ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಶಿಶುವಿಹಾರ ಈಗ ಪಡಿತರ ವಿತರಣೆಯ ಕೇಂದ್ರ!

ನಗರಸಭೆಯ ಕಾರ್ಯವೈಖರಿಗೆ ಪ್ರಜ್ಞಾವಂತರ ಅಸಮಾಧಾನ
Last Updated 21 ಫೆಬ್ರುವರಿ 2022, 20:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಸಿಎಸ್‌ಐ ಆಸ್ಪತ್ರೆ ಮುಂಭಾಗದ ಶಿಶುವಿಹಾರ ಈಗ ಪಡಿತರ ವಿತರಣೆಯ ಕೇಂದ್ರವಾಗಿದೆ (ನ್ಯಾಯಬೆಲೆ ಅಂಗಡಿ)! ಅರೆ, ಇದೇನು ನಗರಸಭೆಗೆ ಸೇರಿದ ಸ್ವತ್ತು ಹೇಗೆ ಪಡಿತರ ಕೇಂದ್ರವಾಯಿತು ಎಂದರೆ ಅಧಿಕಾರಿಗಳಲ್ಲಿಯೂ ಖಚಿತ ಉತ್ತರವಿಲ್ಲ.

ಈ ಶಿಶುವಿಹಾರ ಕೇಂದ್ರ ನಗರಸಭೆಗೆ ಸೇರಿದೆ. ನಗರದ ಹೃದಯ ಭಾಗ ಎನ್ನುವಂತಹ ಕಡೆ ಇದೆ. ಸಮೀಪದಲ್ಲಿಯೇ ಪಂಚಗಿರಿ ಶಾಲೆ ಮತ್ತು ಸರ್ಕಾರಿ ಶಾಲೆ ಇದೆ. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಶಸ್ತ ಸ್ಥಳ ಎನ್ನುವಂತಿದೆ. ಶಿಶುವಿಹಾರದ ಮುಂಭಾಗದಲ್ಲಿ ಮಕ್ಕಳ ಆಟೋಟಗಳಿಗೆ ಸೂಕ್ತ ಎನಿಸುವಷ್ಟು ಸ್ಥಳಾವಕಾಶವಿದೆ.

ಈ ಶಿಶುವಿಹಾರ ದಶಕಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ನಿವೃತ್ತರಾದ ನಂತರ ಶಿಶುವಿಹಾರ ಸಹ ಬಂದ್ ಆಯಿತು ಎನ್ನುತ್ತವೆ ಮೂಲಗಳು. ಶಿಶುವಿಹಾರ ಬಾಗಿಲು ಮುಚ್ಚಿದ ನಂತರ ಇಲ್ಲಿ ಮಕ್ಕಳ ಕಲರವವೂ ನಿಂತಿತು. ಹೀಗೆ ಒಂದು ಉತ್ತಮ ಶೈಕ್ಷಣಿಕ ವಾತಾವರಣ ಬಾಗಿಲು ಮುಚ್ಚಿದ ನಂತರ ಆ ಸ್ಥಳ ಪಡಿತರ ವಿತರಣೆಯ ಕೇಂದ್ರವಾಗಿ ಬದಲಾಗಿದೆ.

ಪಡಿತರ ವಿತರಣೆ ಕೇಂದ್ರಕ್ಕೆ ಇಲ್ಲಿ ಅವಕಾಶ ಕೊಟ್ಟವರು ಯಾರು? ನಗರಸಭೆಯು ಬಾಡಿಗೆಗೆ ನೀಡಿದೆಯೇ? ಇತ್ಯಾದಿ ಪ್ರಶ್ನೆಗಳಿಗೆ ನಗರಸಭೆ ಅಧಿಕಾರಿಗಳ ಬಳಿಯೂ ಸ್ಪಷ್ಟವಾದ ಉತ್ತರವಿಲ್ಲ. ಹೀಗೆ ಖಾಸಗಿಯವರಿಗೆ ಶಿಶುವಿಹಾರವನ್ನು ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ನಗರದ ಪ್ರಜ್ಞಾವಂತ ವಲಯದಲ್ಲಿ ಮೂಡಿದೆ.

ಶಿಶುವಿಹಾರದ ಕಟ್ಟಡ ಮೇಲ್ನೋಟಕ್ಕೆ ನೋಡಿದರೆ ಹಳೇ‌ ಕಟ್ಟಡ ಎನಿಸುತ್ತದೆ. ನಗರದ ಪಾರಂಪರಿಕ ಕಟ್ಟಡಗಳಲ್ಲಿ ಒಂದು ಎನ್ನುವಂತೆ ಭಾಸವಾಗುತ್ತದೆ.

‘ಇಲ್ಲಿ ಉತ್ತಮವಾದ ಸ್ಥಳಾವಕಾಶವಿದೆ. ಮಕ್ಕಳ ಆಟಿಕೆಗಳನ್ನು ಇಡಲು ಸ್ಥಳವಿದೆ. ಜಿಲ್ಲೆಯಲ್ಲಿಯೇ ಮಾದರಿಯಾದ ಶಿಶುವಿಹಾರವನ್ನು ರೂಪಿಸಬಹುದಿತ್ತು. ಆದರೆ, ಪಡಿತರ ಕೇಂದ್ರಕ್ಕೆ ನೀಡಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಉಪನ್ಯಾಸಕ ಚಂದ್ರಶೇಖರ್ ಪ್ರಶ್ನಿಸುತ್ತಾರೆ.

‘ಇಲ್ಲಿ ನಾನೂ ಸಹ ಕಲಿತ್ತಿದ್ದೇನೆ. ದರ್ಗಾ ಮೊಹಲ್ಲಾ ಮಕ್ಕಳು ಸೇರಿದಂತೆ ಸುತ್ತಲಿನ ಬಡಾವಣೆಗಳ ಮಕ್ಕಳು ಬರುತ್ತಿದ್ದರು. ವಾತಾವರಣ ಮಕ್ಕಳ ಕಲಿಕೆಗೆ ಪೂರಕವಾಗಿದೆ. ಇಲ್ಲಿ ಕಲಿಕೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಬೇಕು. ರಾಜಕೀಯ ಇಚ್ಛಾಶಕ್ತಿ ಕೊರತೆಯ ಕಾರಣದಿಂದ ಪಡಿತರ ಕೇಂದ್ರಕ್ಕೆ ಸ್ಥಳ ನೀಡಲಾಗಿದೆ’ ಎನ್ನುತ್ತಾರೆ.

****

‘ಸ್ವಚ್ಛ ಕಲಿಕಾ ಕೇಂದ್ರ ರೂಪಿಸುತ್ತೇವೆ’

ಈ ಹಿಂದೆಯೇ ಶಿಶುವಿಹಾರದಲ್ಲಿ ನ್ಯಾಯಬೆಲೆ ಅಂಗಡಿಯನ್ನು ನಡೆಸಲು ಅವಕಾಶ ಕೊಡಲಾಗಿದೆ. ಇಲ್ಲಿ ಶೀಘ್ರದಲ್ಲಿಯೇ ಸ್ವಚ್ಛತೆ ಕುರಿತು ಕಲಿಕಾ ಕೇಂದ್ರವನ್ನು ಮಾಡಬೇಕು ಎನ್ನುವ ಆಲೋಚನೆ ಇದೆ. ಕಲಿಕಾ ಕೇಂದ್ರವನ್ನು ಇಲ್ಲಿ ರೂಪಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಮಹಾಂತೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

***

ಶೈಕ್ಷಣಿಕ ಕೇಂದ್ರವಾಗಿ ಉಳಿಸಿ

ಶಿಶುವಿಹಾರವನ್ನು ಶೈಕ್ಷಣಿಕ ಕೇಂದ್ರವಾಗಿಯೇ ಉಳಿಸಿಕೊಳ್ಳಬೇಕು. ಮೂಲಸೌಕರ್ಯ ಕಲ್ಪಿಸಬೇಕು. ಈ ಕೇಂದ್ರ ನಗರದ ಹೃದಯ ಭಾಗದಲ್ಲಿದೆ. ಎಲ್ಲ ಕಡೆಯ ಮಕ್ಕಳು ಇಲ್ಲಿಗೆ ಬರಲು ಉತ್ತಮವಾದ ಸ್ಥಳವಾಗಿದೆ ಎಂದು ಉಪನ್ಯಾಸಕ ಎನ್. ಚಂದ್ರಶೇಖರ್ ತಿಳಿಸಿದರು.

ಶಿಶುವಿಹಾರ ಉತ್ತಮವಾದ ವಾತಾವರಣದಲ್ಲಿ ಇದೆ. ಸುತ್ತಲೂ ಶೈಕ್ಷಣಿಕ ಕೇಂದ್ರಗಳಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೇ ಮಾದರಿಯಾದ ಶಿಶುವಿಹಾರವನ್ನು ಇಲ್ಲಿ ರೂಪಿಸುವ ಅವಕಾಶಗಳು ಇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT