ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಕಾರ್ಮಿಕ ವಿರೋಧಿ ನೀತಿಗೆ ಆಕ್ಷೇಪ

ನ. 26ರಂದು ಮುಷ್ಕರ ನಡೆಸಲು ಬಿಸಿಯೂಟ ನೌಕರರ ನಿರ್ಧಾರ
Last Updated 10 ನವೆಂಬರ್ 2020, 4:21 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾರ್ಮಿಕ ವಿರೋಧಿ ನೀತಿ ಹಿಂಪಡೆಯುವಂತೆಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ದೇಶಪ್ರೇಮಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ (ಜೆಸಿಟಿಯು) ಕರೆಯ ಮೇರೆಗೆ ಸಿಐಟಿಯು ನೇತೃತ್ವದಡಿ ನ. 26ರಂದು ನಡೆಸುವ ಮುಷ್ಕರದ ತಿಳಿವಳಿಕೆ ಪತ್ರವನ್ನು ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಪದಾಧಿಕಾರಿಗಳು ಸೋಮವಾರ ಅಕ್ಷರದಾಸೋಹ ಜಿಲ್ಲಾಧಿಕಾರಿ ರಘುನಾಥ್ ರೆಡ್ಡಿ ಅವರಿಗೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ, ‘ನೂತನ ಶಿಕ್ಷಣ ನೀತಿ 2020 ಜಾರಿಗೊಳಿಸುವಾಗ ಬಿಸಿಯೂಟ ಯೋಜನೆಯನ್ನು ಬಲಿಷ್ಠಪಡಿಸಿ ಈಗಿರುವ ಮಾದರಿಯನ್ನು ಮುಂದುವರಿಸಬೇಕು. ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿ ಬೇಡ, ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದ ಜವಾಬ್ದಾರಿ ಕೊಡಬಾರದು’ ಎಂದು ಹೇಳಿದರು.

‘ಕೆಲಸದ ಅವಧಿಯನ್ನು 4ರಿಂದ 6ಗಂಟೆಗೆ ಹೆಚ್ಚಿಸಬೇಕು. ಶಾಲೆಗಳಲ್ಲಿ ‘ಡಿ’ ಗ್ರೂಪ್‌ ನೌಕರರಿಲ್ಲ. ಹಾಗಾಗಿ ಅಕ್ಷರದಾಸೋಹ ನೌಕರರನ್ನೇ ಶಾಲೆಯ ವಿವಿಧ ಕೆಲಸಗಳಿಗೆ ಬಳಸಿಕೊಂಡು ಶಾಲಾ ಸಿಬ್ಬಂದಿ ಎಂದು ನೇಮಕಾತಿ ಮಾಡಿಕೊಳ್ಳಬೇಕು. ಕೊರೊನಾ ಸಂದರ್ಭದ ವೇತನವನ್ನು ಏಪ್ರಿಲ್‌ನಿಂದಲೇ ಕೊಡಬೇಕು’ ಎಂದು ತಿಳಿಸಿದರು.

‘ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಯಾಗಬೇಕು. ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆ ಅಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು. ಪ್ರತಿ ಶಾಲೆಯಲ್ಲಿ ಇಬ್ಬರು ಅಡುಗೆಯವರು ಇರಲೇಬೇಕು. ನಿವೃತ್ತಿ ವೇತನ ಮತ್ತು ಆರೋಗ್ಯ ಸೌಲಭ್ಯ ಒದಗಿಸಬೇಕು’ ಎಂದರು.

‘ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಆದಾಯ ತೆರಿಗೆ ವ್ಯಾಪ್ತಿ ಹೊರಗಿರುವ ಕುಟುಂಬಗಳಿಗೆ ₹ 7,500 ನಗದು ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ದಿನಗಳನ್ನು ವಾರ್ಷಿಕ 200 ದಿನಗಳಿಗೆ ವಿಸ್ತರಿಸಿ ಕನಿಷ್ಠ ಕೂಲಿಯನ್ನು ₹ 600ಕ್ಕೆ ಏರಿಕೆ ಮಾಡಬೇಕು’ ಎಂದು ಹೇಳಿದರು.

‘ರೈತ ವಿರೋಧಿ ಕಾನೂನುಗಳು ಮತ್ತು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಬೇಕು. ಹಣಕಾಸು ವಲಯ ಸೇರಿದಂತೆ ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಬೇಕು. ಬಿಸಿಯೂಟ ನೌಕರರಿಗೆ ಎಲ್‌ಐಸಿ ಆಧಾರಿತ ಕಾಯಂ ಪಿಂಚಣಿ ಒದಗಿಸಬೇಕು. ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಮುಷ್ಕರ ನಡೆಸಲಾಗುತ್ತದೆ’ ಎಂದು ತಿಳಿಸಿದರು.

ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಪದಾಧಿಕಾರಿಗಳಾದ ಕೆ.ಆರ್. ಮಂಜುಳಾ, ಮುನಿಲಕ್ಷಮ್ಮ, ಎ. ಉಮಾ, ಕೆ.ಜಿ. ಅಮರಾವತಿ, ಸುಬ್ಬಲಕ್ಷ್ಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT