ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ರಾಜಕಾಲುವೆ ಒತ್ತುವರಿ; ಭರವಸೆಗೆ ಸೀಮಿತ

Published 17 ಮೇ 2024, 6:53 IST
Last Updated 17 ಮೇ 2024, 6:53 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮತ್ತೊಂದು ಮಳೆಗಾಲ ಬಂದಿದೆ. ಯಥಾ ಪ್ರಕಾರ ಮತ್ತೆ ಜಿಲ್ಲಾಡಳಿತ ರಾಜಕಾಲುವೆ ಒತ್ತುವರಿ ತೆರವಿನ ಮಾತನಾಡುತ್ತಿದೆ. ‘ರಾಜಕಾಲುವೆಗಳ ಒತ್ತುವರಿ ತೆರವಿಗೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು’ ಎನ್ನುವ ಹಳಸಲು ಮಾತುಗಳೇ ಅಧಿಕಾರಿಗಳ ಸಭೆಗಳಲ್ಲಿ ಕೇಳಿ ಬರುತ್ತಿದೆ. 

ಆದರೆ ಚಿಕ್ಕಬಳ್ಳಾಪುರ ನಗರ ಮತ್ತು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರಾಜಕಾಲುವೆಗಳ ಒತ್ತುವರಿ ಕುರಿತು ಕಣ್ಣು ಹಾಯಿಸಿದರೆ ಅಧ್ವಾನಗಳು ಎದ್ದು ಕಾಣುತ್ತವೆ. ಒಂದೊಂದು ರಾಜಕಾಲುವೆಗಳ ಕಥೆಯೂ ದೊಡ್ಡದಿದೆ. 

‌ಪ್ರತಿ ಭಾರಿಯ ಮಳೆಗಾಲದ ಆರಂಭದಲ್ಲಿ ಮತ್ತು ಮಳೆಯಿಂದ ಅನಾಹುತಗಳು ಸಂಭವಿಸಿದಾಗ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ರಾಜಕಾಲುವೆ ಒತ್ತುವರಿ ಮತ್ತು ತೆರವಿನ ಬಗ್ಗೆ ಜನರಿಗೆ ಭರವಸೆ ನೀಡುವರು.  

ಆದರೆ ‘ಕ್ರಮ’ ಮಾತ್ರ ಇಲ್ಲ. ಈ ಪರಿಣಾಮ ಪ್ರತಿ ವರ್ಷದ ಮಳೆಗಾಲದಲ್ಲಿ ಹೆಚ್ಚು ಮಳೆ ಬಿದ್ದಾಗ ಹೊಲ, ತೋಟಗಳಿಗೆ ನೀರು ನುಗ್ಗುವುದು, ಅಂಗಡಿಗಳು ಮುಳುಗುವುದು, ಮನೆಗಳು ಜಲಾವೃತವಾಗುವುದು–ಹೀಗೆ ನಾನಾ ರೀತಿಯ ಅಧ್ವಾನಗಳು ಸಾಮಾನ್ಯವಾಗಿದೆ.

ಚಿಕ್ಕಬಳ್ಳಾಪುರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ 2021 ಮತ್ತು 2022ರಲ್ಲಿ  ಉತ್ತಮವಾಗಿ ಮಳೆ ಸುರಿಯಿತು. ಭಾರಿ ಮಳೆಯಿಂದ ಚಿಕ್ಕಬಳ್ಳಾಪುರ ನಗರವೇ ಜಲದಿಗ್ಬಂಧನಕ್ಕೆ ಸಿಲುಕಿತ್ತು. ಬಿಬಿ ರಸ್ತೆಯ ಶನಿಮಹಾತ್ಮ ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ನೀರು ನಿಂತಿತು. 

ಆ ಸಮಯದಲ್ಲಿಯೂ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು, ‘ರಾಜಕಾಲುವೆಗಳ ಒತ್ತುವರಿ ತೆರವಿಗೆ ಕಠಿಣ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದ್ದರು. ಆದರೆ ಯಥಾ ಪ್ರಕಾರ ಮತ್ತೊಂದು ಮಳೆಗಾಲ ಬಂದರೂ ರಾಜಕಾಲುವೆಗಳ ಒತ್ತುವರಿ ತೆರವಾಗಿಲ್ಲ. 

‘ಕಂದವಾರ ಕೆರೆಯಿಂದ ಬಿಬಿ ರಸ್ತೆ, ಬಿಬಿ ರಸ್ತೆಯಿಂದ ಶನಿಮಹಾತ್ಮ ದೇವಾಲಯದ ಬಳಿಯಿಂದ ಎಚ್‌.ಎಸ್.ಗಾರ್ಡನ್‌ ಹಾಗೂ ವಿನಾಯಕ ನಗರಕ್ಕೆ ಸಾಗುವ ರಾಜಕಾಲುವೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು’ ಎಂದು ಮಾರ್ಚ್‌ನಲ್ಲಿ ನಡೆದ ನಗರಸಭೆ ಬಜೆಟ್ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಭರವಸೆ ಸಹ ನೀಡಿದ್ದಾರೆ.

ಚಿಕ್ಕಬಳ್ಳಾಪುರದ ಕಂದವಾರೆ ಕೆರೆಯಿಂದ ಗೋಪಾಲಕೃಷ್ಣ ಅಮಾನಿಕೆರೆಗೆ ನೀರು ಹರಿಯುವ ರಾಜಕಾಲುವೆಯ ಒತ್ತುವರಿಯನ್ನು ಕೆಲವು ಕಡೆಗಳಲ್ಲಿ ಕಳೆದ ವರ್ಷದ ಮಳೆಗಾಲದಲ್ಲಿ ತೆರವುಗೊಳಿಸಲಾಯಿತು. ಆದರೆ ಶಾಶ್ವತ ಕ್ರಮ ಮಾತ್ರ ಜಾರಿಯಾಗಿಯೇ ಇಲ್ಲ. ರಾಜಕಾಲುವೆ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಭರವಸೆ ಇಂದಿಗೂ ಈಡೇರಿಲ್ಲ. 

ಗ್ರಾಮ ಮತ್ತು ನಗರ ಪ್ರದೇಶಗಳ ಕೆರೆಗಳಿಗೆ ನೀರು ಹರಿಯುವ ಮಾರ್ಗಗಳು ಒತ್ತುವರಿಯಿಂದ ನಲುಗಿವೆ. ಬಹಳಷ್ಟು ಹಳ್ಳಿಗಳಲ್ಲಿ ರಾಜಕಾಲುವೆ ಇತ್ತೇ ಎನ್ನುವ ಕುರುಹುಗಳು ಸಿಗದಂತೆ ಒತ್ತುವರಿಯಾಗಿವೆ. ಒಂದು ಕೆರೆ ತುಂಬಿದರೆ ಆ ನೀರು ಮತ್ತೊಂದು ಕೆರೆಗೆ ಹೋಗುವ ವ್ಯವಸ್ಥೆಯನ್ನು ಹಿರಿಯರು ಮತ್ತು ಕೆರೆ
ನಿರ್ಮಾತೃಗಳು ರೂಪಿಸಿದ್ದಾರೆ. ಈ ಕಾಲುವೆಗಳ ಮೂಲಕ ನೀರು ಸರಾಗವಾಗಿ ಹರಿಯುತ್ತಿತ್ತು. ಆದರೆ ಈಗ ಕಾಲುವೆಗಳು ಬಂದ್ ಆಗಿವೆ.

ವಿಶೇಷವಾಗಿ ನಂದಿಬೆಟ್ಟದ ಆಸುಪಾಸಿನ ಹಲವು ಗ್ರಾಮಗಳಲ್ಲಿನ ರಾಜಕಾಲುವೆಗಳ ಗುರುತೇ ನಾಪತ್ತೆಯಾಗಿದೆ. ಈ ಗಿರಿಶ್ರೇಣಿಯಲ್ಲಿ ಮಳೆ ಸುರಿದರೆ ಆ ನೀರು ಕಾಲುವೆಗಳ ಮೂಲಕ ಆಸುಪಾಸಿನ ಹಳ್ಳಿಗಳ ಕೆರೆಯನ್ನು ಸೇರುತ್ತಿತ್ತು. ಆದರೆ ಈಗ ಆ ನೀರು ಎತ್ತೆತ್ತಲೊ ಹರಿದು ರೈತರ ಹೊಲ, ತೋಟಗಳತ್ತ ನುಗ್ಗುತ್ತಿದೆ. 

ಭಾರಿ ಮಳೆ ಸುರಿದ ಸಮಯದಲ್ಲಿ ಆಯಾ ನಗರ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ಕೆರೆಗೆ ನೀರು ಹಾದು ಹೋಗುವ ಮಾರ್ಗದಲ್ಲಿ ನೆಪಮಾತ್ರಕ್ಕೆ ಎಂದು ಜೆಸಿಬಿ ಯಂತ್ರಗಳ ಮೂಲಕ ಕೆಲಸ ಮಾಡಿ ಕೈತೊಳೆದುಕೊಳ್ಳುತ್ತವೆ. ಮತ್ತೆ ಮರು ವರ್ಷದ ಮಳೆಗಾಲದಲ್ಲಿ ಅನಾಹುತಗಳು ಸಂಭವಿಸಿದಾಗಲೇ ‘ರಾಜಕಾಲುವೆ’ಗಳು ಇವೆ ಎನ್ನುವುದು ನೆನಪಾಗುವುದು.

ಮಳೆಯಿಂದ ಅನಾಹುತವಾದಾಗ ಮಾತ್ರ ರಾಜಕಾಲುವೆಗಳ ಒತ್ತುವರಿ ವಿಚಾರವಾಗಿ ಅಧಿಕಾರಿಗಳು ಮಾತನಾಡುವರು. ಆ ನಂತರ ಮೌನವಾಗುವರು ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಈಡೇರದ ಕಾಲುವೆ ಭರವಸೆ

ಮಳೆ ಅನಾಹುತ ಪರಿಶೀಲಿಸಲು 2021ರ ನವೆಂಬರ್ 21ರಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಕಂದವಾರ ಕೆರೆಯಿಂದ ಅಮಾನಿಗೋಪಾಲಕೃಷ್ಣ ಕೆರೆಗೆ ರಾಜಕಾಲುವೆ ನಿರ್ಮಿಸಲಾಗುವುದು. ಇದಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಳಿಸುವಂತೆ ಸೂಚಿಸಲಾಗಿದೆ. ಎಷ್ಟು ಹಣ ಅಗತ್ಯವಿದೆಯೋ ಅದನ್ನು ಬಿಡುಗಡೆ ಮಾಡಲಾಗುವುದು’ ಎಂದಿದ್ದರು. ಬಿಬಿ ರಸ್ತೆಯಲ್ಲಿ ಕಾಲುವೆಯನ್ನು ವೀಕ್ಷಿಸಿದ್ದರು. ಅವರು ಅಧಿಕಾರದಿಂದ ಕೆಳಗಿಳಿದರೂ ರಾಜಕಾಲುವೆ ನಿರ್ಮಾಣವಾಗಲೇ ಇಲ್ಲ. 

‘ಮನವಿ ಮಾಡಿದರೂ ಪ್ರಯೋಜನವಿಲ್ಲ’

ಈ ಹಿಂದಿನ ವರ್ಷಗಳಲ್ಲಿ ಜೋರು ಮಳೆ ಬಂದಾಗ ನಮ್ಮ ಕಲ್ಯಾಣ ಮಂಟಪ ಪಕ್ಕದ ಹೀರೊ ಹೋಂಡಾ ಶೋ ರೂಂ ಸೇರಿದಂತೆ ವಾಣಿಜ್ಯ ಮಳಿಗೆಗಳು ಪೂರ್ಣವಾಗಿ ಮುಳುಗಿದ್ದವು’ ಎನ್ನುತ್ತಾರೆ ಹರ್ಷೋದಯ ಕಲ್ಯಾಣ ಮಂಟಪದ ಮಾಲೀಕ ಕೆ.ಆರ್.ರೆಡ್ಡಿ. ಅಂದಿನಿಂದಲೂ ನಾವು ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಸರಾಗವಾಗಿ ಮಳೆ ನೀರು ಹರಿಸುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಇದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಬಸವರಾಜ ಬೊಮ್ಮಾಯಿ ಕಾಲುವೆ ವೀಕ್ಷಿಸಿ ಹೊರ ಕಾಲುವೆ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದಿದ್ದರು. ಆದರೆ ನಿರ್ಮಾಣವಾಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸುವರು.  ಅಧಿಕಾರಿಗಳು ಮಳೆಗಾಲದಲ್ಲಿ ಮಾತ್ರ ರಾಜಕಾಲುವೆ ಬಗ್ಗೆ ಎಚ್ಚೆತ್ತುಕೊಳ್ಳುವರು ಎಂದರು.

‘ಒತ್ತುವರಿ ತೆರವಾಗದಿದ್ದರೆ ಅಧ್ವಾನ’

ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ರಾಜಕಾಲುವೆಗಳು ಒತ್ತುವರಿ ತೆರವಾಗದಿದ್ದರೆ ಮಳೆಯಿಂದ ದೊಡ್ಡ ಮಟ್ಟದ ಅಧ್ವಾನಗಳಿಗೆ ಕಾರಣವಾಗುತ್ತದೆ. ಈ ಹಿಂದಿನ ವರ್ಷಗಳಲ್ಲಿ ಇದನ್ನು ಕಣ್ಣಾರೆ ಕಂಡಿದ್ದೇವೆ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್.  ರಾಜಕಾಲುವೆಗಳು ಉತ್ತಮವಾಗಿದ್ದರೆ ನೀರು ಹೊಲ ತೋಟ ಮತ್ತು ಮನೆಗಳತ್ತ ನುಗ್ಗುವುದಿಲ್ಲ. ಕೆಲವು ಕಡೆ ಬಲಾಢ್ಯರೂ ಒತ್ತುವರಿ ಮಾಡಿಕೊಂಡಿದ್ದಾರೆ. ಮೊದಲು ಈ ಒತ್ತುವರಿ ತೆರವಿಗೆ ಜಿಲ್ಲಾಡಳಿತ ಕ್ರಮವಹಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT