ಬುಧವಾರ, ಡಿಸೆಂಬರ್ 2, 2020
26 °C
ಹೊನ್ನೂರು ರಾಜಪ್ಪಗೆ ಒಲಿದ ಮೂಗುದಾರ ಚುಚ್ಚುವ ಕಲೆ

ಯಳಂದೂರ | ರಾಸುಗಳಿಗೆ ಮೂಗುದಾರ: ರೈತನ ಉಚಿತ ಸೇವೆ

ನಾ.ಮಂಜುನಾಥಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ಜಾನುವಾರುಗಳನ್ನು ನಿಯಂತ್ರಿಸಲು ಮೂಗುದಾರ ಹಾಕುವ ಕ್ರಮ ಗ್ರಾಮೀಣ ಭಾಗದಲ್ಲಿದೆ. ಮೂಗುದಾರ ಹಾಕುವುದೂ ಒಂದು ಕಲೆ. ಎಲ್ಲರಿಗೂ ಅದು ಸಿದ್ದಿಸುವುದಿಲ್ಲ. ಮೊದಲೆಲ್ಲ ಗ್ರಾಮಗಳಲ್ಲಿ ಹಲವರು ಇದರಲ್ಲಿ ಪರಿಣತಿ ಸಾಧಿಸಿದ್ದರು. ಈಗೀಗ ರೈತರು ಈ ಕೆಲಸಕ್ಕೆ ಪಶು ವೈದ್ಯರನ್ನೇ ಅವಲಂಬಿಸಿದ್ದಾರೆ. 

ಆದರೆ, ತಾಲ್ಲೂಕಿನ ಹೊನ್ನೂರು ಗ್ರಾಮದ ಹಿರಿಯ ರೈತ ರಾಜಪ್ಪ ಅವರು ದನಕರುಗಳೀಗೆ ಮೂಗುದಾರ ತೊಡಿಸುವುದರಲ್ಲಿ ಪಳಗಿದ್ದಾರೆ. ಈ ಕೆಲಸಕ್ಕೆ ಅವರು ಹಣ ಪಡೆಯುವುದಿಲ್ಲ. ವಂಶ ಪಾರಂಪರ್ಯವಾಗಿ ಬಳುವಳಿಯಾಗಿ ಬಂದ ಈ ಕೌಶಲವನ್ನು ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಾರೆ. ಸುತ್ತಮುತ್ತಲ ಗ್ರಾಮಗಳ ಹಸು, ಎತ್ತುಗಳ ಮಾಲೀಕರು ಮುಂಜಾನೆಯಿಂದಲೇ ಇವರ ಮುಂದೆ ರಾಸುಗಳ ಸಮೇತ ನೆರೆಯುತ್ತಾರೆ. 

‘ಎತ್ತು, ಎಮ್ಮೆ, ಹಸು ಹಾಗೂ ಕರುಗಳಿಗೆ ಮೂಗುದಾರ ಹಾಕುವ ಕಲೆ ಅವುಗಳ ಮಾಲೀಕರಿಗೆ ಗೊತ್ತಿರುವುದಿಲ್ಲ. ಮೂಗುದಾರ ತೊಡಿಸುವುದು ಸುಲಭದ ಕೆಲಸವೂ ಅಲ್ಲ. ರಾಸನ್ನು ಹಗ್ಗದಿಂದ ಕಟ್ಟಿ ನೆಲಕ್ಕೆ ಉರುಳಿಸಬೇಕು. ಹಾಗೆ ಮಾಡುವಾಗ ಗಾಯ ಆಗದಂತೆ, ಮೂಳೆ ಮುರಿಯದಂತೆ ಎಚ್ಚರ ವಹಿಸಬೇಕು. ಮೂಗು ಚುಚ್ಚುವಾಗಲೂ ಸರಿಯಾದ ಜಾಗ ನೋಡಿ ಚುಚ್ಚಬೇಕು. ಚಿಗುರಿನಲ್ಲಿ ಚುಚ್ಚಿದರೆ ರಾಸುಗಳಿಗೆ ಹೆಚ್ಚು ನೋವು ಆಗುತ್ತದೆ’ ಎಂದು ತಮ್ಮ ಅನುಭವವನ್ನು ಬಿಚ್ಚಿಡುತ್ತಾರೆ ರಾಜಪ್ಪ ಅವರು.

‘ಮೊದಲೆಲ್ಲ ಮೂಗುದಾರವನ್ನು ರೈತರು ಬಿಳಿ ಕತ್ತಾಳೆ ನಾರಿನಿಂದ ತಾವೇ ಹೆಣೆಯುತ್ತಿದ್ದರು. ಈಗ ಮಾರುಕಟ್ಟೆಯಲ್ಲಿ ನೂಲು ಹಾಗೂ ಪ್ಲಾಸ್ಟಿಕ್‌ ಮೂಗುದಾರ ಸಿಗುತ್ತದೆ. ನಯವಾದ ಹಾಗೂ ಮೃದುವಾದ ಪ್ಲಾಸ್ಟಿಕ್ ದಾರಗಳೂ ಬಂದಿವೆ. ಪ್ರಾಣಿಯ ವಯಸ್ಸಿಗೆ ಅನುಗುಣವಾದ ಗಾತ್ರದ ಮೂಗುದಾರ ಹುಡುಕಿ ಹಾಕಬೇಕು. ಸಣ್ಣ ಇಲ್ಲವೆ ದಪ್ಪ ಆದರೆ ಮೂಗು ಕೊಯ್ಯುತ್ತದೆ. ದಾರ ಹಾಕುವ ವ್ಯಕ್ತಿಗೆ ಇದರ ಪರಿಜ್ಞಾನ ಇರಬೇಕು’ ಎಂದು ಹೇಳುತ್ತಾರೆ ಅವರು.

‘ರಾಜಪ್ಪ ಅವರ ತಾತ‌ ಮತ್ತು ತಂದೆ ಮೂಗುದಾರ ಹಾಕುವಲ್ಲಿ ಪರಿಣಿತಿ ಪಡೆದಿದ್ದರು. ಮೂಗು ಚುಚ್ಚವಾಗ ನಂಜಾಗಬಾರದು. ಲೋಹದ ದಬ್ಬಣ ಬಳಸುವಾಗ ಎಚ್ಚರ ಇರಬೇಕು. ಕೆಲವೊಮ್ಮೆ ಬಲಿತ ಕಾಡು ಗಿಡದ ಕಡ್ಡಿ ಚೂಪು ಮಾಡಿ ಮೂಗು ಚುಚ್ಚುತ್ತಾರೆ. ಈಗ ಇಂತಹ ಗ್ರಾಮೀಣ ಕುಶಲ ಕಲೆ ತಿಳಿದಿರುವ ಮಂದಿ ಕಡಿಮೆಯಾಗುತ್ತಿದ್ದಾರೆ’ ಎಂದು ಅಂಬಳೆಯ ಕೃಷಿಕ ಶಿವಶಂಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜಪ್ಪ ಅವರ ಈ ಸೇವೆ ಒಂದು ಗ್ರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. ಸುತ್ತಮುತ್ತಲ ತಾಲ್ಲೂಕಿನ ಹಳ್ಳಿಗರು ಕರೆದು ಮೂಗುದಾರ ಹಾಕಿಸುತ್ತಾರೆ. ನೂರಾರು ದನಕರುಗಳಿಗೆ ಮೂಗುದಾರ ಹಾಕಿ ಅವರು ರೈತರಿಗೆ ನೆರವಾಗಿದ್ದಾರೆ.

‘ಮೂಗುದಾರ ಹಾಕುವುದು ನಮ್ಮ ಮನೆತನದ ಹೆಮ್ಮೆ. ಬಹುಶಃ ಇದು ನನ್ನೊಂದಿಗೆ ಕೊನೆಗೊಳ್ಳಲಿದೆ. ನಮ್ಮ ಸಂಬಂಧಿಕರ ಮಕ್ಕಳು ಓದಿಕೊಂಡಿದ್ದಾರೆ. ಅವರು ಈ ಕೆಲಸ ಬಗ್ಗೆ ಆಸಕ್ತಿ ತೋರುತ್ತಿಲ್ಲ’ ಎಂದು ರಾಜಪ್ಪ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು