ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಪೋಕ್ಸೊ ಪ್ರಕರಣಗಳ ವಿಚಾರಣೆಗೆ ಮಕ್ಕಳ ಸ್ನೇಹಿ ನ್ಯಾಯಾಲಯ ಉದ್ಘಾಟನೆ

ನ್ಯಾಯಾಧೀಶರಾಗಿ ನಿಶಾರಾಣಿ ನೇಮಕ, ಹೊಸ ಕೋರ್ಟ್ ಉದ್ಘಾಟಿಸಿದ ನ್ಯಾಯಮೂರ್ತಿ ಅರುಣ್‌
Last Updated 8 ಜುಲೈ 2022, 10:44 IST
ಅಕ್ಷರ ಗಾತ್ರ

ಚಾಮರಾಜನಗರ: ಪೋಕ್ಸೊ ಪ್ರಕರಣಗಳ ವಿಚಾರಣೆಗಾಗಿ ಜಿಲ್ಲೆಯಲ್ಲಿ ಪ್ರತ್ಯೇಕವಾದ ಮಕ್ಕಳ ಸ್ನೇಹಿ ನ್ಯಾಯಾಲಯ ಸ್ಥಾಪನೆಯಾಗಿದ್ದು, ಶುಕ್ರವಾರ ಹೊಸ ನ್ಯಾಯಾಲಯಕ್ಕೆ ಚಾಲನೆ ದೊರಕಿತು.

ಹೈಕೋರ್ಟ್‌ ಹಾಗೂ ಚಾಮರಾಜನಗರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರು ಬೆಂಗಳೂರಿನಿಂದ ವರ್ಚ್ಯುವಲ್‌ ಆಗಿ ನ್ಯಾಯಾಲಯವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಯಾವುದೇ ಜಿಲ್ಲೆಯಲ್ಲಿ ಪೋಕ್ಸೊ ‍ಪ್ರಕರಣಗಳು 100ಕ್ಕೂ ಹೆಚ್ಚು ಇದ್ದರೆ, ಅಲ್ಲಿ ಪ್ರತ್ಯೇಕ ಪೋಕ್ಸೊ ನ್ಯಾಯಾಲಯ ಸ್ಥಾಪಿಸಲಾಗುತ್ತದೆ.

ಹೊಸ ನ್ಯಾಯಾಲಯದ ನ್ಯಾಯಧೀಶರನ್ನಾಗಿ ನಿಶಾರಾಣಿ ಎ.ಸಿ. ಅವರನ್ನು ನೇಮಕ ಮಾಡಲಾಗಿದೆ. ಶುಕ್ರವಾರ ಅವರು ಅಧಿಕಾರ ಸ್ವೀಕರಿಸಿದರು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿಯೇ ಮಕ್ಕಳ ಸ್ನೇಹಿ ನ್ಯಾಯಾಲಯ ಕಾರ್ಯಾಚರಿಸಲಿದೆ.

ಪೋಕ್ಸೊ ಪ್ರಕರಣಗಳು ಹೆಚ್ಚಳ: ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ, ‘ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಆರು ತಿಂಗಳ ಹಿಂದೆ ನಾನು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ 85 ಪ್ರಕರಣಗಳು ಇದ್ದವು. ಈಗ ಇದು 127ಕ್ಕೆ ಏರಿದೆ. ಇದಲ್ಲದೇ, ನಾನು 10 ಪ್ರಕರಣಗಳು ಇತ್ಯರ್ಥ ಮಾಡಿದ್ದೇನೆ. ಪೋಕ್ಸೊ ಕಾಯ್ದೆಯಡಿ ಪ್ರಕರಣ ಹೆಚ್ಚಾಗುತ್ತಿರುವುದು ಒಳ್ಳೆಯ ಸಂಗತಿಯಲ್ಲ’ ಎಂದರು.

‘ಈ ಪ್ರಕರಣಗಳ ವಿಚಾರಣೆಗಾಗಿ ಪ್ರತ್ಯೇಕ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಅದಕ್ಕೆ ಹೊಸ ನ್ಯಾಯಾಧೀಶರೂ ಬಂದಿದ್ದಾರೆ. ಜಿಲ್ಲೆಯ ವಕೀಲರು ಅವರಿಗೆ ಉತ್ತಮ ಸಹಕಾರ ನೀಡಬೇಕು’ ಎಂದರು.

ಪ್ರಾಧಿಕಾರದಿಂದ ಜಾಗೃತಿ: ಪೋಕ್ಸೊ ಕಾಯ್ದೆಗಳ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಹಳ್ಳಿ ಹಳ್ಳಿಗಳಿಗೂ ತೆರಳಿ ಕಾನೂನುಗಳ ಬಗ್ಗೆ ತಿಳಿ ಹೇಳಲಾಗುತ್ತಿದೆ’ ಎಂದು ಭಾರತಿ ಅವರು ಹೇಳಿದರು.

ನೂತನ ನ್ಯಾಯಾಧೀಶರಾದ ನಿಶಾರಾಣಿ ಮಾತನಾಡಿ, ‘2020–21ನೇ ಬ್ಯಾಚ್‌ನ ನ್ಯಾಯಾಧೀಶೆಯಾದ ನಾನು ತುಮಕೂರಿನಿಂದ ಬಂದಿದ್ದೇನೆ. ಪ್ರಕರಣಗಳ ವಿಚಾರಣೆ ಸಂದರ್ಭದಲ್ಲಿ ಎಲ್ಲ ವಕೀಲರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಮಾತನಾಡಿ, ‘ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನಿನ ಅರಿವಿನ ಕೊರತೆಯೂ ಇದಕ್ಕೆ ಕಾರಣ.100 ಪ್ರಕರಣಗಳು ದಾಖಲಾದರೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು ಎಂಬ ನಿಯಮ ಇದೆ. ಅದರಂತೆ ಹೊಸ ನ್ಯಾಯಾಲಯ ಸ್ಥಾಪನೆಯಾಗಿದೆ. ಇದರಿಂದಾಗಿ ಜಿಲ್ಲಾ ಪ್ರಧಾನ ನ್ಯಾಯಾಲಯದ ಮೇಲಿದ್ದ ಹೊರೆ ಕಡಿಮೆಯಾಗಲಿದೆ. ವಕೀಲರು ಹೊಸ ನ್ಯಾಯಾಧೀಶರಿಗೆ ಎಲ್ಲ ರೀತಿಯ ಸಹಕಾರ ನೀಡಲಿದ್ದಾರೆ’ ಎಂದರು.

ನ್ಯಾಯಾಧೀಶರಾದ ಹೊನ್ನಸ್ವಾಮಿ, ಚಂಪಕಾ, ವೆಂಕಟೇಶ್‌, ನಿವೇದಿತಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ್ ಎಂ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ವಿನಯ್‌ಕುಮಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗೀತಾಲಕ್ಷ್ಮೀ, ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.ಯೋಗೇಶ್‌, ವಕೀಲರ ಸಂಘದ ಕಾರ್ಯದರ್ಶಿ ವಿರೂಪಾಕ್ಷಸ್ವಾಮಿ, ವಕೀಲರಾದ ಮಂಜು ಎಸ್‌.ಹರವೆ, ಪ್ರಸನ್ನಕುಮಾರ್‌, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೆಂಪರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT