ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ವಾಹನ ದಟ್ಟಣೆಗೆ ನಲುಗಿದ ಎಪಿಎಂಸಿ

50 ವಸಂತಗಳನ್ನು ಪೂರೈಸಿರುವ ಮಾರುಕಟ್ಟೆಯಲ್ಲಿ ಮೂಲಸೌಕರ್ಯ ಕೊರತೆ, ಆಡಳಿತ ಮಂಡಳಿ ನಿರ್ಲಕ್ಷ್ಯಕ್ಕೆ ರೈತ ಸಮೂಹದ ಅಸಮಾಧಾನ
Last Updated 9 ಜನವರಿ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಿಲ್ಲುವ ಲಾರಿಗಳು, ಎಲ್ಲೆಂದರಲ್ಲಿ ಒಳಗೆ ನುಗ್ಗಲು ಹೋಗಿ ಸಿಕ್ಕಿಹಾಕಿಕೊಳ್ಳುವ ಚಿಕ್ಕಪುಟ್ಟ ವಾಹನಗಳು, ಮಳಿಗೆ ತಲುಪಲು ಪರದಾಡುವ ರೈತರು, ಹೊರ ಬರಲಾರದೆ ಪರದಾಡುವ ಸವಾರರು... ನಗರದ ಪ್ರತಿಷ್ಠಿತ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ನಿತ್ಯ ಕಂಡುಬರುವ ಚಿತ್ರಣವಿದು.

50 ವಸಂತಗಳನ್ನು ಪೂರೈಸಿರುವ, 28 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹೂವಿನ ವ್ಯಾಪಾರದ ಜತೆಗೆ ದನದ ಸಂತೆಯೂ ನಡೆಯುತ್ತದೆ. ಮಾರುಕಟ್ಟೆಗೆ ನಿತ್ಯ ಸುಮಾರು 20 ಲಾರಿಗಳು, ನೂರಾರು ಗಾಡಿಗಳು ದಾಂಗುಡಿ ಇಡುತ್ತವೆ.

ರೈತರು, ರಫ್ತುದಾರರು, ಕಮಿಷನ್‌ ಏಜೆಂಟರು, ವರ್ತಕರು, ದಾಸ್ತಾನುದಾರರು, ಚಿಲ್ಲರೆ ಮಾರಾಟಗಾರರು, ಹಮಾಲಿಗರು ಮಾತ್ರ ಲೆಕ್ಕ ಹಾಕಿದರೂ ನಿತ್ಯ ಸಾವಿರ ಜನರ ‘ಸಂತೆ’ ಈ ಮಾರುಕಟ್ಟೆಯಲ್ಲಿ ನೆರೆಯುತ್ತದೆ. ಸಂತೆಗೆ ತಕ್ಕ ಸೌಕರ್ಯಗಳು ದೊರೆಯುತ್ತಿಲ್ಲ ಎನ್ನುವ ಕೊರಗು ಪ್ರಜ್ಞಾವಂತರದು.

ಮಾರುಕಟ್ಟೆಯಲ್ಲಿ ಇಂದಿಗೂ ರೈತರಿಗೆ, ವರ್ತಕರಿಗೆ ನೆಮ್ಮದಿ ತರುವ ವಾತಾವರಣ ನಿರ್ಮಾಣವಾಗಲಿಲ್ಲ ಎನ್ನುವ ಕೊರಗು ಬಾಧಿಸುತ್ತಿದೆ. ಅಲ್ಲಲ್ಲಿ ಕೊಳೆತು ನಾರುವ ಹೂವು– ತರಕಾರಿ ರಾಶಿ, ಮಂಡಿಯುದ್ದದ ಗುಂಡಿ ಬಿದ್ದ ರಸ್ತೆಗಳು, ನೀರಿಲ್ಲದ ಒಣಗಿ ಭಣಗುಡುವ ಟ್ಯಾಂಕ್‌ಗಳು, ಗಬ್ಬೆದ್ದು ನಾರುವ ಶೌಚಾಲಯ, ಹತ್ತಾರು ವರ್ಷಗಳಿಂದ ದೂಳು ತಿನ್ನುತ್ತಿರುವ ಶೈತ್ಯಾಗಾರ, ಅಧ್ವಾನಗೊಂಡ ವಾಹನಗಳ ನಿಲುಗಡೆ ವ್ಯವಸ್ಥೆ ಹೀಗೆ ಮಾರುಕಟ್ಟೆಯಲ್ಲಿ ಮಾರುದ್ದದ ಸಮಸ್ಯೆಗಳ ಪಟ್ಟಿ ತೆರೆದುಕೊಳ್ಳುತ್ತದೆ.

ಮಾರುಕಟ್ಟೆಗೆ ಬರುವ ವಾಹನಗಳ ನಿರ್ವಹಣೆಗೆ ಒಂದು ಶಿಸ್ತಿಲ್ಲದ ಕಾರಣ ನಿತ್ಯವೂ ಇಲ್ಲಿ ರೈತರು, ವರ್ತಕರು ಗೋಳಾಡುವುದು, ವಾಹನಗಳ ಚಾಲಕರು ಸಾರ್ವಜನಿಕರು ಗಲಾಟೆ ಮಾಡಿಕೊಳ್ಳುವುದು, ಆಗಾಗ ಹೊಡೆದಾಟಗಳು ಕೂಡ ನಡೆಯುವುದು ಸಾಮಾನ್ಯ ದೃಶ್ಯಗಳಂತಾಗಿದೆ. ಹಬ್ಬ ಹರಿದಿನಗಳಲ್ಲಿ ಮಾರುಕಟ್ಟೆಯೊಳಗೆ ಪ್ರವೇಶಿಸಿ ಹೊರಬೇಕಾದರೆ ಜನರು ಪಡಬಾರದ ಪಾಡು ಪಡಬೇಕಾಗುತ್ತಿದೆ.

ಆಗಾಗ ಇಲ್ಲಿ ಮಣಭಾರದ ಹೂವು, ತರಕಾರಿ ಮೂಟೆಗಳನ್ನು ಹೊತ್ತು ರೈತರು ಬೆವರು ಹರಿಸುತ್ತ ಮಳಿಗೆಗಳಿಗೆ ತಲುಪಿಸುವ ದೃಶ್ಯಗಳು ಸಾಮಾನ್ಯವಾಗಿವೆ. ಅಂಕೆ ತಪ್ಪಿದ ವಾಹನಗಳ ದಟ್ಟಣೆಯಿಂದಾಗಿ ತರಕಾರಿ ಮಾರಾಟ ಮಳಿಗೆಗಳ ಸುತ್ತ ಭಾರಿ ಗಾತ್ರದ ಗುಂಡಿಗಳು ಬಿದ್ದು ವಾಹನ ಸಂಚರಿಸಲು ಏದುಸಿರು ಬಿಡುವಷ್ಟು ಪರಿಸ್ಥಿತಿ ಹದಗೆಟ್ಟು ಹೋಗಿದೆ.

ಸಮಸ್ಯೆಯ ಮೂಲ ಹುಡುಕುತ್ತ ಹೋದರೆ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮಾರುಕಟ್ಟೆ ವಿಸ್ತರಣೆ ಮಾಡದಿರುವುದು ಮತ್ತು ಮಾರುಕಟ್ಟೆಯ ಪ್ರವೇಶ ದ್ವಾರದ ಬಳಿ ಇರುವ ಹೂವು ಮತ್ತು ತರಕಾರಿ ಮಳಿಗೆಗಳನ್ನು ಒಳಗೆ ನಿರ್ಮಿಸಿರುವ ನೂತನ ಮಳಿಗೆಗಳಿಗೆ ಸ್ಥಳಾಂತರಿಸದಿರುವುದೇ ಮಾರುಕಟ್ಟೆಯ ಪರಿಸ್ಥಿತಿ ಹದಗೆಡಲು ಮುಖ್ಯ ಕಾರಣ ಎಂಬ ಅಂಶ ತಿಳಿದು ಬರುತ್ತದೆ. ಆಡಳಿತ ಮಂಡಳಿ ನಿರ್ಲಕ್ಷ್ಯದಿಂದಾಗಿ ನಮ್ಮ ಗೋಳು ಅರಣ್ಯರೋದನವಾಗುತ್ತಿದೆ ಎಂಬ ಅಳಲು ರೈತರು ಮತ್ತು ವರ್ತಕರದು.

ಈ ಬಗ್ಗೆ ಎಪಿಎಂಸಿ ಆಡಳಿತ ಮಂಡಳಿ ಸದಸ್ಯ ಗೋವಿಂದಸ್ವಾಮಿ ಅವರನ್ನು ವಿಚಾರಿಸಿದರೆ, ‘ವಾಹನದಟ್ಟಣೆ ತಪ್ಪಿಸಲು ಹೊಸ ಮಳಿಗೆಗಳನ್ನು ನಿರ್ಮಿಸಿ, ಎಷ್ಟೇ ಮನವಿ ಮಾಡಿಕೊಂಡರೂ ವರ್ತಕರು ಹೊಸ ಮಳಿಗೆಗಳಿಗೆ ಸ್ಥಳಾಂತರಗೊಳ್ಳಲು ಒಪ್ಪುತ್ತಿಲ್ಲ. ಇದೇ ವಿಚಾರವಾಗಿ ಎರಡು ಬಾರಿ ಸಭೆಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ಅಮಾನಿ ಗೋಪಾಲಕೃಷ್ಣ ಕೆರೆಯಲ್ಲಿ ಪ್ರತ್ಯೇಕವಾಗಿ ಹೂವಿನ ಮಾರುಕಟ್ಟೆ ನಿರ್ಮಿಸುವ ಉದ್ದೇಶದಿಂದ 10 ಜಾಗಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಆದರೆ ಕಂದಾಯ ಇಲಾಖೆಯವರು ಜಾಗ ನೀಡಲು ನಿರಾಕರಿಸಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT