ಭಾನುವಾರ, ನವೆಂಬರ್ 28, 2021
19 °C
ಹುತಾತ್ಮರ ದಿನಾಚರಣೆ

ಕಾನೂನು ಸುವ್ಯವಸ್ಥೆ: ಪೊಲೀಸರೊಂದಿಗೆ ಜನರೂ ಕೈಜೋಡಿಸಲು ನ್ಯಾಯಾಧೀಶರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕರ್ತವ್ಯ ನಿರತ ಪೊಲೀಸರೊಂದಿಗೆ ಸಾರ್ವಜನಿಕರೂ ಸಹಕರಿಸಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ಗುರುವಾರ ಅಭಿಪ್ರಾಯಪಟ್ಟರು. 

ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯೋಧರು ದೇಶದ ಗಡಿಯಲ್ಲಿ ಹೊರಗಿನ ಶತ್ರುಗಳೊಂದಿಗೆ ಹೋರಾಡಿದರೆ, ಪೊಲೀಸರು ಆಂತರಿಕವಾಗಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಾರೆ. ಕಾನೂನುಗಳ ಪಾಲನೆ, ಸಮಾಜದಲ್ಲಿ ಸುವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಪೊಲೀಸರ ಕೆಲಸ ಮಾತ್ರ ಅಲ್ಲ. ಸಾರ್ವಜನಿಕರೂ ಅವರಿಗೆ ಸಹಕಾರ ನೀಡಬೇಕು’ ಎಂದರು. 

‘ಪೊಲೀಸರಿಗೆ ವಿಶ್ರಾಂತಿ ಎಂಬುದಿಲ್ಲ. ಕೃತಜ್ಞತೆ ಇಲ್ಲದ ಉದ್ಯೋಗ ಇದು. ದಿನದ 24 ಗಂಟೆಗಳ ಕಾಲವೂ ಅವರು ಸಕ್ರಿಯರಾಗಿರಬೇಕು. ಕಾನೂನು ಸುವ್ಯವಸ್ಥೆ ಪಾಲನೆ ಮಾತ್ರ ಮಾಡುವುದಲ್ಲದೇ, ತಪ್ಪು ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ, ಅವರಿಗೆ ಶಿಕ್ಷೆ ಆಗುವಂತೆ ಮಾಡುವ ಅಧಿಕಾರವೂ ಪೊಲೀಸರಿಗಿದೆ’ ಎಂದರು.

ಕಾಯ್ದೆ ತಿದ್ದುಪಡಿಗಳ ಬಗ್ಗೆ ತಿಳಿಯಿರಿ: ‘ಪೊಲೀಸರು ಕಾಯ್ದೆಗಳಲ್ಲಿ ಆಗಿರುವ ತಿದ್ದುಪ‍ಡಿಗಳ ಬಗ್ಗೆ ತಿಳಿದಿರಬೇಕು, ಅಧ್ಯಯನ ಮಾಡುತ್ತಿರಬೇಕು. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಕೆಲವು ನಿಯಮಗಳನ್ನು ತೆಗೆದು ನಾಲ್ಕು ವರ್ಷಗಳಾದರೂ ಪೊಲೀಸರು ಹಳೆಯ ಕಾನೂನಿನ ಅಡಿಯಲ್ಲೇ ಆರೋಪ ಪಟ್ಟಿ ಸಲ್ಲಿಸುತ್ತಿದ್ದಾರೆ ಎಂದು ಕೆಲವು ತಿಂಗಳ ಹಿಂದೆ ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತ್ತು. ಇಂತಹದ್ದು ಆಗಬಾರದು. ಇದಕ್ಕಾಗಿಯೇ ಪ್ರತಿ ಠಾಣೆಯಲ್ಲಿ ಪುಟ್ಟ ಗ್ರಂಥಾಲಯವನ್ನು ಆರಂಭಿಸುವಂತೆ ಎಸ್‌ಪಿಯವರಿಗೆ ಸಲಹೆ ನೀಡಿದ್ದೇನೆ. ಇದರಿಂದಾಗಿ ಕಾಯ್ದೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಿಬ್ಬಂದಿ ಅದರಲ್ಲೂ ವಿಶೇಷವಾಗಿ ತನಿಖಾಧಿಕಾರಿಗಳು ಠಾಣೆಯಲ್ಲಿ ಓದುವುದಕ್ಕೆ ಅವಕಾಶವಾಗುತ್ತದೆ’ ಎಂದರು. 

‘ಅಪರಾಧ ಪ್ರಕರಣಗಳ ತನಿಖೆಯಲ್ಲಿ ಪೊಲೀಸರು ಆಧುನಿಕ ಎಲೆಕ್ಟ್ರಾನಿಕ್‌ ತಂತ್ರಜ್ಞಾನಗಳನ್ನು ಬಳಸಬೇಕು. ಇವುಗಳನ್ನೂ ತಿರುಚಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿ, ಪೊಲೀಸರು ಇವುಗಳ ಬಗ್ಗೆ ಅಧ್ಯಯನ ನಡೆಸಿ, ಎಚ್ಚರಿಕೆಯಿಂದ ಬಳಸಬೇಕು’ ಎಂದರು. 

ಡಿಸಿ ಶ್ಲಾಘನೆ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪೊಲೀಸರನ್ನು ಶ್ಲಾಘಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ಇತ್ತೀಚೆಗೆ ರಾಷ್ಟ್ರಪತಿ ಅವರ ಜಿಲ್ಲೆಯ ಭೇಟಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾಕ್ಕಾಗಿ ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದರು. 

‘ಚಾಮರಾಜನಗರದಂತಹ ಜಿಲ್ಲೆಗೆ ರಾಷ್ಟ್ರಪತಿ ಅವರಂತಹ ಅತಿ ಗಣ್ಯರು ಭೇಟಿ ನೀಡುವಾಗ ಶಿಷ್ಟಾಚಾರ, ಭದ್ರತೆ ಕಾಪಾಡುವುದು ಸವಾಲು. ನಮ್ಮಲ್ಲಿ ರಾಷ್ಟ್ರಪತಿ ಅವರ ಎರಡು ಕಾರ್ಯಕ್ರಮಗಳಿದ್ದವು. ಪೊಲೀಸರು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮನ್ವಯದಿಂದ ಅದ್ಭುತವಾಗಿ ಕೆಲಸ ಮಾಡಿ ಕಾರ್ಯಕ್ರಮ ಯಶಸ್ವಿಗಳೊಸಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದರು. 

ಇದಕ್ಕೂ ಮೊದಲು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ಪೊಲೀಸ್‌ ತುಕಡಿಯಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ, ಅವರು ಪೊಲೀಸ್‌ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಇಟ್ಟು ನಮನ ಸಲ್ಲಿಸಿದರು. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಸೆಸ್ಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಚಾಮರಾಜನಗರ ವೃತ್ತದ ಪ್ರಭಾರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌. ಕಾತ್ಯಾಯಿನಿದೇವಿ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ.ಜಿ.ಸಂತೋಷ್ ಕುಮಾರ್‌, ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಸೇರಿದಂತೆ ಪೊಲೀಸ್‌ ಇಲಾಖೆ, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. 

ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಪೊಲೀಸರ ಹೆಸರು ಓದಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು