ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣಾ ಫಲಿತಾಂಶ: ಜಿದ್ದಿನ ಕಣವಾಗುವ ಚಿಕ್ಕಬಳ್ಳಾಪುರ

ಜಿಲ್ಲೆಯ ರಾಜಕೀಯದಲ್ಲಿ ತರಲಿದೆಯೇ ಬದಲಾವಣೆ
Published 7 ಜೂನ್ 2024, 5:56 IST
Last Updated 7 ಜೂನ್ 2024, 5:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಡಾ.ಕೆ.ಸುಧಾಕರ್ ಗೆದ್ದಾಗಿದೆ. ಇನ್ನು ಮುಂದೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಪಲ್ಲಟ ಅಥವಾ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತದೆಯೇ ಎನ್ನುವ ಪ್ರಶ್ನೆಯನ್ನು ರಾಜಕಾರಣದ ಆಳ ಅಗಲ ಬಲ್ಲವರನ್ನು ಕೇಳಿದರೆ ಖಚಿತವಾಗಿ ‘ಹೌದು’ ಎಂದು ಉತ್ತರಿಸುವರು.

ಕಳೆದ ವಿಧಾನಸಭೆ ಚುನಾವಣೆಗೂ ಮುನ್ನ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜವಾಬ್ದಾರಿಯನ್ನು ಡಾ.ಕೆ.ಸುಧಾಕರ್ ಅವರಿಗೆ ನೀಡಲಾಗುತ್ತದೆ ಎನ್ನುವ ಮಾತುಗಳು ಜೋರಾಗಿದ್ದವು. ಸಚಿವರಾಗಿದ್ದ ವೇಳೆ ಈ ಮೂರು ಜಿಲ್ಲೆಗಳ ಬಿಜೆಪಿ ರಾಜಕಾರಣದಲ್ಲಿ ಸುಧಾಕರ್ ಹೆಸರು ಪ್ರಮುಖವಾಗಿತ್ತು. 

ಆದರೆ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಪೈಪೋಟಿ ಎದುರಾದ ಕಾರಣ ಸುಧಾಕರ್, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಬಿಟ್ಟು ಪ್ರಚಾರಕ್ಕೆ ಹೊರ ಹೋಗಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಸಹ ಅನುಭವಿಸಿದರು. ಮೂರು ಜಿಲ್ಲೆಗಳಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಮತಗಳು ದೊರೆಯಲಿಲ್ಲ. 

ಸುಧಾಕರ್ ಸೋಲಿನ ತರುವಾಯ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗುವರು ಎನ್ನುವ ಮಾತುಗಳು ಹರಿದಾಡಿದವು. ಸುಧಾಕರ್ ಟಿಕೆಟ್ ತಂದರು. ಗೆಲುವು ಸಾಧಿಸಿದರು. ಈಗ ಮತ್ತೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಮಂಚೂಣಿಯಲ್ಲಿ ನಿಲ್ಲಬೇಕಾಗಿದೆ.

ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ‍ಪಕ್ಷವನ್ನು ಮತ್ತೆ ಗಟ್ಟಿಗೊಳಿಸಬೇಕಾದ ಮಹತ್ವದ ಜವಾಬ್ದಾರಿ ಹೆಗಲೇರಿದೆ. ಸುಧಾಕರ್ ಗೆಲುವು ಜಿಲ್ಲೆಯ ರಾಜಕಾರಣವನ್ನು ಮತ್ತಷ್ಟು ಗರಿಗೆದರಿಸಿದೆ. 

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್, ಗೌರಿಬಿದನೂರು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಲೋಕಸಭಾ ಚುನಾವಣೆ ವೇಳೆ ಸುಧಾಕರ್ ವಿರುದ್ಧವಾಗಿ ವಾಗ್ದಾಳಿ ನಡೆಸಿದ್ದರು. 

ಡಾ.ಎಂ.ಸಿ.ಸುಧಾಕರ್ ಮತ್ತು ಡಾ.ಕೆ.ಸುಧಾಕರ್ ಅವರ ನಡುವಿನ ರಾಜಕೀಯ ಜಿದ್ದು ಈ ಹಿಂದಿನಿಂದಲೂ ಇದೆ. ಡಾ.ಕೆ.ಸುಧಾಕರ್ ಗೆಲುವಿನ ನಂತರ ಈ ಜಿದ್ದು ಜಿಲ್ಲೆಯಲ್ಲಿ ಹೆಚ್ಚುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. 

ವಿಧಾನಸಭಾ ಚುನಾವಣೆಯಲ್ಲಿ 10 ಸಾವಿರ ಮತಗಳ ಅಂತರದಿಂದ ಸೋತ ಸುಧಾಕರ್ ಅವರಿಗೆ ಈಗ ಚಿಕ್ಕಬಳ್ಳಾಪುರದಲ್ಲಿಯೇ 20 ಸಾವಿರ ಮತಗಳ ಮುನ್ನಡೆ ದೊರೆತಿದೆ. ಈ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮತ್ತು ಸಂಸದರ ನಡುವೆ ರಾಜಕೀಯ ಜಟಾಪಟಿ ಜೋರಾಗುತ್ತದೆಯೇ ಇಲ್ಲವೆ ಎನ್ನುವ ಕುತೂಹಲವಿದೆ. 

‘ನಾನು ಮಹಾಜ್ಞಾನಿಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಕ್ರಿಯಿಸುವರು’ ಎಂದು ಪ್ರದೀಪ್‌ ಈಶ್ವರ್ ಬಗ್ಗೆ ಇತ್ತೀಚೆಗೆ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಾನು ಉತ್ತರ ಕೊಡುವುದಿಲ್ಲ. ನಮ್ಮ ಕಾರ್ಯಕರ್ತರು, ಮುಖಂಡರು ಉತ್ತರ ನೀಡುವರು’ ಎನ್ನುವ ಸಂದೇಶ ನೀಡಿದ್ದಾರೆ. ಶಿಷ್ಟಾಚಾರ ಪಾಲನೆ, ಅಭಿವೃದ್ಧಿ ಹೀಗೆ ನಾನಾ ವಿಚಾರಗಳಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಶಾಸಕರು, ಸಚಿವರು ಮತ್ತು ಸಂಸದರ ಬೆಂಬಲಿಗರ ನಡುವೆ ಜಟಾಪಟಿ ನಡೆಯುವುದು ಖಚಿತ ಎನ್ನುವುದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಈಗಲೇ ಎದ್ದು ಕಾಣುತ್ತಿದೆ.

ರಾಜಕೀಯ ಕಡುವಿರೋಧಿಗಳು ಈಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವರೇ, ಕಾಣಿಸಿಕೊಂಡರೆ ಅವರ ಮಾತುಗಳು ಹೇಗಿರುತ್ತವೆ ಎನ್ನುವ ಕುತೂಹಲ ರಾಜಕೀಯ ವಲಯದಲ್ಲಿ ಇದೆ.

ಟೀಕೆಗಿಳಿಯದ ಕಾಂಗ್ರೆಸ್ ಶಾಸಕರು

ಲೋಕಸಭಾ ಚುನಾವಣೆ ಸಮಯದಲ್ಲಿ ಬಾಗೇಪಲ್ಲಿ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ದೇವನಹಳ್ಳಿ ಶಾಸಕರೂ ಆದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಡಾ.ಕೆ.ಸುಧಾಕರ್ ವಿರುದ್ಧ ವ್ಯಕ್ತಿಗತವಾಗಿ ವಾಗ್ದಾಳಿ ಅಥವಾ ಟೀಕೆ ಮಾಡಲಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ರಕ್ಷಾ ರಾಮಯ್ಯ ಅವರಿಗೆ ಮತ ನೀಡಿ. ಗ್ಯಾರಂಟಿಗಳ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿಸಿ ಎಂದು ಕೋರಿದರು. ಬಿಜೆಪಿ ವಿರುದ್ಧ ಸೈದ್ಧಾಂತಿಕ ವಿಚಾರವಾಗಿ ವಾಗ್ದಾಳಿ ನಡೆಸಿದರೆ ಹೊರತು ಸುಧಾಕರ್ ವಿರುದ್ಧ ಟೀಕೆಯ ಮಳೆಗರೆಯಲಿಲ್ಲ.  ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮತ್ತು ಗೌರಿಬಿದನೂರಿನ ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಮಾತ್ರ ಸುಧಾಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. 

ಬಿಜೆಪಿಗೆ ಜೊತೆಗಾರನ ಬಲ

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು ಡಾ.ಕೆ.ಸುಧಾಕರ್ ಗೆಲುವಿನಲ್ಲಿ ಪ್ರಮುಖವಾಗಿದೆ. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಈ ಬಂಧ ಗಟ್ಟಿಯಾಗಿಯೇ ಇದೆ. ಬಿಜೆಪಿಯು ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲು ಜೆಡಿಎಸ್ ಸಹ ಸಾಥ್ ನೀಡುತ್ತದೆ.  ‘ಜೆಡಿಎಸ್ ಕಾರ್ಯಕರ್ತರ ಹಿತಕಾಯುವೆ’ ಎಂದು ಚುನಾವಣೆ ಸಮಯದಲ್ಲಿ ನಡೆದ ಜೆಡಿಎಸ್ ಬಿಜೆಪಿ ಸಮನ್ವಯ ಸಭೆಯಲ್ಲಿ ಡಾ.ಕೆ.ಸುಧಾಕರ್ ಭರವಸೆ ಸಹ ನೀಡಿದ್ದಾರೆ. ಈ ಎಲ್ಲ ಕಾರಣದಿಂದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಜಿಲ್ಲೆಯ ರಾಜಕಾರಣದಲ್ಲಿ ಜಿದ್ದು ಮತ್ತು ಬದಲಾವಣೆ ಪರ್ವ ಜೋರಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT