ಶನಿವಾರ, ಆಗಸ್ಟ್ 13, 2022
25 °C
ಎಸ್ಸೆಸ್ಸೆಲ್ಸಿಯಲ್ಲಿ ಸತತ 7ನೇ ವರ್ಷವೂ ಶೇ 100ರಷ್ಟು ಫಲಿತಾಂಶ

ಗಮನ ಸೆಳೆಯುತ್ತಿದೆ ಚೇಳೂರು ಪಬ್ಲಿಕ್ ಶಾಲೆ

ಸಿ.ಎಸ್.ವೆಂಕಟೇಶ್ Updated:

ಅಕ್ಷರ ಗಾತ್ರ : | |

Prajavani

ಚೇಳೂರು: ಉತ್ತಮ ಕೊಠಡಿಗಳು. ಹೈಟೆಕ್ ಶೌಚಾಲಯ. ಸುಸಜ್ಜಿತ ಭೋಜನಾಲಯ. ಗಿಡ, ಮರಗಳಿಂದ ನಳನಳಿಸುವ ಆವರಣ. ವಿಶಾಲ ಬಯಲು ರಂಗಮಂದಿರ. ಸುತ್ತಲೂ ಹಸಿರು...ಇದು ಚೇಳೂರಿನ ಕರ್ನಾಟಕ ಪಬ್ಲಿಕ್ ಶಾಲೆಯ ನೋಟ. ಪ್ರತಿ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿಯೂ ಮುಂದಿರುವ ಈ ಶಾಲೆ, ವಾತಾವರಣವೂ ಅತ್ಯುತ್ತಮವಾಗಿದೆ. 

ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಪ್ರದೇಶವಾದ ಚೇಳೂರಿನ ಸರ್ಕಾರಿ ಪ್ರೌಢಶಾಲೆ ‘ಪಬ್ಲಿಕ್ ಶಾಲೆ’ಯಾಗಿ ಪರಿವರ್ತನೆ ಆಗಿದೆ. ಈ ಪರಿವರ್ತನೆಗೂ ಮುನ್ನವೇ ಶಾಲೆ ಎಲ್ಲರ ಗಮನ ಸೆಳೆಯುತ್ತಿತ್ತು. ವರ್ಷದಿಂದ ವರ್ಷಕ್ಕೆ ದಾಖಲಾತಿಯೂ ಹೆಚ್ಚುತ್ತಿದೆ. 

ಶಿಕ್ಷಣ, ಕಟ್ಟಡಗಳು, ಸೌಲಭ್ಯಗಳಲ್ಲಿ ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ ಎನಿಸಿದೆ. ಪ್ರೌಢಶಾಲೆಯಲ್ಲಿ 30 ವರ್ಷಗಳ ಹಿಂದೆ 900ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ನಂತರದ ವರ್ಷಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವದಿಂದ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರೌಢಶಾಲೆ ಮತ್ತೆ ವಿದ್ಯಾರ್ಥಿಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. 

2015-16ನೇ ಸಾಲಿನಲ್ಲಿ 98 ವಿದ್ಯಾರ್ಥಿಗಳು ಇದ್ದರು. ಪ್ರಸಕ್ತ ಸಾಲಿನಲ್ಲಿ 142 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ ಏಳು ವರ್ಷಗಳಿಂದಲೂ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ 100ರಷ್ಟು ಸಾಧನೆಯನ್ನು ಈ ಶಾಲೆ ತೋರುತ್ತಿದೆ. 

ಶಾಲೆ ಆವರಣದಲ್ಲಿ ನಾನಾ ಜಾತಿಯ ಗಿಡ ಮರಗಳಿವೆ. ಈ ಆವರಣದಲ್ಲಿ ಅಂಗನವಾಡಿಯಿಂದ ಪದವಿ ಪೂರ್ವ ಕಾಲೇಜಿನವರೆಗೂ ಶಿಕ್ಷಣ ದೊರೆಯುತ್ತದೆ. ಕಟ್ಟಡಗಳ ಮೇಲೆ ದೇಸಿ ‌‌ಕಲೆಯ ಚಿತ್ತಾರಗಳು ಗಮನ ಸೆಳೆಯುತ್ತವೆ. 

ಪ್ರೌಢಶಾಲೆಯಲ್ಲಿ ಸಮಗ್ರ ಶಿಕ್ಷಣ ಪದ್ಧತಿ ಅಳವಡಿಸಲಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಜತೆಗೆ ಅವರ ಆಸಕ್ತಿದಾಯಕ ವಿಷಯಗಳ ಪೋಷಣೆ ಮತ್ತು ಚಟುವಟಿಕೆಗಳಿಗೆ ಒತ್ತು ನೀಡಲಾಗಿದೆ. ಮಕ್ಕಳು ಪರಿಸರವನ್ನು ಆಹ್ಲಾದಿಸಲಿ ಎನ್ನುವ ಉದ್ದೇಶದಿಂದ ಮರಗಳ ಕೆಳಗೆ ಪಾಠಗಳನ್ನು ಮಾಡಲಾಗುತ್ತದೆ.  ಧ್ಯಾನವನ್ನೂ ಹೇಳಿಕೊಡಲಾಗುತ್ತದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗಿದೆ.

ಹೀಗೆ ಚೇಳೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಈ ಶಾಲೆ ಉತ್ತಮವಾದುದು ಎನಿಸಿದೆ. ಮಕ್ಕಳನ್ನು ಬರಸೆಳೆಯುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು