ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಗುಜರಿಗೆ ‌54 ಕೆಎಸ್‌ಆರ್‌ಟಿಸಿ ಬಸ್

ಚಿಕ್ಕಬಳ್ಳಾಪುರ ಸಾರಿಗೆ ವಿಭಾಗ; ಕೆ.ವಿ.ಕ್ಯಾಂಪಸ್‌ ಬಳಿ ಮೈಕಳಚುತ್ತಿರುವ ವಾಹನ
Last Updated 9 ಸೆಪ್ಟೆಂಬರ್ 2021, 4:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಇಲ್ಲಿನ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ವ್ಯಾಪ್ತಿಯ 54 ಬಸ್‌ಗಳು ಗುಜರಿ ಸೇರಿವೆ. ಹೌದು 15 ವರ್ಷ ಮೀರಿದ ಮತ್ತು ಇದಕ್ಕಿಂತಲೂ ಹಳೆಯದಾದ ಬಸ್‌ಗಳನ್ನು ಸಂಸ್ಥೆಯು ಗುಜರಿಗೆ ನೀಡಿದೆ.

ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿಯನ್ನು ಕೇಂದ್ರ ಸರ್ಕಾರ ‌ಇತ್ತೀಚೆಗೆ ಜಾರಿಗೊಳಿಸಿತ್ತು. ಆ ಪ್ರಕಾರ ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ವಾಹನಗಳು ಗುಜರಿ ಸೇರುವುದಕ್ಕೆ ಅರ್ಹವಾಗಿವೆ. 15 ವರ್ಷ ಮೇಲ್ಪಟ್ಟ ಮ್ಯಾಕ್ಸಿಕ್ಯಾಬ್‌, ಕಾರು, ಆಟೊ‌‌, ಬಸ್‌ ಮತ್ತು ಲಾರಿಗಳು ಸೇರಿದಂತೆ ಒಟ್ಟು 39 ಲಕ್ಷ ವಾಹನಗಳು ಗುಜರಿ ಸೇರುತ್ತವೆ. ಈ ನೀತಿಯಡಿ ರಾಜ್ಯದಲ್ಲಿ 45 ಸಾವಿರ ಬಸ್‌ಗಳು ಗುಜರಿ ಸೇರಲಿವೆ.

ಈಗ ಚಿಕ್ಕಬಳ್ಳಾಪುರ ಮತ್ತು ಕೋಲಾರ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ವ್ಯಾಪ್ತಿಯ 59 ಬಸ್‌ಗಳು ಗುಜರಿ ಸೇರಿವೆ. ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗೀಯ 54 ಮತ್ತು ಕೋಲಾರ ವಿಭಾಗದ 5 ಬಸ್‌ಗಳು ಇವೆ. ನಗರದ ಹೊರವಲಯದ ಕೆ.ವಿ.ಕ್ಯಾಂಪಸ್‌ ಬಳಿ ಬಸ್‌ಗಳನ್ನು ಟೆಂಡರ್ ಪಡೆದ ಗುಜರಿಯವರು ಹಲವು ದಿನಗಳಿಂದ ವಿಲೇವಾರಿ ಮಾಡುತ್ತಿದ್ದಾರೆ.

ಪರಿಸರ ಮಾಲಿನ್ಯವನ್ನು ತಡೆಯುವುದು ಮತ್ತು ಹೊಸ ವಾಹನಗಳ ಖರೀದಿಗೆ ಉತ್ತೇಜಿಸವ ಕಾರಣ ಕೇಂದ್ರ ಸರ್ಕಾರ ಗುಜರಿ ನೀತಿಯನ್ನು ಜಾರಿಗೊಳಿಸಿದೆ.

ಒಂದು ಸಮಯದಲ್ಲಿ ಅಂದಚೆಂದದಿಂದ ಕಂಗೊಳಿಸಿದ್ದ ಮತ್ತು ಲಕ್ಷಾಂತರ ಕಿಲೋಮೀಟರ್ ಸಂಚರಿಸಿರುವ ರಾಜಹಂಸ ಹಾಗೂ ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳ ಬಿಡಿಭಾಗಗಳನ್ನು ಕಳಚಲಾಗುತ್ತಿದೆ. ಬಸ್‌ಗಳು ತಮ್ಮ ಅಂಗಗಳನ್ನು ಒಂದೊಂದಾಗಿ ಕಳಚುತ್ತಿವೆ. ಈ ಬಸ್‌ಗಳನ್ನು ನಾಲ್ಕು ಗುಜರಿ ವ್ಯಾಪಾರಿಗಳು
ಪಡೆದಿದ್ದಾರಂತೆ.

ಒಮ್ಮೆ ಇಲ್ಲಿಗೆ ಭೇಟಿ ನೀಡಿದರೆ ಜನರಿಂದ ಅಬ್ಬಾ ಎನ್ನುವ ಉದ್ಗಾರ ಖಂಡಿತ ಬರುತ್ತದೆ. ಸೀಟ್‌ಗಳು, ಟೈರ್‌ಗಳು, ಗೇರ್‌ಗಳು, ಬಸ್‌ನ ಹೊರಕವಚದ ತಗಡು, ಸ್ಟೇರಿಂಗ್, ಎಂಜಿನ್...ಹೀಗೆ ನಾನಾ ಬಿಡಿಭಾಗಗಳು ಕಾಣುತ್ತವೆ. ಹತ್ತಾರು ಮಂದಿ ಕಾರ್ಮಿಕರು ಹಲವು ದಿನಗಳಿಂದ ಈ ವಾಹನಗಳನ್ನು ಕಳಚುತ್ತಿದ್ದಾರೆ.

‘ಟೆಂಡರ್‌ನಲ್ಲಿ ಈ ಬಸ್‌ಗಳನ್ನು ಖರೀದಿಸಿದ್ದೇವೆ. ₹ 1.80 ಲಕ್ಷ, ₹ 2.20 ಲಕ್ಷ ಹೀಗೆ ವಿವಿಧ ಬೆಲೆಯಲ್ಲಿ ಖರೀದಿಸಿದ್ದೇವೆ. ಈ ಹಳೇ ಬಸ್‌ಗಳನ್ನು ಇಲ್ಲಿ ಕಳಚುತ್ತಿದ್ದೇವೆ. ನಮಗೆ ಯಾವ ಭಾಗಗಳು ಬೇಕೊ ಅವುಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕೊ ಮಾಡುತ್ತಿದ್ದೇವೆ. ಕೋಲಾರ ಹತ್ತಿರವಿರುವ ಕಾರಣ ಅಲ್ಲಿನ ಬಸ್‌ಗಳನ್ನೂ ಇಲ್ಲಿಯೇ ಕಳಚುತ್ತಿದ್ದೇವೆ’ ಎಂದು ಗುಜರಿ ವ್ಯಾಪಾರಿಯೊಬ್ಬರು ತಿಳಿಸಿದರು.

‘15, 20 ವರ್ಷದ ಹಳೇ ಬಸ್‌ಗಳು ಇಲ್ಲಿವೆ. ರಾಜ್ಯದಾದ್ಯಂತ ಟೆಂಡರ್‌ನಲ್ಲಿ ಈ ಗುಜರಿ ಬಸ್‌ಗಳನ್ನು ಮಾರಾಟಕ್ಕೆ ಇಟ್ಟಿದ್ದರು. ನಾವು ಬಿಡ್ ಹಾಕಿದೆವು. ಬಸ್‌ ಅನ್ನು ಪೂರ್ಣವಾಗಿ ಕಳಚುತ್ತಿದ್ದೇವೆ. ನಮಗೆ ಅಗತ್ಯವಾದ ಭಾಗಗಳನ್ನು ತೆಗೆದುಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT