ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆದಾಯ ಸಂಗ್ರಹಕ್ಕೆ ಮದ್ಯವೊಂದೇ ದಾರಿಯೇ?

ಮದ್ಯದಂಗಡಿ ತೆರೆಯಲು ಅನುಮತಿ– ನೆಮ್ಮದಿಗೆ ಒಂದೂವರೆ ತಿಂಗಳಲ್ಲಿ ಕುತ್ತು: ಕುಟುಂಬದವರ ಬೇಸರ
Last Updated 4 ಮೇ 2020, 2:37 IST
ಅಕ್ಷರ ಗಾತ್ರ

ಚಾಮರಾಜನಗರ: ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆಯೇ ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿರುವುದಕ್ಕೆ ಜಿಲ್ಲೆಯಲ್ಲೂ ವಿರೋಧ ವ್ಯಕ್ತವಾಗಿದೆ.

40 ದಿನಗಳ ಕಾಲ ಮದ್ಯ ಸಿಗದೇ ಇದ್ದುದರಿಂದ, ಮದ್ಯ ವ್ಯಸನಿಗಳು ಹೊಸ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಆರೋಗ್ಯವೂ ಸುಧಾರಿಸುತ್ತಿದೆ. ಈಗ ಮಳಿಗೆಗಳನ್ನು ತೆರೆದರೆ ಅವರು ಮತ್ತೆ ಕುಡಿತಕ್ಕೆ ದಾಸರಾಗುವ ಸಾಧ್ಯತೆ ಇದೆ. ಹಾಗಾಗಿ ಸಂಪೂರ್ಣವಾಗಿ ಮದ್ಯ ಮಾರಾಟವನ್ನು ನಿಷೇಧ ಮಾಡಬೇಕಿತ್ತು. ಇಲ್ಲವೇ ಕನಿಷ್ಠ ಇನ್ನೂ ಒಂದೆರಡು ತಿಂಗಳು ನಿಷೇಧ ಮುಂದುವರಿಸಬೇಕಿತ್ತು ಎಂಬ ಜನರು ಹೇಳುತ್ತಿದ್ದಾರೆ.

ಮಾರ್ಚ್‌ 24ರಿಂದ ಲಾಕ್‌ಡೌನ್‌ ಜಾರಿಯಾದ ನಂತರ ಜಿಲ್ಲೆಯಲ್ಲಿ ಎಲ್ಲ ಮದ್ಯದ ಅಂಗಡಿಗಳು ಮುಚ್ಚಿದ್ದವು. ಕೆಲವು ದಿನ, ಕೆಲವು ಕಡೆಗಳಲ್ಲಿ ಅಕ್ರಮ ಮದ್ಯ ಲಭ್ಯವಿತ್ತಾದರೂ ನಂತರ ಸಿಗುತ್ತಿರಲಿಲ್ಲ. ಇದರಿಂದ ಮದ್ಯವ್ಯಸನಿಗಳು ಕುಡಿತದಿಂದ ದೂರ ಉಳಿದಿದ್ದರು. ಜಗಳ, ಹೊಡೆದಾಟ, ಕಲಹಗಳಿಲ್ಲದೇ ಕುಟುಂಬದಲ್ಲೂ ನೆಮ್ಮದಿ ನೆಲೆಸಿತ್ತು. ಅದರಲ್ಲೂ ಮಹಿಳೆಯರು ಹೆಚ್ಚು ನಿಟ್ಟುಸಿರು ಬಿಟ್ಟಿದ್ದರು.

ಪ್ರತಿ ದಿನ ಕುಡಿದು ಆರೋಗ್ಯ ಕೆಡಿಸಿಕೊಂಡಿದ್ದವರು ಈಗ ಸುಧಾರಿಸಿದ್ದಾರೆ. ಚೆನ್ನಾಗಿ ಊಟವನ್ನೂ ಮಾಡುತ್ತಿದ್ದಾರೆ. ಇನ್ನೂ ದೀರ್ಘ ಸಮಯ ಬಾರ್‌ಗಳು ಮುಚ್ಚಿದರೆ ಒಳ್ಳೆಯದು ಎಂಬ ಮಾತುಗಳನ್ನು ಮಹಿಳೆಯರು ಹೇಳಿದ್ದರು. ಸೋಮವಾರದಿಂದ ಮದ್ಯದ ಅಂಗಡಿಗಳನ್ನು ತೆರೆಯುವ ಸುದ್ದಿಕೇಳಿ, ಗಂಡಸರು ಮತ್ತೆ ಎಲ್ಲಿ ಕುಡಿತಕ್ಕೆ ದಾಸರಾಗುತ್ತಾರೋ ಎಂಬ ಭಯ ಅವರನ್ನು ಕಾಡುತ್ತಿದೆ.

ಕಾಲ ಮಿಂಚಿ ಹೋಗಿದೆ: ‘ಸಂಪೂರ್ಣವಾಗಿ ಮದ್ಯ ಮಾರಾಟಕ್ಕೆ ನಿಷೇಧ ಹೇರಲು ಈಗ ಉತ್ತಮ ಅವಕಾಶ ಇತ್ತು. ಎಲ್ಲರೂ ಈ ಪರಿಸ್ಥಿತಿಗೆ ಹೊಂದಿಕೊಂಡಿದ್ದರು. ಆದರೆ, ಈಗ ಕಾಲ ಮಿಂಚಿ ಹೋಗಿದೆ. 40 ದಿನಗಳಿಂದ ಮದ್ಯ ಕುಡಿಯದಿದ್ದ ವ್ಯಸನಿಗಳಿಗೆ ಅಂಗಡಿಗಳು ತೆರೆಯುವುದು ಬೇಕಿತ್ತೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ, ಅಬಕಾರಿ ಲಾಬಿಗಳಿಗೆ ಇದು ಬೇಕಿತ್ತು ಅನಿಸುತ್ತಿದೆ. ಅವರ ಒತ್ತಡದಿಂದಾಗಿಯೇ ಸರ್ಕಾರ ಮದ್ಯದ ಅಂಗಡಿಗಳನ್ನು ತೆರೆಯುವುದಕ್ಕೆ ಅನುಮತಿ ನೀಡಿರುವ ಸಾಧ್ಯತೆ ಇದೆ’ ಎಂದು ರಂಗಕರ್ಮಿ ವೆಂಕಟರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಆದಾಯಕ್ಕೆ ಬೇರೆ ಮಾರ್ಗ ಇಲ್ಲವೇ?

‘ಮದ್ಯದ ಚಟ ಹತ್ತಿಸಿಕೊಂಡವರು ಹೊಸ ವಾತಾವರಣಕ್ಕೆ ಹೊಂದಿಕೊಂಡಿದ್ದರು. ಮನೆಯವರೊಂದಿಗೆ ಬೆರೆಯಲು ಅಭ್ಯಾಸ ಮಾಡಿಕೊಂಡಿದ್ದರು. ಮದ್ಯದ ಅಂಗಡಿಗಳನ್ನು ತೆರೆದರೆ ಅವರು ಮತ್ತೆ ಚಟಕ್ಕೆ ದಾಸರಾಗುವುದು ಖಚಿತ. ಮನೆಯವರಿಗೆಲ್ಲರಿಗೂ ತೊಂದರೆ. ಹಾಗಾಗಿ, ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಲು ಸರ್ಕಾರಕ್ಕೆ ಇದು ಸೂಕ್ತ ಕಾಲವಾಗಿತ್ತು’ ಎಂದು ಸಾಮಾಜಿಕ ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ ಹೇಳಿದರು.

‘ಒಂದೂವರೆ ತಿಂಗಳಿನಿಂದ ಕೆಲಸ ಇಲ್ಲದೇ ಯಾರ ಬಳಿಯೂ ದುಡ್ಡಿಲ್ಲ. ಬಡವರು ಸರ್ಕಾರ ಕೊಟ್ಟ ಅಕ್ಕಿಯಿಂದ ಅನ್ನ ಮಾಡಿಕೊಂಡು ಬದುಕುತ್ತಿದ್ದಾರೆ. ಸದ್ಯಕ್ಕೆ ಸಂಪಾದನೆಯೂ ಇಲ್ಲ. ಈ ಸಂದರ್ಭದಲ್ಲಿ ಸರ್ಕಾರವು ಮದ್ಯದಂಗಡಿಗಳನ್ನು ತೆರೆದರೆ ಬಡವರ ಕುಟುಂಬದಲ್ಲಿ ಅಶಾಂತಿ ತಲೆದೋರುತ್ತದೆ. ಜಗಳ, ಹೊಡೆದಾಟ ಎಲ್ಲ ಆರಂಭವಾಗುತ್ತದೆ’ ಎಂದು ಚಮ್ಮಾರಿಕೆ ಕೆಲಸ ಮಾಡುತ್ತಿರುವ ಬಣ್ಣಾರಿ ಅವರು ಹೇಳಿದರು.

‘ಕುಡಿತದ ಚಟಕ್ಕೆ ಬಿದ್ದವರು ಕಾಸಿಲ್ಲದೇ ಹೆಂಡತಿಯ ಕಿವಿಯೋಲೆ, ಸರ, ಕೊನೆಗೆ ತಾಳಿಯನ್ನೂ ಮಾರಿ ಅಥವಾ ಅಡವಿಟ್ಟು ದುಡ್ಡು ತರಬಹುದು. ಹೀಗಾದರೆ ಕುಟುಂಬದ ಗತಿ ಏನು? ಸರ್ಕಾರಕ್ಕೆ ಆದಾಯ ಸಂಗ್ರಹಿಸಲು ಮದ್ಯ ಮಾರಾಟವೊಂದೇ ದಾರಿಯೇ? ಬೇರೆ ಮಾರ್ಗಗಳೇ ಇಲ್ಲವೇ? ಬಡವರ ಬದುಕನ್ನು ಹಾಳು ಮಾಡುವುದಕ್ಕಾಗಿಯೇ ಮದ್ಯದ ಅಂಗಡಿಗಳನ್ನು ತೆರೆಯಲಾಗುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಒಂದೂವರೆ ತಿಂಗಳಿನಿಂದ ಕಷ್ಟದಲ್ಲಿ ಜೀವನ ನಡೆಸುತ್ತಿದ್ದೇವೆ. ಮದ್ಯದಿಂದಾಗಿ ನಮ್ಮಂತಹ ಬಡವರ ಮನೆಗಳಲ್ಲಿ ಕಷ್ಟ ಇನ್ನಷ್ಟು ಹೆಚ್ಚಾಗಲಿದೆ. ಸರ್ಕಾರ ಇನ್ನೂ ಸ್ವಲ್ಪ ಸಮಯ ನಿರ್ಬಂಧ ಹೇರಬೇಕಿತ್ತು’ ಎಂದು ನಗರದ ಅಂಬೇಡ್ಕರ್ ಬೀದಿಯ ಯುವಕ ಸುರೇಶ್‌ ಹೇಳಿದರು.

ಸರ್ಕಾರದ ಸಮಾಜಘಾತುಕ ಕೆಲಸ

ಸರ್ಕಾರದ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ‌ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಿ.ಎಸ್‌.ಜಯದೇವ ಅವರು, ‘ಸರ್ಕಾರವೇ ಮಾಡಬಹುದಾದ ಸಮಾಜಘಾತುಕ ಕೆಲಸ ಇದು. ಜನರ ಅದರಲ್ಲೂ ಬಡವರ ನೆಮ್ಮದಿಯನ್ನು ಹಾಳು ಮಾಡುವಂತಹ ಪಾಪಕೃತ್ಯ ಇದು’ ಎಂದು ಹೇಳಿದರು.

‘ಮದ್ಯದ ಹಾವಳಿ ಇಲ್ಲದೆ ಜಿಲ್ಲೆಯ ಗಿರಿಜನರು ಸುಖವಾಗಿದ್ದಾರೆ. ಆರೋಗ್ಯವೂ ಉತ್ತಮವಾಗಿದೆ. ಚಟವನ್ನು ಮರೆಯುವ ಪ್ರಯತ್ನದಲ್ಲಿ ಅವರಿದ್ದಾರೆ. ಇಂತಹ ಸಂದರ್ಭದಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುವ ಸರ್ಕಾರದ ನಿರ್ಧಾರ ನಿಜಕ್ಕೂ ಅನ್ಯಾಯ. 40 ದಿನಗಳು ಆಗಿರುವುದರಿಂದ ಕೆಲವರು ಮದ್ಯವನ್ನು ತ್ಯಜಿಸುವ ನಿರ್ಧಾರಕ್ಕೆ ಬಂದಿರಬಹುದು. ಆದರೆ, ಸೆಳೆತ ಇರುತ್ತದೆ. ಒಮ್ಮೆ ಮದ್ಯ ಸೇವೆಸಿದರೆ ಮುಗಿಯಿತು. ಮತ್ತೆ ಆ ವ್ಯಕ್ತಿ ಮದ್ಯಕ್ಕೆ ದಾಸನಾಗುವುದು ಖಚಿತ’ ಎಂದು ತಿಳಿಸಿದರು.

‘ಸರ್ಕಾರ ಸಂಪೂರ್ಣವಾಗಿ ಮದ್ಯ ಮಾರಾಟ ನಿಷೇಧ ಮಾಡಬೇಕಿತ್ತು. ಇಲ್ಲವೇ ಇನ್ನೂ ಎರಡು ಮೂರು ತಿಂಗಳು ವಿಸ್ತರಿಸಬೇಕಿತ್ತು. ಇದರಿಂದಾಗಿ ಅವರ ಮನಸ್ಸು ಇನ್ನಷ್ಟು ಪರಿವರ್ತನೆಯಾಗಿ ಶಾಶ್ವತವಾಗಿ ಅದರಿಂದ ದೂರವಾಗುವ ಸಾಧ್ಯತೆ ಹೆಚ್ಚಿತ್ತು’ ಎಂದರು.

‘ಸರ್ಕಾರ ಹೆಂಡ ಮಾರಿಯೇ ಆದಾಯ ಪಡೆಯಬೇಕಾ? ಅದಕ್ಕೆ ಬೇರೆ ಮಾರ್ಗಗಳನ್ನು ಹುಡುಕಿಕೊಳ್ಳಲಿ. ತೆರಿಗೆ ಜಾಸ್ತಿ ಮಾಡಲಿ, ಜನಪ್ರಿಯ ಯೋಜನೆಗಳನ್ನು ಸ್ಥಗಿತಗೊಳಿಸಲಿ. ಅದು ಬಿಟ್ಟು ಇಂತಹ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ. ಹೆಂಡದ ದೊರೆಗಳ ಲಾಬಿಗೆ ಸರ್ಕಾರ ಮಣಿದಿದೆ’ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT