ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆಗಳಿಗೆ ಹೆಚ್ಚಿದ ದಾಖಲಾತಿ

ಕೋವಿಡ್ ಕಾರಣ ಬಡ, ಮಧ್ಯಮ ವರ್ಗಗಳಲ್ಲಿ ಆರ್ಥಿಕ ಶಕ್ತಿ ಕುಸಿತ
Last Updated 26 ನವೆಂಬರ್ 2021, 2:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋವಿಡ್ ಜನರ ಆರ್ಥಿಕ ಶಕ್ತಿಯನ್ನು ಕುಗ್ಗಿಸಿದೆ. ಅದರಲ್ಲಿಯೂ ಬಡ ಮತ್ತು ಮಧ್ಯಮ ವರ್ಗಗಳ ಜನರು ಹೈರಾಣಾಗಿದ್ದಾರೆ. ಇಂದಿಗೂ ಕೋವಿಡ್ ಪೆಟ್ಟಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಜನರ ಆರ್ಥಿಕ ಶಕ್ತಿ ಕುಗ್ಗಿರುವುದು ಸರ್ಕಾರಿ ಶಾಲೆಗಳಿಗೆ ಜಿಲ್ಲೆಯಲ್ಲಿ ವರ ಎನ್ನುವಂತೆ ಆಗಿದೆ.

ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಗುಟುಕು ಜೀವ ಎನ್ನುವಂತೆ ಮೂರ್ನಾಲ್ಕು ವಿದ್ಯಾರ್ಥಿಗಳ ದಾಖಲಾತಿಯಿಂದ ಇಂದಲ್ಲ ನಾಳೆ ಮುಚ್ಚುತ್ತವೆ ಎನಿಸಿದ್ದ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಹೆಚ್ಚಿದೆ. ಈ ಪರಿಣಾಮ ಅವು ಬಾಗಿಲು ಮುಚ್ಚುವ ಅವಕಾಶದಿಂದ
ದೂರವಾಗಿವೆ.

2019–20ನೇ ಸಾಲಿನಲ್ಲಿ 1ರಿಂದ 10ನೇ ತರಗತಿಯವರೆಗೆ ಜಿಲ್ಲೆಯಲ್ಲಿ 74,523 ವಿದ್ಯಾರ್ಥಿಗಳು ದಾಖಲಾಗಿದ್ದರು. 2020–21ನೇ ಸಾಲಿನಲ್ಲಿ ಈ ಸಂಖ್ಯೆ76,769ಕ್ಕೆ ಹೆಚ್ಚಿತ್ತು. ಪ್ರಸಕ್ತ 2021–22ನೇ ಸಾಲಿನಲ್ಲಿ 80,599ಕ್ಕೆ ತಲುಪಿದೆ. ಈ ಮೂರು ವರ್ಷಗಳಲ್ಲಿ ಪ್ರತಿವರ್ಷವೂ ಗರಿಷ್ಠ ಸಂಖ್ಯೆಯಲ್ಲಿಯೇ ದಾಖಲಾತಿ
ಹೆಚ್ಚಿದೆ. ಜಿಲ್ಲೆಯ ಆರು ತಾಲ್ಲೂಕುಗಳ ಸರ್ಕಾರಿ ಶಾಲೆಗಳಲ್ಲಿಯೂ ದಾಖಲಾತಿಯ ಪ್ರಗತಿ ಕಾಣುತ್ತಿದೆ.ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿಯೇ ದಾಖಲಾತಿ ಹೆಚ್ಚಿದೆ. ಖಾಸಗಿ ಶಾಲೆಗಳ ವಾಹನಗಳಲ್ಲಿ ಇರುತ್ತಿದ್ದ ವಿದ್ಯಾರ್ಥಿಗಳ ಸಂದಣಿ ಈಗ ಕಡಿಮೆ
ಆಗಿದೆ.

‘ಬಡವರೂ ಸಹ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳುಹಿಸಬೇಕು ಎನ್ನುವ ಆಸೆ ಹೊಂದಿರುತ್ತಾರೆ. ಈಗಾಗಲೇ, ಖಾಸಗಿ ಶಾಲೆಗೆ ಮಕ್ಕಳ ದಾಖಲಿಸಿದ್ದವರು ಈಗ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುತ್ತಿದ್ದಾರೆ. ಅದರಲ್ಲಿಯೂ ಇಂಗ್ಲಿಷ್ ಮಾಧ್ಯಮವಿರುವ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿದೆ. ಬಡ, ಮಧ್ಯಮ ವರ್ಗಗಳ ಕುಟುಂಬಗಳಿಗೆ ಕೋವಿಡ್‌ ಆರ್ಥಿಕ ಹೊರೆಯನ್ನು ತಂದಿದೆ. ಇದೆಲ್ಲವೂ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಲು ಕಾರಣ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

‘ಚಿಕ್ಕಬಳ್ಳಾಪುರದ ಖಾಸಗಿ ಶಾಲೆಯೊಂದಕ್ಕೆ ಮಗಳನ್ನು ದಾಖಲಿಸಿದ್ದೆ. ಕೋವಿಡ್ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೂ ಸಿಲುಕಿದೆವು. ನಮ್ಮಂತಹ ಮಧ್ಯಮ ವರ್ಗದ ಕುಟುಂಬಗಳು ಶಾಲಾ ಶುಲ್ಕ ಇತ್ಯಾದಿಗೆ ಹೆಚ್ಚು ಹಣವನ್ನು ವ್ಯಯಿಸುವುದು ಕಷ್ಟವಾಗುತ್ತದೆ. ಈ ಕಾರಣದಿಂದ ಸರ್ಕಾರಿ ಶಾಲೆಗೆ ಮಗಳನ್ನು ದಾಖಲಿಸಿದ್ದೇನೆ. ಅವಳ ಶಿಕ್ಷಣದಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲ’ ಎಂದು ‍ಪೋಷಕರ ನಾರಾಯಣಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT