ಭಾನುವಾರ, ಸೆಪ್ಟೆಂಬರ್ 26, 2021
21 °C
ದುಡಿಮೆ ಮೇಲೆ ಕೊರೊನಾ ಕರಿನೆರಳು

ಛಾಯಾಗ್ರಾಹಕರ ಉದ್ಯಮಕ್ಕೆ ಗ್ರಹಣ: ಸಹಾಯಧನಕ್ಕೆ ಮನವಿ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ‘ಸ್ಮೈಲ್ ಪ್ಲೀಸ್’ ಎಂದು ಹೇಳುತ್ತಾ ಸುಂದರ ನೋಟಗಳನ್ನು ಸೆರೆಹಿಡಿದು ಎಲ್ಲರ ಮುಖದಲ್ಲೂ ನಗು ಅರಳಿಸುತ್ತಿದ್ದ ಛಾಯಾಗ್ರಾಹಕರ ಮುಖದಲ್ಲಿನ ನಗು ಕಳೆದ ವರ್ಷದ ಕೊರೊನಾ ಮೊದಲ ಅಲೆ ಕಿತ್ತುಕೊಂಡಿತ್ತು. ಇದೀಗ ಎರಡನೇ ಅಲೆ ಕೂಡ ಅವರ ಮೊಗದಲ್ಲಿ ಕಣ್ಣೀರು ಹರಿಸುತ್ತಿದೆ.

ಲಾಕ್‌ಡೌನ್ ಎಂಬ ಬರಸಿಡಿಲು ಬಡಿದು ಛಾಯಾಗ್ರಹಣದ ಉದ್ಯಮವೇ ತತ್ತರಿಸಿಹೋಯಿತು. ಪ್ರತಿ ವರ್ಷ ಫೆಬ್ರುವರಿಯಿಂದ ಮೇ ವರೆಗಿನ ನಾಲ್ಕು ತಿಂಗಳು ಉತ್ತಮ ಸೀಸನ್. ಈಗ ಕೊರೊನಾ ಸೋಂಕಿನ ಭೀತಿಯಿಂದ ಶುಭಕಾರ್ಯಗಳು ರದ್ದಾದವು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸುಮಾರು 90 ಸ್ಟುಡಿಯೋಗಳಿವೆ. ಸುಮಾರು 150 ಮಂದಿ ಮನೆಗಳಿಂದಲೇ ಛಾಯಾಗ್ರಹಣ ವ್ಯವಹಾರ ನಡೆಸುತ್ತಾರೆ. ಒಟ್ಟಾರೆ ಸುಮಾರು ಇನ್ನೂರೈವತ್ತು ಕುಟುಂಬಗಳು ಸಂಕಷ್ಟದಲ್ಲಿವೆ.

‘ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ತಾಲ್ಲೂಕಿನ ಛಾಯಾಗ್ರಾಹಕರು ತಮ್ಮ ಕಷ್ಟವನ್ನು ವಿವರಿಸಿ ಸರ್ಕಾರದಿಂದ ನೆರವು ಕೊಡಿಸುವಂತೆ ಶಾಸಕ ವಿ.ಮುನಿಯಪ್ಪ ಅವರಿಗೆ ಹಾಗೂ ಆಗಿದ್ದ ತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ಮನವಿಯನ್ನು ಸಲ್ಲಿಸಿದ್ದರು. ಆದರೆ ಏನು ಪ್ರಯೋಜನವಾಗಲಿಲ್ಲ’ ಎನ್ನುತ್ತಾರೆ ತಾಲ್ಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ
ಮೇಘನಾ ಶ್ರೀನಿವಾಸ್.

‘ಬಹುತೇಕರು ಛಾಯಾಗ್ರಹಣವನ್ನೇ ಪೂರ್ಣ ಪ್ರಮಾಣದ ವೃತ್ತಿಯಾಗಿಸಿ ಕೊಂಡಿದ್ದಾರೆ. ಅವರಿಗೆಲ್ಲ ಬೇರೆ ಸಂಪಾದನೆಯಿಲ್ಲದೇ ಕುಟುಂಬ ನಡೆಸುವುದು ಕಷ್ಟವಾಗಿದೆ. ಛಾಯಾಗ್ರಾಹಕರ ನೆರವಿಗೆ ಸರ್ಕಾರ ತಿಂಗಳಿಗೆ ₹2 ಸಾವಿರ ಸಹಾಯಧನ ನೀಡಬೇಕು ಎಂದು ಅವರು ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ಇದೀಗ ಎರಡನೇ ಕೊರೊನಾ ಅಲೆಯಿಂದಾಗಿ ಛಾಯಾಗ್ರಾಹಕರು ಕೆಲಸ ಇಲ್ಲದೇ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕ್ಯಾಮೆರಾ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಮೇಘನಾ ಶ್ರೀನಿವಾಸ್.

‘ಕೊರೊನ ಭೀತಿಯಲ್ಲಿ ಲಾಕ್‌ಡೌನ್ ಸಮಯದಲ್ಲಿ ಈಗ ಯಾವ ಛಾಯಾಗ್ರಾಹಕರ ಕೈಯಲ್ಲಿಯೂ ಹಣವಿಲ್ಲ. ಮನೆ ಸಂಸಾರ ನಡೆಸಲು ಕಷ್ಟಕರ ಸನ್ನಿವೇಶ ಎದುರಾಗಿದೆ. ಸರ್ಕಾರದಿಂದ ಛಾಯಾಗ್ರಾಹಕರಿಗೆ ನೆರವಿನ ಅಗತ್ಯವಿದೆ’ ಎಂದು ಕ್ಯಮೆರಾ ಮ್ಯಾನ್ ಮನೋ ಅಂಟೋನಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು