ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ: ಬದುಕಿಗೆ ನೆಮ್ಮದಿ ತಂದ ಸಮಗ್ರ ಕೃಷಿ

Published : 18 ಆಗಸ್ಟ್ 2024, 5:37 IST
Last Updated : 18 ಆಗಸ್ಟ್ 2024, 5:37 IST
ಫಾಲೋ ಮಾಡಿ
Comments

ಶಿಡ್ಲಘಟ್ಟ: ಕೃಷಿ ಮೇಲಿನ ಆಸಕ್ತಿ ಮತ್ತು ಪ್ರೀತಿಯಿಂದ ತಮಗಿರುವ ಮೂರೂವರೆ ಎಕರೆ ಜಾಗದ ಒಂದಿಂಚೂ ಭೂಮಿ ಖಾಲಿ ಬಿಡದೇ ದ್ರಾಕ್ಷಿ, ದಾಳಿಂಬೆ ಹಾಗೂ ಗುಲಾಬಿ ಬೆಳೆಯುವ ಮೂಲಕ ವಾರ್ಷಿಕ ₹4-5 ಲಕ್ಷ ಗಳಿಸುವ ಮೂಲಕ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದಾರೆ ಮೇಲೂರು ಗ್ರಾಮದ ಪ್ರೇಮಾ.

ತಾಲ್ಲೂಕಿನ ಮೇಲೂರು ಗ್ರಾಮದ ಪ್ರೇಮಾ, ಮೂಲತಃ ಕೃಷಿ ಕುಟುಂಬದ ಹಿನ್ನೆಲೆಯವರು. ಇವರು ಪತಿಯ ಅಗಲಿಕೆಯ ನಂತರ, ಛಲದಿಂದ ದಿನಪೂರ್ತಿ ಕೃಷಿ ಚಟುವಟಿಕೆಯಲ್ಲಿಯೇ ತೊಡಗಿಸಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ.

ತಮಗಿರುವ ಮೂರೂವರೆ ಎಕರೆ ಜಮೀನಿನಲ್ಲಿ ಒಂದಷ್ಟು ದ್ರಾಕ್ಷಿ, ದಾಳಿಂಬೆ ಮತ್ತೊಂದಷ್ಟು ಗುಲಾಬಿ ಹೂ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಾರೆ. ವ್ಯವಸಾಯ ಮಾಡಲು ಅಗತ್ಯವಿರುವ ನೀರಿಗಾಗಿ ಎರಡು ಕೊಳವೆಬಾವಿಗಳಿದ್ದು ನೀರಿಗೆ ಯಾವುದೇ ಸಮಸ್ಯೆಯಿಲ್ಲ.

ಬೇರಾವುದೇ ಮೂಲಗಳಿಂದ ಆದಾಯವಿಲ್ಲದಿದ್ದರೂ ವರ್ಷವಿಡೀ ಕೃಷಿ ಆಧಾರಿತ ಬೆಳೆಗಳಿಂದಲೇ ಲಕ್ಷಾಂತರ ಹಣ ಗಳಿಸುವ ಮೂಲಕ ತಮಗಿರುವ ಇಬ್ಬರು ಮಕ್ಕಳನ್ನು ಪೋಷಿಸುತ್ತಿದ್ದಾರೆ.

ಈ ಹಿಂದೆ ತೋಟದಲ್ಲಿ ತರಕಾರಿ ಇನ್ನಿತರ ಬೆಳೆ ಬೆಳೆಯುತ್ತಿದ್ದ ಇವರಿಗೆ ಕೂಲಿಯಾಳುಗಳ ಸಮಸ್ಯೆ ಬಹಳವಾಗಿ ಕಾಡಿದ್ದರಿಂದ ದ್ರಾಕ್ಷಿ ಬೆಳೆ ಬೆಳೆಯಲು ಮುಂದಾದರು. ಜೊತೆಗೆ ದಾಳಿಂಬೆ ಹಾಗೂ ಗುಲಾಬಿ ಬೆಳೆ ಹಾಕಿದ್ದಾರೆ.

ತಾಯಿಯ ಕೃಷಿ ಚಟುವಟಿಕೆಗೆ ಬೆಂಬಲವಾಗಿ ನಿಂತ ಮಗ: ತಾಯಿಯ ಕೃಷಿ ಚಟುವಟಿಕೆಗೆ ಬೆನ್ನೆಲುಬಾಗಿ ಪ್ರೇಮಾ ಅವರ ಮಗ ಪ್ರದೀಪ್ (ಜೋಗಿ) ಅವರು ನಿಂತಿದ್ದು ಪಿಯುಸಿ ವಿದ್ಯಾಭ್ಯಾಸದ ನಂತರ ತಾಯಿಯ ಕೆಲಸದಲ್ಲಿ ಜೊತೆಯಾಗಿದ್ದಾರೆ. ದ್ರಾಕ್ಷಿ, ದಾಳಿಂಬೆ ತೋಟದ ನಿರ್ವಹಣೆ ಜೊತೆಗೆ ಬೆಳೆದ ಗುಲಾಬಿ ಹೂಗಳನ್ನು ವಾರಕ್ಕೆರಡು ಬಾರಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ.

ಯಾವುದೇ ಸರ್ಕಾರಿ ಸವಲತ್ತು ಪಡೆದಿಲ್ಲ: ರೈತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳು ರೂಪಿಸಿದ್ದರೂ ಯಾವೊಂದು ಯೋಜನೆಯ ಉಪಯೋಗ ಪಡೆಯದೇ ತಾವಾಯ್ತು, ತಮ್ಮ ಕೆಲಸವಾಯ್ತು ಎಂಬಂತೆ ತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ.

ತಾಲ್ಲೂಕು ಆಡಳಿತದಿಂದ ಸನ್ಮಾನ: ಪ್ರೇಮಾ ಆವರ ಕೃಷಿ ಸಾಧನೆಯನ್ನು ತಾಲ್ಲೂಕು ಆಡಳಿತ ಪ್ರಗತಿಪರ ರೈತ ಮಹಿಳೆ ಎಂದು ಗುರುತಿಸಿ ಇತ್ತೀಚೆಗೆ ನಡೆದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.

ಪ್ರೇಮಾ ಪ್ರಗತಿಪರ ರೈತ ಮಹಿಳೆ ಮೇಲೂರು
ಪ್ರೇಮಾ ಪ್ರಗತಿಪರ ರೈತ ಮಹಿಳೆ ಮೇಲೂರು

ವ್ಯವಸಾಯದ ಆಸಕ್ತಿ ಹೆಚ್ಚು

ಮೂಲತಃ ಕೃಷಿಕ ಕುಟುಂಬದಲ್ಲಿ ಜನಿಸಿರುವ ನನಗೆ ಚಿಕ್ಕಂದಿನಿಂದಲೇ ವ್ಯವಸಾಯದ ಮೇಲೆ ಆಸಕ್ತಿ ಹೆಚ್ಚಾಗಿತ್ತು. ಮೊದಲು ಇರುವ ಜಮೀನಿನಲ್ಲಿ ವಿವಿಧ ರೀತಿಯ ಬೆಳೆ ಇಡುತ್ತಿದ್ದೆ. ಕೂಲಿಯಾಳುಗಳ ಕೊರತೆಯಿಂದ ದ್ರಾಕ್ಷಿ ಬೆಳೆಯಲು ಮುಂದಾದೆ. ಆ ನಂತರ ಇದೀಗ ದಾಳಿಂಬೆ ಹಾಕಲಾಗಿದೆ. ಇದರ ಜೊತೆಗೆ ಗುಲಾಬಿ ಹೂವು ಬೆಳೆಯುತ್ತಿದ್ದೇವೆ. ನನ್ನೆಲ್ಲಾ ಕೃಷಿ ಚಟುವಟಿಕೆಗಳಿಗೆ ನನ್ನ ಮಗ ಸೇರಿದಂತೆ ಕುಟುಂಬಸ್ಥರ ಬೆಂಬಲವಿದೆ. ಕೃಷಿಯಿಂದ ಒಳ್ಳೆಯ ಜೀವನ ಕಟ್ಟಿಕೊಂಡಿರುವ ತೃಪ್ತಿಯಿದೆ. ಪ್ರೇಮಾ ರೈತ ಮಹಿಳೆ ಮೇಲೂರು ಶಿಡ್ಲಘಟ್ಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT