ಗುರುವಾರ , ಮೇ 26, 2022
28 °C
ವಿದ್ಯಾರ್ಥಿಗಳು ಶಾಲಾ ಚೀಲದ ಜೊತೆ ಪಡಿತರ ಚೀಲದ ಹೊರೆ

ಬಿಸಿಯೂಟ ಇಲ್ಲದೆ ಹೋಟೆಲ್‌ಗಳತ್ತ ಮಕ್ಕಳ ಚಿತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ/ಯಳಂದೂರು: ಕೋವಿಡ್ ಮಾರ್ಗಸೂಚಿ ಅನ್ವಯ ಶಾಲೆಗಳಲ್ಲಿ ಮಕ್ಕಳ ದಟ್ಟಣೆ ತಗ್ಗಿಸುವುದು ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಸ್ಥಗಿತಗೊಂಡಿದ್ದ ಬಿಸಿಯೂಟ ಯೋಜನೆ ಇನ್ನೂ ಆರಂಭವಾಗಿಲ್ಲ. ಬಿಸಿಯೂಟದ ಬದಲು ಪಡಿತರವನ್ನು ನೀಡಲಾಗುತ್ತಿದೆ. 

ಶಾಲಾ ಚೀಲದ ಜೊತಗೆ ಪ‍ಡಿತರ ಹೊಂದಿರುವ ಚೀಲವನ್ನು ವಿದ್ಯಾರ್ಥಿಗಳು ಹೊತ್ತುಕೊಂಡು ಹೋಗುತ್ತಿರುವುದು ಈಗ ಅಲ್ಲಲ್ಲಿ ಕಂಡು ಬರುತ್ತಿದೆ. ಶಾಲಾ ಚೀಲದೊಂದಿಗೆ ಪಡಿತರ ಚೀಲವೂ ಹೊರೆಯಾಗಿ ಪರಿಣಮಿಸಿದೆ. ಬಿಸಿಯೂಟ ಇಲ್ಲದಿರುವ ಕಾರಣ ಮಧ್ಯಾಹ್ನ ಊಟಕ್ಕಾಗಿ ಮಕ್ಕಳು ಹೋಟೆಲ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಯಳಂದೂರು ತಾಲ್ಲೂಕಿನಲ್ಲಿ 10 ಸಾವಿರ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಿಯುತ್ತಾರೆ. ಇವರಿಗೆ ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು ತರಗತಿವಾರು ವಿತರಣೆ ಮಾಡಲಾಗುತ್ತದೆ. ಸುಮಾರು 5ರಿಂದ 10 ಕೆ.ಜಿ. ತನಕ ಅಕ್ಕಿ, ಬೇಳೆ, ಎಣ್ಣೆ ಮತ್ತಿತರ ಪದಾರ್ಥಗಳನ್ನು 10 ರಿಂದ 20 ಕಿ.ಮೀ ದೂರ ಮಕ್ಕಳು ಸಾಗಿಸಬೇಕು. ಚೀಲ ಹೊತ್ತು ಬಸ್‌ಗಳನ್ನು ಏರಬೇಕು.

ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದಾಗ ನಿರ್ವಾಹಕರು ಮಕ್ಕಳನ್ನು ಒಳಭಾಗಕ್ಕೆ ಬಿಡಲು ಕಿರಿಕಿರಿ ಮಾಡುವುದು ಇದೆ. ಇದರಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಬಾಲಕಿಯರು ಚೀಲವನ್ನು ಹೊತ್ತು ನಡೆದೇ ಸಾಗಿಸಬೇಕು ಎನ್ನುತ್ತಾರೆ ಪೋಷಕರು.

‘ಅಕ್ಕಿಚೀಲ ಮತ್ತು ಪುಸ್ತಕಗಳನ್ನು ಹಿಡಿದು ಬಸ್ ಏರಲು ಖಾಸಗಿ ಬಸ್ ಕಂಡಕ್ಟರ್‌ಗಳು ಬಿಡುವುದಿಲ್ಲ. ಹೆಚ್ಚುವರಿ ಚೀಲಕ್ಕೆ ದರ ನೀಡುವಂತೆ ಒತ್ತಾಯಿಸುತ್ತಾರೆ. ಜನ ದಟ್ಟಣೆ ಇದ್ದಾಗ ಸಂಚರಿಸಲು ಪ್ರಯಾಸ ಪಡಬೇಕು. ಶಾಲೆಯಲ್ಲಿ ಬಿಸಿಯೂಟ ನೀಡಿದರೆ ಈ ತೊಂದರೆ ಬಾಧಿಸದು. ಚೀಲ ಹೊರುವ ಭಾರವು ತಪ್ಪುತ್ತದೆ’ ಎನ್ನುತ್ತಾರೆ ಪಟ್ಟಣದ ವಿದ್ಯಾರ್ಥಿನಿ ನಂದಿನಿ.

‘ಮಕ್ಕಳು ಮನೆಗೆ ಅಕ್ಕಿ, ಬೇಳೆ ಸಾಗಿಸುವಾಗ ಬ್ಯಾಗ್ ಹರಿದರೆ ಧಾನ್ಯ ಚೆಲ್ಲಿ ಮಣ್ಣು ಪಾಲಾಗುತ್ತದೆ. ಪೋಷಕರು ಕೂಲಿ ಬಿಟ್ಟು, ಶಾಲೆಗೆ ಹೋಗಿ ಪಡಿತರವನ್ನು ಪಡೆಯಲು ಇಷ್ಟ ಪಡುವುದಿಲ್ಲ. ಇದರಿಂದ ಅಕ್ಷರ ದಾಸೋಹ ಸೇವೆಯನ್ನು ಬೇಗ ಆರಂಭ ಮಾಡಬೇಕು’ ಎಂದು ಎಸ್‌ಡಿಎಂಸಿ ಸದಸ್ಯ ರವಿಕುಮಾರ ಅವರು ಒತ್ತಾಯಿಸಿದರು.

ಹೋಟೆಲ್‌ನತ್ತ ಮುಖ: ಮಧ್ಯಾಹ್ನ ಶಾಲೆಯಲ್ಲಿ ಬಿಸಿಯೂಟ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಹೋಟೆಲ್‌ನತ್ತ ಮುಖಮಾಡುತ್ತಿದ್ದಾರೆ. 

‘ಮಧ್ಯಾಹ್ನದ ಊಟ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಮನೆಯಿಂದ ಬುತ್ತಿ ತೆಗೆದುಕೊಂಡು ಹೋಗಬೇಕು. ಈಗ ತಾಪಮಾನ ಏರಿಕೆಯಾಗುತ್ತಿದ್ದು, ಮುಂಜಾನೆ ತಯಾರಿಸಿದ ಆಹಾರ ಪದಾರ್ಥಗಳನ್ನು ಡಬ್ಬಿಯಲ್ಲಿ ತುಂಬಿದರೆ, ಬೇಸಿಗೆ ಕಾವಿಗೆ ಆಹಾರ ಹಳಸುತ್ತದೆ. ಇಂತಹ ವೇಳೆ ಮಕ್ಕಳು ಊಟ ಮಾಡದೆ ದಿನ ನೂಕುವುದು ಇದೆ. ಕೆಲವರು ಹೋಟೆಲ್‌ಳಿಗೆ ತೆರಳಿ ಊಟ ಮಾಡುತ್ತಾರೆ' ಎಂದು ವಿದ್ಯಾರ್ಥಿ ಗುಂಬಳ್ಳಿ ಜೀವನ್ ಹೇಳಿದರು.

ವಿದ್ಯಾರ್ಥಿನಿ ಹೊನ್ನೂರು ಅನುಷಾ ಮಾತನಾಡಿ, ‘ಹೆಣ್ಣು ಮಕ್ಕಳು ಮಧ್ಯಾಹ್ನ ಹೋಟೆಲ್‌ಗಳಿಂದ ಪಾರ್ಸೆಲ್ ತರಿಸಿ ಸೇವಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಯೂ ಕಾಡುತ್ತದೆ. ರುಚಿ ಇಲ್ಲದ ಫಾಸ್ಟ್‌ಫುಡ್‌ಗಿಂತ ಬಿಸಿಯೂಟ ಪೂರೈಕೆಯಾದರೆ, ಮಕ್ಕಳು ಕಲಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯ. ಪಡಿತರವನ್ನು ಮನೆಗೆ ಸಾಗಿಸುವಾಗ ಅನುಭವಿಸುವ ಪಡಿಪಾಟಲು ತಪ್ಪುತ್ತದೆ' ಎಂದು ತಿಳಿಸಿದರು.

ಪೋಷಕರ ಮೂಲಕ ಪೂರೈಕೆ

ಯಳಂದೂರು ತಾಲ್ಲೂಕಿನ 7,500 ಮಕ್ಕಳು 1-10ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಅಕ್ಕಿ ಸಂಗ್ರಹ ಇದ್ದು, 700 ಕ್ವಿಂಟಲ್ ಬೇಳೆ ಅಗತ್ಯ ಇದೆ. ಆಯಾ ಶಾಲೆಗಳಲ್ಲಿ ಫೆ. 15-20ರೊಳಗೆ ಪಡಿತರ ವಿತರಿಸಲು ಸಿದ್ಧತೆ ನಡೆಸಲಾಗಿದೆ. ಜೆಎಸ್ಎಸ್ ಸಂಸ್ಥೆಗೆ 700 ಕ್ವಿಂಟಲ್ ಬೇಳೆ ಮತ್ತು ಬಾಕಿ ₹ 70 ಲಕ್ಷ ವಿತರಣೆ ಆಗಬೇಕಿದ್ದು, ಸಂಸ್ಥೆಯ ಸಹಯೋಗದಲ್ಲಿ ಪೋಷಕರ ಮೂಲಕ ಆಹಾರ ಪೂರೈಸಲು ವ್ಯವಸ್ಥೆ ಮಾಡಲಾಗುತ್ತದೆ' ಎಂದು ಬಿಇಒ ವಿ.ತಿರುಮಲಾಚಾರಿ 'ಪ್ರಜಾವಾಣಿ'ಗೆ ತಿಳಿಸಿದರು.

‘ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭಿಸುವ ಬಗ್ಗೆ ಸರ್ಕಾರದಿಂದ ಇನ್ನೂ ಆದೇಶ ಬಂದಿಲ್ಲ. ಜಿಲ್ಲೆಯಾದ್ಯಂತ ಮಕ್ಕಳಿಗೆ ಬಿಸಿಯೂಟದ ಬದಲಿಗೆ ಅಕ್ಕಿ ಬೇಳೆ ವಿತರಿಸಲಾಗುತ್ತಿದೆ. ಸರ್ಕಾರದ ಸೂಚನೆ ಬರುವವರೆಗೂ ಇದು ಮುಂದುವರಿಯಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು