ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಸ್ಯೆಗಳಿಗೆ ದೊರೆಯದ ಪರಿಹಾರ: ಚಿಕ್ಕಬಳ್ಳಾಪುರಕ್ಕೆ ಭಾಗ್ಯ ತಾರದ ಬಜೆಟ್

Published 17 ಫೆಬ್ರುವರಿ 2024, 6:57 IST
Last Updated 17 ಫೆಬ್ರುವರಿ 2024, 6:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿಗೆ ಬಲ ನೀಡುವಲ್ಲಿ ವಿಫಲವಾಗಿದೆ. ರೈತ ಸಂಘಟನೆಗಳ ಮುಖಂಡರು, ನೀರಾವರಿ ಹೋರಾಟಗಾರರು ನಿರೀಕ್ಷಿಸಿದ್ದ ‘ನೀರಿನ ಆಸರೆ’ಯೂ ದೊರೆತಿಲ್ಲ. ಬಾಯಾರಿರುವ ಜಿಲ್ಲೆಗೆ ಮುಖ್ಯಮಂತ್ರಿ ಗುಟುಕು ನೀರಿನ ಭರವಸೆ ಸಹ ನೀಡಿಲ್ಲ. 

ಜಿಲ್ಲೆಯ ಪ್ರಮುಖ ಆಧಾರವೇ ಕೃಷಿ, ತೋಟಗಾರಿಕೆ, ರೇಷ್ಮೆ ಕ್ಷೇತ್ರಗಳು. ಈ ಕ್ಷೇತ್ರಗಳಿಗೆ ಘೋಷಣೆಯಾಗುವ ಅನುದಾನ, ಯೋಜನೆಗಳು ರೈತರ ಕಲ್ಯಾಣಕ್ಕೆ ಕಾರಣವಾಗುತ್ತದೆ. ಸರ್ಕಾರ ರಾಜ್ಯ ಮಟ್ಟದಲ್ಲಿ ಈ ಕ್ಷೇತ್ರಗಳಿಗೆ ಅನುದಾನ ನೀಡಿದೆ. ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದೆ. ಆದರೆ ಈ ಕ್ಷೇತ್ರಗಳ ವಿಚಾರವಾಗಿ ಜಿಲ್ಲೆಗೆ ಮೀಸಲಾಗಿ ಯಾವುದೇ ಯೋಜನೆಗಳು ದೊರೆತಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಹೈಟೆಕ್ ಹೂ ಮಾರುಕಟ್ಟೆ ನಿರ್ಮಾಣ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಒತ್ತು, ಜವಳಿ ಪಾರ್ಕ್, ದ್ರಾಕ್ಷಾ ರಸ ಉತ್ಪಾದನಾ ಘಟಕ ನಿರ್ಮಾಣ–ಹೀಗೆ ಕೆಲವು ನಿರೀಕ್ಷೆಗಳನ್ನು ಜಿಲ್ಲೆಯ ರೈತರು ಮತ್ತು ಹೋರಾಟಗಾರರು ಹೊಂದಿದ್ದರು. ಆದರೆ ಬಜೆಟ್‌ನಲ್ಲಿ ಈ ಯಾವ ಅಂಶಗಳು ಪ್ರಸ್ತಾಪವಾಗಿಲ್ಲ. 

ವಿಶೇಷವಾಗಿ ಕೈಗಾರಿಕಾ ಟೌನ್‌ಶಿಪ್‌ಗಳ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಲಾಗಿತ್ತು. ಆದರೆ ಕೈಗಾರಿಕೀಕರಣದ ಬಗ್ಗೆ ಪ್ರಸ್ತಾಪಗಳೇ ಇಲ್ಲ. ಬೆಂಗಳೂರಿಗೆ ಸಮೀಪದ ಜಿಲ್ಲೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕೈಗಾರಿಕೀಕರಣ ಅಭಿವೃದ್ಧಿ ಹೊಂದಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಕೈಗಾರಿಕಾ ಟೌನ್‌ಶಿಪ್‌ಗಳ ಸುಳಿವಿಲ್ಲ. 

ನೆರೆ ಹೊರೆ ತಾಲ್ಲೂಕುಗಳಿಗೆ ಬೆಣ್ಣೆ: ಚಿಕ್ಕಬಳ್ಳಾಪುರಕ್ಕೆ ಸಮೀಪವಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರದಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್ ಅಭಿವೃದ್ಧಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ತಿಳಿಸಿದ್ದಾರೆ. ಆದರೆ ಬೆಂಗಳೂರಿಗೆ ಹತ್ತಿರದ ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರಕ್ಕೆ ದೊರೆತಿರುವುದು ಸುಣ್ಣ.

2023ರ ಫೆಬ್ರುವರಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್‌ನಲ್ಲಿ  ಮೈಸೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾವೇರಿ,ಕೋಲಾರ ಮತ್ತು ರಾಮನಗರದಲ್ಲಿ ಇಂಟರ್‌ಗ್ರೇಟೆಡ್ ಟೌನ್‌ಶಿಪ್‌ಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಿಸಲು ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಿಂದ ಎಕ್ಸ್‌ಪ್ರೆಸ್ ಆಫ್ ಇಂಟರೆಸ್ಟ್ ಆಹ್ವಾನಿಸಲಾಗಿದೆ. ಈ ಟೌನ್‌ಶಿಪ್‌ಗಳು ನಗರ ಯೋಜನೆಗೆ ಹೊಸ ಉದ್ಯಮಗಳಿಗೆ ನೂತನ ಆಯಾಮ ನೀಡಲಿದೆ. ಉತ್ತಮ ಜೀವನ ಶೈಲಿ ಹಾಗೂ ಕೆಲಸದ ವಾತಾವರಣ ಸೃಜಿಸಲಿದೆ ಎಂದಿದ್ದರು. ಆದರೆ ಇಂಟರ್‌ಗ್ರೇಟೆಡ್ ಟೌನ್‌ಶಿಪ್‌ ಚಿಕ್ಕಬಳ್ಳಾಪುರಕ್ಕೆ ಇಂದಿಗೂ ಮರೀಚಿಕೆ ಆಗಿದೆ.

ಈಗ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಮೈಸೂರು, ಮಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರಗಿ, ತುಮಕೂರಿನ ವಸಂತ ನರಸಾಪುರ, ಕೆಜಿಎಫ್ ಮತ್ತು ಬಳ್ಳಾರಿ ಸಮೀಪ ಇಂಟರ್‌ಗ್ರೇಟೆಡ್ ಟೌನ್‌ಶಿಪ್‌ಗಳನ್ನು ಅಭಿವೃದ್ಧಿಗೊಳಿಸುವುದಾಗಿ ಪ್ರಕಟಿಸಿದ್ದಾರೆ.

ಕೊಳಚೆ ನೀರು ಶುದ್ದೀಕರಣದ ನಿರೀಕ್ಷೆ ಹುಸಿ: ಎಚ್‌.ಎನ್.ವ್ಯಾಲಿ ಮತ್ತು ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಾರಿಯಾದವು. ಎರಡು ಹಂತದಲ್ಲಿ ಮಾತ್ರ ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಹರಿಸಲಾಗುತ್ತಿದೆ.

ಈ ಕೊಳಚೆ ನೀರನ್ನು ಮೂರು ಹಂತದಲ್ಲಿ ಸಂಸ್ಕರಿಸಬೇಕು ಎನ್ನುವ ಒತ್ತಾಯ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೀರಾವರಿ ಹೋರಾಟಗಾರರು ಮತ್ತು ಜನರದ್ದಾಗಿದೆ. 2023ರ ಬಜೆಟ್‌ನಲ್ಲಿ ಈ ಬಗ್ಗೆ ಬಸವರಾಜ ಬೊಮ್ಮಾಯಿ ಸಹ ಪ್ರಸ್ತಾಪಿಸಿದ್ದರು. ಆದರೆ ಬಜೆಟ್‌ನಲ್ಲಿ ಮೂರು ಹಂತದ ಶುದ್ದೀಕರಣದ ಪ್ರಸ್ತಾಪವಿಲ್ಲದಿರುವುದು ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. 

ಈ ಹಿಂದಿನ ಸರ್ಕಾರಗಳು ಬಜೆಟ್‌ನಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಗೆ ಇಂತಿಷ್ಟು ಎಂದು ಹಣ ಮೀಸಲಿಡುತ್ತಿದ್ದವು. ಯೋಜನೆಯ ವಿಚಾರವನ್ನು ಪ್ರತಿ ವರ್ಷದಂತೆ ಬಜೆಟ್‌ನಲ್ಲಿ ‍ಪ್ರಸ್ತಾಪಿಸುತ್ತಿದ್ದವು. ಈ ಬಾರಿಯ ಬಜೆಟ್‌ನಲ್ಲಿಯೂ ಎತ್ತಿನಹೊಳೆ ಯೋಜನೆಯ ಪ್ರಸ್ತಾಪವಾಗಿದೆ. 

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ದೊಡ್ಡಬಳ್ಳಾಪುರ ಬಳಿಯ ವಿತರಣಾ ತೊಟ್ಟಿಯವರೆಗೆ ಪೂರ್ವ ಪರಿಕ್ಷಾರ್ಥ ಚಾಲನೆ. ಪ್ರಸಕ್ತ ಸಾಲಿನಲ್ಲಿ ಯೋಜನೆಯ ಎಲ್ಲಾ ಲಿಫ್ಟ್ ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುರುತ್ವಕಾಲುವೆಗೆ ನೀರು ಹರಿಸಲು ಕ್ರಮವಹಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ಎತ್ತಿನಹೊಳೆ, ಎಚ್‌.ಎನ್.ವ್ಯಾಲಿ ನೀರಿನ ಮೂರು ಹಂತದ ಶುದ್ದೀಕರಣ ಮತ್ತು ಕೃಷ್ಣಾಮೇಲ್ದಂಡೆ ನೀರು ಹರಿಸುವ ವಿಚಾರಗಳು ಬಜೆಟ್‌ನಲ್ಲಿ ಪ್ರಸ್ತಾಪವಾಗಿಲ್ಲ. ಈ ಹಿಂದಿನಿಂದಲೂ ಜಿಲ್ಲೆಯ ಜನರ ಪ್ರಮುಖ ಬೇಡಿಕೆ ನೀರಾವರಿ. ಆದರೆ ಬಜೆಟ್‌ನಲ್ಲಿ ಜಿಲ್ಲೆಯ ನೀರಾವರಿ ವಿಚಾರಗಳ ಪ್ರಸ್ತಾಪಗಳು ಇಲ್ಲ.

ರಾಜ್ಯದ ಕೆಲವು ಕಡೆಗಳಲ್ಲಿ ಜವಳಿ ಪಾರ್ಕ್ ನಿರ್ಮಿಸುವು ಬಗ್ಗೆ ಮುಖ್ಯಮಂತ್ರಿ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಜವಳಿ ಪಾರ್ಕ್ ಇಲ್ಲದಿರುವ ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸುವ ಉದ್ದಿಮೆದಾರರಿಗೆ ಮೂಲಸೌಕರ್ಯಕ್ಕಾಗಿ ಜವಳಿ ನೀತಿ ಅನ್ವಯ ಸಹಾಯಧನ ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ. ಜಿಲ್ಲೆಗೆ ಈ ಮಿನಿ ಜವಳಿ ಪಾರ್ಕ್‌ ಸ್ಥಾಪನೆಯಾಗುತ್ತದೆಯೇ ಎನ್ನುವ ನಿರೀಕ್ಷೆಯೂ ಈಗ ಗರಿಗೆದರಿದೆ. 

ರೇಷ್ಮೆನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಫಲಾನುಭವಿಗಳ ಆರ್ಥಿಕ ಸ್ಥಿತಿ ಉತ್ತಮಪಡಿಸಲು ರೇಷ್ಮೆ ಇಲಾಖೆಯ ಮೂಲಕ ತರಬೇತಿ. ಕೆಎಂಡಿಸಿ ಮೂಲಕ ಸಾಲ ಸೌಲಭ್ಯ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದು ಶಿಡ್ಲಘಟ್ಟ ನಗರದ ಬಿಚ್ಚಾಣಿಕೆದಾರರಿಗೆ ಅನುಕೂಲತರಲಿದೆ. 

ಕೃಷಿ, ನೀರಾವರಿ, ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮ, ಕ್ರೀಡೆ ಮತ್ತಿತರ ಕ್ಷೇತ್ರಗಳ ಬೆಳವಣಿಗೆ ಸಂಬಂಧಿಸಿದಂತೆ ಜಿಲ್ಲೆಗೆ ಯಾವುದಾದರೂ ಯೋಜನೆ ದೊರೆಯುತ್ತದೆಯೇ ಎನ್ನುವ ಜನರು, ಹೋರಾಟಗಾರರ ನಿರೀಕ್ಷೆಯನ್ನು ಬಜೆಟ್ ಹುಸಿಯಾಗಿಸಿದೆ.

ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರದ ಬೆಂಗಳೂರು ರಸ್ತೆಯಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್
ಚಿಕ್ಕಬಳ್ಳಾಪುರದ ಬೆಂಗಳೂರು ರಸ್ತೆಯಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್

ಬಜೆಟ್‌ನಲ್ಲಿ ಜಿಲ್ಲೆಯ ಪ್ರಸ್ತಾಪ

  • ಚಿಕ್ಕಬಳ್ಳಾಪುರ ಸೇರಿದಂತೆ ಒಟ್ಟು ಆರು ರೈಲ್ವೆ ಮೇಲ್ಸೇತುವೆ ಕೆಳಸೇತುವೆ ನಿರ್ಮಾಣಕ್ಕೆ ₹ 350 ಕೋಟಿ

  • ಏಷ್ಯಾದಲ್ಲಿಯೇ ಅತಿ ಹೆಚ್ಚು ರೇಷ್ಮೆಗೂಡು ಮಾರಾಟ ವಹಿವಾಟು ನಡೆಸುವ ರಾಮನಗರ ಮತ್ತು ಶಿಡ್ಲಘಟ್ಟದ ರೇಷ್ಮೆಗೂಡು ಮಾರುಕಟ್ಟೆಗಳನ್ನು ಮೊದಲನೇ ಹಂತದಲ್ಲಿ ₹ 150 ವೆಚ್ಚದಲ್ಲಿ ಹೈಟೆಕ್ ಮಾರುಕಟ್ಟೆಗಳನ್ನಾಗಿ ಅಭಿವೃದ್ಧಿಪಡಿಸಲು ಈಗಾಗಲೇ ಕ್ರಮವಹಿಸಲಾಗಿದೆ. ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ ₹ 250 ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

  • ಚಿಕ್ಕಬಳ್ಳಾಪುರ ಉಡುಪಿ ನೆಲಮಂಗಲ ಮಡಿಕೇರಿ ಮಧುಗಿರಿ ಹುಣಸೂರಿನಲ್ಲಿ ಅಂದಾಜು ₹ 36 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ.

  • ಚಿಕ್ಕಬಳ್ಳಾಪುರ ಬೆಂಗಳೂರಿನ ದಾಸನಪುರ ಮೈಸೂರು ಹುಬ್ಬಳ್ಳಿ ಬಳ್ಳಾರಿ ಕೋಲಾರ ಹಾಗೂ ಬೆಳಗಾವಿ ಮಾರುಕಟ್ಟೆಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಬಯೊ ಸಿಎನ್‌ಜಿ ಘಟಕ ಸ್ಥಾಪಿಸುವ ಮೂಲಕ ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಲಾಗುವುದು.

ಕೈಗಾರಿಕೀಕರಣ ತೀವ್ರ ನಿರ್ಲಕ್ಷ್ಯ ಜಿಲ್ಲೆಯು ಬೆಂಗಳೂರಿಗೆ ಸಮೀಪವಿದೆ. ಕೈಗಾರಿಕೀಕರಣ ಬೆಳವಣಿಗೆಗೆ ಹೆಚ್ಚು ಅವಕಾಶಗಳು ಇವೆ. ಆದರೆ ಉದ್ಯೋಗ ಸೃಷ್ಟಿಸುವ ಕೈಗಾರಿಕಾ ಯೋಜನೆಗಳನ್ನು ಕನಿಷ್ಠ ಮಟ್ಟದಲ್ಲಿಯೂ ಜಿಲ್ಲೆಗೆ ನೀಡಿಲ್ಲ. ನಂದಿಗಿರಿಧಾಮ ಆವುಲಬೆಟ್ಟ ಸೇರಿದಂತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಫುಲ ಅವಕಾಶಗಳು ಇದ್ದವು. ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿ ಉದ್ಯೋಗದ ಅವಕಾಶಗಳನ್ನು ಹೆಚ್ಚು ಸೃಷ್ಟಿಸುತ್ತಿದ್ದವು. ಆದರೆ ಈ ಬಜೆಟ್‌ನಲ್ಲಿ ಈ ಯಾವ ವಿಚಾರಗಳ ಪ್ರಸ್ತಾಪವೂ ಇಲ್ಲ.  ಜಿಲ್ಲೆಯ ಜನರು ಸರ್ಕಾರವನ್ನೇ ಹೆದ್ದಾರಿ ಮಾಡಿಸಿಕೊಡಿ ಅಥವಾ ಹೈಟೆಕ್ ಅಭಿವೃದ್ಧಿಗೆ ಕ್ರಮವಹಿಸಿ ಎಂದೇನೂ ಕೇಳುತ್ತಿಲ್ಲ. ನೀರು ನಮ್ಮ ಜನರ ಪ್ರಮುಖ ಬೇಡಿಕೆ. ಜಿಲ್ಲೆಯ ಜೀವ ಜಲ ನೀರಿನಲ್ಲಿ ಯುರೇನಿಯಂ ಪ್ಲೋರೈಡ್ ಪ್ರಮಾಣ ಹೆಚ್ಚಿದೆ. ಇಂತಹ ಕಡೆಗೆ ನೀರಾವರಿ ವಿಚಾರಗಳು ಪ್ರಮುಖವಾಗಿ ಪ್ರಸ್ತಾಪವಾಗಬೇಕಾಗಿತ್ತು. ಆದರೆ ಶಾಶ್ವತ ನೀರಾವರಿ ವಿಚಾರವಾಗಿ ಬಜೆಟ್‌ನಲ್ಲಿ ಪ್ರಸ್ತಾಪವೂ ಇಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಜಿಲ್ಲೆಯ ಪಾಲಿಗೆ ಬಜೆಟ್ ನೀರಸ.  ಸಂದೀಪ್ ರೆಡ್ಡಿ ಅಧ್ಯಕ್ಷರು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಪೆರೇಸಂದ್ರ ಚಿಕ್ಕಬಳ್ಳಾಪುರ

ಬಯಲು ಸೀಮೆ ಜಿಲ್ಲೆಗೆ ವಂಚನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಅತ್ಯಂತ ನೀರಸವಾಗಿದೆ. ಬಯಲುಸೀಮೆ ಜಿಲ್ಲೆಗಳಿಗೆ ವಂಚಿಸಲಾಗಿದೆ. ಚಿಕ್ಕಬಳ್ಳಾಪುರ ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರಿಗೆ ತೀವ್ರ ನಿರಾಸೆ ಮೂಡಿಸಿದೆ. ಹಿಂದಿನ ಬಿಜೆಪಿ ಸರ್ಕಾರ ಬೆಂಗಳೂರಿಗೆ ಪರ್ಯಾಯವಾಗಿ ಸುತ್ತಮುತ್ತಲಿನ ನಗರಗಳನ್ನು ಬೆಳೆಸುವ ಹಾಗೂ ಬೇರೆ ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆ ಸ್ಥಾಪಿಸಲು ‘ಬಿಯಾಂಡ್‌ ಬೆಂಗಳೂರು’ ಎಂಬ ಕಲ್ಪನೆಯೊಂದಿಗೆ ಈ ಜಿಲ್ಲೆಗಳಲ್ಲಿ ತಲಾ ಆದಾಯ ಹೆಚ್ಚಿಸಲು ಒತ್ತು ನೀಡಿತ್ತು. ಆದರೆ ಇಂದಿನ ಬಜೆಟ್‌ನಲ್ಲಿ ಬಯಲುಸೀಮೆ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆ ಇಲ್ಲ. ಹೂ ಬೆಳೆಗಾರರ ಪ್ರಗತಿಗಾಗಿ ಚಿಕ್ಕಬಳ್ಳಾಪುರದಲ್ಲಿ ಅಂತರರಾಷ್ಟ್ರೀಯ ಹೂ ಮಾರುಕಟ್ಟೆ ನಿರ್ಮಿಸುವ ಯೋಜನೆಯನ್ನು ಬಿಜೆಪಿ ಸರ್ಕಾರ ನೀಡಿತ್ತು. ಇದನ್ನು ಸಾಕಾರ ಗೊಳಿಸುವುದು ಈಗಿನ ಸರ್ಕಾರದ ಆದ್ಯತೆ ಆಗಬೇಕಿತ್ತು.   ಡಾ.ಕೆ.ಸುಧಾಕರ್ ಮಾಜಿ ಸಚಿವ ಚಿಕ್ಕಬಳ್ಳಾಪುರ 

ನೀರಿನ ಹೆಸರಿನಲ್ಲಿ ತಾರತಮ್ಯ ಬಯಲುಸೀಮೆಗೆ ಮೋಸದ ಪರಾಕಾಷ್ಠೆ. ಚುನಾವಣೆ ಗೆಲ್ಲಲು ಮಾತ್ರ ಮೂರನೇ ಹಂತದ ಶುದ್ಧೀಕರಣದ ಬಗ್ಗೆ ಮಾತನಾಡುತ್ತಾರೆ. ಬಜೆಟ್‌ನಲ್ಲಿ ಕೆ.ಸಿ ವ್ಯಾಲಿ ಮತ್ತು ಎಚ್.ಎನ್. ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೆ ತಿಲಾಂಜಲಿ ಇಡಲಾಗಿದೆ. ಯಾವುದೇ ಲಾಭವಿಲ್ಲದ ಎತ್ತಿನಹೊಳೆ ಯೋಜನೆಯ ಜಪ ಮುಂದುವರಿದಿದೆ. ಕೆರೆ ಕುಂಟೆ ಕಾಲುವೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ. ಕೃಷ್ಣ-ಪೆನ್ನಾರ್ ನದಿ ಜೋಡಣೆ ಬಗ್ಗೆ ಚಕಾರವಿಲ್ಲ. ಜಿಲ್ಲೆಯ ಕುಡಿಯುವ ನೀರಿನಲ್ಲಿ ಯುರೇನಿಯಂ ಇರುವ ಬಗ್ಗೆ ಸರ್ಕಾರಕ್ಕೆ ಕನಿಷ್ಠ ಕನಿಕರವಿಲ್ಲ. ನೀರಿನ ಹೆಸರಲ್ಲಿ ತಾರತಮ್ಯ ಮುಂದುವರಿದಿದೆ. ಆಂಜನೇಯ ರೆಡ್ಡಿ ಅಧ್ಯಕ್ಷರು ಶಾಶ್ವತ ನೀರಾವರಿ ಹೋರಾಟ ಸಮಿತಿ ನಾಯನಹಳ್ಳಿ ಚಿಕ್ಕಬಳ್ಳಾಪುರ

ಶೂನ್ಯ ಬಜೆಟ್ ಜಿಲ್ಲೆಗೆ ಬಜೆಟ್‌ನಲ್ಲಿ ಕೊಡುಗೆ ಶೂನ್ಯ. ರೇಷ್ಮೆ ಮಾರುಕಟ್ಟೆ ವಿಚಾರವಾಗಿ ಸಣ್ಣ ಹೆಜ್ಜೆ ಇಟ್ಟಿದ್ದಾರೆ. ರಾಮಗರ ಮತ್ತು ಶಿಡ್ಲಘಟ್ಟ ಮಾರುಕಟ್ಟೆಗೆ ₹ 250 ಕೋಟಿ ನಿಗದಿಗೊಳಿಸುವುದಾಗಿ ಹೇಳಿದ್ದಾರೆ. ಆದರೆ ಕಳೆದ ಬಜೆಟ್‌ನಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ₹ 75 ಕೋಟಿ  ಘೋಷಿಸಿದ್ದರು. ಈ ಕಾಮಗಾರಿಯೇ ಟೆಂಡರ್ ಸಹ ಆಗಿಲ್ಲ. 10 ಎಕರೆ ಜಾಗ ಮಂಜೂರಾಗಿದೆ. ಇನ್ನೂ ಮೂರೂವರೆ ಎಕರೆ ಮಂಜೂರಿಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಹೊರತುಪಡಿಸಿ ನೋಡುವುದಾಗಿ ನಮ್ಮ ಜಿಲ್ಲೆಗೆ ಬಜೆಟ್ ಕೊಡುಗೆ ಶೂನ್ಯವಾಗಿದೆ. ಬೈರೇಗೌಡ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಶಿಡ್ಲಘಟ್ಟ

ನಿರಾಶಾದಾಯಕ ಬಜೆಟ್ ಶಿಡ್ಲಘಟ್ಟ ರೇಷ್ಮೆಗೂಡಿನ ಮಾರುಕಟ್ಟೆಗೆ ಅನುದಾನ ಬಿಟ್ಟರೆ ಎಚ್.ಎನ್. ವ್ಯಾಲಿ ಯೋಜನೆಯ ನೀರಿನ ಮೂರು ಹಂತದ ಶುದ್ದೀಕರಣ ಆಹಾರ ಹಣ್ಣು ತರಕಾರಿ ಶೇಖರಣೆಗೆ ಶೀತಲಿಕರಣ ಘಟಕಗಳ ನಿರ್ಮಾಣ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಇಲ್ಲ. ಇದು ನಿರಾಶಾದಾಯಕ ಬಜೆಟ್. ಶಿಡ್ಲಘಟ್ಟದಲ್ಲಿ ರೇಷ್ಮೆ ಹೈಟೆಕ್‌ ಮಾರುಕಟ್ಟೆಗೆ ಹೆಚ್ಚಿನ ಅನುದಾನ ನೀಡಿರುವುದರಿಂದ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಪ್ರತೀಶ್ ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿಡ್ಲಘಟ್ಟ 

ಗ್ಯಾರಂಟಿ ಜಾರಿಗೆ ಆದ್ಯತೆ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನರಿಗೆ ನೀಡಿದ ವಾಗ್ದಾನದಂತೆ ಐದು ಗ್ಯಾರಂಟಿಗಳ ಜಾರಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಗೆ ಬಜೆಟ್‌ನಲ್ಲಿ ಯಾವುದೇ ಯೋಜನೆಗಳು ಘೋಷಣೆ ಮಾಡಿಲ್ಲ. ಕೈಗಾರಿಕೆಗಳು ನೀರಾವರಿ ಯೋಜನೆಗಳು ಮರೀಚಿಕೆಯಾಗಿವೆ. ಬರಗಾಲಕ್ಕೆ ಸಿಲುಕಿರುವ ಕೃಷಿಕರಿಗೆ ತಲಾ ₹ 2 ಸಾವಿರ ಪರಿಹಾರ ಸಾಲದ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಹಾಲು ಹಾಗೂ ರೇಷ್ಮೆ ಉತ್ಪಾದಕರಿಗೆ ಸಹಾಯಧನದ ಹೆಚ್ಚಳ ಮುಂತಾದ ಕ್ರಮವಹಿಸಿದ್ದಾರೆ. ಅಲ್ಪಸಂಖ್ಯಾತರು ಹಾಗೂ ದಲಿತರಿಗೆ ಅನುದಾನ ಒದಗಿಸಿದ್ದಾರೆ. ಇದೆಲ್ಲ ಸ್ವಾಗತಾರ್ಹ. ಆದರೆ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ನೀಡಬೇಕಾದ ಮಹತ್ವ ನೀಡಿಲ್ಲ. ಬಿಸಿಯೂಟ ಅಂಗವಾಡಿ ಆಶಾ ಹಾಸ್ಟೆಲ್ ನೌಕರರು ಸಂಜೀವಿನಿ ನೌಕರರಿಗೆ ವೇತನ ಹೆಚ್ಚಿಸಿಲ್ಲ. ಎಂ.ಪಿ. ಮುನಿವೆಂಕಟಪ್ಪ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಗೇಪಲ್ಲಿ

ಬಾಗೇಪಲ್ಲಿ ಗೌರಿಬಿದನೂರು ಚಿಂತಾಮಣಿಯ ಪ್ರಸ್ತಾಪವೇ ಇಲ್ಲ
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರತಿನಿಧಿಸುವ ಚಿಂತಾಮಣಿ ಮೂರು ಬಾರಿ ಸುಬ್ಬಾರೆಡ್ಡಿ ಶಾಸಕರಾಗಿರುವ ಬಾಗೇಪಲ್ಲಿ ಮತ್ತು ಕಾಂಗ್ರೆಸ್‌ ಬೆಂಬಲಿಸಿರುವ ಕೆ.ಎಚ್‌.ಪುಟ್ಟಸ್ವಾಮಿಗೌಡ ಅವರ ಗೌರಿಬಿದನೂರು ಕ್ಷೇತ್ರದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪವೇ ಇಲ್ಲ. ಬಾಗೇಪಲ್ಲಿ ರಾಜ್ಯದಲ್ಲಿಯೇ ತೀರಾ ಹಿಂದುಳಿದ ತಾಲ್ಲೂಕು ಎನಿಸಿದೆ. ಈ ಬಾಗೇಪಲ್ಲಿ ಕ್ಷೇತ್ರಕ್ಕೆ ಸೇರುವ ಚೇಳೂರು ಹೊಸ ತಾಲ್ಲೂಕು ಕೇಂದ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT