ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ನರೇಗಾ ಅನುಷ್ಠಾನದಲ್ಲಿ ದಾಖಲೆ ಬರೆದ ಚಾಮರಾಜನಗರ ಜಿಲ್ಲೆ

ರಾಜ್ಯದಲ್ಲಿ ಐದನೇ ಸ್ಥಾನ, ಕಷ್ಟದ ಸಮಯದಲ್ಲಿ ಬಡವರ ಕೈ ಹಿಡಿದ ಯೋಜನೆ
Last Updated 13 ಜನವರಿ 2021, 10:04 IST
ಅಕ್ಷರ ಗಾತ್ರ

ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಪ್ರತಿ ವರ್ಷ ಕನಿಷ್ಠ ದಿನಗಳ (100) ಉದ್ಯೋಗವನ್ನು ಖಾತ್ರಿಗೊಳಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಅನುಷ್ಠಾನದಲ್ಲಿ ಗಡಿ ಜಿಲ್ಲೆ ಚಾಮರಾಜನಗರ ಈ ವರ್ಷ ದಾಖಲೆ ಬರೆದಿದೆ.

ಪ್ರತಿ ವರ್ಷ ನಿಗದಿತ ಗುರಿ ತಲುಪಲು ವಿಫಲವಾಗುತ್ತಿದ್ದ ಜಿಲ್ಲೆ, ಈ ಬಾರಿ ಗುರಿ ಮೀರಿದ ಸಾಧನೆ ಮಾಡುವತ್ತ ಹೆಜ್ಜೆ ಇಟ್ಟಿದೆ. ಡಿಸೆಂಬರ್‌ ಅಂತ್ಯದ ವೇಳೆಗೆ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲೇ ಐದನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಬಳ್ಳಾರಿ ಮೊದಲ ಸ್ಥಾನದಲ್ಲಿದ್ದರೆ, ಚಿಕ್ಕಬಳ್ಳಾಪುರ ಎರಡನೇ, ಬೆಳಗಾವಿ ಮೂರನೇ ಹಾಗೂ ರಾಮನಗರ ನಾಲ್ಕನೇ ಸ್ಥಾನದಲ್ಲಿದೆ.

ಮಾನವ ದಿನಗಳ ಸೃಷ್ಟಿ, ಕೆಲಸ ಪೂರ್ಣಗೊಂಡಿರುವುದು, ವಿವಿಧ ಇಲಾಖೆಗಳ ಪಾಲ್ಗೊಳ್ಳುವಿಕೆ, ಜಿಯೊ ಟ್ಯಾಗ್‌, ವೆಚ್ಚ ಮಾಡಿರುವುದು, ಆಧಾರ್‌ ಜೋಡಣೆ, ವಿವಿಧ ಮಾನದಂಡಗಳನ್ನು ಆಧರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಜಿಲ್ಲೆಗಳಯು ಸ್ಥಾನಮಾನವನ್ನು ನಿಗದಿ ಮಾಡಿದ್ದು, ಚಾಮರಾಜನಗರ ಜಿಲ್ಲೆ 150ರಲ್ಲಿ 99.40 ಅಂಕಗಳನ್ನು ಗಳಿಸಿದೆ.

ಕೋವಿಡ್–19‌ ಕಾರಣ
ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಈ ವರ್ಷ ಕಾಡಿದ ಕೋವಿಡ್‌ ಪ್ರಮುಖ ಕಾರಣ. ಲಾಕ್‌ಡೌನ್‌ ಅವಧಿಯಲ್ಲಿ ಕೆಲಸವಿಲ್ಲದೇ ಕುಳಿತಿದ್ದ ಗ್ರಾಮೀಣ ಭಾಗದ ಜನರಿಗೆ ನರೇಗಾ ಸಂಜೀವಿನಿಯಾಗಿ ಪರಿಣಮಿಸಿತ್ತು. ಜಿಲ್ಲಾ ಪಂಚಾಯಿತಿ ಕೂಡ ಈ ಯೋಜನೆಗೆ ಹೆಚ್ಚು ಒತ್ತು ನೀಡಿ, ಹೆಚ್ಚು ಜನರಿಗೆ ಕೆಲಸ ನೀಡುವತ್ತ ಗಮನಹರಿಸಿತ್ತು. ಅದರ ಪರಿಣಾಮವೇ ಈ ಸಾಧನೆ.

ಮೂರು ವರ್ಷಗಳಿಂದ ಜಿಲ್ಲೆಗೆ ಪ್ರತಿ ವರ್ಷ 32.86 ಲಕ್ಷ ಮಾನವ ದಿನಗಳನ್ನು ಸೃಷ್ಟಿಸುವ ಗುರಿ ನೀಡಲಾಗುತ್ತಿದೆ. ಕಳೆದ ವರ್ಷ 27 ಲಕ್ಷ ಮಾನವ ದಿನಗಳಷ್ಟು ಸೃಷ್ಟಿಸಿದ್ದೇ ಈವರೆಗಿನ ಸಾಧನೆಯಾಗಿತ್ತು.

ಈ ವರ್ಷವೂ (2020–21) ಅಷ್ಟೇ ಗುರಿ ನೀಡಲಾಗಿತ್ತು. ಡಿಸೆಂಬರ್‌ ಮೊದಲ ವಾರದಲ್ಲೇ ಜಿಲ್ಲಾ ಪಂಚಾಯಿತಿ ಅದನ್ನು ತಲುಪಿದೆ. ಈಗ ಗುರಿಯನ್ನು ಪರಿಷ್ಕರಿಸಲಾಗಿದ್ದು, ಇನ್ನೂ ಎರಡು ಲಕ್ಷ ಹೆಚ್ಚು ಮಾನವ ದಿನಗಳನ್ನು (34.86 ಲಕ್ಷ) ಸೃಷ್ಟಿಸಲು ಸೂಚಿಸಲಾಗಿದೆ. ಇದಕ್ಕೆ ಮಾರ್ಚ್‌ 31ರವರೆಗೆ ಸಮಯ ಇದೆ. ಈಗಾಗಲೇ 33.45 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದ್ದು, ಕೆಲವೇ ವಾರಗಳಲ್ಲಿ ಅದನ್ನೂ ಮೀರಿಸುವ ವಿಶ್ವಾಸದಲ್ಲಿ ಅಧಿಕಾರಿಗಳು ಇದ್ದಾರೆ.

2020–21ನೇ ಸಾಲಿಗೆ ಜಿಲ್ಲೆಗೆ ನರೇಗಾ ಅಡಿಯಲ್ಲಿ ₹160 ಕೋಟಿ ಬಜೆಟ್‌ ಹಂಚಿಕೆ ಮಾಡಲಾಗಿತ್ತು. ಗುರಿ ಪರಿಷ್ಕರಣೆ ಆಗಿರುವುದರಿಂದ ಬಜೆಟ್‌ ಮೊತ್ತವೂ 169.36 ಲಕ್ಷ ಕೋಟಿಗೆ ಏರಿಸಲಾಗಿದೆ. ₹131.38 ಕೋಟಿಯನ್ನು ವೆಚ್ಚಮಾಡಲಾಗಿದ್ದು, ಈ ಪೈಕಿ ₹91 ಕೋಟಿಯನ್ನು ಕೂಲಿಗಾಗಿ ಖರ್ಚು ಮಾಡಲಾಗಿದೆ. ₹38 ಕೋಟಿ ಅಗತ್ಯ ಸಾಮಗ್ರಿಗಳಿಗೆ ವೆಚ್ಚವಾಗಿದೆ.

ನರೇಗಾ ಅಡಿಯಲ್ಲಿ ಮಾಡಿರುವ ಕಾಫಿ ತೋಟ
ನರೇಗಾ ಅಡಿಯಲ್ಲಿ ಮಾಡಿರುವ ಕಾಫಿ ತೋಟ

ಕಷ್ಟದಲ್ಲಿ ಹಣ ನೀಡಿದ ಖಾತ್ರಿ: ಕೋವಿಡ್‌ ಸಂಕಷ್ಟದ ಸಮಯದಲ್ಲಿ ಜಿಲ್ಲೆಯ ಗ್ರಾಮೀಣ ಬಡ ಜನರನ್ನು ನರೇಗಾ ಯೋಜನೆ ಕೈ ಹಿಡಿದಿದೆ. ಈ ವರ್ಷ ಹೊಸದಾಗಿ 34,424 ಜನರಿಗೆ ಉದ್ಯೋಗ ಕಾರ್ಡ್‌ಗಳನ್ನು ನೀಡಲಾಗಿದೆ. ಈ ಸಾಲಿನಲ್ಲಿ 94,240 ಕುಟುಂಬಗಳ 1,63,668 ಮಂದಿಗೆ ಕೆಲಸ ನೀಡಲಾಗಿದೆ.

ಜಲ ಸಂರಕ್ಷಣೆ ಕಾರ್ಯ
ಈ ಬಾರಿ ನರೇಗಾ ಅಡಿಯಲ್ಲಿ ಜಲ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಕೆರೆಗಳ ಹೂಳು ಎತ್ತುವುದು, ಇಂಗು ಗುಂಡಿಗಳ ನಿರ್ಮಾಣ, ಬದುಗಳ ದುರಸ್ತಿ, ಕೆರೆಗಳ ಸ್ವಚ್ಛತೆಗಳ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಗಮನ ಹರಿಸಿದೆ. ಗ್ರಾಮೀಣ ಭಾಗಗಳ ಮನೆಗಳಲ್ಲಿ ಬಚ್ಚಲು ಗುಂಡಿಗಳ (ಸೋಕಿಂಗ್‌ ಪಿಟ್‌) ನಿರ್ಮಾಣವನ್ನು ಅಭಿಯಾನದ ರೂಪದಲ್ಲಿ ನಡೆಸಲಾಗುತ್ತಿದೆ.

ಹೊಸ ಪ್ರಯೋಗ: ಬಿಳಿಗಿರಿರಂಗನಬೆಟ್ಟ, ಪುಣಜನೂರು ವ್ಯಾಪ್ತಿಯಲ್ಲಿರುವ ಸೋಲಿಗರಿಗೆ ನರೇಗಾ ಅಡಿಯಲ್ಲಿ ಕಾಫಿ ತೋಟಗಳನ್ನು ಅಭಿವೃದ್ಧಿಪಡಿಸಲು ನರೇಗಾ ನೆರವಾಗಿದೆ. ರಾಜ್ಯದಲ್ಲಿ ಕಾಫಿ ಬೆಳೆಗೆ ಯೋಜನೆ ಅಡಿಯಲ್ಲಿ ಅನುದಾನ ನೀಡಿದ್ದು ಇದೇ ಮೊದಲು.

ನರೇಗಾವನ್ನೇ ಆಧಾರವಾಗಿಟ್ಟುಕೊಂಡು 21 ಮಾದರಿ ಗ್ರಾಮ ಪಂಚಾಯಿತಿಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೂ ಜಿಲ್ಲಾ ಪಂಚಾಯಿತಿ ಚಾಲನೆ ನೀಡಿದೆ. ಖಾತ್ರಿ ಯೋಜನೆ ಅಡಿಯಲ್ಲಿ ಶಾಲೆಗಳಲ್ಲಿ ಮಾದರಿ ಆಟದ ಮೈದಾನ ನಿರ್ಮಾಣ ಕಾರ್ಯಕ್ಕೂ ಕೈಹಾಕಿದೆ.

ದುರ್ಬಲ ವರ್ಗದವರ ಭಾಗಿದಾರಿಕೆ ಹೆಚ್ಚಳ
ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿಯವರೇ ಶೇ 35ರಷ್ಟಿದ್ದಾರೆ. ಪರಿಶಿಷ್ಟ ವರ್ಗದವರ ಸಂಖ್ಯೆಯೂ ಗಮನಾರ್ಹವಾಗಿದೆ.

ಆರ್ಥಿಕವಾಗಿ ದುರ್ಬಲರಾಗಿರುವ ಈ ವರ್ಗಗಳ ಜನರು ಎರಡು ವರ್ಷಗಳಿಂದ ನರೇಗಾ ಯೋಜನೆಯ ಲಾಭ ಪಡೆಯುವುದು ಹೆಚ್ಚುತ್ತಿದೆ. ಈವರೆಗೆ ಜಿಲ್ಲೆಯಲ್ಲಿ ಸೃಷ್ಟಿಸಿರುವ ಮಾನವ ದಿನಗಳಲ್ಲಿ ಪರಿಶಿಷ್ಟ ಜಾತಿಯ ಕಾರ್ಡ್‌ದಾರರು ಶೇ 23.18ರಷ್ಟು, ಪರಿಶಿಷ್ಟ ವರ್ಗದವರು ಶೇ 16.25ರಷ್ಟು ದಿನಗಳನ್ನು ಸೃಷ್ಟಿಸಿದ್ದಾರೆ. ಕಳೆದ ವರ್ಷ ಈ ಪ್ರಮಾಣ ಕ್ರಮವಾಗಿ ಶೇ 19.46ರಷ್ಟು ಹಾಗೂ ಶೇ 14.30ರಷ್ಟು ಇತ್ತು. ಇದು ಕೂಡ ಈ ವರ್ಷದ ಗಮನಾರ್ಹ ಸಾಧನೆ.

ನರೇಗಾ ಅಡಿಯಲ್ಲಿ ಮಾಡಿರುವ ಬಚ್ಚಲು ಗುಂಡಿ
ನರೇಗಾ ಅಡಿಯಲ್ಲಿ ಮಾಡಿರುವ ಬಚ್ಚಲು ಗುಂಡಿ

ಸಾಧನೆಯ ನಡುವೆ ಆರೋಪಗಳು
ಜಿಲ್ಲೆಯ ಸಾಧನೆ ಉತ್ತಮವಾದ ಮಾತ್ರಕ್ಕೆ ನರೇಗಾ ಅನುಷ್ಠಾನದ ಬಗ್ಗೆ ಆರೋಪಗಳು ಇಲ್ಲವೆಂದಲ್ಲ. ಕೆಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳು ಉದ್ಯೋಗ ಕಾರ್ಡ್‌ ಹೊಂದಿರುವವರಿಗೆ ಕೆಲಸ ಕೊಡದೆ ಜೆಸಿಬಿಗಳ ಮೂಲಕ ಕೆಲಸ ಮಾಡಿದ್ದಾರೆ ಎಂಬ ಆರೋಪ ಇದೆ. ಕೆಲಸ ಮಾಡದವರ ಖಾತೆಗೂ ಕೂಲಿ ಜಮೆ ಆಗಿದೆ ಎಂಬ ದೂರುಗಳೂ ಇವೆ. ಮುಖಂಡರು ಹಾಗೂ ಅಧಿಕಾರಿಗಳು ಕಾರ್ಡ್‌ದಾರರಿಂದ ಕಾರ್ಡ್ ಅನ್ನು ಪಡೆದುಕೊಂಡು, ಕಾರ್ಡ್‌ದಾರರಿಗೆ ಒಂದಿಷ್ಟು ಹಣ ನೀಡಿ, ಅವರು ಕೆಲಸ ಮಾಡಿದ್ದಾರೆ ಎಂದು ತೋರಿಸಿ ಹಣ ಲೂಟಿ ಮಾಡಿರುವ ಗಂಭೀರ ಆರೋಪಗಳೂ ಕೇಳಿ ಬಂದಿವೆ. ಮಾಧ್ಯಮಗಳಲ್ಲೂ ಸುದ್ದಿಗಳು ಬಂದಿವೆ.

ಸಂಸದರ ನೇತೃತ್ವದಲ್ಲಿ ಮಂಗಳವಾರ ನಡೆದಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಶಾಸಕರಾದ ಸಿ.ಎಸ್‌.ನಿರಂಜನಕುಮಾರ್‌ ಹಾಗೂ ಎನ್‌.ಮಹೇಶ್‌ ಅವರೇ ಈ ಆರೋಪಗಳನ್ನು ಮಾಡಿದ್ದು, ಜಿಲ್ಲಾ ಪಂಚಾಯಿತಿ ಏನೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಕ್ರಮ ನಡೆಸಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ನಾರಾಯಣರಾವ್‌ ಅವರು, ‘ಕೆಲಸ ಮಾಡದೇ ವೇತನ ಪಾವತಿಯಾಗಿದ್ದಾರೆ, ಲೆಕ್ಕ ಪರಿಶೋಧನೆ ಸಮಯದಲ್ಲಿ ಗೊತ್ತಾಗುತ್ತದೆ. ಆ ಮೊತ್ತವನ್ನು ವಾಪಸ್‌ ಪಡೆಯುತ್ತೇವೆ’ ಎಂದು ಹೇಳಿದ್ದಾರೆ.

ಆರೋಪಗಳನ್ನು ಒತ್ತಟ್ಟಿಗೆ ಇಟ್ಟು ನೋಡುವುದಾದರೆ, ಹಿಂದುಳಿದ ಗಡಿ ಜಿಲ್ಲೆಯಲ್ಲಿ ಈ ವರ್ಷ ನರೇಗಾ ಅಡಿಯಲ್ಲಿ ಒಂದಷ್ಟು ಕೆಲಸವಾಗಿರುವುದು ನಿಜ.ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕನಿಗೆ ದಿನಕ್ಕೆ ₹275 ಕೂಲಿ ನೀಡುವ ಮೂಲಕ ಕಷ್ಟದ ದಿನಗಳಲ್ಲಿ ಆತ ಇನ್ನಷ್ಟು ಕುಗ್ಗದಂತೆ ನೋಡಿಕೊಂಡಿದ್ದೂ ನಿಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT