ಗುರುವಾರ , ಜನವರಿ 28, 2021
15 °C
ಸಾವಿರಾರು ಭಕ್ತರ ಆಗಮನ ನಿರೀಕ್ಷೆ: ಕೋವಿಡ್ ಮಾರ್ಗಸೂಚಿ ಕಡ್ಡಾಯ

ರಂಗಧಾಮನ ಆಲಯದಲ್ಲಿ ಸಂಕ್ರಾಂತಿ ಜಾತ್ರೆ ‘ಸರಳ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥನ ಸಂಕ್ರಾಂತಿ ಚಿಕ್ಕಜಾತ್ರೆ ಇದೇ 15 ರಂದು ಜರುಗಲಿದೆ. ಕೋವಿಡ್‌ ಕಾರಣಕ್ಕೆ ಈ ಬಾರಿ ಸರಳ ರೀತಿಯಲ್ಲಿ ಜಾತ್ರೆ ನಡೆಯಲಿದೆ. ಜಾತ್ರೆಯಲ್ಲಿ ರಥೋತ್ಸವ ಹಾಗೂ ಸಾಂಪ್ರದಾಯಿಕ ಧಾರ್ಮಿಕ ಕಾರ್ಯಗಳು ಇರುವುದಿಲ್ಲ. ಭಕ್ತರು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಸ್ವಾಮಿಯ ದರ್ಶನ ಪಡೆಯಲು ಅವಕಾಶ ಇರಲಿದೆ.

ಪ್ರತಿ ವರ್ಷ ಉತ್ತರಾಯಣ ಪುಣ್ಯ ಕಾಲದ ಆರಂಭದಲ್ಲಿ ಚಿಕ್ಕ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತಿತ್ತು. ಗ್ರಾಮೀಣ ಜನರು ಹೊಸ ಋತು ಸ್ವಾಗತಿಸುತ್ತ, ಕೊಯ್ಲು ಮಾಡಿದ ಧವಸ ಧಾನ್ಯಗಳನ್ನು ತೇರಿಗೆ ಸಮಪರ್ಪಿಸಿ, ಧನ್ಯತೆ ಮೆರೆಯುತ್ತಿದ್ದರು. ದೇ‌ವಾಲಯದದ ಸುತ್ತ ಕಬ್ಬು ಮತ್ತು ತಳಿರು ತೋರಣಗಳಿಂದ ಅಲಂಕರಿಸಿ, ಎಳ್ಳು, ಬೆಲ್ಲದ ಬ್ಯಾಟಮಣೆ ಉತ್ಸವ ಬನದ ತುಂಬ ಕಲರವ ತುಂಬುತ್ತಿತ್ತು. ದಾಸರ ಜಾಗಟೆ ಸದ್ದು, ಧೂಪ, ದೀಪದ ಸುಗಂಧ ನೆರದವರ ಮನದಲ್ಲಿ ಭಕ್ತಿ, ಭಾವ ತುಂಬುತ್ತಿತ್ತು

ದೇವಸ್ಥಾನದ ಕಾಮಗಾರಿಯ ಕಾರಣಕ್ಕೆ ನಾಲ್ಕು ವರ್ಷಗಳಿಂದ ಚಿಕ್ಕ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿಲ್ಲ. ಚಿಕ್ಕ ರಥೋತ್ಸವವೂ ನಡೆದಿರಲಿಲ್ಲ. ಈ ವರ್ಷ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದರ ಜೊತೆಗೆ ಕೋವಿಡ್‌ ಹಾವಳಿಯೂ ಸೇರಿ ಜಾತ್ರೋತ್ಸವವನ್ನು ಮಸುಕಾಗಿಸಿದೆ. ಸಂಕ್ರಾಂತಿ ಹಬ್ಬದ ಮರುದಿನ ಜರುಗುತ್ತಿದ್ದ ಚಿಕ್ಕರಥದ ಸದ್ದು ಈ ಬಾರಿಯೂ ಕೇಳಿಸದು. 

ಧನುರ್ಮಾಸ ಸಮಾಪ್ತಿ: ‘ಜ.14ರಂದು ಮಕರ ರಾಶಿಗೆ ಸೂರ್ಯನ ಪ್ರವೇಶದ ಮೂಲಕ ಸಂಕ್ರಾಂತಿ ಹಬ್ಬ ಕಳೆಗಟ್ಟುತ್ತದೆ. ಧನುರ್ಮಾಸ ಪೂಜೆ ಸಮಾಪ್ತಿಯಾಗುತ್ತದೆ. ಶುಕ್ರವಾರ ಬೆಟ್ಟದಲ್ಲಿ ಸಂಕ್ರಾಂತಿ ಪೂಜೆ ಮಾತ್ರ ನಡೆಯಲಿದೆ. ಶನಿವಾರವೂ ರಂಗನಾಥನ ದೇವಾಲಯಕ್ಕೆ ಹೆಚ್ಚಿನ ಭಕ್ತರ ಆಗಮನದ ನಿರೀಕ್ಷೆ ಇದೆ. ಮುಂಜಾನೆ 7 ರಿಂದ ನಿತ್ಯ ಪೂಜೆ ಪೂಜೆ ಆರಂಭವಾಗುತ್ತದೆ. ವಿಶೇಷ ಪೂಜೆ, ತೀರ್ಥ ಮತ್ತು ಪ್ರಸಾದ ವಿತರಣೆ ಇರುವುದಿಲ್ಲ’ ಎಂದು ಪ್ರಧಾನ ಅರ್ಚಕ ರವಿಕುಮಾರ್ ಹೇಳಿದರು. 

ಜಾತ್ರೆ ಬದಲು ದರ್ಶನ: ‘ಜನಸಂದಣಿ ಇದ್ದ ಸ್ಥಳದಲ್ಲಿ ಒಟ್ಟಿಗೆ ಸೇರಬಾರದು. ಮುಖಗವಸು, ಸ್ಯಾನಿಟೈಸರ್ ಮತ್ತು ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು.  ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯಬೇಕು. ಕೋವಿಡ್-19  ಕಾರಣದಿಂದ ಜಾತ್ರೋತ್ಸವಕ್ಕೆ ಬದಲು ಸಾಂಪ್ರದಾಯಿಕ ದರ್ಶನ ಮಾತ್ರ ಇರಲಿದೆ. ಭಕ್ತರಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು ಅನುಕೂಲ ಕಲ್ಪಿಸಲಾಗುವುದು. ದಾಸೋಹ ಮತ್ತು ಅರವಟ್ಟಿಗೆ ತೆರೆಯಲು ಅವಕಾಶ ಇರುವುದಿಲ್ಲ’ ಎಂದು ದೇವಾಲಯದ ದೇಗುಲದ ಆಡಳಿತಾಧಿಕಾರಿ ವೈ.ಎನ್. ಮೋಹನ್ ಕುಮಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಸಂಕ್ರಾಂತಿ ಸಂಕ್ರಮಣ: ಸಾಮಾನ್ಯವಾಗಿ ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ಈ ಸಮಯ ಹುಟ್ಟು ಮತ್ತು ಸಾವಿಗೆ ಶ್ರೇಷ್ಠವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಸಮಸ್ತ ದೇವತಾ ಕಾರ್ಯಗಳು ಇಲ್ಲಿಂದಲೇ ಆರಂಭವಾಗುತ್ತವೆ. ಎಳ್ಳೆಣ್ಣೆ ದೀಪ, ಎಳ್ಳಿನ ಸ್ನಾನ ಮತ್ತು ಎಳ್ಳುದಾನಕ್ಕೆ ಮಹತ್ವವಿದೆ. ರೈತರು ಪೈರು ತೆಗೆಯುವಾಗ ಕಾಳನ್ನು ಸಂಗ್ರಹಿಸಿ, ದೇವರಿಗೆ ಅರ್ಪಿಸುವ ಮೂಲಕ ಸಮೃದ್ಧಿ, ಶುಭ ಕಾಮನೆಗಳು ದೊರೆಯಲೆಂದು ಭಕ್ತರು ಈ ಪರ್ವ ಕಾಲದಲ್ಲಿ ದೇವರನ್ನು ಬೇಡುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು