ಮಂಗಳವಾರ, ಆಗಸ್ಟ್ 3, 2021
28 °C

ಊರಿನಲ್ಲಿ ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ: ಕೋವಿಡ್‌ನಿಂದ ಗುಣಮುಖರಾದ ದಂಪತಿ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಕೋವಿಡ್‌–19 ಮಾರಣಾಂತಿಕ ಕಾಯಿಲೆ ಅಲ್ಲ. ಆತ್ಮಸ್ಥೈರ್ಯ ಇದ್ದರೆ ಸುಲಭವಾಗಿ ಜಯಿಸಬಹುದು. ಗುಣಮುಖರಾಗಿ ಮನೆಗೆ ಹೋದರೆ, ಊರಲ್ಲಿನ ಜನ ನಮ್ಮನ್ನು ಅಸ್ಪೃಶ್ಯರ ರೀತಿ ಕಾಣುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು’

ಕೋವಿಡ್‌–19 ವಿರುದ್ಧ ಹೋರಾಡಿ ಜಯಿಸಿರುವ ತಾಲ್ಲೂಕಿನ ಬದನಗುಪ್ಪೆಯ ಮಹೇಶ್‌–ಜಯಶ್ರೀ ದಂಪತಿಯ ಮಾತಿದು. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ದಂಪತಿ ಭಾಗವಹಿಸಿ, ಕೋವಿಡ್‌–19 ಬಗ್ಗೆ, ಅದನ್ನು ಜಯಿಸಿರುವ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ಜಯಶ್ರೀ ವೈದ್ಯಕೀಯ ಕಾಲೇಜಿನ ಕೋವಿಡ್‌–19 ಪ್ರಯೋಗಾಲಯದಲ್ಲಿ ತಂತ್ರಜ್ಞೆಯಾಗಿ ಕೆಲಸ ಮಾಡಿದವರು. ಹತ್ತು ದಿನ ಚಿಕಿತ್ಸೆ ಪಡೆದಿರುವ ದಂಪತಿ ಮಂಗಳವಾರ ಮನೆಗೆ ತೆರಳಿದ್ದಾರೆ. 

‘ಗುಣಮುಖರಾಗಿ ಮನೆಗೆ ತೆರಳಿದ ನಂತರ, ಊರಿನ ಜನರು ನಮ್ಮನ್ನು ವಿಚಿತ್ರವಾಗಿ ನೋಡುತ್ತಿದ್ದಾರೆ. ಹಿಂದೆ ಗೌರವ ಕೊಡುತ್ತಿದ್ದವೆರಲ್ಲ, ಬೇರೆಯದೇ ರೀತಿಯಲ್ಲಿ ಕಾಣುತ್ತಿದ್ದಾರೆ. ಅಸ್ಪೃಶ್ಯರ ರೀತಿಯಲ್ಲಿ ನಮ್ಮೊಂದಿಗೆ ವರ್ತಿಸುತ್ತಿದ್ದಾರೆ. ಕೆಲವರಂತೂ ನಮ್ಮ ಫೋಟೊ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ’ ಎಂದು ಜಯಶ್ರೀ ಹೇಳಿದರು. 

‘ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು. 

‘ನನಗೆ ಹಾಗೂ ಪತಿಗೆ ಒಂದೇ ದಿನ ಜ್ವರ ಬಂತು. ಕೆಮ್ಮು ಕೂಡ ಇತ್ತು. ಹಾಗಾಗಿ, ಕೋವಿಡ್‌–19 ಪರೀಕ್ಷೆ ಮಾಡಿಸಲು ನಿರ್ಧರಿಸಿದೆವು. ಮರು ದಿನ ಸೋಂಕು ತಗುಲಿರುವುದು ಗೊತ್ತಾಯಿತು. ನಾನು ಪ್ರಯೋಗಾಲಯದಲ್ಲಿ ಕೆಲಸ ಮಾಡುತ್ತಿದ್ದರೂ, ಅಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ, ಅಲ್ಲಿ ಸೋಂಕು ತಗುಲುವ ಸಾಧ್ಯತೆ ಕ್ಷೀಣ. ಸೋಂಕಿನ ಮೂಲ ಯಾವುದು ಎಂದು ನನಗೆ ಗೊತ್ತಾಗುತ್ತಿಲ್ಲ’ ಎಂದು ಜಯಶ್ರೀ ಹೇಳಿದರು. 

ಅತ್ಯುತ್ತಮ ಚಿಕಿತ್ಸೆ: ‘ಈ ಕಾಯಿಲೆಯನ್ನು ಎದುರಿಸಲು ಧೈರ್ಯ ಮುಖ್ಯ. ಕೋವಿಡ್‌ ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು, ನರ್ಸ್‌ಗಳು ಮಾನವೀಯವಾಗಿ ವರ್ತಿಸಿ ಧೈರ್ಯ ತುಂಬುತ್ತಿದ್ದಾರೆ. ಸಿಬ್ಬಂದಿ ಯಾವುದೇ ಹಿಂಜರಿಕೆ ಇಲ್ಲದೆ, ಹತ್ತಿರ ಬಂದು ಚೆನ್ನಾಗಿ ಮಾತನಾಡಿ ಚಿಕಿತ್ಸೆ ನೀಡುತ್ತಾರೆ. ಆರಂಭದಲ್ಲಿ ಆಸ್ಪತ್ರೆಗೆ ದಾಖಲಾದವರಿಗೆಲ್ಲ ಭಯ ಇರುತ್ತದೆ. ಆದರೆ, ಸಿಬ್ಬಂದಿ ನೋಡಿಕೊಳ್ಳುವ ರೀತಿಯಿಂದ ಒಂದೆರಡು ದಿನಗಳಲ್ಲಿ ಧೈರ್ಯ ಬರುತ್ತದೆ’ ಎಂದು ಜಯಶ್ರೀ ತಿಳಿಸಿದರು. 

‘ನನಗೆ ಆರಂಭದಲ್ಲಿ ಜ್ವರ, ಕೆಮ್ಮು ಇತ್ತು. ಮೂರ್ನಾಲ್ಕು ದಿನಗಳಲ್ಲಿ ಅದು ಕಡಿಮೆಯಾಯಿತು. ಆಮೇಲೆ ಸಮಸ್ಯೆ ಕಾಣಲಿಲ್ಲ. ಊಟ ಉಪಚಾರ ಚೆನ್ನಾಗಿ ಮಾಡುತ್ತಾರೆ. ಕೋವಿಡ್‌ ಅಸ್ಪತ್ರೆಯಲ್ಲಿ ಉತ್ತಮವಾದ ಮೂಲ ಸೌಕರ್ಯಗಳಿವೆ’ ಎಂದರು. 

‘ಇದು ಸಾವು ತರುವಂತಹ ಕಾಯಿಲೆ ಅಲ್ಲ. ಆಸ್ತಮಾ ಸೇರಿದಂತೆ ಇನ್ನಿತರ ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ಹೆಚ್ಚು ಸಮಸ್ಯೆ ಆಗಬಹುದು. ರೋಗ ನಿರೋಧಕ ಶಕ್ತಿ ಹೆಚ್ಚು ಇರುವವರಿಗೆ ಕೋವಿಡ್‌–19ನಿಂದ ಏನೂ ಸಮಸ್ಯೆಯಾಗುವುದಿಲ್ಲ’ ಎಂದು ಪ್ರತಿಪಾದಿಸಿದರು.

ಮಹೇಶ್‌ ಮಾತನಾಡಿ, ‘ಆಸ್ಪತ್ರೆಯಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ನಮ್ಮ ಅಗತ್ಯಗಳಿಗೆ ಸ್ಪಂದಿಸಿದ್ದಾರೆ. ಕಾಫಿ, ತಿಂಡಿ, ಊಟ ಎಲ್ಲ ಹೊತ್ತಿಗೆ ಸರಿಯಾಗಿ ನೀಡುತ್ತಿದ್ದರು. ಶೌಚಾಲಯದ್ದು ಸ್ವಲ್ಪ ಸಮಸ್ಯೆಯಾಯಿತು. ರೋಗಿಗಳಿಗೆ ಬಿಸಿ ನೀರಿನ ವ್ಯವಸ್ಥೆ ಇರಲಿಲ್ಲ. ಅದು ಬಿಟ್ಟರೆ ಬೇರೇನೂ ಸಮಸ್ಯೆಯಾಗಲಿಲ್ಲ’ ಎಂದರು. 

ಜಾಗೃತಿ ಮೂಡಿಸಬೇಕಿದೆ: ‘ಗ್ರಾಮೀಣ ಭಾಗಗಳಲ್ಲಿ ಸೋಂಕಿತರನ್ನು ವಿಚಿತ್ರವಾಗಿ ಕಾಣುತ್ತಿದ್ದಾರೆ. ಜನರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

ಕೀಳಾಗಿ ಕಾಣದಿರಿ, ಧೈರ್ಯ ತುಂಬಿ

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ‘ಸೋಂಕು ತಗುಲಿರುವವರನ್ನು ಯಾರೂ ಕೀಳಾಗಿ ಕಾಣಬಾರದು. ಅವರ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬಾರದು. ಧೈರ್ಯ ತುಂಬುವ ಕೆಲಸ ಮಾಡಬೇಕು’ ಎಂದು ಹೇಳಿದರು. 

‘ಕೊರೊನಾ ವೈರಸ್‌ ಸೋಂಕು ಯಾವಾಗ ಯಾರಿಗೆ ತಗುಲುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾರಿಗೆ ಬೇಕಾದರೂ ಬರಬಹುದು. ಇವತ್ತು ಸೋಂಕು ಇಲ್ಲದವರಿಗೆ ನಾಳೆ ಬರಬಹುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು