ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: 6 ದಶಕಗಳಿಂದ ಸೋಬಾನೆ ಹಾಡುವ ಭಾಗ್ಯಮ್ಮ

Published 28 ಫೆಬ್ರುವರಿ 2024, 6:27 IST
Last Updated 28 ಫೆಬ್ರುವರಿ 2024, 6:27 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಸೋಬಾನೆ ಪದಗಳು ಜಿಲ್ಲೆಯ ಸಂಸ್ಕೃತಿಯ ಭಾಗ. ಇಲ್ಲಿ ಮದುವೆ ವೇಳೆ ಬಳೆ ಶಾಸ್ತ್ರ, ಚಪ್ಪರದ ಶಾಸ್ತ್ರ ಸೇರಿದಂತೆ ವಿವಿಧ ಶುಭ ಸಮಾರಂಭಗಳಲ್ಲಿ ಸೋಬಾನೆ ಪದಗಳು ಕೇಳದಿದ್ದರೆ, ಆ ಸಮಾರಂಭ ಪೂರ್ಣವಾಗುವುದಿಲ್ಲ. 

ಜಾನಪದ ಕಲೆಗೆ ಹೆಸರಾದ ಗಡಿ ಜಿಲ್ಲೆಯ ಊರು ಊರುಗಳಲ್ಲೂ ಸೋಬಾನೆ ಕಲಾವಿದರಿದ್ದಾರೆ. ಸೋಬಾನೆ ಪದ ತಿಳಿದಿರುವ ಹೊಸ ತಲೆಮಾರಿನ ಮಹಿಳೆಯರು ಕಡಿಮೆ. ಆದರೆ, ಹಿರಿಯರು ಈಗಲೂ ಕಾಣಸಿಗುತ್ತಾರೆ. ಅಂತಹವರಲ್ಲಿ ಒಬ್ಬರು ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಭಾಗ್ಯಮ್ಮ.

ಭಾಗ್ಯಮ್ಮ ಅವರಿಗೆ ಈಗ 70ರ ಹರೆಯ. 60 ವರ್ಷಗಳಿಂದ ಅವರು ಸೋಬಾನೆ ಪದಗಳನ್ನು ಹಾಡುತ್ತಿದ್ದಾರೆ. ಮನೆಯಲ್ಲಿ ಹಿರಿಯರು ಹಾಡುವುದನ್ನು ಕೇಳಿ ಕೇಳಿ ಚಿಕ್ಕವಯಸ್ಸಿಗೇ ಸೋಬಾನೆ ಪದಗಳನ್ನು ಕರಗತ ಮಾಡಿಕೊಂಡಿದ್ದಾರೆ. 

ಹಳ್ಳಿಗಳಲ್ಲಿ ನಡೆಯುವ ಕಾರ್ಯಕ್ರಮ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸೋಬಾನೆ ಮತ್ತು ಸಂಪ್ರದಾಯ ಪದಗಳನ್ನು ಹಾಡುತ್ತಾರೆ. ಮದುವೆ, ತೊಟ್ಟಿಲು ಶಾಸ್ತ್ರ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆಯುವ ಕಾರ್ಯಕ್ರಮಗಳಿಗೂ ಭಾಗ್ಯಮ್ಮಗೆ ಆಹ್ವಾನ ಇರುತ್ತದೆ.

ರಾಮನಗರದ ಜಾನಪದ ಲೋಕದಲ್ಲಿ ಸೋಬಾನೆ ಪದ ಹಾಡಿ ಜನರಿಂದ ಮೆಚ್ಚುಗೆ ಗಳಿಸಿದ್ದಾರೆ. ಸೋಬಾನೆ ಪದ,  ಮಹದೇಶ್ವರ ಗೀತೆ, ಸಿದ್ದಪ್ಪಾಜಿ ಕಥೆ, ಮಂಟೇಸ್ವಾಮಿ ಹಾಡುಗಳು ಹಾಗೂ ಮಕ್ಕಳ ಹಾಡುಗಳೂ ಇವರ ನಾಲಿಗೆಯಲ್ಲಿ ನಲಿದಾಡುತ್ತವೆ.

‘ಸೋಬಾನಾ... ಎಲ್ಲಾ ಶಿವನಿಗೆ ಸೋಬಾನೆ’ ಎಂಬ ಪದ ಕೇಳಿದರೆ ಸಾಕು, ಇದು ಭಾಗ್ಯಮ್ಮನೇ ಹಾಡುತ್ತಿರುವುದು ಎಂಬ ನಿರ್ಣಯಕ್ಕೆ ಬರುತ್ತಾರೆ ಗ್ರಾಮದವರು. ಭಾಗ್ಯಮ್ಮ ಅವರು ಎರಡು ತಂಡಗಳನ್ನೂ ಕಟ್ಟಿದ್ದಾರೆ. 

‘ಭಾಗ್ಯಮ್ಮ ಸೋಬಾನೆ ಪದಕ್ಕೆ ಗ್ರಾಮದವರು ಮನ ಸೋಲುತ್ತಾರೆ’ ಎಂದು ಹೇಳುತ್ತಾರೆ ಅವರ ಸಹವರ್ತಿ ಹುಚ್ಚಮ್ಮ.

ಈ ಕಲೆಯನ್ನು ಅವರು ಹಣಕ್ಕಾಗಿ ಎಂದೂ ಪ್ರದರ್ಶಿಸಿಲ್ಲ. ಕಾಣಿಕೆ ರೂಪದಲ್ಲಿ ಕೊಟ್ಟದ್ದನ್ನು ಪಡೆಯುತ್ತಾರೆ.

ಬಿಡುವಿನ ಸಮಯದಲ್ಲಿ ಆಸಕ್ತರಿಗೆ ಸೋಬಾನೆ ಪದಗಳನ್ನು ಉಚಿತವಾಗಿ ಕಲಿಸುತ್ತಾರೆ. 

‘ಸೋಬಾನೆ ನಮ್ಮ ವಂಶ ಪಾರಂಪರ್ಯದಿಂದ ಬಂದ ಕಲೆ. ಹಾಗಾಗಿ ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಈಗ ವಯಸ್ಸಾಗಿದೆ. ಹಾಗಾಗಿ ಸೋಬಾನೆ ಹಾಡುವುದು ಕಡಿಮೆ ಮಾಡಿದ್ದೇನೆ. ಆದರೆ ನನ್ನ ಬಳಿ ಯಾರೇ ಬಂದು ಕೇಳಿದರೂ ಹೇಳಿಕೊಡುತ್ತೇನೆ’ ಎಂದು ಭಾಗ್ಯಮ್ಮ ಹೇಳಿದರು. 

ಕಲೆ ನಶಿಸುತ್ತಿರುವ ಬೇಸರ

ಇತ್ತೀಚಿನ ದಿನಗಳಲ್ಲಿ ಸೋಬಾನೆ ಪದ ನಶಿಸಿ ಹೋಗುತ್ತಿದೆ ಎಂಬುದು ಭಾಗ್ಯಮ್ಮನವರ ಬೇಸರ.  ‘ಹಿಂದಿನ ಕಾಲದಲ್ಲಿ ಯಾವುದೇ ಮದುವೆಗೆ ಒಂದು ತಿಂಗಳು ಇರುವಾಗಲೇ ಸೋಬಾನೆ ಹಾಡುವವರನ್ನು ಮದುವೆ ಮನೆಯವರು ಆಹ್ವಾನಿಸುತ್ತಿದ್ದರು. ಆದರೆ ಈ ಕಾಲದಲ್ಲಿ ಜನರು ಸಿನಿಮಾ ನಾಟಕಗಳತ್ತ ಆಸಕ್ತಿ ತೋರುತ್ತಿದ್ದಾರೆ. ಮದುವೆ ವೇಳೆ ವಿವಿಧ ತಂತ್ರಜ್ಞಾನಗಳನ್ನು ಬಳಸಿ ಸೋಬಾನೆ ಪದಗಳಿಗೆ ಅವಮಾನ ಮಾಡುತ್ತಿದ್ದಾರೆ. ಈಗ ನಡೆಯುವ ಯಾವ ಮದುವೆಗಳಲ್ಲೂ ಸೋಬಾನೆ ಪದಗಳು ಕೇಳುವುದಿಲ್ಲ. ಶಾಸ್ತ್ರ ಸಂಪ್ರದಾಯಗಳೂ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ’ ಎಂದು ಅವರು ಹೇಳಿದರು. 

‘ಈ ಆಧುನಿಕ ಯುಗದಲ್ಲಿ ಎಲ್ಲವೂ ಮರೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸೋಬಾನೆ ಪದಗಳು ಉಳಿಸಿ ಬೆಳೆಸುವ ಪ್ರಯತ್ನಗಳು ಆಗಬೇಕು’ ಎಂದು ಅಭಿಪ್ರಾಯ ಪಡುತ್ತಾರೆ ಭಾಗ್ಯಮ್ಮ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT