ಬುಧವಾರ, ಏಪ್ರಿಲ್ 1, 2020
19 °C
ಕೊಳ್ಳೇಗಾಲ: ಕನಿಷ್ಠ ಸೌಕರ್ಯಗಳಿಲ್ಲ, ದಶಕದಿಂದ ಮುಗಿದಿಲ್ಲ ಕಾಮಗಾರಿ, ಕ್ರೀಡಾಳುಗಳ ಬೇಸರ

ಎಂದಾಗುವುದೋ ಕ್ರೀಡಾಂಗಣ ಅಭಿವೃದ್ಧಿ?

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಪ್ರತಿಭಾವಂತ ಕ್ರೀಡಾ ಸಾಧಕರನ್ನು ಹುಟ್ಟುಹಾಕಬೇಕಿದ್ದ ಈ ಕ್ರೀಡಾಂಗಣ ದಶಕದಿಂದ ಅನಾಥವಾಗಿ ಬಿದ್ದಿದೆ. 10 ವರ್ಷಗಳ ಹಿಂದೆಯೇ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿದರೂ ಇನ್ನೂ ಮುಕ್ತಾಯವಾಗಿಲ್ಲ. ಕನಿಷ್ಠ ಸೌಕರ್ಯಗಳಿಲ್ಲದೆ, ಕ್ರೀಡಾಳುಗಳ ಉಪಯೋಗಕ್ಕೂ ಬಾರದಂತೆ ಆಗಿದೆ.

ಗಡಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾದ ಕೊಳ್ಳೇಗಾಲದಲ್ಲಿರುವ ದೊಡ್ಡ ಕ್ರೀಡಾಂಗಣದ ಸ್ಥಿತಿ ಇದು.

ನಗರದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಈ ಕ್ರೀಡಾಂಗಣ ಇದೆ. ಯುವ ಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸುಪರ್ದಿನಲ್ಲಿರುವ ಈ ಮೈದಾನದ ಅಭಿವೃದ್ಧಿಗೆ 2010ರಲ್ಲಿ ಚಾಲನೆ ನೀಡಲಾಗಿತ್ತು. ಮೈದಾನ ಸಮತಟ್ಟು ಮಾಡಿರುವುದು, ಎರಡು ಗ್ಯಾಲರಿ ನಿರ್ಮಿಸಿರುವುದು ಬಿಟ್ಟರೆ ಬೇರೇನೂ ಕೆಲಸವಾಗಿಲ್ಲ. 

ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣವು 18 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿದೆ. ಕ್ರೀಡಾಂಗಣ ಅಭಿವೃದ್ಧಿಗಾಗಿ ಎಂಟು ಎಕರೆ ಜಾಗವನ್ನು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಎತ್ತರ ತಗ್ಗು ಇದ್ದ ಪ್ರದೇಶವನ್ನು ಮೈದಾನವಾಗಿ ರೂಪಿಸುವ ಕಾರ್ಯಕ್ಕೆ 2010ರಲ್ಲಿ ಚಾಲನೆ ನೀಡಲಾಯಿತು. 

₹66 ಲಕ್ಷ ಅನುದಾನ: ಆರಂಭದಲ್ಲಿ ಕ್ರೀಡಾಂಗಣದ ಕೆಲಸಕ್ಕಾಗಿ ಇಲಾಖೆಯು ₹66 ಲಕ್ಷ ಅನುದಾನ ಬಿಡುಗಡೆ ಮಾಡಿತು. ಸಮತಟ್ಟು ಮಾಡಿರುವುದರ ಜೊತೆಗೆ ಎರಡು ಚಿಕ್ಕದಾದ ಪ್ರೇಕ್ಷಕರ ಗ್ಯಾಲರಿಯನ್ನು ನಿರ್ಮಿಸಲಾಗಿದೆ. ಹಣದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. 

ಮೂಲ ಸೌಕರ್ಯ ಕೊರತೆ: ಕ್ರೀಡಾಂಗಣದಲ್ಲಿ ಮೂಲಸೌಕರ್ಯಗಳಿಲ್ಲ. ಇರುವ ಎರಡು ಗ್ಯಾಲರಿಗೆ ನೆರಳಿನ ವ್ಯವಸ್ಥೆ ಇಲ್ಲ. ಟ್ರ್ಯಾಕ್‌ ಸಮರ್ಪಕವಾಗಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಶೌಚಾಲಯಗಳೂ ಇಲ್ಲ. ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಹಾಗಾಗಿ ಮಳೆ ಬಂದರೆ, ಕ್ರೀಡಾಂಗಣ ಗದ್ದೆಯಂತಾಗುತ್ತದೆ. ವಿವಿಧ ಕ್ರೀಡೆಗಳಿಗಾಗಿ ಪ್ರತ್ಯೇಕ ಕೋರ್ಟ್‌ಗಳಿಲ್ಲ. 

ಸೌಕರ್ಯಗಳ ಕೊರತೆಯ ನಡುವೆ‌ಯೂ ಸ್ಥಳೀಯ ಕ್ರೀಡಾಗಳುಗಳು ಇದರಲ್ಲೇ ಅಭ್ಯಾಸ ಮಾಡುತ್ತಾರೆ. ತಾಲ್ಲೂಕು ಮಟ್ಟದ ಶಾಲಾ ಕ್ರೀಡಾ ಕೂಟಗಳು, ಅನೇಕಾ ಕ್ರೀಡಾ ಸ್ಪರ್ಧೆಗಳು ಇಲ್ಲಿಯೇ ನಡೆಯುತ್ತವೆ. 

ಮೂಲಸೌಕರ್ಯಗಳು ಇಲ್ಲದಿರು ವುದರಿಂದ ಕ್ರೀಡಾಪಟುಗಳಿಗೆ ತೊಂದರೆಯಾಗಿದೆ. ಶೌಚಾಲಯವೂ ಇಲ್ಲದಿರುವುದರಿಂದ ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸಬೇಕಿದೆ. ಕ್ರೀಡಾ ಸಾಧಕರಿಗೆ ಬೇಕಾದ ಅಗತ್ಯ ಸಲಕರಣೆಗಳೂ ಇಲ್ಲ. ಇದರಿಂದಾಗಿ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು ಕೊಂಡವರು ತೊಂದರೆ ಅನುಭವಿಸುವಂತಾಗಿದೆ’ ಎಂದು ಕ್ರೀಡಾಪಟು ಶ್ರೀಕಾಂತ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.  

ಅನೈತಿಕ ಚಟುವಟಿಕೆ

ರಾತ್ರಿಯಾಗುತ್ತಲೇ ಕ್ರೀಡಾಂಗಣ ಅನೈತಿಕ ಚಟುವಟಿಕೆಗಳ ತಾಣ ಆಗಿ ಬದಲಾಗುತ್ತದೆ. ಕುಡುಕರಿಗೆ ಇದು ಅಚ್ಚುಮೆಚ್ಚಿನ ತಾಣ. ಪಡ್ಡೆ ಹುಡುಗರು ಪಾರ್ಟಿ ಮಾಡಲು ಸೇರುತ್ತಾರೆ. ಜನ್ಮದಿನ, ಗೆಳೆಯರ ದಿನ ಸೇರಿದಂತೆ ವಿವಿಧ ನೆಪವೊಡ್ಡಿ ಮೈದಾನದಲ್ಲಿ ಸೇರುತ್ತಾರೆ. ಪಾನ ಮತ್ತರಾಗಿ ಮದ್ಯದ ಬಾಟಲಿಗಳನ್ನು ಕ್ರೀಡಾಂಗಣದಲ್ಲೇ ಒಡೆದು ಹಾಕುತ್ತಾರೆ. ತಮ್ಮಗಿಷ್ಟವಾದ ತಿಂಡಿಗಳನ್ನು ತಿಂದು ಅಲ್ಲೇ ಎಸೆದು ಹೋಗುತ್ತಾರೆ. ಇರುವ ಒಬ್ಬ ಸಿಬ್ಬಂದಿಗೆ ಕ್ರೀಡಾಂಗಣವನ್ನು ಸ್ವಚ್ಚಗೊಳಿಸುವುದೇ ದಿನನಿತ್ಯದ ಕಾಯಕವಾಗಿದೆ. 

‘10 ವರ್ಷಗಳಾದರೂ ಕ್ರೀಡಾಂಗಣ ಅಭಿವೃದ್ಧಿಯಾಗದಿರುವುದು ದುರ ದೃಷ್ಟಕರ. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾಮಗಾರಿ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮತ್ತೊಬ್ಬ ಕ್ರೀಡಾಪಟು ಪ್ರಜ್ವಲ್‌ ಆಗ್ರಹಿಸಿದರು.

‘ಇನ್ನೂ ಕೋಟಿ ರೂಪಾಯಿ ಬೇಕಿದೆ’

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಚಲುವಯ್ಯ ಅವರು, ‘ಕ್ರೀಡಾಂಗಣದ ಅಭಿವೃದ್ಧಿಗೆ ಅನುದಾನದ ಕೊರತೆ ಇದೆ. ಹಾಗಾಗಿ, ಕೆಲಸ ಅರ್ಧದಲ್ಲೇ ನಿಂತಿದೆ. ಪೂರ್ಣವಾಗಿ ಅಭಿವೃದ್ಧಿಪಡಿಸಲು ಇನ್ನೂ ಒಂದು ಕೋಟಿ ರೂಪಾಯಿ ಅಗತ್ಯವಿದೆ. ಅನುದಾನ ತರಲು ಪ್ರಯತ್ನಿಸಲಾಗುತ್ತಿದೆ. ಹಣ ಬಂದ ನಂತರ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು