ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಬೆಲೆ ಕುಸಿತ ಹಾಗೂ ಹೂಜಿ ರೋಗ ಬಾಧೆಯಿಂದ ಬೇಸತ್ತ ರೈತರು ಪಟ್ಟಣದ ಎಪಿಎಂಸಿ ರಸ್ತೆಯ ಬದಿ ಗುರುವಾರ ಟೊಮೆಟೊ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಸದ್ಯ ದ್ವಿತೀಯ ಗುಣಮಟ್ಟದ ಟೊಮೆಟೊ ದರ 25 ಕೆ.ಜಿಯ ಪ್ರತಿ ಬಾಕ್ಸ್‌ಗೆ ₹50ಕ್ಕೆ ಕುಸಿದಿದೆ. ಪ್ರತಿ ಕೆಜಿ ಟೊಮೆಟೊ ಬೆಲೆ ₹2 ಆಗಿದೆ. ‘ರೋಗಬಾಧೆಯೂ ಕಾಡುತ್ತಿದ್ದು ಗ್ರಾಹಕರು ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಮನೆಗೂ ಸಾಗಿಸಲಾಗದೆ ಮಾರಾಟ ಮಾಡಲೂ ಆಗದ ಪರಿಸ್ಥಿತಿ ಎದುರಾಗಿದೆ’ ಎಂದು ರೈತರು ಅಲವತ್ತುಕೊಂಡರು.
‘ಕೇರಳ ಹಾಗೂ ತಮಿಳುನಾಡು ಗಡಿಗೆ ಹತ್ತಿರವಾಗಿರುವುದರಿಂದ ಅಲ್ಲಿನವರೂ ಇಲ್ಲಿನ ಎಪಿಎಂಸಿಯಲ್ಲಿ ಹೆಚ್ಚು ತರಕಾರಿ ಖರೀದಿಸುತ್ತಾರೆ. ಅಲ್ಲಿಯೂ ಮಳೆಯಾಗುತ್ತಿದೆ. ಇದರಿಂದ ಖರೀದಿಗೆ ಉತ್ಸಾಹ ತೋರುತ್ತಿಲ್ಲ. ತಾಲ್ಲೂಕಿನಲ್ಲೂ ಮಳೆಯಾಗುತ್ತಿದೆ. ಇದರಿಂದ ರೋಗಬಾಧೆ ಕಾಣಿಸಿಕೊಂಡಿದ್ದು, ಗುಣಮಟ್ಟದೊಂದಿಗೆ ದರವೂ ಕುಸಿದಿದೆ. ಉತ್ತಮ ಗುಣಮಟ್ಟದ ಬೆಳೆಗಷ್ಟೇ ಆದ್ಯತೆ ಸಿಗುತ್ತಿದೆ’ ಎಂದು ನೋವು ತೋಡಿಕೊಂಡರು.