ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹಿತ ಕಾಯಲು ಬದ್ಧ: ಡಾ.ಸಿ.ಎನ್.ಅಶ್ವತ್ಥನಾರಾಯಣ್

ರೈತರ ಮುಖಂಡರ ಅಹವಾಲು ಆಲಿಕೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಅಭಯ
Last Updated 3 ಏಪ್ರಿಲ್ 2020, 15:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯ ಹಣ್ಣು, ತರಕಾರಿ, ರೇಷ್ಮೆ, ಹೂವು ಬೆಳೆಗಾರರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ದ್ರಾಕ್ಷಿಯನ್ನು ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಹಾಪ್‌ಕಾಮ್ಸ್‌ ಮೂಲಕ ಮಾರಾಟ ಮಾಡಲು ಕ್ರಮಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ರೈತ ಮುಖಂಡರ ಅಹವಾಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಾಕ್‌ಡೌನ್‌ನಿಂದಾಗಿ ಮಹಾರಾಷ್ಟ್ರ, ಕೇರಳ, ತಮಿಳುನಾಡಿನಲ್ಲಿ ಕೂಡ ದ್ರಾಕ್ಷಿಗೆ ಬೇಡಿಕೆ ಇಲ್ಲವಾಗಿದೆ. ಆದ್ದರಿಂದ ನಮ್ಮಲ್ಲಿಯೇ ವಹಿವಾಟಿಗೆ ಅವಕಾಶ ಕಲ್ಪಿಸಲಾಗುತ್ತದೆ. ಬೆಂಗಳೂರಿನಲ್ಲಿ ಬಿಬಿಎಂಸಿ ಸದಸ್ಯರ ಸಹಕಾರದೊಂದಿಗೆ ಅಪಾರ್ಟ್‌ಮೆಂಟ್‌ಗಳಲ್ಲಿ ಹಣ್ಣು ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಗೌರಿಬಿದನೂರಿನ ಎರಡು ಕುಟುಂಬಗಳ ಸದಸ್ಯರಿಗೆ ಮಾತ್ರ ಕೋವಿಡ್‌ ಸೋಂಕು ತಗುಲಿದೆ. ಬೇರೆ ಕಡೆಗಳಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಗೌರಿಬಿದನೂರು ಸಂಪೂರ್ಣ ಲಾಕ್‌ಡೌನ್‌ ಮಾಡಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ಸುಮಾರು 20 ವೆಂಟಿಲೇಟರ್‌ ಇರಬೇಕು ಎನ್ನುವುದು ನಮ್ಮ ಸರ್ಕಾರದ ಗುರಿಯಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ಜಿಲ್ಲೆಗೆ 10 ವೆಂಟಿಲೇಟರ್‌ ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದರು.

‘ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್‌ ಜಮಾತ್‌ ಕೇಂದ್ರ ಕಚೇರಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಈ ಭಾಗದ ಯಾರೂ ಭಾಗವಹಿಸಿಲ್ಲ. ದೆಹಲಿಗೆ ಹೋಗಿ ಬಂದ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಿ, ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಪ್ರತಿಯೊಬ್ಬರೂ ಕ್ವಾರಂಟೈನ್ ಅವಧಿ ಪೂರೈಸಿದ್ದಾರೆ. ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ತೋಟಗಾರಿಕೆ ಮತ್ತು ರೇಷ್ಮೆ ಸಚಿವ ನಾರಾಯಣಗೌಡ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 2,000 ಟನ್‌ ಟೊಮ್ಯಾಟೊ ಬೆಳೆಯಲಾಗುತ್ತದೆ. ಈ ಪೈಕಿ 1,000 ಟನ್ ನೆರೆಯ ಆಂಧ್ರಪ್ರದೇಶದಲ್ಲಿ ಕೆಚೆಪ್ ತಯಾರಿಸಲು ಪೂರೈಸಲಾಗುತ್ತದೆ. ಉಳಿದ 1,000 ರಾಜ್ಯದಲ್ಲಿ ಮಾರಾಟಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ಹೀಗಾಗಿ ಟೊಮೆಟೊ ಬೆಳೆಗಾರರು ಬೆಲೆ ಇಲ್ಲ ಎಂದು ಚಿಂತಿಸುವ ಅಗತ್ಯ ಇಲ್ಲ’ ಎಂದು ತಿಳಿಸಿದರು.

‘ತರಕಾರಿ, ಹಣ್ಣು ಮತ್ತು ರೇಷ್ಮೆ ಬೆಳೆಗಾರರಿಗೆ ಸಹಾಯಕ್ಕೆ ಈಗಾಗಲೇ ಸರ್ಕಾರ ಮುಂದಾಗಿದೆ. ಜಿಲ್ಲೆಯಲ್ಲಿ ಹೂವು ಬೆಳೆಯುವ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಹಿತ ಕಾಯುವ ನಿಟ್ಟಿನಲ್ಲಿ ಆ ಬಗ್ಗೆ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಅವರ ಜತೆ ಸಭೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ. ಅವರನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ’ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಂಸದರಾದ ಬಿ.ಎನ್.ಬಚ್ಚೇಗೌಡ, ಮುನಿಸ್ವಾಮಿ, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT