ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಭಿಮಾನ ಬದುಕಿಗಾಗಿ ಮೆಕಾನಿಕ್‌ಗಳಾದರು...

ಕೆಎಸ್ಆರ್‌ಟಿಸಿ ಡಿಪೋನಲ್ಲಿ, ಪುರುಷರಂತೆಯೇ ಕೆಲಸ ಮಾಡುವ ಪಂಚ ಮಹಿಳಾ ಕರ್ಮಿಗಳು
Last Updated 7 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಮೆಕಾನಿಕ್‌ ಎಂದಾಕ್ಷಣ ಯಾವಾಗಲೂ ನೆನಪಿಗೆ ಬರುವುದು ಪುರುಷರೇ.ಸದಾ ಕೈಯಲ್ಲಿ ನಟ್ಟು, ಬೋಲ್ಟ್‌ ಹಿಡಿದು, ಗ್ರೀಸ್‌, ಆಯಿಲ್‌ ಮೆತ್ತಿಕೊಂಡಿರಬೇಕಾದ ಯಂತ್ರಗಳ ರೀಪೇರಿ ಕೆಲಸ ಹೆಚ್ಚು ಶ್ರಮ ಬೇಡುವಂತಹದ್ದು. ಹಾಗಾಗಿ, ಅದು ಪುರುಷರಿಂದಷ್ಟೇ ಸಾಧ್ಯ ಎಂಬುದು ಎಲ್ಲರ ಭಾವನೆ.

ಈಗ ಕಾಲ ಬದಲಾಗಿದೆ. ಮಹಿಳೆಯರೂ ಎಲ್ಲ ಕ್ಷೇತ್ರದಲ್ಲಿ ಪುರುಷರಿಗಷ್ಟೇ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಯಂತ್ರ ರಿಪೇರಿ ಕೆಲಸವೂ ಅವರಿಗೆ ಈಗೀಗ ಕಷ್ಟವೆನಿಸುವುದಿಲ್ಲ!

ಈ ಐವರು ಮಹಿಳಾ ಮೆಕಾನಿಕ್‌ಗಳು ಅದನ್ನು ಎದೆತಟ್ಟಿಕೊಂಡು ಹೇಳುತ್ತಾರೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಚಾಮರಾಜನಗರದ ಡಿಪೊದಲ್ಲಿ ಹಲವು ವರ್ಷಗಳಿಂದ ಐವರು ಮಹಿಳೆಯರು ಮೆಕಾನಿಕ್‌ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಶ್ರಮದಾಯಕ ನೌಕರಿಯಲ್ಲಿ ಪರಿಣತಿ ಸಾಧಿಸಿದ್ದಾರೆ.

ಕಲ್ಬುರ್ಗಿಯಗಾಯತ್ರಿ,ಚಾಮರಾಜನಗರದ ಹೌಸಿಂಗ್‌ಬೋರ್ಡ್‌ ನಿವಾಸಿಗಳಾದ ಗೀತಾಹಾಗೂ ಲಲಿತಾಂಬ, ಕರಿನಂಜನಪುರದ ಪೂರ್ಣಿಮಾ, ತಾಲ್ಲೂಕಿನ ದೊಡ್ಡರಾಯಪೇಟೆ ಗ್ರಾಮದ ಮಂಜುಳಾ ಅವರು ‘ಪಂಚ’ ಯಂತ್ರ ಕರ್ಮಿಗಳು.

ಮಣ ಭಾರದಬಸ್‌ನ ಟೈರ್‌ ಎತ್ತಿ ಇಡುವ ಕೆಲಸ ಬಿಟ್ಟು (ಬೋಲ್ಟ್‌ಗಳನ್ನು ತೆಗೆಯುತ್ತಾರೆ) ಉಳಿದೆಲ್ಲ ಕೆಲಸಗಳನ್ನು ಇವರು ಡಿಪೊದಲ್ಲಿ ನಿರ್ವಹಿಸುತ್ತಾರೆ. ಬೆಳಿಗ್ಗೆ 8 ಗಂಟೆಗೆ ನೀಲಿ ಸಮವಸ್ತ್ರ ಧರಿಸಿ ಕೆಲಸ ಆರಂಭಿಸಿದರೆಂದರೆ, ಸಂಜೆ 5 ಗಂಟೆಯವರೆಗೆ ಮುಂದುವರಿಯುತ್ತದೆ. ಇವರಿಗೆ ಸಂಸ್ಥೆಯ ಉನ್ನತ ಅಧಿಕಾರಿಗಳು, ಇತರ ಸಹೋದ್ಯೋಗಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ.

ಮಂಜುಳಾ ಅವರು 12 ವರ್ಷಗಳಿಮದ ಕೆಲಸ ಮಾಡುತ್ತಿದ್ದರೆ, ಗಾಯತ್ರಿ9 ವರ್ಷದಿಂದ, ಪೂರ್ಣಿಮಾ 4 ವರ್ಷ ಹಾಗೂ ಲಲಿತಾಂಬ, ಗೀತಾ ಅವರು ವರ್ಷದಿಂದ ಕೆಲಸ ಮಾಡುತ್ತಿದ್ದಾರೆ.

ಮಂಜುಳಾ ಅವರು ಡಿಪೊದಲ್ಲೇ ಇರುವ ಬಂಕ್‌ನಲ್ಲಿ ನಿಂತು ಎಲ್ಲ ಬಸ್‌ಗಳಿಗೆ ಡೀಸೆಲ್‌ ತುಂಬುತ್ತಾರೆ. ಉಳಿದ ನಾಲ್ವರು ತಮ್ಮದೇ ವ್ಯಾಪ್ತಿಯ ಕೆಲಸದಲ್ಲಿ ನಿರತರಾಗುತ್ತಾರೆ.

‘ಇಲ್ಲಿನ ಸಿಬ್ಬಂದಿ ಕೂಡನಮಗೆಸಾಥ್‌ ನೀಡುತ್ತಿದ್ದಾರೆ. ಕೆಲಸಗಳನ್ನು ಅತ್ಯಂತ ಖುಷಿಯಿಂದ ನಿರ್ವಹಿಸುತ್ತೇವೆ. ಮಹಿಳೆಯರು ಪುರುಷರು ಎಂಬ ಸಂಕೋಚ ಮನೋಭಾವ ಇಲ್ಲ. ಸಹೋದರ ಸಹೋದರಿಯರಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ’ ಎಂದು ಎಲ್ಲರೂ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿಕ್ಷಕಿವೃತ್ತಿಯಿಂದ ಮೆಕ್ಯಾನಿಕ್‌ ಕಡೆಗೆ

ನಗರದ ಹೌಸಿಂಗ್‌ ಬೋರ್ಡ್‌ನ ನಿವಾಸಿ ಗೀತಾ ಅವರು ಐಟಿಐ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದವರು. 10 ವರ್ಷಗಳ ಕಾಲ ಅವರು ಅತಿಥಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಡಿಪೊದಲ್ಲಿ ಮೆಕಾನಿಕ್‌ ಆಗಿ ಸೇರಿದ್ದರು. ಸಂಸ್ಥೆಯು ನೀಡುವ ಸಂಬಳದಲ್ಲಿ ಕುಟುಂಬದ ಜಾವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.

‘ದೈಹಿಕ ಸಾಮರ್ಥ್ಯದ ಕೆಲಸ ಇಲ್ಲಿ ಹೆಚ್ಚಿದೆ. ಆದರೆ, ಕೆಲಸದ ಅರಿವಿದ್ದರೆ ಸಲೀಸಾಗಿ ನಿರ್ವಹಿಸಬಹುದು. ಮಹಿಳೆಯರು ಹೊರಗಿನ ಪ್ರಪಂಚ ಅರಿಯಲು ಮಾನಸಿಕವಾಗಿ ಸದೃಢರಾಗಬೇಕು. ಇಲ್ಲವಾದರೆ ಬದುಕು ಕಷ್ಟ ಎನಿಸುತ್ತದೆ. ಹೆಣ್ಣು ಮಕ್ಕಳು ಮುನ್ನುಗ್ಗುವ ಛಲ ಬೆಳೆಸಿಕೊಳ್ಳಬೇಕು’ಎನ್ನುವುದು ಅವರ ಅನುಭವದ ಮಾತು.

ಯಾರಿಗೂ ಗುಲಾಮಳಲ್ಲ

ಹೆಣ್ಣು ತನ್ನೊಳಗಿನ ಮೃದು ಮನಸ್ಸಿಗೆ ಸೋಲುತ್ತಾಳೆ. ಹೆಣ್ಣು ಯಾರ ಗುಲಾಮಳೂ ಅಲ್ಲ. ಸಮಾಜದಲ್ಲಿ ಅವಳಿಗೊಂದು ಗೌರಯುತ ಸ್ಥಾನವಿದೆ. ಶೇ 50ರಷ್ಟು ಮಹಿಳೆಯರುಪುರುಷಪ್ರಧಾನ ಕ್ಷೇತ್ರಗಳಲ್ಲೂ ದುಡಿಯುತ್ತಿದ್ದಾರೆ. ಉತ್ಸಾಹದಿಂದಲೇ ಕೆಲಸ ಮಾಡುತ್ತಾಳೆ. ಪುರುಷರು ನಿರ್ವಹಿಸುವ ಕೆಲಸಗಳು ನಮಗೂ ಸಾಧ್ಯ

ಲಲಿತಾಂಬ

ಖುಷಿ ನೀಡುವ ಕೆಲಸ

ವೃತ್ತಿಪರ ಶಿಕ್ಷಣದ ಓದಿನ ನಂತರ ನನಗೊಂದುಉದ್ಯೋಗದ ಅವಶ್ಯಕತೆ ಇತ್ತು. ಈಗಾಗಿ, ಸಾರಿಗೆ ಇಲಾಖೆಗೆ ಸೇರಿದೆ. ಕಲ್ಬುರ್ಗಿಯಿಂದ ಇಲ್ಲಿಗೆ ಬಂದು 9 ವರ್ಷಗಳಿಂದ ಬಂದು ಕೆಲಸ ಮಾಡುತ್ತಿದ್ದೇನೆ. ಯಾವುದೇ ಹಿಂಜರಿಕೆ ಇಲ್ಲ. ಸಂಸ್ಥೆಯಿಂದ ಸಹಕಾರ ಇದೆ. ಈ ಕೆಲಸ ಖುಷಿ ನೀಡಿದೆ

ಗಾಯತ್ರಿ

ಸರ್ಕಾರಿ ನೌಕರರೆಂದು ಗುರುತಿಸಲಿ

ಸರ್ಕಾರಿ ನೌಕರರೆಂದು ನಮ್ಮನ್ನು ಗುರುತಿಸಿದರೆ ಇನ್ನಷ್ಟು ಅನುಕೂಲವಾಗಲಿದೆ. ಈ ಡಿಪೊದಲ್ಲಿ ಎಲ್ಲರ ಸಹಕಾರ ಇದೆ. ಮಹಿಳೆಯರು ಎನ್ನುವ ಕಾರಣದಿಂದ ಗೌರವವನ್ನೂ ನೀಡುತ್ತಾರೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ

ಮಂಜುಳಾ

ನಾವೂ ಸಮರ್ಥರು

ಟೈರ್‌ಗಳನ್ನು ಎತ್ತಿ ಬದಲಾಯಿಸುವುದು ಬಿಟ್ಟು, ನಟ್ಟು, ಬೋಲ್ಟ್‌ ಬದಲಾವಣೆ ಸೇರಿದಂತೆ ಬಹುತೇಕ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತೇವೆ. ಇಲ್ಲಿನ ಸಿಬ್ಬಂದಿ ಆರಂಭದಲ್ಲಿ ಸಹಾಯ ಮಾಡಿದರು. ಈಗ ಅನೇಕ ಕೆಲಸಗಳನ್ನು ನಾವೇ ನಿರ್ವಹಿಸುತ್ತೇವೆ

ಪೂರ್ಣಿಮಾ

ನಾಲ್ಕು ಗೋಡೆಯೊಳಗೆ ಬಂಧಿಯಲ್ಲ

ಹೆಣ್ಣು ನಾಲ್ಕು ಗೋಡೆಗಳ ನಡುವೆ ಬಂದಿಯಾಗಿ ಬದುಕಬೇಕು ಎನ್ನುವ ಕಾಲ ಸರಿದು ವರ್ಷಗಳೇ ಉರುಳಿವೆ.ಎಲ್ಲ ಕ್ಷೇತ್ರಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಮುನ್ನಡೆಯುತ್ತಿದ್ದಾಳೆ. ತನ್ನಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ವಿಶ್ವಮಟ್ಟದಲ್ಲೂ ಗೌರವಕ್ಕೆ ಪಾತ್ರಳಾಗುತ್ತಿದ್ದಾಳೆ. ಈ ಕೆಲಸದಲ್ಲಿ ನನಗೆ ಸಂತೃಪ್ತಿ ಇದೆ

ಗೀತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT