ಶನಿವಾರ, ಜುಲೈ 31, 2021
27 °C
ಸೋಮವಾರ ಜಿಲ್ಲೆಯಲ್ಲಿ 60 ಪ್ರಕರಣಗಳು ವರದಿ, ವಿವಿಧೆಡೆ ಜಿಲ್ಲಾಧಿಕಾರಿ ಭೇಟಿ

ಸಾವಿರ ಸಮೀಪಿಸಿದ ಕೋವಿಡ್‌ ಪ್ರಕರಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 60 ಕೋವಿಡ್‌ 19 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 910ಕ್ಕೆ ಏರಿ, ಸಾವಿರದ ಗಡಿ ಸಮೀಪಿಸಿದೆ.

ಜಿಲ್ಲೆಯಲ್ಲಿ ಸೋಮವಾರದ ವರೆಗೆ 33,004 ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿದ್ದು, ಈ ಪೈಕಿ 28,706 ಮಂದಿ ವರದಿ ನೆಗೆಟಿವ್‌ ಬಂದಿದೆ. 3,388 ಜನರ ವರದಿ ಬರಬೇಕಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಪೈಕಿ ಈವರೆಗೆ 20 ಜನರು ಮೃತಪಟ್ಟಿದ್ದು, 392 ಜನರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡಗಡೆಗೊಂಡಿದ್ದಾರೆ. ಸೋಮವಾರ ಒಂದೇ ದಿನ 43 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 498 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿವಿಧೆಡೆ ಜಿಲ್ಲಾಧಿಕಾರಿ ಭೇಟಿ

ಕೋವಿಡ್‌ 19 ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪರಿಶೀಲಿಸುವ ದಿಸೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಆರ್.ಲತಾ ಅವರು ವಿವಿಧೆಡೆ ಭೇಟಿ ನೀಡಿದರು.

ಕೋವಿಡ್‌ ಪ್ರಕರಣಗಳು ವರದಿಯಾದ ಪಟ್ರೇನಹಳಿ, ಅಗಲಗುರ್ಕಿ, ಅಂಗರೇಕನಹಳ್ಳಿ, ಮಂಚನಬೆಲೆ, ನಲ್ಲಗುಡ್ಡಪಾಳ್ಯ, ಮೈಲಾಪನಹಳ್ಳಿ, ಬಂಡಮ್ಮನಹಳ್ಳಿ ತೋಟದ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ, ಸ್ಥಳೀಯರಿಂದ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು.

ಈ ವೇಳೆ ಮಾತನಾಡಿದ ಅವರು, ‘ಸಾರ್ವಜನಿಕರು ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸುವ ಜತೆಗೆ ಅನಗತ್ಯವಾಗಿ ಹೊರಗೆ ಸುತ್ತಾಡುವುದು ನಿಲ್ಲಿಸಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಚಿಕ್ಕ ಮಕ್ಕಳು, ವೃದ್ಧರ ಬಗ್ಗೆ ಕಾಳಜಿ ಮಾಡಬೇಕು’ ಎಂದು ತಿಳಿಸಿದರು.

‘ಹೊರ ಜಿಲ್ಲೆಗಳಿಂದ ಜಿಲ್ಲೆಗೆ ವಾಪಾಸಾಗಿರುವವರು ಕಡ್ಡಾಯವಾಗಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಬೇಕು. ವರದಿ ಬರುವವರೆಗೂ ಕ್ವಾರಂಟೈನ್‌ಗೆ ಒಳಗಾಗಬೇಕು. ಇತರ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಪ್ರಮಾಣ ಕಡಿಮೆ ಇದೆ. ಆದರೆ ಸೋಂಕು ಹಳ್ಳಿಗಳಿಗೆ ಹಬ್ಬುತ್ತಿರುವುದು ಆತಂಕದ ಸಂಗತಿ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕೋವಿಡ್‌ ಪೀಡಿತ ಪ್ರದೇಶಗಳಲ್ಲಿ ಯಾರೂ ಮನೆಯಿಂದ ಹೊರಗೆ ಬರದೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಹಕಾರ ನೀಡಬೇಕು. ಒಂದು ವೇಳೆ ಯಾರಾದರೂ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬಂದರೆ ದಂಡ ವಿಧಿಸುವ ಜತೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ನಗರದದ ಮಾದರಿಯಲ್ಲಿಯೇ ಪ್ರತಿಯೊಂದು ಗ್ರಾಮದಲ್ಲಿಯೂ ಗ್ರಾಮ ಮಟ್ಟದ ಕಾರ್ಯಪಡೆ ರಚನೆ ಮಾಡಿದ್ದು, ಅವು  ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿವೆ ಎಂಬುದನ್ನು ಗಮನಿಸುತ್ತಿದ್ದೇವೆ. ಹಳ್ಳಿಗಳಲ್ಲಿ ಸೋಂಕಿನ ಸರಪಳಿ ತುಂಡರಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು. ಆ ಮೂಲಕ ಕೋವಿಡ್ ನಿಯಂತ್ರಿಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ‘ಸ್ಥಳಿಯ ಮಟ್ಟದ ಕಾರ್ಯಪಡೆ ಸಮಿತಿಗಳು ಹಾಗೂ ಸ್ವಯಂ ಸೇವಕರು ಹಳ್ಳಿಗಳಲ್ಲಿ ಖುದ್ದಾಗಿ ಭೇಟಿ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ತಂಡಗಳಾಗಿ ವಿಂಗಡಣೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.

ಕೋವಿಡ್-19 ನೋಡಲ್ ಅಧಿಕಾರಿ ಭಾಸ್ಕರ್, ಚಿಕ್ಕಬಳ್ಳಾಪುರ ತಹಶೀಲ್ದಾರ್ ನಾಗಪ್ರಶಾಂತ್ ಹಾಜರಿದ್ದರು.

ಜಿಲ್ಲೆಯಲ್ಲಿ ತಾಲ್ಲೂಕುವಾರು ಕೋವಿಡ್‌ ಪ್ರಕರಣಗಳ ವಿವರ

ತಾಲ್ಲೂಕು;ಜುಲೈ20;ಒಟ್ಟು;ಬಿಡುಗಡೆ;ಒಟ್ಟು ಬಿಡುಗಡೆ;ಸಕ್ರಿಯ ಪ್ರಕರಣ;ಸಾವು

ಚಿಕ್ಕಬಳ್ಳಾಪುರ;22;308;6;95;203;10

ಬಾಗೇಪಲ್ಲಿ;3;127;11;69;57;1

ಚಿಂತಾಮಣಿ;1;142;8;63;77;2

ಗೌರಿಬಿದನೂರು;31;257;15;143;108;6

ಗುಡಿಬಂಡೆ;2;22;0;0;22;0

ಶಿಡ್ಲಘಟ್ಟ;1;54;3;22;31;1

ಒಟ್ಟು;60;910;43;392;498;20

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು