ಸೋಮವಾರ, ಜೂನ್ 27, 2022
28 °C
ಗಡಿಭಾಗಗಳಲ್ಲಿಯೇ ಗರಿಷ್ಠ; 2 ತಿಂಗಳಲ್ಲಿ 20 ದೂರು

ಚಿಕ್ಕಬಳ್ಳಾಪುರ: ಲಾಕ್‌ಡೌನ್ ವೇಳೆ ಹೆಚ್ಚುತ್ತಿವೆ ಮಕ್ಕಳ ಮದುವೆ

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ಬಾಲ್ಯವಿವಾಹ–ಪ್ರಾತಿನಿಧಿಕ ಚಿತ್ರ

ಚಿಕ್ಕಬಳ್ಳಾಪುರ: ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ. ಏಪ್ರಿಲ್ 1ರಿಂದ ಮೇ 27ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಒಟ್ಟು 20 ದೂರುಗಳು ಸ್ವೀಕೃತವಾಗಿವೆ. ಇವುಗಳಲ್ಲಿ 19 ಬಾಲ್ಯ ವಿವಾಹಗಳನ್ನು ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ತಡೆದಿದ್ದಾರೆ.

ಗುಡಿಬಂಡೆ ತಾಲ್ಲೂಕಿನಲ್ಲಿ ಕಾನೂನು ಉಲ್ಲಂಘಿಸಿ ಬಾಲಕಿಯೊಬ್ಬಳ ವಿವಾಹ ಸಹ ನಡೆದಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಬಾಲ್ಯ ವಿವಾಹದ ಪ್ರಯತ್ನಗಳು ಘಟಿಸಿವೆ. ಹೀಗೆ ಲಾಕ್‌ಡೌನ್ ಅವಧಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ವಿವಾಹದ ಬಂಧನಕ್ಕೆ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ.

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಈ ಎರಡು ತಿಂಗಳ ಅವಧಿಯಲ್ಲಿ 9 ಬಾಲ್ಯ ವಿವಾಹದ ಪ್ರಯತ್ನಗಳು ಜರುಗಿವೆ. ಇದು ಜಿಲ್ಲೆಯಲ್ಲಿ ಗರಿಷ್ಠ ಪ್ರಕರಣವಾಗಿದೆ. ಶಾಲಾ, ಕಾಲೇಜುಗಳು ಇಲ್ಲದಿರುವುದು ಈ ಬಾಲ್ಯ ವಿವಾಹ ಪ್ರಕರಣಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಈ ಎರಡನೇ ಅಲೆಯಲ್ಲಿ ಅಷ್ಟೇ ಅಲ್ಲ ಮೊದಲ ಅಲೆಯ  ಲಾಕ್‌ಡೌನ್ ಸಂದರ್ಭದಲ್ಲಿಯೂ ಜಿಲ್ಲೆಯಲ್ಲಿ ಎಗ್ಗಿಲ್ಲದೆಯೇ ಬಾಲ್ಯ ವಿವಾಹಕ್ಕೆ ಪ್ರಯತ್ನಗಳು ನಡೆದಿದ್ದವು. 2020ರ ಏಪ್ರಿಲ್ 1ರಿಂದ 2021ರ ಫೆಬ್ರುವರಿ 28ರವರೆಗೆ ಜಿಲ್ಲೆಯಲ್ಲಿ 134 ದೂರುಗಳನ್ನು ಸ್ವೀಕರಿಸಲಾಗಿತ್ತು. 11 ವಿವಾಹಗಳು ಘಟಿಸಿದ್ದವು. ಈ 11 ಪ್ರಕರಣಗಳಲ್ಲಿ ಬಾಲಕಿಯರಿಗೆ ವಿವಾಹಗಳು ಜರುಗಿದ್ದವು.

ಈಗ ಮತ್ತೆ ಕೋವಿಡ್‌ನ ಎರಡನೇ ಅಲೆಯ ನಡುವೆಯೂ ಕದ್ದುಮುಚ್ಚಿ ಬಾಲ್ಯ ವಿವಾಹಗಳು ಜರುಗುತ್ತಿವೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದ ಲಾಕ್‌ಡೌನ್‌ನಲ್ಲಿ ಬಾಗೇಪಲ್ಲಿ ತಾಲ್ಲೂಕಿನಲ್ಲಿಯೇ ಹೆಚ್ಚು ಬಾಲ್ಯ ವಿವಾಹಕ್ಕೆ ಪ್ರಯತ್ನಗಳು ಹೆಚ್ಚು ನಡೆದಿವೆ.

‘ಗುಡಿಬಂಡೆಯಲ್ಲಿ ಬಾಲಕಿಯರನ್ನು ವ್ಯಕ್ತಿಯೊಬ್ಬ ಕರೆದುಕೊಂಡು ಹೋಗಿದ್ದ. ಆಕೆ ಈಗ ಗರ್ಭಿಣಿ. ಆಕೆಗೆ 16 ವರ್ಷ 8 ತಿಂಗಳು.  ಮಗುವಿಗೆ ಜನ್ಮ ಸಹ ನೀಡಿದ್ದಾಳೆ. ಹೆರಿಗೆಗೆ ಬಂದಾಗ ಈ ಪ್ರಕರಣ ಬಯಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಉಳಿದ ಕಡೆಗಳಲ್ಲಿ ದೂರು ಆಧರಿಸಿ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಮ್ಮದ್ ಉಸ್ಮಾನ್ ತಿಳಿಸಿದರು.

ಶಾಲಾ, ಕಾಲೇಜುಗಳು ಇಲ್ಲದಾಗ ಮಕ್ಕಳ ಮನಸ್ಸನ್ನು ಪರಿವರ್ತಿಸಿ ಈ ಕೆಲಸ ಮಾಡಲಾಗುತ್ತಿದೆ. ಕಳೆದ ವರ್ಷವೂ ಬಾಗೇಪಲ್ಲಿ ಮತ್ತು ಗೌರಿಬಿದನೂರಿನಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಿದ್ದವು. ರಾಜ್ಯದ ಗಡಿಭಾಗಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಿವೆ. ಈ ಬಗ್ಗೆ ಮಕ್ಕಳ ಸಹಾಯವಾಣಿಗೆ, ಸಿಡಿಪಿಒ, ಪಿಡಿಒ, ಶಾಲಾ ಶಿಕ್ಷಕರಿಗೆ ಮಾಹಿತಿ ಬಂದಿದೆ. ಕೆಲವರು ಸಿಡಿಪಿಒಗಳಿಗೆ ಕರೆ ಮಾಡಿ ದೂರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು; ಬಾಲ್ಯ ವಿವಾಹ ದೂರಿನ ಸಂಖ್ಯೆ
ಬಾಗೇಪಲ್ಲಿ;9
ಚಿಕ್ಕಬಳ್ಳಾಪುರ;2
ಚಿಂತಾಮಣಿ;1
ಗೌರಿಬಿದನೂರು;5
ಗುಡಿಬಂಡೆ;1
ಶಿಡ್ಲಘಟ್ಟ;2
ಒಟ್ಟು;20

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು