ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ದರ ಏರಿಕೆಗೆ ಆಗ್ರಹ: ರೈತಸಂಘದಿಂದ ಪ್ರತಿಭಟನೆ

ಹಾಲಿನ ದರ ಇಳಿಕೆ ಖಂಡಿಸಿ ಕೋಚಿಮುಲ್‌ನ ಮೆಗಾ ಡೇರಿ ಎದುರು
Last Updated 4 ಆಗಸ್ಟ್ 2020, 11:40 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್‌) ಒಂದು ಲೀಟರ್‌ ಹಾಲಿನ ಮೇಲೆ ₹4 ಕಡಿತ ಮಾಡಿದ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತಸಂಘದ ಪದಾಧಿಕಾರಿಗಳು ತಾಲ್ಲೂಕಿನ ನಂದಿ ಕ್ರಾಸ್‌ನಲ್ಲಿರುವ ಕೋಚಿಮುಲ್‌ನ ಮೆಗಾ ಡೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರೈತಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ‘ಬಯಲುಸೀಮೆ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿನ ತೀವ್ರ ಬವಣೆ ನಡುವೆಯೂ ಜನರು ಹೈನುಗಾರಿಕೆ ನೆಚ್ಚಿ ಬದುಕು ಸಾಗಿಸುತ್ತಿದ್ಧಾರೆ. ಕಳೆದ ನಾಲ್ಕು ತಿಂಗಳಿಂದ ಕೋವಿಡ್‌ನಿಂದ ಹೈರಾಣಾದವರಿಗೆ ಇದೀಗ ಕೋಚಿಮುಲ್‌ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ’ ಎಂದು ಹೇಳಿದರು.

‘ಎರಡು ಜಿಲ್ಲೆಗಳಲ್ಲಿ ಸುಮಾರು 95 ಸಾವಿರ ಕುಟುಂಬಗಳು ಹೈನುಗಾರಿಕೆಯನ್ನು ಉಪಕಸುಬಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿವೆ. 1,800 ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ನಿತ್ಯ 10.22 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕಷ್ಟದ ಸಮಯದಲ್ಲಿ ಹಾಲಿನ ಬೆಲೆ ಇಳಿಕೆ ಮಾಡಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ’ ಎಂದು ತಿಳಿಸಿದರು.

‘ಒಂದೆಡೆ ಬೂಸಾ, ಚಕ್ಕೆ, ಪಶು ಆಹಾರ ದುಬಾರಿಯಾಗುತ್ತಿದ್ದರೆ, ಮತ್ತೊಂದೆಡೆ ಹಾಲಿನ ಒಕ್ಕೂಟಗಳು ಬೆಲೆ ಇಳಿಕೆ ಮಾಡುತ್ತಿರುವುದು ಹೈನುಗಾರರನ್ನು ಹೈರಾಣಾಗಿಸಿದೆ. ನಿರೀಕ್ಷಿತ ಮಟ್ಟದಲ್ಲಿ ಆದಾಯ ಸಿಗದೆ ರೈತರು ಕಷ್ಟ ಎದುರಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೈನುಗಾರಿಕೆ ಕ್ಷೇತ್ರ ದಿವಾಳಿಯಾಗಲಿದೆ’ ಎಂದರು.

‘ಈಗಾಗಲೇ ಕೊರೊನಾದಿಂದಾಗಿ ಕೋಟ್ಯಂತರ ಕೃಷಿ ಕೂಲಿ ಕಾರ್ಮಿಕರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ‌ಹಾಗಾಗಿ ರೈತರಿಗೆ, ಕೃಷಿ ಕಾರ್ಮಿಕ ಕುಟುಂಬಗಳಿಗೆ ಹೈನುಗಾರಿಕೆಯೇ ಜೀವನಾಡಿಯಾಗಿದೆ. ಆದ್ದರಿಂದ ಬೆಲೆ ಕಡಿತದ ಆದೇಶ ವಾಪಸ್ ಪಡೆದು ಪ್ರತಿ ಲೀಟರ್‌ಗೆ ₹40 ನಿಗದಿ ಮಾಡಬೇಕು ಹಾಗೂ ಪಶು ಆಹಾರ ಸಬ್ಸಿಡಿ ದರದಲ್ಲಿ ನೀಡಬೇಕು’ ಎಂದು ಆಗ್ರಹಿಸಿದರು.

‘ಕೋಚಿಮುಲ್‌ ಆಡಳಿತ ಮಂಡಳಿ ಕೂಡಲೇ ಹಾಲಿನ ಬೆಲೆ ಕಡಿತದ ಆದೇಶ ಹಿಂಪಡೆದು ಈ ಹಿಂದೆ ಬೆಲೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎರಡು ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಪಿ.ರಾಮನಾಥ್, ಕಾರ್ಯದರ್ಶಿ ವಿ.ವೇಣುಗೋಪಾಲ್, ಮಹಿಳಾ ಸಂಚಾಲಕಿ ಉಮಾ, ಪದಾಧಿಕಾರಿಗಳಾದ ರಾಮಾಂಜನಪ್ಪ, ರಮಣಾರೆಡ್ಡಿ, ತಾದೂರು ಮಂಜುನಾಥ್, ಟಿ.ದೇವರಾಜು, ದಪರ್ತಿ ಮುರುಳಿ, ಮಾಳಪ್ಪ, ಲಕ್ಷ್ಮಣ ರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT