ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದಿಮೆಗಳ ಆಕರ್ಷಣೆಗೆ ತಮಿಳುನಾಡು, ಕೇರಳದಲ್ಲಿ ರೋಡ್‌ಶೋ

ಜಿಲ್ಲಾ ಕೈಗಾರಿಕೋದ್ಯಮಿಗಳ ಸಂವಾದದಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿಕೆ
Last Updated 7 ಜನವರಿ 2021, 15:29 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಗೆ ಕೈಗಾರಿಕೆಗಳನ್ನು ಆಕರ್ಷಿಸಲು ತಮಿಳುನಾಡಿನ ಕೊಯಮತ್ತೂರು, ತಿರುಪ್ಪೂರ್‌‌ ಹಾಗೂ ಕೇರಳದಲ್ಲಿ ರೋಡ್‌ಶೋ ನಡೆಸಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಗುರುವಾರ ಹೇಳಿದರು.

ನಗರದಲ್ಲಿ ನಡೆದ ಸಂವಾದದಲ್ಲಿ ಉದ್ದಿಮೆಗಳ ಮುಖಂಡರು ಹಾಗೂ ಅಧಿಕಾರಿಗಳು ನೀಡಿದ ಸಲಹೆಗೆ ಸ್ಪಂದಿಸಿದ ಸಚಿವರು, ‘ಶ್ರಮ ವಹಿಸಿದರೆ ಖಂಡಿತವಾಗಿಯೂ ಜಿಲ್ಲೆಗೆ ಕೈಗಾರಿಕೆಗಳು ಬರಲಿವೆ. ನಾನು ಮುಂಬೈನಲ್ಲಿ ರೋಡ್‌ ಶೋ ನಡೆಸಿದ ನಂತರ ಹುಬ್ಬಳಿಗೆ ಹಲವು ಉದ್ದಿಮೆಗಳು ಬಂದವು. ಹೈದಾರಾಬಾದ್‌ನಲ್ಲಿ ಉದ್ಯಮಿಗಳೊಂದಿಗೆ ಸಭೆ ನಡೆಸಿದ ಬಳಿಕ ಉತ್ತರ ಕರ್ನಾಟಕಕ್ಕೆ ಹಲವು ಕೈಗಾರಿಕೆಗಳು ಬರಲು ಮನಸ್ಸು ಮಾಡಿವೆ’ ಎಂದರು.

‘ಅದೇ ರೀತಿ ಇಲ್ಲೂ ಮಾಡಬಹುದು. ಜಿಲ್ಲೆಯ ಅಧಿಕಾರಿಗಳು ಹಾಗೂ ಉದ್ಯಮಿಗಳು ಈ ಬಗ್ಗೆ ಚರ್ಚಿಸಿ, ರೂಪು ರೇಷೆ ಸಿದ್ಧಪಡಿಸಿ. ಕೊಯಮತ್ತೂರು, ತಿರುಪ್ಪೂರು ಮತ್ತು ಕೇರಳಗಳಿಗೆ ಹೋಗಿ ರೋಡ್‌ಶೋ ಮಾಡೋಣ. ಉದ್ಯಮಿಗಳೊಂದಿಗೂ ಚರ್ಚಿಸೋಣ’ ಎಂದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಸ್‌ಸಿ ಎಸ್‌ಟಿ ಉದ್ಯಮಿಗಳು ಜಮೀನು ಖರೀದಿಸುವಾಗ ಶೇ 75ರಷ್ಟು ಸಬ್ಸಿಡಿ ಅಥವಾ ಗರಿಷ್ಠ ₹ 2 ಕೋಟಿ ಸಬ್ಸಿಡಿ ನೀಡುವ ಭರವಸೆಯನ್ನು ನಮ್ಮ ಸರ್ಕಾರ ನೀಡಿದೆ. ಅದನ್ನು ನಾವು ಖಂಡಿತವಾಗಿ ಜಾರಿಗೆ ತರಲಿದ್ದೇವೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ಮಾತನಾಡಿ, ‘ಜಿಲ್ಲೆಯು ಜವಳಿ ಉದ್ಯಮಕ್ಕೆ ಸೂಕ್ತವಾಗಿದೆ. ಗ್ರ್ಯಾನೈಟ್ ಕಟಿಂಗ್ ಪಾಲಿಶಿಂಗ್ ಕ್ಷೇತ್ರದಲ್ಲಿ ಕೌಶಲ ಹೆಚ್ಚಿಸುವ ಕಾರ್ಯಗಳಿಗೆ ಉತ್ತೇಜಿಸಬೇಕಿದೆ. ಆಲೆಮನೆಗಳು ಜಿಲ್ಲೆಯಲ್ಲಿ ಸಾಕಷ್ಟಿದ್ದು ಬೆಲ್ಲ ತಯಾರಿಕೆ ಉದ್ಯಮಕ್ಕೂ ಹೆಚ್ಚು ನೆರವಾಗಬೇಕಿದೆ. ಸ್ಥಳೀಯವಾಗಿ ಉತ್ಪಾದಿಸಲಾಗುವ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಆಗಬೇಕಿದ್ದು. ಇದಕ್ಕೆ ಪೂರಕವಾದ ಕೈಗಾರಿಕೆಗಳಿಗೂ ಪ್ರೋತ್ಸಾಹ ನೀಡಬೇಕಿದೆ’ ಎಂದರು.

ಅಧಿಕಾರ ಮೊಟಕು ಗೊಳಿಸದಿರಿ: ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಜಯಸಿಂಹ ಅವರು ಮಾತನಾಡಿ, ‘ನಮ್ಮಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಇದರಿಂದ ಉದ್ಯಮಿಗಳಿಗೆ ತೊಂದರೆಯಾಗುತ್ತಿದೆ. ಕೆಐಎಡಿಬಿಐಯು ಜಿಲ್ಲಾಧಿಕಾರಿ ನೇತೃತ್ವದ ಏಕ ಗವಾಕ್ಷಿ ಸಮಿತಿಗೆ ಶೇ 10ರಷ್ಟು ಭೂಮಿ ಹಂಚಲು ಅವಕಾಶ ನೀಡುವುದರ ಮೂಲಕ ಅಧಿಕಾರ ಮೊಟಕು ಗೊಳಿಸಿದೆ. ಇದರಿಂದ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕೆಲ್ಲಂಬಳ್ಳಿ–ಬದನಗುಪ್ಪೆ ಕೈಗಾರಿಕಾ ಪ್ರದೇಶದಲ್ಲಿ ಭದ್ರತೆ ಇಲ್ಲ’ ಎಂದರು.

ಮೈಸೂರು ಜಿಲ್ಲಾ ಎಸ್‌ಸಿ ಎಸ್‌ಟಿ ಉದ್ಯಮಿಗಳ ಒಕ್ಕೂಟದ ಅಧ್ಯಕ್ಷ ಆರ್‌.ಮಂಜುನಾಥ, ಕಾಸಿಯಾ ಅಧ್ಯಕ್ಷ ಅರಸಪ್ಪ, ಉದ್ಯಮಿ ಶಿವಕುಮಾರ್‌, ಕಾಳನಹುಂಡಿ ಗುರುಸ್ವಾಮಿ ಅವರು ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಆಗಬೇಕಿರುವ ಕೆಲಸಗಳನ್ನು ವಿವರಿಸಿದರು.

ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೊಯರ್ ನಾರಾಯಣ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ದಿವ್ಯಾ ಸಾರಾ ಥಾಮಸ್‌ ಇತರರು ಇದ್ದರು.

ನೀರು ಪೂರೈಕೆ ಒಂದೂವರೆ ತಿಂಗಳ ಗಡುವು
ನಂಜನಗೂಡಿನಿಂದ ಕೆಲ್ಲಂಬಳ್ಳಿ ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸಲು ಜಗದೀಶಶೆಟ್ಟರ್‌ ಅವರು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಅಧಿಕಾರಿಗಳಿಗೆ ಒಂದೂವರೆ ತಿಂಗಳ ಗಡುವು ನೀಡಿದ್ದಾರೆ.

ನೀರು ಪೂರೈಕೆ ಪೈಪ್‌ಲೈನ್‌ ಕಾಮಗಾರಿ ಮೂರು ವರ್ಷಗಳಿಂದಲೂ ಮುಗಿಯದೇ ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂಬ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಕೆಐಎಡಿಬಿ ಅಧಿಕಾರಿಗಳಿಂದ ಸಚಿವರು ವಿವರಗಳನ್ನು ಕೇಳಿದರು.

ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಶಿವಶಂಕರ್‌ ಅವರು ಮಾತನಾಡಿ, ‘ನಂಜನಗೂಡಿನಿಂದ ಪೈಪ್‌ಲೈನ್‌ ನಿರ್ಮಾಣ ಮಾಡುವಾಗ ಕೆಲವು ಸಮಸ್ಯೆಗಳು ಉಂಟಾಗಿದ್ದರಿಂದ ವಿಳಂಬವಾಗಿದೆ. ಈಗ ಬಹುತೇಕ ಎಲ್ಲ ಕಾಮಗಾರಿ ಮುಗಿದಿದೆ. ಒಂದು ಕಡೆ ರೈತರೊಬ್ಬರ ಜಮೀನಿನಲ್ಲಿ ಪೈಪ್‌ಲೈನ್‌ ಬರಬೇಕಿದ್ದು, ಅವರು ಒಪ್ಪುತ್ತಿಲ್ಲ. ಈಗ ಆ ಜಾಗವನ್ನು ಖರೀದಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ’ ಎಂದರು. ’

ಶಾಸಕರು ನೀಡಿದ ಸಲಹೆಗಳು
‘ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶಕ್ಕೆ ಭೂಮಿ ಬಿಟ್ಟುಕೊಟ್ಟಿರುವ ಇನ್ನೂ ಕೆಲವರಿಗೆ ನೀಡಬೇಕಿರುವ ಪರಿಹಾರಕ್ಕೆ ತ್ವರಿತ ಕ್ರಮವಾಗಬೇಕು. ಕೈಗಾರಿಕಾ ಪ್ರದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಇತರೆ ಅವಕಾಶಗಳು ಸಿಗಬೇಕು’ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಹೇಳಿದರು.

‘ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರಿಗೆ ನೀಡಬೇಕಿರುವ ಸಹಾಯಧನ ಸೌಲಭ್ಯ ಲಭಿಸುವಂತಾಗಬೇಕು. ಸಂತೇಮರಹಳ್ಳಿಯಲ್ಲಿಯೂ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸುವುದು ಸೂಕ್ತವಾಗಿದೆ. ಮೂಗೂರು ಹಾಗೂ ಸಂತೇಮರಹಳ್ಳಿ ನಡುವಿನ ರಸ್ತೆಯನ್ನು ಹೆದ್ದಾರಿಯನ್ನಾಗಿ ಅಭಿವೃದ್ದಿ ಪಡಿಸುವುದರಿಂದ ಈಗಾಗಲೇ ಅಭಿವೃದ್ದಿ ಪಡಿಸಿರುವ ಕೈಗಾರಿಕಾ ಪ್ರದೇಶಗಳ ಸಂಪರ್ಕಕಕ್ಕೆ ಅನುಕೂಲವಾಗಲಿದೆ’ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರು ಸಲಹೆ ನೀಡಿದರು.

‘ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಕೂಡಲೇ ನೀರು ಪೂರೈಸಲು ಪರ್ಯಾಯ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕು. ಮೈಸೂರಿನಲ್ಲಿ ಉದ್ದಿಮೆ ಸ್ಥಾಪಿಸಲು ಬರುವವರಿಗೆ ಚಾಮರಾಜನಗರದಲ್ಲಿ ಉದ್ದಿಮೆ ಸ್ಥಾಪನೆಗೆ ಅಧಿಕಾರಿಗಳು ಸಲಹೆ ನೀಡಬೇಕು’ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ ಕುಮಾರ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT