ಶನಿವಾರ, ಜನವರಿ 23, 2021
24 °C

‘ಹ್ಯಾಟ್ರಿಕ್‌ ವೀರ’ನಿಗೆ ಬೆಂಬಲಿಗರಿಂದ ರಾಯಲ್‌ ಎನ್‌ಫೀಲ್ಡ್‌ ಮೆಟಿಯೊರ್‌ ಉಡುಗೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ ಅಭ್ಯರ್ಥಿಗೆ ಅವರ ಬೆಂಬಲಿಗರು ರಾಯಲ್‌ ಎನ್‌ಫೀಲ್ಡ್‌ ಮೆಟಿಯೊರ್‌ ಬೈಕ್‌ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾವರೆಕಟ್ಟೆ ಮೋಳೆಯ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎಸ್‌.ಮಹೇಶ್‌ ಅವರು 39 ಮತಗಳಿಂದ ತಮ್ಮ ಪ್ರತಿಸ್ಪರ್ಧಿಯನ್ನು ಸೋಲಿಸಿದ್ದರು. ಇದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವರಿಗೆ ಸಿಕ್ಕಿರುವ ಸತತ ಮೂರನೇ ಗೆಲುವು. 

ಗೆಲುವಿನ ಖುಷಿಗೆ ಮಹೇಶ್‌ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ₹1 ಲಕ್ಷದಷ್ಟು ಮೊತ್ತವನ್ನು ಚಂದಾ ಎತ್ತಿ, ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಂದಿರುವ ರಾಯಲ್‌ ಎನ್‌ಫೀಲ್ಡ್‌ನ ಮೆಟಿಯೊರ್‌ ಬೈಕ್‌ ಅನ್ನು ಖರೀದಿಸಿ ಗೆಲುವಿನ ಕಾಣಿಕೆ ನೀಡಿದ್ದಾರೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಮಹೇಶ್‌ ಅವರು, ‘ನನ್ನಲ್ಲಿ ಹಣ ಬಲ, ಜನ ಬಲ ಇಲ್ಲ ಎಂದು ಮೂದಲಿಸಿದ್ದ ಎದುರಾಳಿ ಪಕ್ಷದವರು ನಾನು ಗೆಲ್ಲುವುದಿಲ್ಲ ಎಂದು ಹೇಳುತ್ತಲೇ ಬಂದಿದ್ದರು. ಆದರೆ, ಈ ಹಿಂದಿನ ಎರಡು ಅವಧಿಯಲ್ಲಿ ನಾನು ಮಾಡಿದ ಕೆಲಸ ಹಾಗೂ ಊರಿನ ಮತದಾರರು ನನ್ನ ಕೈಬಿಟ್ಟಿಲ್ಲ. ಮೂರನೇ ಬಾರಿಗೆ ಗೆಲ್ಲಿಸಿದ್ದಾರೆ’ ಎಂದರು. 

‘ನಾನು ಮೂರನೇ ಬಾರಿ ಗೆದ್ದುದಕ್ಕೆ ಖುಷಿಯಿಂದ ಗ್ರಾಮದ 100ರಿಂದ 150 ಮಂದಿ, ₹500, ₹1,000, ₹2,000 ಹೀಗೆ ತಮ್ಮ ಕೈಲಾದಷ್ಟು ಹಣ ನೀಡಿ ₹1 ಲಕ್ಷ ಸಂಗ್ರಹಿಸಿ ಬೈಕ್‌ ಬುಕ್‌ ಮಾಡಿದ್ದಾರೆ. ಬೈಕ್‌ ಬೆಲೆ ₹2.40 ಲಕ್ಷವಾಗಿದ್ದು, ಉಳಿದ ಮೊತ್ತವನ್ನು ನಾನು ಪಾವತಿಸಬೇಕು’ ಎಂದರು. ‌

‘ಈ ಬೈಕ್‌ ಅನ್ನು ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು ಕಾಯ್ದಿರಿಸಿದ್ದರು. ನಮ್ಮ ಹುಡುಗರು ವಿಷಯವನ್ನು ತಿಳಿಸಿದಾಗ, ಖುಷಿಯಿಂದಲೇ ಕೊಡಲು ಒಪ್ಪಿಕೊಂಡರು’ ಎಂದು ಮಹೇಶ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು