ಚಿಕ್ಕಬಳ್ಳಾಪುರ: ‘ಬಹಳ ವರ್ಷದಿಂದ ತಾಂಡಾಗಳು, ಗೊಲ್ಲರಹಟ್ಟಿಗಳು ಗ್ರಾಮಗಳಾಗಿ ಇರಲಿಲ್ಲ. ನಮ್ಮ ಸರ್ಕಾರ ಕಂದಾಯ ಗ್ರಾಮ ಮಾಡಿ ಹಕ್ಕುಪತ್ರ ಕೊಡುವ ಯೋಜನೆ ಜಾರಿಗೊಳಿಸಿದೆ. ಎಷ್ಟೊ ಕಡೆಗಳಲ್ಲಿ ಬಡವರ ಆಸ್ತಿಗಳು, ಮನೆಗಳು ಅವರ ಹೆಸರಿನಲ್ಲಿ ಇರಲಿಲ್ಲ. ಅವರಿಗೆ ಅನುಕೂಲ ಮಾಡಿಕೊಟ್ಟೆವು. 70 ವರ್ಷ ಆಡಳಿತ ನಡೆಸಿದವರು ಏನು ಮಾಡಿದರು. ಕಡುಬು ತಿನ್ನುತ್ತಿದ್ದರಾ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊರವಲಯದ ಸೂಲಾಲಪ್ಪದಿನ್ನೆಯಲ್ಲಿ ಸೋಮವಾರ ನಡೆದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಆಡಳಿತ ನಡೆಸಿದವರಿಗೆ ಬಡವರ ಬಗ್ಗೆ ಕಾಳಜಿ ಇರಲಿಲ್ಲ. ಆದರೆ ಎಲ್ಲವನ್ನೂ ನಾವು ಮಾಡಿದೆವು ಎನ್ನುತ್ತಾರೆ. ಇವರಿಗೆ ನಾಚಿಕೆ ಆಗಬೇಕು. ಮೀಸಲಾತಿಗಾಗಿ ಸಮಿತಿಗಳನ್ನು ಮಾಡಿದ್ದೇ ಇವರ ಸಾಧನೆ. ನಮ್ಮ ಸರ್ಕಾರ ನಿರ್ಣಯ ತೆಗೆದುಕೊಳ್ಳುವ ಧೈರ್ಯ ತೋರಿತು ಎಂದರು.
ಕಟ್ಟ ಕಡೆಯ ಜನರ ಬದುಕು ಹಸನುಗೊಳಿಸುವ ಸಂಕಲ್ಪ ನಮ್ಮದು. ಬಡವರಿಗೆ ಭರವಸೆಯ ಬೆಳಕಾಗಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷಗಳು ಯಾರಿಗಾಗಿ ಆಡಳಿತ ಮಾಡಿದ್ದಾರೆ? ಯುವಕರು, ದಲಿತರು, ಮಹಿಳೆಯರಿಗೆ ಕಾರ್ಯಕ್ರಮವನ್ನೇ ಮಾಡಲಿಲ್ಲ ಎಂದು ದೂರಿದರು.
ಸ್ವಾರ್ಥಕ್ಕಾಗಿ ಅಧಿಕಾರ ಮಾಡಿದ್ದೀರಿ. ಬಡವರನ್ನು ಮೇಲೆಕ್ಕೆ ಎತ್ತದೆ ಅವರನ್ನು ಮತಹಾಕಿಸಿಕೊಳ್ಳುವುದು ಬಾವಿಗೆ ಇಳಿಸುವುದು ಚುನಾವಣೆ ಸಮಯಲ್ಲಿ ಮತ್ತೆ ಮೇಲೆತ್ತುವುದು ಬಾವಿಗೆ ಬಿಡುವುದು ಮಾಡಿದ್ದೀರಿ ಎಂದು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದರು.
ನೀವು ಕೊಡುವ ಮತ ನಿಮ್ಮ ಭವಿಷ್ಯ ಬರೆಯಲು ಸಾಧ್ಯವಾಗುತ್ತದೆ. ಸರ್ಕಾರ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ. ಅವುಗಳು ಮುಂದುವರಿಯಬೇಕಾದರೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ನಿಮ್ಮ ಅಭಿವೃದ್ಧಿ ಮತ್ತು ನಾಡಿನ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ಎಂದು ಹೇಳಿದರು.
ವಿದ್ಯಾನಿಧಿ ಯೋಜನೆಯನ್ನು ರೈತರ ಮಕ್ಕಳ ಜೊತೆಗೆ ರೈತ ಕೂಲಿ ಕಾರ್ಮಿಕರು, ಮೀನುಗಾರರು, ಚಾಲಕರ ಮಕ್ಕಳಿಗೂ ವಿಸ್ತರಿಸಿ, ದುಡಿಯುವ ವರ್ಗಕ್ಕೆ ನೆರವು ನೀಡಲಾಗಿದೆ ಎಂದರು.
ರಾಜ್ಯದಲ್ಲಿ 54 ಲಕ್ಷ ರೈತರಿಗೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 3.39 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ತಲುಪಿದೆ. ರಾಜ್ಯದಲ್ಲಿ 11 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೊಳಿಸಲಾಗಿದೆ ಎಂದರು.
ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ‘ರಾಜ್ಯದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವ ದಿನ ಇದು. ಬಡವರ ಪರ ಎಂದು ಹೇಳಿದ ಸರ್ಕಾರಗಳು ತಾಂಡಾ, ಮಜರೆ, ಕ್ಯಾಂಪ್, ಕಾಲೊನಿಗಳ ಜನರಿಗೆ ಹಕ್ಕುಪತ್ರಗಳನ್ನು ನೀಡಲಿಲ್ಲ. ನಮ್ಮ ಸರ್ಕಾರ ಈ ಜನರ ಪರವಾಗಿದೆ. ರಾಜ್ಯದಲ್ಲಿ 68,409 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ’ ಎಂದರು.
ನಮ್ಮ ಸರ್ಕಾರ ಬಡವರಿಗೆ ನ್ಯಾಯ ಕೊಡುವ ಕೆಲಸ ಮಾಡಿದೆ. ಸಚಿವ ಡಾ.ಕೆ.ಸುಧಾಕರ್ ಅವರು ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಶಿಕ್ಷಣ ಕಾಲೇಜನ್ನು ಚಿಕ್ಕಬಳ್ಳಾಪುರ ತಂದರು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್, ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಶಾಸಕ ಎಂ.ಕೃಷ್ಣಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ. ನವೀನ್ ಕಿರಣ್, ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ಕೃಷ್ಣಮೂರ್ತಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ರಮೇಶ್, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಎಂ. ತಿರ್ಲಾಪೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಇದ್ದರು.
ಜಿಲ್ಲೆಗೆ ಐತಿಹಾಸಿಕ ದಿನ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದೀರಿ. ಈಗ ಚಿಕ್ಕಬಳ್ಳಾಪುರ ಜಿಲ್ಲೆಗೆ ವೈದ್ಯಕೀಯ ಶಿಕ್ಷಣ ಕಾಲೇಜಿಗೆ ಚಾಲನೆ ನೀಡಲಾಗಿದ್ದು ಇದು ಜಿಲ್ಲೆಯ ಪಾಲಿಗೆ ಐತಿಹಾಸಿಕ ದಿನ ಎಂದು ಸಚಿವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿಕ್ಕಬಳ್ಳಾಪುರ ಅಭಿವೃದ್ಧಿಗಾಗಿ ಸುಧಾಕರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮ ಜತೆ ಬಂದರು.ನಮ್ಮ ಜಿಲ್ಲೆಗೆ ವೈದ್ಯಕೀಯ ಕಾಲೇಜು ಆಗಬೇಕು ಎಂದು ಕೆಲಸ ಮಾಡಿದ್ದಾರೆ. ಕಟ್ಟಕಡೆಯ ವ್ಯಕ್ತಿಗೆ ಆರೋಗ್ಯ ಸೇವೆ ಕೊಡಲು ಕಾಲೇಜು ಸಿದ್ಧವಾಗಿದೆ. ಇದಕ್ಜೆ ಕಾರಣ ಸಚಿವ ಡಾ.ಕೆ.ಸುಧಾಕರ್. ನನ್ನ ಜಿಲ್ಲೆಗೂ ವೈದ್ಯಕೀಯ ಶಿಕ್ಷಣ ಕಾಲೇಜನ್ನು ಕೊಟ್ಟಿದ್ದು ನನ್ನ ಜಿಲ್ಲೆಯ ಜನರ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು.
ಅಪಾರ ಸಂಖ್ಯೆಯ ಜನಸ್ತೋಮ: ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನ, ವಿವಿಧ ಆರೋಗ್ಯ ಯೋಜನೆಗಳಿಗೆ ಚಾಲನೆ ಹಾಗೂ ನಂದಿ ವೈದ್ಯಕೀಯ ಶಿಕ್ಷಣ ಕಾಲೇಜು ಉದ್ಘಾಟನಾ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಜನರು ಪಾಲ್ಗೊಂಡಿದ್ದರು. ಎರಡೂ ಜಿಲ್ಲೆಗಳ ಫಲಾನುಭವಿಗಳು ಇದ್ದರು. ನಗರರ ಸೂಲಾಲಪ್ಪನದಿಣ್ಣೆಯಿಂದ ಬಿಬಿ ರಸ್ತೆಯವರೆಗೂ ಸಂಚಾರ ದಟ್ಟಣೆ ಇತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉದ್ಘಾಟನೆಗೆ ಬಾರದ ಕೇಂದ್ರ ಸಚಿವ!: ಚಿಕ್ಕಬಳ್ಳಾಪುರ: ನಂದಿ ವೈದ್ಯಕೀಯ ಶಿಕ್ಷಣ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಎಲ್ ಮಾಂಡವೀಯ ಪಾಲ್ಗೊಳ್ಳದಿರುವುದು ಅಚ್ಚರಿಕೆ ಕಾರಣವಾಗಿದೆ. ಕೇಂದ್ರ ಸಚಿವರು ಕಾಲೇಜು ಉದ್ಘಾಟಿಸುವರು ಎಂದು ಆಹ್ವಾನ ಪತ್ರಿಕೆಯಲ್ಲಿ ಹೆಸರು ಇತ್ತು. ಕೊನೆಯ ಕ್ಷಣದವರೆಗೂ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗುವರು ಎನ್ನಲಾಗುತ್ತಿತ್ತು. ಆದರೆ ಸಚಿವರು ಗೈರಾದರು.
ಈ ಹಿಂದಿನಿಂದಲೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕಾಲೇಜನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟಿಸಲಾಗುವುದು ಎಂದು ಪದೇ ಪದೇ ಪ್ರಕಟಿಸುತ್ತಿದ್ದರು. ಆದರೆ ಸಚಿವರ ಆ ಕನಸು ನನಸಾಗಲೇ ಇಲ್ಲ.
ಸಾಂಕೇತಿಕವಾಗಿ ವಿತರಣೆಯಾಗದ ಹಕ್ಕುಪತ್ರ: ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮುಖ್ಯಮಂತ್ರಿ ಸಾಂಕೇತಿಕವಾಗಿ ಹಕ್ಕುಪತ್ರಗಳನ್ನು ವಿತರಿಸಬೇಕಾಗಿತ್ತು. ಆದರೆ ಈ ಸಿ.ಎಂ ಹಕ್ಕುಪತ್ರಗಳನ್ನು ವಿತರಿಸಲಿಲ್ಲ. ತಮ್ಮ ಭಾಣದ ಮುಗಿಸಿ ಕುಳಿತ ನಂತರ ‘ಎಲ್ಲ ಜಿಲ್ಲಾಧಿಕಾರಿಗಳು ಇಂದು ಸಂಜೆಯ ಒಳಗೆ ಹಕ್ಕುಪತ್ರಗಳನ್ನು ವಿತರಿಸಬೇಕು’ ಎಂದು ಸೂಚಿಸಿದರು. ನಂತರ ವೇದಿಕೆಯಿಂದ ನಿರ್ಗಮಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.