ಮಂಗಳವಾರ, ಆಗಸ್ಟ್ 16, 2022
30 °C

ಬಾಗೇಪಲ್ಲಿ: ವಿದ್ಯಾರ್ಥಿಗಳ ಸಾಂಸ್ಕೃತಿಕ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ‘ಆಧುನಿಕ ಕಾಲದಲ್ಲಿಯೂ ಜನಪದ, ಕಲೆ, ಸಂಸ್ಕೃತಿಗಳು ನಮ್ಮತನದ ಬೇರುಗಳಾಗಿವೆ. ಜನಪರ ಸಂಸ್ಕೃತಿ ಜನಮೂಲ ಮತ್ತು ಜೀವಮೂಲವು ಆಗಿದೆ. ನೆಲ ಸಂಸ್ಕೃತಿಯ ಉಳಿವೇ ನಿಜವಾದ ಜನಸಂಸ್ಕೃತಿಯ ಉಳಿವು ಆಗಿದೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಚಿಕ್ಕಬಳ್ಳಾಪುರದ ಸರ್.ಎಂ.ವಿ. ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಹಾಗೂ ಗ್ರಂಥಾಲಯ, ಐಕ್ಯೂಎಸಿ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 'ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ'ವನ್ನು ತಮಟೆ ಹೊಡೆದು ಉದ್ಘಾಟಿಸಿ ಮಾತನಾಡಿದರು.

‘ಹಿಂದಿನ ಕಾಲದಲ್ಲಿ ಗ್ರಾಮೀಣ ಸಂಸ್ಕೃತಿ, ಕಲೆ, ಸಾಹಿತ್ಯ, ಜನಪದರ ಹಾಡುಗಳು ಇಂದಿಗೂ ಪ್ರಸ್ತುತವಾಗಿದೆ. ಗ್ರಾಮೀಣ ಕ್ರೀಡೆಗಳು ಸಹ ಹೊರತಲ್ಲ. ಗ್ರಾಮೀಣ ಭಾಗದಲ್ಲಿ ತಮ್ಮತನ ಉಳಿಸಿಕೊಂಡು ಬಂದಿದೆ. ರಾಗಿ ಬಿತ್ತುವ, ಬೀಸುವ ಪದಗಳು, ನಾಟಕಗಳು, ಮಕ್ಕಳಿಗೆ ಊಟ ತಿನ್ನಿಸುವ, ಮಲಗಿಸುವ ಸಂದರ್ಭದಲ್ಲಿ ಚಂದಮಾಮನನ್ನು ತೋರಿಸಿ ಹಾಡುವ ಹಾಡುಗಳು ಸಂದೇಶವನ್ನು ಸಾರಿದೆ. ಜನಪದರು ಮೂಲತಃ ಅಕ್ಷರಸ್ಥರಲ್ಲ. ತತ್ವಪದಗಳು, ಭಜನೆಗಳು, ಕೊಂಡಮಾಮನ ಹಾಡುಗಳು ಇಂದಿಗೂ ಮನದಲ್ಲಿ ಉಳಿದಿದೆ’ ಎಂದು ತಿಳಿಸಿದರು.

ಇಂತಹ ಜನಪದರ ಹಾಗೂ ಜಾನಪದವನ್ನು ಮತ್ತಷ್ಟು ಉಳಿಸಿ-ಬೆಳೆಸಬೇಕು. ಭಾವಗೀತೆ, ಜನಪದಗೀತೆಗಳು, ಕೋಲಾಟಗಳು ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿಕೊಂಡಿದೆ. ಇದರಿಂದ ಯುವಜನರು ಇಂತಹ ಹಾಡುಗಳನ್ನು ಕಲಿಯಬೇಕು. ಮನಸ್ಸಿಗೆ ನೆಮ್ಮದಿ, ಉಲ್ಲಾಸವನ್ನು ನೀಡುತ್ತದೆ. ಇದರಂತೆ ಗ್ರಾಮೀಣ ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್ ಮಾತನಾಡಿ, ಜಿಲ್ಲೆಯ ಸಾಹಿತಿಗಳು ಕುಡಿಯುವ ನೀರು ಉಳಿಸಿ-ಬೆಳಸಲು, ಸಂರಕ್ಷಣೆ ಮಾಡಲು ಹಾಗೂ ನೆಲ, ಜಲ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು, ಪರಿಸರದ ಗೀತೆಗಳನ್ನು ಬರೆದು ಹಾಡಿರುವುದು ವಿಶ್ವದ ಗಮನ ಸೆಳೆದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ, ಕಾರ್ಯಾಗಾರ, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಲಿಕೆಯ ಮಟ್ಟ ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಕಲಿಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರದ ಸರ್ ಎಂ.ವಿ.ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರಾದ ಸೋ.ಸು.ನಾಗೇಂದ್ರನಾಥ್, ಜಿಲ್ಲಾ ಯುವ ಪ್ರಶಸ್ತಿ ವಿಜೇತ, ಜಾನಪದ ಗಾಯಕ ಮುನಿರಾಜುರವರು ಗೀಗೀಪದ, ಜಾನಪದ, ಭಾವಗೀತೆಗಳ ಜೊತೆಗೆ ಒಳಿತು ಮಾಡು ಮನಸ....., ಸಿದ್ದಾಪ್ಪಾಜಿಯ ತತ್ವಪದಗಳನ್ನು ಹಾಡಿ ರಂಜಿಸಿದರು. ನೆರೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಲಾವಿದರ ಜೊತೆಗೆ ತಮಟೆ, ಹಾರ್ಮೋನಿಯಂ, ತಬಲ ಹೊಡೆದು ಸಾಂಸ್ಕೃತಿಕ ಲೋಕದಲ್ಲಿ ಮಿಂದೆದ್ದರು.

ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಎನ್.ಪ್ರಭಾಕರ್, ಗ್ರಂಥಪಾಲಕ ಡಾ.ಸಿ.ಎಸ್. ವೆಂಕಟರಾಮರೆಡ್ಡಿ, ಅನಿಲ್, ಅಧೀಕ್ಷಕಿ ಅನಿತಾ, ಕನ್ನಡ ಕಲಾ ಸಂಘದ ಅಧ್ಯಕ್ಷ ಪಿ.ಎಸ್.ರಾಜೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು