ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗೇಪಲ್ಲಿ: 30 ಅಡಿ ರಾಜ ಕಾಲುವೆ ಇದೀಗ 3 ಅಡಿ !

ಬ್ರಿಟಿಷರ ಕಾಲದ ನಿರ್ಮಾಣಗೊಂಡ ರಾಜಕಾಲುವೆ ದುಸ್ಥಿತಿ
Published 21 ಮೇ 2024, 6:23 IST
Last Updated 21 ಮೇ 2024, 6:23 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ರಾಜಕಾಲುವೆ ಸ್ವರೂಪವೇ ಬದಲಾಗಿದೆ. 30 ಅಡಿ ಇದ್ದ ರಾಜಕಾಲುವೆ ಈಗ 3 ಅಡಿಗೆ ಇಳಿದಿದೆ. ನೀರು ಹರಿಯುತ್ತಿದ್ದ ಕಾಲುವೆ ಇದೀಗ ಚರಂಡಿ ಕಲುಷಿತ ಹರಿಯುತ್ತಿದೆ.

ಆಗಿನ ಕಾಲಕ್ಕೆ ಅನುಗುಣವಾಗಿ ನೀರು ವೃಥಾ ಪೋಲು ಆಗದಂತೆ ರಾಜಕಾಲುವೆ, ಪೋಷಕ ಕಾಲುವೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಖ್ಯವಾಗಿ ಚಿತ್ರಾವತಿ ಕಣಜ, ಕೊರ್ಲಕುಂಟೆ, ರಾಳ್ಳಕುಂಟೆ, ಬಾಲಾಜಿ ಬಾಜಿಯಾಯನಕುಂಟೆ ಸೇರಿದಂತೆ ವಿವಿಧ ಕುಂಟೆಗಳನ್ನು ನಿರ್ಮಿಸಲಾಗಿದೆ. ಪೋಷಕ ಕಾಲುವೆ ಮೂಲಕ ಹರಿಯುವ ನೀರು ರೈತರ ಜಮೀನುಗಳಿಗೆ ನೇರವಾಗಿ ಹರಿಯುವಂತೆ ಯೋಜಿತವಾಗಿ ರೂಪಿಸಲಾಗಿದೆ.

ಈ ರಾಜ ಕಾಲುವೆ ನೀರು ಕುಡಿಯಲು ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಕೆ ಆಗುತ್ತಿತ್ತು. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಿತ್ತು. ಆದರೆ, ಕಾಲಕ್ರಮೇಣ ಸಣ್ಣ ನೀರಾವರಿ, ಗ್ರಾಮ ಪಂಚಾಯಿತಿ, ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾಜಕಾಲುವೆ ಮೂರು ಅಡಿಯಷ್ಟು ಮಾತ್ರ ಉಳಿದಿದೆ.

ಕೆಲ ಪ್ರಭಾವಿಗಳು ನಿವೇಶನ, ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ನಿವಾಸಿಗಳು ಕಾಲುವೆಗೆ ಕಲುಷಿತ ನೀರು, ಮಲಮೂತ್ರದ ನೀರು ಹರಿಸುತ್ತಿದ್ದಾರೆ. ಕಸ, ತ್ಯಾಜ್ಯ, ಪ್ಲಾಸ್ಟಿಕ್ ಸುರಿಯುತ್ತಿದ್ದಾರೆ.

ನಿರ್ಲಕ್ಷ್ಯ: ರಾಜಕಾಲುವೆ ಒತ್ತುವರಿ, ಚರಂಡಿ ನೀರಿನ ಸಂಗ್ರಹದ ಸ್ಥಳಗಳಿಗೆ ಹಿಂದಿನ ಜಿಲ್ಲಾಧಿಕಾರಿಗಳಾದ ಮಂಜುಳ, ಅನಿರುದ್ಧ ಶ್ರವಣ್, ಲತಾ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೇರಿದಂತೆ ಅನೇಕ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಕೂಡಲೇ ಒತ್ತುವರಿ ತೆರವುಗೊಳಿಸಬೇಕು. ಚರಂಡಿ ನೀರು ಸ್ವಚ್ಛ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಆದರೆ, ಇಂದಿಗೂ ಒತ್ತುವರಿ ತೆರವು ಆಗಿಲ್ಲ. ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲದಂತಾಗಿದೆ ಎನ್ನುತ್ತಾರೆ ಸ್ಥಳೀಯರು.

ಪ್ರತಿ ಮಳೆಗಾಲದ ಸಂದರ್ಭದಲ್ಲಿ ಈ ರಾಜಕಾಲುವೆ ಸುತ್ತಮುತ್ತಲಿನ ಮನೆ, ರಸ್ತೆಗಳಿಗೆ ಕಲುಷಿತ ನೀರು ಹರಿಯುತ್ತಿದೆ. ಸಂಬಂಧಪಟ್ಟ ಪುರಸಭೆ ತಾತ್ಕಾಲಿಕವಾಗಿ ಜೆಸಿಬಿ ಯಂತ್ರಗಳಿಂದ ಕಾಲುವೆ ಹೂಳು ತೆಗೆಯುತ್ತದೆಯೇ ಹೊರತು; ಶಾಶ್ವತವಾದ ಪರಿಹಾರ ಕಲ್ಪಿಸಿಲ್ಲ. ದುರ್ನಾತದಿಂದ ದಾರಿಹೋಕರು ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ. ಸಂಕ್ರಾಮಿಕ ರೋಗ ಹರಡಲಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

‘ಹಿರಿಯ ವಕೀಲ ಎ.ಜಿ.ಸುಧಾಕರ್, ಚಿಂತಕ ಡಾ.ಕೆ.ಎಂ.ನಯಾಜ್ ಅಹಮದ್ ಸೇರಿದಂತೆ ರೈತ, ಕನ್ನಡ, ದಲಿತ ಸಂಘಟನೆಗಳ ಮುಖಂಡರು, ಚಿಂತಕರು ಚಿತ್ರಾವತಿ ನದಿ, ರಾಜಕಾಲುವೆ ಉಳಿಸಲು’ ಹೋರಾಟ ನಡೆಸಿದ್ದರು. ಒತ್ತುವರಿ ತೆರವುಗೊಳಿಸಿ ಸ್ವಚ್ಛತೆ ಕಾಪಾಡಲು ಮುಖಂಡರು ಮನವಿ ಮಾಡಿದ್ದಾರೆ. ಕಾಲುವೆ ಸರ್ವೆ ಮಾಡಿಸಲು ಹಿಂದಿನ ತಹಶೀಲ್ದಾರ್ ಎ.ರವಿ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದರೂ. ಆದರೆ, ಇಂದಿಗೂ ರಾಜಕಾಲುವೆ ಸರ್ವೆ ಕಾರ್ಯ ಆಗಿಲ್ಲ ಎನ್ನುತ್ತಾರೆ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಟಿ.ಲಕ್ಷ್ಮಿನಾರಾಯಣರೆಡ್ಡಿ.

ನರೇಗಾ ಯೋಜನೆಯಡಿ ರಾಜ ಕಾಲುವೆ, ಪೋಷಕ ಕಾಲುವೆಗಳನ್ನು ಅಭಿವೃದ್ಧಿಪಡಿಸದಿದ್ದಲ್ಲಿ ಕರವೇ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್.ಹರೀಶ್ ತಿಳಿಸಿದ್ದಾರೆ.

‘ಪುರಸಭೆಯಿಂದ ರಾಜಕಾಲುವೆ ಸ್ವಚ್ಛಗೊಳಿಸಲು ಕೋಟ್ಯಂತರ ರೂಪಾಯಿ ಹಣ ವ್ಯಯಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಪಟ್ಟಣದ ನಿವಾಸಿ ಬಿ.ಎಚ್.ರಫೀಕ್ ದೂರುತ್ತಾರೆ.

ರಾಜಕಾಲುವೆ ಸ್ಥಳಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಿಂದಿನ ತಹಶೀಲ್ದಾರ್ ಎ.ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ (ಸಂಗ್ರಹ ಚಿತ್ರ)
ರಾಜಕಾಲುವೆ ಸ್ಥಳಕ್ಕೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಿಂದಿನ ತಹಶೀಲ್ದಾರ್ ಎ.ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ (ಸಂಗ್ರಹ ಚಿತ್ರ)

ರಾಜ ಕಾಲುವೆ ಉಳಿಸಲು ಪ್ರಗತಿಪರ ರೈತ ಕನ್ನಡ ದಲಿತಪರ ಸಂಘಟನೆ ಚಿಂತಕರ ಸಾರ್ವಜನಿಕರ ಸಮಿತಿ ರಚನೆ ಮಾಡಿ ಹೋರಾಟ ರೂಪಿಸಲಾಗುವುದು

-ಎ.ಜಿ.ಸುಧಾಕರ್ ಹಿರಿಯ ವಕೀಲ

ಚುನಾವಣಾ ನೀತಿ ಸಂಹಿತೆ ಜಾರಿ ಇದೆ. ಅನುದಾನ ಬಂದರೆ ಕಾಲುವೆ ದುರಸ್ತಿ ಹಾಗೂ ಸ್ವಚ್ಛತೆ ಮಾಡಿಸಲಾಗುವುದು

-ಎಲ್.ಶಂಕರ್ ಪುರಸಭೆ ಮುಖ್ಯಾಧಿಕಾರಿ

ರಾಜಕಾಲುವೆ ಪೋಷಕ ಕಾಲುವೆ ಒತ್ತುವರಿ ಮಾಡಿರುವ ಬಗ್ಗೆ ತನಿಖೆ ಮಾಡಿಸಲಾಗುವುದು. ಸರ್ಕಾರ ಅನುದಾನ ನೀಡಿದರೆ ಕಾಲುವೆ ಸ್ವಚ್ಛತೆಗೊಳಿಸಲಾಗುವುದು

-ಸುನೀಲ್ ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT