ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳುವುದೇ ಸೆಸ್ಕ್‌?

ಕೊಳ್ಳೇಗಾಲ: ವಿದ್ಯುತ್‌ ಪರಿವರ್ತಕಗಳಿಗಿಲ್ಲ ಬೇಲಿ, ಜೋತು ಬಿದ್ದಿವೆ ತಂತಿಗಳು, ಭಯದಲ್ಲಿ ಜನರ ಸಂಚಾರ
Last Updated 27 ಜನವರಿ 2020, 10:53 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದ ವಿವಿಧ ಬಡಾವಣೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿರುವ ವಿದ್ಯುತ್‌ ಕಂಬಗಳು, ಸುರಕ್ಷತಾ ಬೇಲಿ ಇಲ್ಲದ ವಿದ್ಯುತ್‌ ಪರಿವರ್ತಕಗಳು (ಟಿಸಿ), ಜೋತಾಡುವ ಹಳೆಯ ತಂತಿಗಳು ಅಪಾಯವನ್ನು ಆಹ್ವಾನಿಸುತ್ತಿವೆ.

‘ಪ್ರತಿನಿತ್ಯ ಮಹಿಳೆಯರು, ವಿದ್ಯಾರ್ಥಿ ಗಳು ಹಾಗೂ ಸಾರ್ವಜನಿಕರು ವಿದ್ಯುತ್‌ ಶಾಕ್‌ ಹೊಡೆಯುವ ಭಯದಲ್ಲೇ ಸಂಚರಿ ಸಬೇಕಾಗಿದೆ.ಸಮಸ್ಯೆಗಳ ಬಗ್ಗೆ ದೂರು ನೀಡಿದರೂ ಸೆಸ್ಕ್‌ (ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ) ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂಬುದು ಕೊಳ್ಳೇಗಾಲದ ನಿವಾಸಿಗಳ ಆರೋಪ.

ನಗರದದಲ್ಲಿ ಅಳವಡಿಸಲಾಗಿರುವ ಹಲವು ವಿದ್ಯುತ್‌ ಪರಿವರ್ತಕಗಳ ಸುತ್ತ ಸುರಕ್ಷತೆಗಾಗಿ ಬೇಲಿ ಅಳವಡಿಸಿಲ್ಲ.ಕೆಲವು ಕಡೆ ಪರಿವರ್ತಕಗಳು ನೆಲದ ಮಟ್ಟದಲ್ಲಿ ಇವೆ. ಪರಿವರ್ತಕಗಳ ಸುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ಪರಿವರ್ತಕಗಳ ಮೇಲೆ ಬಳ್ಳಿ ಬೆಳೆದು ವಿದ್ಯುತ್ ಪ್ರವಹಿಸುವ ತಂತಿಯವರೆಗೆ ತಲುಪಿರುವ ನಿದರ್ಶನಗಳೂ ಇವೆ. ನಿವಾಸಿಗಳು ಸೆಸ್ಕ್‌ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದರೂ ಪರಿವರ್ತಕದ ಮೇಲೆ ಬಳ್ಳಿ ತೆರವು ಮಾಡುವ ಕೆಲಸ ನಡೆದಿಲ್ಲ.

ಉದಾಹಣೆಗೆ,ನಗರದ ಗೀತ ಪ್ರೈಮರಿ ಶಾಲೆಯ ಶಾಲೆ ಗೋಡೆ ಸಮೀಪ, ಎಸ್.ವಿ.ಕೆ. ಕಾಲೇಜು ಎದುರು, ಬಸವೇಶ್ವರ ರೈಸ್ ಮಿಲ್ ಸಮೀಪ, ಆನಂದಜ್ಯೋತಿ ಕಾಲೊನಿ, ಭೀಮನಗರ ಬಡಾವಣೆ, ದೇವಾಂಗಪೇಟೆ, ಆಗಸ್ಟಿನ್‌ ಕಾಲೊನಿ, ವಿದ್ಯಾನಗರ, ಹಳೇ ಕುರುಬರ ಬೀದಿ, ನಾಯಕರ ಬಡಾವಣೆ, ಶಿವಕುಮಾರ ಸ್ವಾಮಿ ಬಡಾವಣೆ, ಬಸ್ತೀಪುರ ಬಡಾವಣೆ ಸೇರಿದಂತೆ ಹಲವು ಕಡೆಗಳಲ್ಲಿ ಪರಿವರ್ತಕಗಳಿವೆ. ಆದರೆ, ಅವುಗಳ ಸುತ್ತ ತಂತಿಬೇಲಿ ಇಲ್ಲ. ಇವೆಲ್ಲ ಮಕ್ಕಳು, ಹಿರಿಯರು, ಮಹಿಳೆಯರು ಸೇರಿದಂತೆ ಜನರು ಓಡಾಡುವ ಸ್ಥಳಗಳು. ಬೀದಿ ಜಾನುವಾರುಗಳು ಕೂಡ ಸಂಚರಿಸುತ್ತಿರುತ್ತವೆ.

‘ಯಾವುದಕ್ಕೂ ಸುರಕ್ಷತೆಯ ಚೌಕಟ್ಟು ಇಲ್ಲದಿರುವುದರಿಂದ ಅಪಾಯದ ಸ್ಥಿತಿಯಲ್ಲಿವೆ. ಪರಿವರ್ತಕದ ಬಳಿ ಹೋದವರು ವಿದ್ಯುತ್ ಪ್ರವಹಿಸಿ, ತಂತಿ ತಗುಲಿ ಮೃತಪಟ್ಟ ಉದಾಹರಣೆಗಳೂ ಇವೆ. ಸೆಸ್ಕ್‌ ಈ ಬಗ್ಗೆ ಗಮನ ಹರಿಸಬೇಕು. ಪರಿವರ್ತಕಗಳ ಸುತ್ತಲೂ ಹೆಚ್ಚಿನ ಸುರಕ್ಷತಾ ಕ್ರಮ ಕೈಗೊಳ್ಳಬೇಕು’ ಎಂದು ಕೊಳ್ಳೇಗಾಲದ ನಿವಾಸಿ ನಾಗರಾಜು ಒತ್ತಾಯಿಸಿದರು.

ಜೋತಾಡುವ ತಂತಿ ಮತ್ತು ಹಳೆ ಕಂಬಗಳು: ಪರಿವರ್ತಕಗಳದ್ದು ಒಂದು ಸಮಸ್ಯೆಯಾದರೆ, ಜೋತು ಬಿದ್ದಿರುವ ತಂತಿ ಹಾಗೂ ಹಳೆಯ ಕಂಬಗಳದ್ದು ಇನ್ನೊಂದು ಸಮಸ್ಯೆ.

ವಿವಿಧ ಬಡಾವಣೆಗಳು ಸೇರಿದಂತೆ ಮುಖ್ಯರಸ್ತೆಗಳಲ್ಲಿಯೂ ತಂತಿಗಳು ಜೋತು ಬಿದ್ದಿವೆ. ಜೋರು ಗಾಳಿ, ಮಳೆಗೆ ವಿದ್ಯುತ್ ತಂತಿಗಳುಒಂದಕ್ಕೂಂದು ತಗುಲಿ ಅನೇಕ ಬಾರಿ ಅವಘಡಗಳು ಸಂಭವಿಸಿದ್ದು, ಜನರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆಗಳು ನಡೆದಿವೆ.

ಕೆಲವು ಬಡಾವಣೆಗಳಲ್ಲಿ ಇನ್ನೂ ಹಳೆಯ ತಂತಿಗಳೇ ಇದ್ದು, ಅವುಗಳನ್ನು ಬದಲಾಯಿಸಬೇಕು ಎಂಬುದು ಜನರ ಆಗ್ರಹ. ಇನ್ನು ಕೆಲವು ಕಡೆ, ಕಟ್ಟಡಗಳಿಗೆ ಅತ್ಯಂತ ಸಮೀಪದಲ್ಲೇ ತಂತಿಗಳು ಹಾದು ಹೋಗಿದ್ದು, ಕೈಗೆಟುಕುವಂತೆ ಇವೆ. ಇದು ಅತ್ಯಂತ ಅಪಾಯಕಾರಿಯಾಗಿದ್ದು, ವಿದ್ಯುತ್‌ ನಿರೋಧಕ ರಬ್ಬರ್‌ ಹೊಂದಿರುವ ತಂತಿಗಳನ್ನು ಸೆ‌ಸ್ಕ್‌ ಅಳವಡಿಸಬೇಕು.ಇನ್ನೂ ಕೆಲವು ಬಡಾವಣೆಗಳಲ್ಲಿ ಹಳೆಯದಾದ ಕಬ್ಬಿಣದ ಕಂಬಗಳೇ ಇವೆ. ಇವನ್ನೂ ಬದಲಿಸಬೇಕು ಎಂಬುದು ಸ್ಥಳೀಯ ನಿವಾಸಿಗಳ ಒತ್ತಾಯ.

‘ಕಬ್ಬಿಣದ ಕಂಬಗಳಲ್ಲಿ ವಿದ್ಯುತ್ ಪ್ರವಹಿಸಿದ ನಿದರ್ಶನಗಳು ಇವೆ. ಕೆಲವು ವಿದ್ಯುತ್ ಕಂಬಗಳು ಅಪಾಯದ ಅಂಚಿನಲ್ಲಿದ್ದು ಅನೇಕ ಕಂಬಗಳು ಶಿಥಿಲವಾಗಿವೆ. ಅವುಗಳನ್ನು ತೆಗೆದು ಬೇರೆ ವಿದ್ಯುತ್ ಕಂಬವನ್ನು ಹಾಕಿ ಎಂದು ಬಡಾವಣೆಯವರು ಮನವಿ ಮಾಡಿದರೂ ಸೆಸ್ಕ್‌ ಸಿಬ್ಬಂದಿ ತಲೆಕೆಡಿಸಿಕೊಂಡಿಲ್ಲ’ ಎಂದು ಭೀಮನಗರದ ನಿವಾಸಿ ಶೈಲಜ ಅವರು ದೂರಿದರು.

ಅವೈಜ್ಞಾನಿಕ ವಿದ್ಯುತ್ ಕಂಬಗಳು: ನಗರದ ವಿವಿಧ ಕಡೆಗಳಲ್ಲಿ ಅವೈಜ್ಞಾನಿಕ ವಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಕೆಲವು ಕಡೆಗಳಲ್ಲಿ ರಸ್ತೆಯ ಮಧ್ಯದಲ್ಲಿ ಕಂಬಗಳಿದ್ದರೆ ಶಿವಕುಮಾರ ಸ್ವಾಮಿ ಬಡಾವಣೆ, ಆದರ್ಶನಗರ ಬಡಾವಣೆ ಸೇರಿ ಇನ್ನೂ ಕೆಲವು ಕಡೆಗಳಲ್ಲಿ ಕಂಬಗಳು ಚರಂಡಿಯಲ್ಲಿವೆ. ಮೊದಲೇ ಇದ್ದ ವಿದ್ಯುತ್ ಕಂಬದ ಮಾರ್ಗದಲ್ಲಿ ಚರಂಡಿಯನ್ನೂ ನಿರ್ಮಿಸಲಾಗಿದೆ.

ಚರಂಡಿಯಲ್ಲಿ ನೀರು ಹರಿಯುವುದ ರಿಂದ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದರೆ ಗತಿ ಏನು ಎಂಬುದು ಸ್ಥಳೀಯರ ಪ್ರಶ್ನೆ. ಅಧಿಕಾರಿಗಳು ಯೋಚನೆ ಮಾಡದೆ ತೆಗೆದುಕೊಳ್ಳುವ ಇಂತಹ ನಿರ್ಧಾರಗಳಿಂದಾಗಿ ಅನುಕೂಲಕ್ಕಿಂತ ಅಪಾಯವೇ ಹೆಚ್ಚು ಎಂಬುದು ಅವರ ಪ್ರತಿಪಾದನೆ.

‘ಅಗತ್ಯ ಮುನೆಚ್ಚರಿಕೆ ಕ್ರಮ’

ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸೆಸ್ಕ್‌ ಕೊಳ್ಳೇಗಾಲ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಪ್ರದೀಪ್‌ ಅವರು, ‘ಶಿಥಿಲವಾಗಿರುವ ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಲು ಕ್ರಮ ಕೈಗೊಳ್ಳುತ್ತೇವೆ. ನಗರ ವ್ಯಾಪ್ತಿಯಲ್ಲಿರುವ ವಿದ್ಯುತ್‌ ಪರಿವರ್ತಕಗಳ ಸುತ್ತಲೂ ಬೇಲಿ ನಿರ್ಮಿಸಲಾಗಿತ್ತು. ಕೆಲವು ಕಡೆಗಳಲ್ಲಿ ಈಗ ಹಾಳಾಗಿವೆ. ಇವುಗಳನ್ನು ಗುರುತಿಸಿ ತಕ್ಷಣ ಸರಿಪಡಿಲಾಗುವುದು’ ಎಂದು ಭರವಸೆ ನೀಡಿದರು.

ತಂತಿಗಳನ್ನು ತಕ್ಷಣ ಬದಲಾಯಿಸಿ

ಸೆಸ್ಕ್‌ಅಧಿಕಾರಿಗಳು ಅಪಾಯದ ಅಂಚಿನಲ್ಲಿರುವ ಕಂಬಗಳು ಮತ್ತು ಹಳೆಯ ವಿದ್ಯುತ್ ತಂತಿಗಳನ್ನು ತಕ್ಷಣ ಬದಲಾವಣೆ ಮಾಡಬೇಕು

-ಪ್ರಶಾಂತ್,ಭೀಮನಗರ ಬಡಾವಣೆಯ ನಿವಾಸಿ

ಅಧಿಕಾರಿಗಳೇ ಹೊಣೆ

ವಿದ್ಯುತ್ ಪರಿವರ್ತಕಗಳ ಸುತ್ತ ತಂತಿ ಬೇಲಿ ಅಳಡಿಸಬೇಕು. ಇಲ್ಲವಾದರೆ ಮುಂದೆ ಏನಾದರೂ ಅನಾಹುತ ಸಂಭವಿಸಿದರೆ ಸೆಸ್ಕ್‌ ಅಧಿಕಾರಿಗಳೇ ನೇರ ಕಾರಣವಾಗುತ್ತಾರೆ

-ಬಿ.ಮೂರ್ತಿ,ಹಾಲಿನ ವ್ಯಾಪಾರಿ

ಅನುಕೂಲ ಕಲ್ಪಿಸಿ

ಅವೈಜ್ಞಾನಿಕ ವಿದ್ಯುತ್ ಕಂಬ, ಜೋತು ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ಕೆಲಸವನ್ನು ತಕ್ಷಣ ಮಾಡಬೇಕು

-ಮಹೇಂದ್ರ,ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT