ಭಾನುವಾರ, ನವೆಂಬರ್ 27, 2022
27 °C
ವಿದ್ಯಾರ್ಥಿಗಳಿಗೆ ತೊಂದರೆ, ಪ್ರತಿ ದಿನ 3.5 ಕಿ.ಮೀ ನಡಿಗೆ

ಮಲ್ಲಯ್ಯನಪುರ: ‘ಆದರ್ಶ’ ಶಾಲೆಗೆ ರಸ್ತೆ ಇಲ್ಲ, ಬಸ್ಸೂ ಬರಲ್ಲ!

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಹೊರವಲಯದ ಮಲ್ಲಯ್ಯನಪುರದ ಆದರ್ಶ ವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಮರ್ಪಕವಾಗಿಲ್ಲದೆ 391 ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.

ಬಸ್ ವ್ಯವಸ್ಥೆಯೂ ಸರಿಯಾಗಿಲ್ಲ. ರಸ್ತೆ ಸರಿ ಇಲ್ಲದಿರುವುದರಿಂದ ಬರುವ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳು ಅರ್ಧ ದಾರಿಯಲ್ಲೇ ನಿಲ್ಲುತ್ತಿವೆ. ಅಲ್ಲಿಂದ ಮಕ್ಕಳು ಮತ್ತೆ ಒಂದು ಕಿ.ಮೀ ಗಿಂತಲೂ ಹೆಚ್ಚು ದೂರ ನಡೆದುಕೊಂಡು ಹೋಗಬೇಕು.

ಹಲವು ವರ್ಷಗಳಿಂದ ಮಕ್ಕಳಿಗೆ ತೊಂದರೆಯಾಗುತ್ತಿದ್ದರೂ ಜಿಲ್ಲಾಡಳಿತ ವ್ಯವಸ್ಥಿತವಾಗಿ ರಸ್ತೆ ನಿರ್ಮಿಸಲು ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಸೌಕರ್ಯ ಕಲ್ಪಿಸದಿದ್ದರೆ ಮಕ್ಕಳನ್ನು ಒಟ್ಟುಗೂಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. 

ಮೂಡ್ಲುಪುರದಿಂದ ಮೂರೂವರೆ ಕಿ.ಮೀ ದೂರದಲ್ಲಿ ಪ್ರಶಾಂತವಾದ ಪರಿಸರದಲ್ಲಿರುವ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ಲಭ್ಯವಿದ್ದು,  ಉತ್ತಮ ಶೈಕ್ಷಣಿಕ ಸಾಧನೆಯಿಂದ ಹೆಸರು ಗಳಿಸಿದೆ. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶ ದಾಖಲಿಸುತ್ತಿದೆ. ಪ್ರತಿ ವರ್ಷ ಇಲ್ಲಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ.

ತಾಲ್ಲೂಕಿನ ವಿವಿಧ ಹೋಬಳಿಗಳ 130ಕ್ಕೂ ಹೆಚ್ಚು ಊರುಗಳ ಮಕ್ಕಳು ಇಲ್ಲಿಗೆ ಬರುತ್ತಿದ್ದಾರೆ. ಈ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ 76 ಮಕ್ಕಳಿದ್ದಾರೆ. ಎರಡು ಸೆಕ್ಷನ್‌ಗಳನ್ನು ಮಾಡಲಾಗಿದೆ. ವಿದ್ಯಾಲಯದಲ್ಲಿ ಶೈಕ್ಷಣಿಕ ವಾತಾವರಣ ಉತ್ತಮವಾಗಿದ್ದರೂ, ರಸ್ತೆ, ಬಸ್‌ ಸೌಕರ್ಯ ‘ಆದರ್ಶ’ವಾಗಿಲ್ಲದೇ ಇರುವುದರಿಂದ ಮಕ್ಕಳು ಪ್ರತಿ ದಿನ ತೊಂದರೆ ಅನುಭವಿಸುತ್ತಿದ್ದಾರೆ. 

ಚಾಮರಾಜನರ ಗುಂಡ್ಲುಪೇಟೆ ರಸ್ತೆಯ ಮೂಡ್ಲುಪುರ ಬಳಿಯ ಫ್ಲೈಓರ್‌ನಿಂದ ಕಚ್ಚಾ ರಸ್ತೆಯಲ್ಲೇ ಶಾಲೆಗೆ ಸಾಗಬೇಕು. ಇದೇ ಶಾಲೆಯ ಬಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ ಇದೆ. ಮಕ್ಕಳಿಗೆ ವಸತಿ ವ್ಯವಸ್ಥೆ ಇರುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಪ್ರತಿ ದಿನ ರಸ್ತೆಯಲ್ಲಿ ಓಡಾಡುವ ಪ್ರಮೇಯ ಬರುವುದಿಲ್ಲ. ಆದರೆ, ಮಕ್ಕಳನ್ನು ಕಾಣಲು ಬರುವ ಪೋಷಕರು, ರಜಾ ಸಮಯದಲ್ಲಿ ಮಕ್ಕಳು ಊರಿಗೆ ಹೋಗುವಾಗ ಜಿಲ್ಲಾ ಕೇಂದ್ರಕ್ಕೆ ಬರಲು ಅವರೂ ಹರ ಸಾಹಸ ಪಡಬೇಕು. 

ಮೂಡ್ಲುಪುರದಿಂದಲೇ ಕಚ್ಚಾರಸ್ತೆಯಲ್ಲೇ ಸಾಗಬೇಕು. ಮಲ್ಲಯ್ಯನಪುರ ಸರ್ಕಾರಿ ಶಾಲೆಯ ವರೆಗೆ ಮಣ್ಣಿನ ರಸ್ತೆ ಸುಮಾರಾಗಿದೆ. ಅಲ್ಲಿಂದ ಮುಂದೆ ಸಾಗುವ ರಸ್ತೆಯಲ್ಲಿ ನಡೆದುಕೊಂಡು ಹೋಗಲೂ ಕಷ್ಟಪಡಬೇಕು. ಬೆಳಿಗ್ಗೆ ಎರಡು ಬಸ್‌ ಹಾಗೂ ಸಂಜೆ ಹೊತ್ತಿಗೆ ಎರಡು ಬಸ್‌ ವ್ಯವಸ್ಥೆ ಇದೆ. ಒಂದು ಬಸ್‌ನಲ್ಲಿ 120ಕ್ಕೂ ಹೆಚ್ಚು ಮಕ್ಕಳು ಬರುತ್ತಾರೆ.

ರಸ್ತೆ ಸರಿ ಇಲ್ಲದಿರುವುದರಿಂದ ಅಷ್ಟು ಮಕ್ಕಳನ್ನು ಹಾಕಿಕೊಂಡು ಬರುವುದು ಅಪಾಯಕಾರಿರಿ. ಭಯದಲ್ಲೇ ಕರೆದುಕೊಂಡು ಬರುತ್ತಿದ್ದೇವೆ ಎಂದು ಹೇಳುತ್ತಾರೆ ಬಸ್‌ ಚಾಲಕರು. 

ಕೋವಿಡ್‌ ಆರಂಭಕ್ಕೂ ಮುನ್ನ ಮೂರು ಬಸ್‌ಗಳಿದ್ದವು. ಈಗ ಎರಡೇ ಬರುತ್ತಿದೆ. ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಈಗ ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳು ನಡೆಯುತ್ತಿದ್ದು, ಬೆಳಿಗ್ಗೆ 9 ಗಂಟೆಗೇ ಮಕ್ಕಳು ಶಾಲೆಗೆ ಬರಬೇಕು. ಬಸ್‌ ಇಲ್ಲದಿರುವುದರಿಂದ ಮುಖ್ಯ ರಸ್ತೆಯಿಂದ ಮೂರುವರೆ ಕಿ.ಮೀ ನಡೆದುಕೊಂಡೇ ಬರುತ್ತಿದ್ದಾರೆ. ಕೆಲವು ಪೋಷಕರು ತಮ್ಮ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಶಾಲೆಯವರೆಗೆ ಬಿಡುತ್ತಿದ್ದಾರೆ.

‘ಹಲವು ವರ್ಷಗಳಿಂದ ಇದೇ ಸಮಸ್ಯೆ ಇದೆ. ಮಳೆಗಾಲದಲ್ಲಿ ರಸ್ತೆಯಲ್ಲಿ ನಡೆದಾಡಲೂ ಸಾಧ್ಯವಾಗುವುದಿಲ್ಲ. ವಿಶೇಷ ತರಗತಿಗಳ ಸಂದರ್ಭದಲ್ಲಿ ಬಸ್‌ಗಳೂ ಇಲ್ಲ ನಡೆದುಕೊಂಡೇ ಹೋಗುತ್ತಿದ್ದೇವೆ. ನಮ್ಮ ಕಷ್ಟಕ್ಕೆ ಸ್ಪಂದಿಸುವವರೇ ಇಲ್ಲ’ ಎಂದು ವಿದ್ಯಾರ್ಥಿನಿಯರಾದ ಸೈಯದಾ, ಹಾಜಿರಾ, ಮಾನಸ, ಸ್ಫೂರ್ತಿ, ಐಶ್ವರ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಮಕ್ಕಳ ಕಷ್ಟ ನೋಡಲಾಗುತ್ತಿಲ್ಲ’

‘ವಿದ್ಯಾಲಯದಲ್ಲಿ ಶೈಕ್ಷಣಿಕ ವಾತಾವರಣ ಚೆನ್ನಾಗಿದೆ. ಆ ಒಂದು ಕಾರಣಕ್ಕೆ ಮಕ್ಕಳನ್ನು ಇಲ್ಲಿಗೆ ಸೇರಿಸಿದ್ದೇವೆ. ಆದರೆ, ಪ್ರತಿ ದಿನ ಮಕ್ಕಳು ಶಾಲೆಗೆ ಬರಲು ತುಂಬಾ ಕಷ್ಟ ಪಡುತ್ತಿದ್ದಾರೆ. ಬಸ್‌ಗಳೂ ಸರಿಯಾಗಿ ಬರುವುದಿಲ್ಲ. ಈ ಶಾಲಾ ಮಕ್ಕಳಿಗೆ ಚಾಮರಾಜನಗರ–ಗುಂಡ್ಲುಪೇಟೆ ನಡುವೆ ಸಂಚರಿಸುವ ಬಸ್‌ಗಳೂ ನಿಲ್ಲಿಸುವುದಿಲ್ಲ’ ಎಂದು ಪೋಷಕರಾದ ದೊರೆಸ್ವಾಮಿ, ಲೋಹಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ರಸ್ತೆ ಸರಿ ಇಲ್ಲದಿರುವುದರಿಂದ ಬರುವ ಬಸ್‌ಗಳು ಅರ್ಧದಲ್ಲೇ ನಿಲ್ಲುತ್ತವೆ. ಅಲ್ಲಿಂದ ಮಕ್ಕಳು ಮತ್ತೆ ನಡೆಯಬೇಕು. ಶಾಸಕರು, ಗ್ರಾಮ ಪಂಚಾಯಿತಿ, ಶಿಕ್ಷಣ ಇಲಾಖೆ ಎಲ್ಲರಿಗೂ ಮನವಿ ಮಾಡಿ ಸಾಕಾಯಿತು. ಯಾರಿಗೂ ಮಕ್ಕಳ ಕಷ್ಟ ಕಾಣುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆ ಸರಿಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದು ಬಿಟ್ಟು ನಮಗೆ ಬೇರೇನೂ ದಾರಿ ಕಾಣುತ್ತಿಲ್ಲ’ ಎಂದು ಅವರು ಹೇಳಿದರು. 

--

ಸಮಸ್ಯೆ ಗಮನದಲ್ಲಿದೆ. ಸರ್ಕಾರದಿಂದ ಹೊಸ ಅನುದಾನ ಬರುತ್ತಿಲ್ಲ. ಲಭ್ಯ ಹಣದಲ್ಲಿ ₹10 ಲಕ್ಷ‌ವನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗುವುದು
ಸಿ.ಪುಟ್ಟರಂಗಶೆಟ್ಟಿ, ಶಾಸಕ

--

ಮುಖ್ಯ ರಸ್ತೆಯಿಂದಲೇ ರಸ್ತೆ ಸಮಸ್ಯೆ ಇದೆ. ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ. ಶಾಸಕರ ನಿಧಿಯಲ್ಲಿ ಹಣ ನೀಡುವಂತೆ ಮನವಿ ಮಾಡಿದ್ದೇವೆ
ಸೋಮಣ್ಣೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ

--

ಮಕ್ಕಳಿಗೆ ಆಗುತ್ತಿರುವ ತೊಂದರೆಯನ್ನು ಈಗಾಗಲೇ ಇಲಾಖೆ ಅಧಿಕಾರಿಗಳು ಶಾಸಕರು, ಗ್ರಾಮ ಪಂಚಾಯಿತಿಯ ಗಮನಕ್ಕೆ ತರಲಾಗಿದೆ
ಆರ್‌.ಲಿಂಗರಾಜು, ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು