ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನಡಾಕ್ಕೆ ಚಿಕ್ಕಬಳ್ಳಾಪುರದ ದತ್ತುಮಕ್ಕಳು

Last Updated 26 ಮಾರ್ಚ್ 2021, 1:55 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೆನಡಾದ ಆ ದಂಪತಿಗೆ ಮಕ್ಕಳಿಲ್ಲ. ಚಿಕ್ಕಬಳ್ಳಾಪುರದ ವಿಶೇಷ ದತ್ತು ಕೇಂದ್ರದಲ್ಲಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಪೋಷಕರಿಲ್ಲ. ಈಗ ಈ ಇಬ್ಬರು ಹೆಣ್ಣು ಮಕ್ಕಳು, ಕೆನಡಾ ದಂಪತಿಯ ಮಡಿಲು ಸೇರಲು ಸಜ್ಜಾಗಿದ್ದಾರೆ. ಹೀಗೆ ಕೆನಡಾ ಮತ್ತು ಚಿಕ್ಕಬಳ್ಳಾಪುರದ ನಡುವೆ ‘ಕರುಳಿನ ಕೂಗು’ ಏರ್ಪಟ್ಟಿದೆ.

ಗೌರಿಬಿದನೂರು ತಾಲ್ಲೂಕಿನ ಹಳ್ಳಿಯೊಂದರ ಮಹಿಳೆ ಒಂದೂವರೆ ವರ್ಷದ ಹಿಂದೆ ಮೂರು ವರ್ಷ ಮತ್ತು ಒಂದು ವರ್ಷದ ಹೆಣ್ಣು ಮಗುವನ್ನು ಬಿಟ್ಟು ನಿಧನರಾದರು. ಈ ಮಕ್ಕಳ ತಂದೆ ಮದ್ಯವ್ಯಸನಿ. ಗ್ರಾಮಸ್ಥರೇ ಸ್ವಲ್ಪದಿನ ಮಕ್ಕಳಿಗೆ ಊಟ, ಬಟ್ಟೆ ನೀಡಿ ಪೋಷಿಸಿದ್ದರು. ನಂತರ ಮಕ್ಕಳ ತಂದೆಯ ಮನವೊಲಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಾನೂನುಬದ್ಧವಾಗಿ ವಿಶೇಷ ದತ್ತು ಕೇಂದ್ರಕ್ಕೆ ದಾಖಲಿಸಿಕೊಂಡರು.

ಇತ್ತ ಕೆನಡಾದಲ್ಲಿ ನೆಲೆಸಿರುವ ಪಂಜಾಬ್‌ನ ಅಶಿಷ್ ಕೋಸ್ಲ ದಂಪತಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರದ (ಸಿಎಆರ್‌ಎ) ಜಾಲತಾಣದಲ್ಲಿ ಮಗುವಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದರು. ಕಾರ್ನರ್ ಸ್ಟೋನ್ ದತ್ತು ಸ್ವೀಕಾರ ಸಂಸ್ಥೆ ಸಹ ದಂಪತಿಯ ನೆರವಿಗೆ ಬಂದಿತು. ಅಶಿಷ್ ಕೋಸ್ಲ ಕೆನಡಾದಲ್ಲಿ ಎಸ್‌ಬಿಐ ಉದ್ಯೋಗಿ.

ಆನ್‌ಲೈನ್‌ ನೋಂದಣಿ ವೇಳೆ ತಾವು ಯಾವ ರೀತಿಯ ಮಗು ಬಯಸಿರುವುದಾಗಿ ದಂಪತಿ ದಾಖಲಿಸಿದ್ದಾರೆ. ಆ ಮಾಹಿತಿಗೂ ಮತ್ತು ಚಿಕ್ಕಬಳ್ಳಾಪುರದವಿಶೇಷ ದತ್ತು ಕೇಂದ್ರದಲ್ಲಿನ ಮಕ್ಕಳಿಗೂ ಹೊಂದಾಣಿಕೆ ಆಗಿದೆ. ದತ್ತು ಕೇಂದ್ರದಲ್ಲಿದ್ದ ಅಕ್ಕ ತಂಗಿಯನ್ನು ದತ್ತು ಪಡೆಯಲು ದಂಪತಿ ಮುಂದಾಗಿದ್ದಾರೆ.

‘ಈಗ ಒಂದು ಮಗುವಿಗೆ ಐದು ಮತ್ತು ಮತ್ತೊಂದು ಮಗುವಿಗೆ ಎರಡು ವರ್ಷವಾಗಿದೆ. ಕೆನಡಾದ ದಂಪತಿ ಆನ್‌ಲೈನ್‌ನಲ್ಲಿಯೇ ಮಕ್ಕಳನ್ನು ನೋಡಿ ದತ್ತು ಪಡೆಯಲು ಒಪ್ಪಿದರು’ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎನ್.ನಾರಾಯಣಸ್ವಾಮಿ ತಿಳಿಸಿದರು.

ದತ್ತು ಪಡೆದ ನಂತರ ಎರಡು ವರ್ಷ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮಕ್ಕಳ ಮೇಲೆ ನಿಗಾ ಇರಿಸಲಾಗುತ್ತದೆ. ವಿದೇಶಕ್ಕೆ ಜಿಲ್ಲೆಯಿಂದ ಮಕ್ಕಳನ್ನು ದತ್ತು ನೀಡುತ್ತಿರುವ ಮೊದಲ ಪ್ರಕ್ರಿಯೆ ಇದು ಎಂದು ಮಾಹಿತಿ ನೀಡಿದರು.

ಪಾಸ್‌ಪೋರ್ಟ್ ಪ್ರಕ್ರಿಯೆ ಚಾಲ್ತಿ
‘ಎರಡೂ ದೇಶಗಳು ದತ್ತುಪಕ್ರಿಯೆಯಲ್ಲಿ ನಿರಾಕ್ಷೇಪಣಾ ಪತ್ರ ನೀಡಬೇಕು. ಈ ಎಲ್ಲ ದಾಖಲೆಗಳ ಪ್ರಕ್ರಿಯೆಗಳು ಪೂರ್ಣವಾಗಿವೆ. ಮಕ್ಕಳಿಗೆ ಪಾಸ್‌ಪೋರ್ಟ್ ಮತ್ತು ವೀಸಾ ಸಿದ್ಧಗೊಳಿಸಲಾಗುತ್ತಿದೆ. ನಂತರ ಕೆನಡಾದಿಂದ ದಂಪತಿಯೇ ಬಂದು ಮಕ್ಕಳನ್ನು ಕರೆದುಕೊಂಡು ಹೋಗುವರು’ ಎಂದು ನಾರಾಯಣಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT