ಕೆಲಸ ಆಗುತ್ತಿಲ್ಲ. ಸರ್ಕಾರ ರಾಸಾಯನಿಕ ಗೊಬ್ಬರಕ್ಕೆ ಸಬ್ಸಿಡಿ ಕೊಡುತ್ತಿದೆ. ಆದರೆ ಭೂಮಿ ಉಳಿಸುವ ನಿಟ್ಟಿನಲ್ಲಿ ಸಾವಯವ ಕೃಷಿ ಮಾಡುವ ರೈತರಿಗೆ ಏನೂ ಕೊಡುತ್ತಿಲ್ಲ. ಮಣ್ಣು ಉಳಿಯಬೇಕೆಂದರೆ ರಾಸಾಯನಿಕ ಬಳಸಬಾರದು. 
–ಹೊನ್ನೂರು ಪ್ರಕಾಶ್‌ ಸಾವಯವ ಕೃಷಿಕ
ಆಗಾಗ ಪರೀಕ್ಷೆ ಮಾಡಿಸುತ್ತೇನೆ ಎರಡು ವರ್ಷಗಳ ಹಿಂದೆ ಮಣ್ಣಿನ ಪರೀಕ್ಷೆ ಮಾಡಿಸಿದ್ದೆ. ಬಾಳೆ ನಡುವೆ ಕಲ್ಲಂಗಡಿ ಬೆಳೆದಿದ್ದೆ. ಕಲ್ಲಂಗಡಿ ಚೆನ್ನಾಗಿ ಬರಲಿಲ್ಲ. ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ವಿಚಾರಿಸಿದಾಗ ಮಣ್ಣಿನ ಪರೀಕ್ಷೆ ಮಾಡಲು ಸಲಹೆ ಕೊಟ್ಟರು. ಅದಕ್ಕಾಗಿ ಕೃಷಿ ಇಲಾಖೆಯ ಮಣ್ಣು ಪರೀಕ್ಷಾ ಪ್ರಯೋಗಾಲಯಕ್ಕೆ ಮಣ್ಣಿನ ಮಾದರಿ ಕೊಟ್ಟಿದ್ದೇನೆ. ವರದಿ ಬಂದ ನಂತರ ಅಧಿಕಾರಿಗಳು ತಜ್ಞರ ಸಲಹೆ ಆಧಾರಿಸಿ ಮಣ್ಣಿಗೆ ಪೋಷಕಾಂಶ ನೀಡುವೆ. 
–ಕೆಂಪರಾಜು ಬೆಳವಾಡಿ ಗುಂಡ್ಲುಪೇಟೆ ತಾಲ್ಲೂಕು 
ಮಣ್ಣಿನ ಮಾದರಿ ಸಂಗ್ರಹ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ವಿವಿಧ ಕೃಷಿ ಭೂಮಿಯಲ್ಲಿ ಕೃಷಿ ಇಲಾಖೆ ಮಣ್ಣು ಸಂಗ್ರಹಿಸುತ್ತದೆ. ಆದರೆ ಮಣ್ಣಿನ ಗುಣಮಟ್ಟ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ತಿಳಿಸುವುದಿಲ್ಲ. ಹೀಗಾಗಿ ಕಾಫಿ ಮತ್ತು ಹಣ್ಣಿನ ಬೆಳೆಗಾರರು ಅವರಿಗೆ ಇಷ್ಟ ಬಂದ ಗೊಬ್ಬರಗಳನ್ನು ಬಳಸಿಕೊಂಡು ಕೈಗೊಳ್ಳುತ್ತಾರೆ.
-ನಾಗೇಂದ್ರ ಬಿಳಿಗಿರಿರಂಗನ ಬೆಟ್ಟ
ಮಾಹಿತಿ ಇಲ್ಲ ಪ್ರತಿ ವರ್ಷ ಮುಂಗಾರು ಹಿಂಗಾರು ಹಂಗಾಮಿನಲ್ಲಿ ಮಳೆ ನಂಬಿಕೊಂಡು ಬೆಳೆ ಬೆಳೆಯುತ್ತಿದ್ದೇವೆ. ಇಳುವರಿಯಲ್ಲಿ ಲಾಭ ಮತ್ತು ನಷ್ಟವಾಗುತ್ತಿದೆ. ನಮ್ಮ ಜಮೀನಿಗೆ ಮಣ್ಣು ಪರೀಕ್ಷೆ ಮಾಡಿಸಿಲ್ಲ. ಕೃಷಿ ಇಲಾಖೆಯವರು ಇದರ ಬಗ್ಗೆ ನಮಗೆ ಮಾಹಿತಿಯನ್ನು ಕೊಟ್ಟಿಲ್ಲ.
–ಶಿವನಂಜಯ್ಯ.
ಹೆಗ್ಗವಾಡಿ ಮಣ್ಣು ಪರೀಕ್ಷೆ ನಡೆಯುತ್ತಿಲ್ಲ ಯಳಂದೂರು ತಾಲ್ಲೂಕಿನಲ್ಲಿ ಕೃಷಿಕರಿಗೆ ಮಣ್ಣು ಪರೀಕ್ಷೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕೆಲವೊಮ್ಮೆ ಅಧಿಕಾರಿಗಳು ಮಣ್ಣು ಪರೀಕ್ಷೆ ಮಾಡಲು ಸಲಹೆ ನೀಡುತ್ತಾರೆ. ನಂತರ ಮಣ್ಣನ್ನು ಯಾವ ರೀತಿ ಸಂಗ್ರಹಿಸಬೇಕು ಎಂಬ ಮಾಹಿತಿಯನ್ನು ನೀಡುವುದಿಲ್ಲ. ಪರೀಕ್ಷೆ ನಂತರ ಮಣ್ಣಿನ ಭೌತಿಕ ರಚನೆ ಅಥವಾ ರಾಸಾಯನಿಕ ಗುಣದ ಬಗ್ಗೆ ತಿಳಿಸುವುದು ಇಲ್ಲ. ಹೀಗಾಗಿ ಬಹಳಷ್ಟು ಬೇಸಾಯಗಾರರು ಮಣ್ಣು ಪರೀಕ್ಷೆಗೆ ಹೆಚ್ಚಿನ ಒತ್ತು ನೀಡುವುದಿಲ್ಲ.
–ಆರ್‌.ನಾಗರಾಜು ಕೆಸ್ತೂರು
ಕಾರ್ಯಗತವಾಗದ ಯೋಜನೆ ಸರ್ಕಾರ ಮಣ್ಣು ಪರೀಕ್ಷೆ ಮಾಡಿಸಿ ಎಂದು ಹೇಳುತ್ತದೆ ನಿಜ ಆದರೆ ಸರ್ಕಾರದ ಯಾವ ಕೆಲಸವೂ ಕಾರ್ಯಗತವಾಗುವುದಿಲ್ಲ. ಹೆಸರಿಗೆ ಮಾತ್ರ ಯೋಜನೆಗಳು. ನಮ್ಮ ಭಾಗದಲ್ಲಿ ಮಣ್ಣು ಪರೀಕ್ಷೆ ಯಾರೂ ಮಾಡಿಲ್ಲ. ಕಾಟಾಚಾರಕ್ಕೆ ಒಂದಿಬ್ಬರ ಜಮೀನಿನಲ್ಲಿ ಮಣ್ಣು ಪರೀಕ್ಷೆ ಮಾಡಿಸಿದ್ದಾರೆ. ರೈತರು ತಮಗೆ ಇಷ್ಟ ಬಂದ ಹಾಗೆ ಕೃಷಿ ಮಾಡುತ್ತಿದ್ದಾರೆ. 
–ಗೌಡೇಗೌಡ ಕೊಳ್ಳೇಗಾಲದ ರೈತ ಮುಖಂಡ
ಗುರಿ ಸಾಧನೆ ರೈತರಿಗೆ ವಿವರಣೆ
ಈ ಬಗ್ಗೆ ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್‌.ಎಸ್‌.ಆಬೀದ್‌ ‘ಮಣ್ಣು ಪರೀಕ್ಷೆಗಾಗಿ ಪ್ರತಿ ಜಿಲ್ಲೆಗೆ ಇಲಾಖೆ ಗುರಿ ನೀಡುತ್ತದೆ. ಅದರ ಪ‍್ರಕಾರ ನಾವು ರೈತರ ಜಮೀನಿಂದ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿ ಅವರಿಗೆ ಮಣ್ಣು ಆರೋಗ್ಯ ಕಾರ್ಡ್‌ ವಿತರಿಸುತ್ತೇವೆ. ನಮ್ಮಲ್ಲಿ ಪ್ರತಿ ವರ್ಷ ಗುರಿ ಸಾಧಿಸುತ್ತಿದ್ದೇವೆ. ಮಣ್ಣಿನ ಪರೀಕ್ಷೆಗೆ ರೈತರು ಸ್ವಯಂ ಪ್ರೇರಿತರಾಗಿ ಬರುವವರು ಕಡಿಮೆ. ಕೃಷಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿಸುತ್ತೇವೆ. ಆಸಕ್ತ ರೈತರಿಗೆ ಮಾಹಿತಿಯನ್ನೂ ನೀಡುತ್ತೇವೆ’ ಎಂದರು.
ಮಣ್ಣಿನ ಪರೀಕ್ಷೆ ಅತೀ ಮುಖ್ಯ
ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮತ್ತು ಮಣ್ಣು ವಿಜ್ಞಾನಿ ಯೋಗೇಶ್‌ ಜಿ.ಎಸ್. ಪ್ರತಿಕ್ರಿಯಿಸಿ ‘ಕೃಷಿಕರು ಮಣ್ಣಿನ ಪರೀಕ್ಷೆ ಮಾಡಿಸುವುದು ಬಹಳ ಮುಖ್ಯ. ಬಿತ್ತನೆಗೂ ಮುನ್ನ ಮಣ್ಣಿನ ಗುಣ ಲಕ್ಷಣಗಳನ್ನು ಅರಿತರೆ ಉತ್ತಮವಾಗಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಮಣ್ಣು ಪರೀಕ್ಷೆ ಮಾಡಿದ ನಂತರ ಬಿತ್ತನೆ ಮಾಡುವುದಕ್ಕೆ ವಾರದ ಮುಂದೆ ಮಣ್ಣಿಗೆ ಸಾವಯವ ಪೋಷಕಾಂಶಗಳನ್ನು ನೀಡಿದರೆ ಬೆಳೆ ಚೆನ್ನಾಗಿ ಬರುತ್ತದೆ’ ಎಂದರು.  ‘ನಮ್ಮ ಕೇಂದ್ರದ ಸಂಪರ್ಕದಲ್ಲಿರುವ ಬಹುತೇಕ ರೈತರು ಮಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಸ್ವಯಂ ಪ್ರೇರಿತರಾಗಿ ಬರುವ ರೈತರಿಗೂ ಪರೀಕ್ಷೆ ಮಾಡಿ ಕೊಡುತ್ತಿದ್ದೇವೆ. ಭೂಮಿಯ ಸಾವಯವ ಇಂಗಾಲವೂ ಕಡಿಮೆಯಾಗುತ್ತಿದೆ. ಹವಾಮಾನ ಬದಲಾಗುತ್ತಿರುವ ಈ ಸಂದರ್ಭದಲ್ಲಿ ರೈತರು ಹೆಚ್ಚು ವೈಜ್ಞಾನಿಕವಾಗಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡಿಕೊಂಡು ಕೃಷಿ ಮಾಡಬೇಕು’ ಎಂದು ಸಲಹೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT