ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಮಗಾರಿ ವಿಳಂಬ ಮಾಡದಂತೆ ತಾಕೀತು

ಕೆಡಿಪಿ ಸಭೆಯಲ್ಲಿ ಲೋಕೋಪಯೋಗಿ, ಶಿಕ್ಷಣ ಇಲಾಖೆ ಇಲಾಖೆಗಳ ಅಧಿಕಾರಿಗಳ ಮೇಲೆ ಸಿಇಒ ಅಸಮಾಧಾನ
Last Updated 12 ಡಿಸೆಂಬರ್ 2019, 9:56 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲೆಯಲ್ಲಿ ಶಾಲಾ, ಕಾಲೇಜು ಕಟ್ಟಡಗಳ ನಿರ್ಮಾಣ ಕಾರ್ಯ ನಿಗದಿತ ಅವಧಿಯೊಳಗೆ ಮುಗಿಯುತ್ತಿಲ್ಲ. ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ. ಈ ಬಗ್ಗೆ ವಾರದೊಳಗೆ ಸಭೆ ನಡೆಸಬೇಕು. ಜನವರಿ ಆರಂಭದಿಂದಲೇ ಕಟ್ಟಡ ಕಾಮಗಾರಿಗಳು ಆರಂಭಿಸಲು ಮುಂದಾಗಬೇಕು. ಇಲ್ಲವಾದರೆ ನಿಮ್ಮಿಂದ ಆಗುವುದಿಲ್ಲ ಎಂದು ಸರ್ಕಾರಕ್ಕೆ ವರದಿ ಮಾಡಿ ಏಜೆನ್ಸಿ ಬದಲಾಯಿಸಬೇಕಾಗುತ್ತದೆ’ಎಂದು ಲೋಕೋಪಯೋಗಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಿಇಒ ಎಚ್.ಬಿ.ನಾರಾಯಣರಾವ್‌ ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಮಾತನಾಡಿದ ಅವರು, ಎರಡೂ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇರುವುದರಿಂದ ಜಿಲ್ಲೆಯಲ್ಲಿ ಶಾಲಾ, ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿದೆ ಎಂದರು.

‘ಪ್ರಸ್ತುತ ಯಾವಕಾಮಗಾರಿಕೈಗೆತ್ತಿಕೊಂಡಿದ್ದಿರಾ? ಈಗ ಯಾವ ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ ಎಂಬ ಮಾಹಿತಿ ಕೊಡಿ. ಟೆಂಡರ್‌ ಪ್ರಕ್ರಿಯೆ ವಿಳಂಬವಾಗಿದೆ ಎಂಬ ಸಬೂಬು ಬೇಡ. ಕಾಮಗಾರಿ ವಿಳಂಬವಾದರೆ ನಿಮ್ಮ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯಬೇಕಾಗುತ್ತದೆ’ ಎಂದರು.

‘ಈ ಶನಿವಾರವೇ ಸಭೆ ನಡೆಸಿ ಕಾಮಗಾರಿಗಳ ಬಾಕಿ ಹಾಗೂ ಆರಂಭಿಸುವ ಬಗ್ಗೆತಿಂಗಳ ಅಂತ್ಯಕ್ಕೆ ವರದಿ ಸಲ್ಲಿಸಬೇಕು. ಜನವರಿ ಆರಂಭದಿಂದಲೇಕಟ್ಟಡ ಕಾಮಗಾರಿಗಳ ನಿರ್ಮಾಣಆರಂಭಗೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಯೋಜನೆಯ ಅನುಷ್ಠಾನ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆಗಳು ಒಟ್ಟಿಗೆ ಚರ್ಚಿಸಿ ಕ್ರಿಯಾಯೋಜನೆ ರೂಪಿಸಬೇಕು. ಆಗ ಮಾತ್ರ ಕಾಮಗಾರಿಗಳನ್ನುಶೀಘ್ರವಾಗಿ ಪೂರ್ಣಗೊಳಿಸಲು ಸಾಧ್ಯ. ಶಾಲಾ, ಕಾಲೇಜು ಕೊಠಡಿಗಳ ದುರಸ್ತಿ ಅಥವಾ ಮರು ನಿರ್ಮಾಣ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ವೆಚ್ಚ ಹಾಗೂ ಕಟ್ಟಡ ವಿನ್ಯಾಸದ ಕುರಿತು ಶಿಕ್ಷಣ ಸಂಸ್ಥೆಯ ಅಧಿಕಾರಿಗಳು, ಪ್ರಾಂಶುಪಾಲರೊಂದಿಗೆ ತಪ್ಪದೇ ಚರ್ಚಿಸಬೇಕು’ ಎಂದು ಸಲಹೆ ನೀಡಿದರು.

ಆರೋಗ್ಯ ಕಾರ್ಡ್‌ಶೇ 16ರಷ್ಟು ಹಂಚಿಕೆ: ‘ಆಯುಷ್ಮಾನ್‌ ಭಾರತ –ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ10.5 ಲಕ್ಷ ಮಂದಿಗೆ 1.45 ಲಕ್ಷ ಆರೋಗ್ಯ ಕಾರ್ಡ್‌ ಆಗಿದೆ. ಇನ್ನೂ 8 ಲಕ್ಷಕ್ಕೂ ಹೆಚ್ಚು ಬಾಕಿ ಇದೆ. ಇದುವರೆಗೆ ಶೇ 16ರಷ್ಟು ಕಾರ್ಡ್‌ ಹಂಚಿಕೆ ಮಾಡಲಾಗಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಂ.ಸಿ. ರವಿಸಭೆಗೆ ತಿಳಿಸಿದರು.

‘ಇದೇ 14ರಿಂದ 2020ರ ಮಾರ್ಚ್‌ ಅಂತ್ಯದವರೆಗೆ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಕಾರ್ಡ್‌ ವಿತರಣೆಗೆ ನಿರ್ಧರಿಸಲಾಗಿದ್ದು, ಎಲ್ಲ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಒಗಳ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.

ಗೊಬ್ಬರದ ಕೊರತೆ ಇಲ್ಲ: ಕೃಷಿ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಸಭೆಗೆ ನೀಡಿದ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು, ‘ಜಿಲ್ಲೆಯಲ್ಲಿ ಒಟ್ಟು 5,175 ಟನ್‌ ಗೊಬ್ಬರ ದಾಸ್ತಾನು ಇದೆ. ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರಗಳ ಕೊರತೆ ಇಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಗೋಪಿನಾಥಂ ಶಾಲೆ: ಕನ್ನಡ ಶಿಕ್ಷಕರ ನೇಮಕ

‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ವಾಸ್ತವ್ಯ ಹೂಡಿದ್ದ ಹನೂರು ತಾಲ್ಲೂಕಿನ ಗೋಪಿನಾಥಂನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 4ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ನೀಡಿದ್ದು, ಕನ್ನಡ ಶಿಕ್ಷಕರ ನೇಮಕ ಸಂಬಂಧ ಇದ್ದಂತಹ ಸಮಸ್ಯೆ ಬಗೆಹರಿದಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೇಮಕ ಆದೇಶಪತ್ರ ನೀಡಲು ಸೂಚಿಸಲಾಗಿದೆ’ ಎಂದುಡಿಡಿಪಿಐ ಮಂಜುನಾಥ್‌ ಸಭೆಗೆ ತಿಳಿಸಿದರು.

‘ಸಚಿವರ ಸೂಚನೆಯಂತೆ 2020–21ನೇ ಸಾಲಿನಿಂದ ಕನ್ನಡ ಮಾಧ್ಯಮ ಶಾಲೆಯನ್ನು ಆರಂಭಿಸಲು ಅನುಮತಿ ನೀಡಿ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಶಾಲೆಯಲ್ಲಿ ಮೂಲ ಸೌಕರ್ಯಗಳೊಂದಿಗೆ ಅಗತ್ಯಕ್ಕೆ ತಕ್ಕಂತೆ ತರಗತಿ ಕೊಠಡಿಗಳನ್ನು ವ್ಯವಸ್ಥೆಗೊಳಿಸಿಕೊಳ್ಳಲಾಗುತ್ತಿದೆ’ ಎಂದರು.

‘ಸಚಿವರು ಜಿಲ್ಲೆಯ ಗೋಪಿನಾಥಂನಲ್ಲಿ ಶಾಲಾ ವಾಸ್ತವ್ಯ ಸಂದರ್ಭದಲ್ಲಿ ನಿರ್ದೇಶನ ನೀಡಿದ್ದ ಎಲ್ಲ ಕಾರ್ಯಗಳು ಹಾಗೂ ಇತರೆ ಇಲಾಖೆಗಳ ಪ್ರಗತಿ ಬಗ್ಗೆ ಗಮನ ಹರಿಸಬೇಕು. ಮೂಲಸೌಲಭ್ಯ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು’ ಎಂದು ನಾರಾಯಣರಾವ್‌ ಸೂಚಿಸಿದರು.

ಒತ್ತುವರಿ ಖಚಿತ ಮಾಹಿತಿ ಮುಖ್ಯ: ವಿದ್ಯಾರ್ಥಿಗಳ ವಸತಿ ನಿಲಯಗಳನ್ನು ನಿರ್ಮಿಸುವಾಗ ಸ್ಥಳ ಪರಿಶೀಲನೆಯ ಬಗ್ಗೆ ಗಮನ ಹರಿಸಬೇಕು. ನಿಲಯಕ್ಕಾಗಿ ನಿಗದಿಪಡಿಸಿರುವ ಜಾಗ, ಯಾವುದೇ ಒತ್ತುವರಿ ಇಲ್ಲವೇ ಅಕ್ರಮ ನಡೆದಿಲ್ಲ ಎಂಬುದರ ಕುರಿತು ಖಚಿತಪಡಿಸಿಕೊಂಡು ನಂತರ ಕಾರ್ಯದಲ್ಲಿ ಮುಂದುವರೆಯಬೇಕು. ಅಲ್ಲದೇ, ಗ್ರಾಮಗಳಲ್ಲಿ ಕಟ್ಟಲಾಗುವ ಸಮುದಾಯ ಭವನಗಳಲ್ಲಿ ಕುಡಿಯುವ ನೀರು, ಶೌಚಾಲಯ ಮುಂತಾದ ಮೂಲ ಸೌಕರ್ಯಗಳು ದೊರೆಯುವ ಬಗೆಗೆ ನಿಗಾ ವಹಿಸಬೇಕು ಎಂದುಹೇಳಿದರು.

‘ನರೇಗಾ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಗ್ರಾಮ ವಿಕಾಸದಡಿ ಲಭ್ಯವಿರುವ ಅನುದಾನ ಬಳಸಿ, ಸೂಕ್ತ ಸ್ಥಳಗಳಲ್ಲಿ ಮಾದರಿ ಆಟದ ಮೈದಾನ ನಿರ್ಮಿಸಲು ಕ್ರಿಯಾ ಯೋಜನೆ ರೂಪಿಸಬೇಕು’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಅಧ್ಯಕ್ಷೆ ಮೇಲೆ ಮುನಿಸು: ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರ ಗೈರು

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಗೆ ಉಪಾಧ್ಯಕ್ಷ ಕೆ.ಎಸ್. ಮಹೇಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾವತಿ, ಕೃಷಿ ಮತ್ತು ಕೈಗಾರಿಕೆ ಅಧ್ಯಕ್ಷ ಚನ್ನಪ್ಪ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮರಗದಮಣಿ ಗೈರುಹಾಜರಾಗಿದ್ದರು.

ಪಕ್ಷದಲ್ಲಿ ಆಗಿರುವ ಒಪ್ಪಂದದಂತೆ ಅಧ್ಯಕ್ಷೆ ಶಿವಮ್ಮ ಅವರು ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ನವೆಂಬರ್‌ 30ರೊಳಗೆ ರಾಜೀನಾಮೆ ನೀಡುವಂತೆ ಪಕ್ಷದ ವರಿಷ್ಠರು ಸೂಚಿಸಿದ್ದರು ಎನ್ನಲಾಗಿದೆ. ಹಾಗಿದ್ದರೂ ಅವರು ಇದುವರೆಗೆ ರಾಜೀನಾಮೆ ನೀಡಿಲ್ಲ. ಈ ಕಾರಣಕ್ಕೆ ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಸಭೆಗೆ ಬಂದಿರಲಿಲ್ಲ ಎಂದು ಹೇಳಲಾಗುತ್ತಿದೆ.

ಇಂದು ಸ್ಥಾಯಿ ಸಮಿತಿ ಸಭೆ: ಜಿಲ್ಲಾ ಪಂಚಾಯಿತಿಯ ಹಣಕಾಸು ಸ್ಥಾಯಿ ಸಮಿತಿಯ ಸಭೆ ಗುರುವಾರ ನಡೆಯಲಿದ್ದು, ಅದಕ್ಕೂ ಉಪಾಧ್ಯಕ್ಷ ಹಾಗೂ ಇತರರು ಗೈರಾಗಲಿದ್ದಾರೆ ಎಂದು ಗೊತ್ತಾಗಿದೆ.

ನೋಟಿಸ್‌ ನೀಡಿತ್ತು: ‘ಕೆಡಿಪಿ ಸಭೆಗೆ ಗೈರುಹಾಜರಾದವರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಸಭೆಗೂ ಮೊದಲೇ ಎಲ್ಲರಿಗೂ ನೋಟಿಸ್‌ ನೀಡಲಾಗಿತ್ತು. ಭಾಗವಹಿಸದೆ ಇರುವುದಕ್ಕೆ ಏನು ಕಾರಣ ಎಂಬುದನ್ನು ಅವರನ್ನೇ ಕೇಳಬೇಕು’ ಎಂದುಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT