ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು | ಲಾಭ ತರುವ ಸಮಗ್ರ ಕೃಷಿ

Published 21 ಏಪ್ರಿಲ್ 2024, 7:23 IST
Last Updated 21 ಏಪ್ರಿಲ್ 2024, 7:23 IST
ಅಕ್ಷರ ಗಾತ್ರ

ಗೌರಿಬಿದನೂರು: ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ರೈತರಿಗೆ ನಷ್ಟ ಆಗುವುದಿಲ್ಲ– ಇದು ರೈತ ನರಸಿಂಹಯ್ಯ ಅವರ ಅನುಭವದ ಮಾತು.

ತಾಲ್ಲೂಕಿನ ಕಸಬಾ ಹೋಬಳಿಯ ಇಡಗೂರು ಗ್ರಾಮದ ರೈತ ನರಸಿಂಹಯ್ಯ ಅವರು ತಮಗಿರುವ 3 ಎಕರೆ ಜಮೀನಿನಲ್ಲಿ ಹಂತ ಹಂತವಾಗಿ ನಾಟಿ ಕೋಳಿಗಳನ್ನು ಮತ್ತು ಕುರಿಗಳನ್ನು ಸಾಕಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಈ ಕುರಿ ಮತ್ತು ಕೋಳಿ ಸಾಕಾಣಿಕೆಯ ಮೂಲಕ ಗಮನ ಸೆಳೆದಿದ್ದಾರೆ. 

ಇದರಿಂದ ಅವರಿಗೆ ನಿರಂತರವಾಗಿ ಆದಾಯ ಬರುತ್ತಿದೆ. ಜೊತೆಗೆ ಸೀಮೆ ಹಸುಗಳ ಹಾಲಿನಿಂದ ಸಂಸಾರ ನಿರ್ವಹಣೆ ಸುಲಭವಾಗುತ್ತಿದೆ. ನರಸಿಂಹಯ್ಯ ಅವರು ಇವುಗಳಿಗೆ ಅಗತ್ಯವಾದ ಹಸಿ ಮೇವು, ನೇಪಿಯರ್, ಸೀಮೆ ಹುಲ್ಲು ಅಗಸೆ, ಹಿಪ್ಪು ನೇರಳೆ ಸೊಪ್ಪುಗಳನ್ನು ತಮ್ಮ ಜಮೀನಿನಲ್ಲಿಯೇ ಬೆಳೆಯುವರು. ಮೇವಿಗೆ ಆಗುವ ಖರ್ಚು ತಗ್ಗಿಸಿಕೊಂಡಿದ್ದಾರೆ.

ಹೈನುಗಾರಿಕೆ ಯೊಂದಿಗೆ ಏಲಕ್ಕಿ ಬಾಳೆ, ಅಡಿಕೆ, ತೆಂಗು, ಪರಂಗಿ ಹಣ್ಣು , ಬಟರ್ ಫ್ರೂಟ್, ಸಪೋಟ, ಹಲಸು, ವಾಟರ್ ಆಪಲ್ ಮುಂತಾದ ಹಲವು ಬಗೆಯ ಗಿಡಗಳನ್ನು ಬೆಳೆದಿದ್ದಾರೆ. ಬದುಗಳಲ್ಲಿ ಹೆಬ್ಬೆವಿನ ಗಿಡಗಳನ್ನು ಬೆಳೆಸಿ ಜೈವಿಕ ಬೇಲಿ ನಿರ್ಮಿಸಿದ್ದಾರೆ.

ಹೀಗೆ ಕೃಷಿಯ ಜೊತೆಗೆ ಕುರಿ ಮತ್ತು ಕೋಳಿ ಸಾಕಾಣಿಕೆ ಅವರನ್ನು ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇಟ್ಟಿದೆ. 

ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆಯುವುದರಿಂದ, ಪ್ರತಿ ಬಾರಿ ‌ಯಾವುದಾದರೊಂದು ಬೆಳೆಯಿಂದ ಆದಾಯ ಬರುತ್ತಲೇ ಇರುತ್ತದೆ. ಬೆಳೆದ ಬೆಳೆಯನ್ನೇ ಮತ್ತೆ ಬೆಳೆದು ನಷ್ಟಕ್ಕೆ ಒಳಗಾಗುವ ಸ್ಥಿತಿ ರೈತರಿಗೆ ಬರುವುದಿಲ್ಲ ಎನ್ನುತ್ತಾರೆ ನರಸಿಂಹಯ್ಯ. 

ವ್ಯವಸಾಯದಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಇತರರಿಗೆ ಮಾದರಿಯಾಗಿದ್ದಾರೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಕೃಷಿಯಲ್ಲಿಯೇ ಆನಂದಮಯ ಜೀವನ ಸಾಗಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT