ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಗಮಲ್ಲ ಗ್ರಾ.ಪಂ.ನಲ್ಲಿ ಶಿಶುಪಾಲನಾ ಕೇಂದ್ರ ಆರಂಭ

Published 28 ನವೆಂಬರ್ 2023, 14:24 IST
Last Updated 28 ನವೆಂಬರ್ 2023, 14:24 IST
ಅಕ್ಷರ ಗಾತ್ರ

ಚಿಂತಾಮಣಿ: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುವ ಮಹಿಳೆಯರ ಅನುಕೂಲಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಶಿಶು ಪಾಲನಾ ಕೇಂದ್ರ (ಕೂಸಿನ ಮನೆ) ಪ್ರಾರಂಭ ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ತಿಳಿಸಿದರು.

ತಾಲ್ಲೂಕಿನ ಮುರುಗಮಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿ ಚಲಮಕೋಟೆಯಲ್ಲಿ ಮಂಗಳವಾರ ಕೂಸಿನ ಮನೆ ಉದ್ಘಾಟಿಸಿ ಮಾತನಾಡಿದರು.

ನರೇಗಾ ಯೋಜನೆಯಲ್ಲಿ ಉದ್ಯೋಗ ಚೀಟಿ ಹೊಂದಿರುವ ಮಹಿಳೆಯರು ಮೂರು ವರ್ಷದ ಒಳಗಿನ ಮಕ್ಕಳಿಗೆ ಈ ಕೂಸಿನ ಮನೆ ಆಶ್ರಯ ನೀಡಲಿದೆ. ಕೂಲಿ ಕಾರ್ಮಿಕ ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕೆ ಹೋದರೆ ಅವರ ಮಕ್ಕಳ ಪಾಲನೆ, ಪೋಷಣೆ, ಸುರಕ್ಷತೆ, ಪೌಷ್ಟಿಕ ಆಹಾರಕ್ಕೆ ತೊಂದರೆ ಆಗುತ್ತದೆ. ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಕೆಲಸಕ್ಕೆ ಹೋಗದಿದ್ದರೆ ಕುಟುಂಬದ ನಿರ್ವಹಣೆ ಕಷ್ಟ, ಸದಾ ಮಕ್ಕಳ ಕುರಿತು ಚಿಂತನೆ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಸಿನ ಮನೆ ಯೋಜನೆಯನ್ನು ಜಾರಿಗೆ ತಂದಿದೆ ಎಂದರು.

ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳಲ್ಲಿ 32ರಲ್ಲಿ ಕೂಸಿನ ಮನೆ ಮಂಜೂರಾಗಿದೆ. ಪ್ರಾರಂಭ ಮಾಡಲು ಸಿದ್ಧತೆ ನಡೆಯುತ್ತಿದೆ. ಪ್ರಥಮವಾಗಿ ಮುರುಗಮಲ್ಲ ಗ್ರಾಮ ಪಂಚಾಯಿತಿಯಲ್ಲಿ ಆರಂಭಿಸಲಾಗುತ್ತಿದೆ. ಕೂಸಿನ ಮನೆಗೆ ಸೌಲಭ್ಯ ಒದಗಿಸಲು ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೂ ₹50ಸಾವಿರ ಬಿಡುಗಡೆ ಮಾಡುವಂತೆ ಜಿಲ್ಲಾ ಉತ್ಸುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಆದೇಶ ನೀಡಿದ್ದಾರೆ ಎಂದು ತಿಳಿಸಿದರು.

ಕೂಸಿನ ಮನೆ ಮೇಲ್ವಿಚಾರಕಿಯರಿಗೆ ಒಂದು ವಾರ ತರಬೇತಿ ನೀಡಲಾಗಿದೆ. ಪುಟಾಣಿ ಕಂದಮ್ಮಗಳಿಗೆ ಉತ್ತಮ ಸೌಲಭ್ಯ ಒದಗಿಸಲಾಗುತ್ತದೆ. ಪುಟ್ಟ ಮಕ್ಕಳನ್ನು ಸಮರ್ಪಕವಾಗಿ ಆರೈಕೆ ಮಾಡಲಾಗುತ್ತದೆ. ಮಹಿಳೆಯರು ತಮ್ಮ ಪುಟ್ಟ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ನೆಮ್ಮದಿಯಿಂದ ಕೆಲಸ ಮಾಡಬಹುದು. ವಿಶೇಷವಾಗಿ ಕೆಲಸಗಳಿಗೆ ಹೋಗುವ ಮಹಿಳೆಯರು ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಜಿ ಅನ್ಸರ್ ಖಾನ್, ಅಭಿವೃದ್ಧಿ ಅಧಿಕಾರಿ ವಿ.ಸುರೇಶ್ ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮುನಿರತ್ನಮ್ಮ, ಸದಸ್ಯ ಕೃಷ್ಣಾರೆಡ್ಡಿ, ನರೇಗಾ ಅಧಿಕಾರಿ ಶಂಕರ್, ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT