ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿಬಿದನೂರು | ನಕಲಿ ಚಿನ್ನದ ಹಾರ ನೀಡಿ ₹24 ಲಕ್ಷ ವಂಚನೆ

ಗೌರಿಬಿದನೂರು ತಾಲ್ಲೂಕಿನ ಗೊಡ್ಡಾವಳಹಳ್ಳಿ ಬಳಿ ಘಟನೆ
Published : 20 ಆಗಸ್ಟ್ 2024, 14:48 IST
Last Updated : 20 ಆಗಸ್ಟ್ 2024, 14:48 IST
ಫಾಲೋ ಮಾಡಿ
Comments

ಗೌರಿಬಿದನೂರು: ನಕಲಿ ಚಿನ್ನದ ಹಾರ ನೀಡಿ ಆಂಧ್ರಪ್ರದೇಶದ ನಂದ್ಯಾಲ ನಗರದ ಚಿನ್ನಾಭರಣ ಕೆಲಸಗಾರ ಅಲ್ಲುರೈಯಾ ಅವರಿಗೆ ₹ 24 ಲಕ್ಷ ವಂಚಿಸಲಾಗಿದೆ. ಈ ಬಗ್ಗೆ ಅವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

ಆಂಧ್ರಪ್ರದೇಶದ ಯಾಲೂರು ಗ್ರಾಮದ ಶಬ್ಬೀರ್ ನನ್ನ ಸ್ನೇಹಿತನಾಗಿದ್ದು ನಂದ್ಯಾಲಕ್ಕೆ ಬಂದಾಗ ಭೇಟಿ ಆಗುತ್ತಿದ್ದರು. ಇತ್ತೀಚೆಗೆ ಕರೆ ಮಾಡಿ ನಮ್ಮ ಗ್ರಾಮದ ಅಹಮದ್ ಹುಸೇನ್ ಬಳಿ ಮೂರು ಬಂಗಾರದ ಗುಂಡುಗಳಿವೆ. ಪರೀಕ್ಷಿಸಬೇಕು ಎಂದು ಬಂದಿದ್ದರು. ಪರೀಕ್ಷಿಸಿ ಬಂಗಾರದ್ದು ಎಂದು ತಿಳಿಸಿದೆ.

ಎರಡು ದಿನಗಳ ನಂತರ ಮತ್ತೆ ಶಬ್ಬೀರ್ ಕರೆ ಮಾಡಿ ಗೌರಿಬಿದನೂರು ತಾಲ್ಲೂಕಿನ ಹಕ್ಕಿಪಿಕ್ಕಿ ಕಾಲೊನಿಯಲ್ಲಿ 2-3 ಕೆ.ಜಿ ಬಂಗಾರದ ಗುಂಡುಗಳ ಹಾರ ಇದೆ. ಅದರ ಬೆಲೆ ₹ 24 ಲಕ್ಷ ಎಂದು ಅಹಮದ್ ಹುಸೇನ್ ತಿಳಿಸಿದ್ದಾರೆ. ಹಾರ ತೆಗೆದುಕೊಳ್ಳುತ್ತೀರಾ ಎಂದರು.

ಎರಡು ದಿನ ಸಮಯ ಕೊಡು ಹಣ ಹೊಂದಿಸಿಕೊಳ್ಳುತ್ತೇವೆ ಎಂದು ತಿಳಿಸಿದೆ. ನಾನು, ಶಬ್ಬೀರ್, ನರಸಿಂಹಯ್ಯ, ಸುರೇಂದ್ರ, ಬ್ರಹ್ಮಂ, ಅಹಮದ್ ಹುಸೇನ್ ಕಾರಿನಲ್ಲಿ ಹಕ್ಕಿ ಪಿಕ್ಕಿ ಕಾಲೊನಿಗೆ ಬಂಗಾರ ಖರೀದಿಸಲು ಭಾನುವಾರ ₹ 25 ಲಕ್ಷ ತೆಗೆದುಕೊಂಡು ಹೊರಟೆವು. 

ಗೌರಿಬಿದನೂರಿನಿಂದ ಗೊಡ್ಡಾವಳಹಳ್ಳಿ ಗ್ರಾಮಕ್ಕೆ ಬಂದೆವು. ದೇವಸ್ಥಾನದ ಬಳಿ ಕಾರು ನಿಲ್ಲಿಸಲು ತಿಳಿಸಿದರು. ಅಲ್ಲಿ ಮೂವರು ಇದ್ದರು. ನಾನು ಬ್ರಹ್ಮಂ ಕೈಗೆ ₹ 24 ಲಕ್ಷ ಕೊಟ್ಟೆ. ಬ್ರಹ್ಮಂ ಇಲ್ಲಿದ್ದ ಮೂವರಿಗೆ ₹ 23 ಲಕ್ಷ ಕೊಟ್ಟು ಹಾರವನ್ನು ನನಗೆ ತಂದು ಕೊಟ್ಟರು. ನಾನು ಪರೀಕ್ಷಿಸುವಷ್ಟರಲ್ಲಿ ಬ್ರಹ್ಮಂ, ಆ ಮೇಲೆ ಪರೀಕ್ಷೆ ಮಾಡಿಕೊಳ್ಳುವೆ ಎಂದು ಕಾರಿನಲ್ಲಿ ಹತ್ತಿಸಿದರು. ಉಳಿದ ಹಣ ₹ 1 ಲಕ್ಷವನ್ನು ಬ್ರಹ್ಮಂ ಮತ್ತು ಅಹಮದ್ ಹುಸೇನ್ ಇಟ್ಟುಕೊಂಡರು. ‌ನಾನು ಕಾರಿನಲ್ಲಿ ಬಂಗಾರ ಪರೀಕ್ಷಿಸಲಾಗಿ ಅದು ನಕಲಿ ಎಂದು ಗೊತ್ತಾಯಿತು. 

ಅದೇ ಸ್ಥಳಕ್ಕೆ ಹೋಗಿ ನೋಡಿದಾಗ ಮೂವರು ಅಲ್ಲಿರಲಿಲ್ಲ. ಬಂಗಾರದ ಗುಂಡಿನ ಹಾರ ಕೊಡುವುದಾಗಿ ನನ್ನ ಹತ್ತಿರ ₹ 24 ಲಕ್ಷ ಪಡೆದು ನಕಲಿ ಹಾರ ನೀಡಿ ಮೋಸ ಮಾಡಿರುವ ಮೂವರು ಮತ್ತು ಹಾರ ಕೊಡಿಸುತ್ತೇವೆ ಎಂದು ನಮ್ಮನ್ನು ಕರೆ ತಂದ ಬ್ರಹ್ಮಂ ಮತ್ತು ಅಹಮದ್ ಹುಸೇನ್ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಅಲ್ಲುರೈಯಾ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT