ಗುರುವಾರ , ಮೇ 6, 2021
26 °C
ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ಕೆಲಸಕ್ಕೆ ಕರೆ ತರುತ್ತಿರುವ ಹಿರಿಯ ಅಧಿಕಾರಿಗಳು

ಸಾರಿಗೆ ಮುಷ್ಕರ: ₹ 3 ಕೋಟಿ ನಷ್ಟ

ಡಿ.ಎಂ.ಕುರ್ಕೆ ‍ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೆಎಸ್ಆರ್‌ಟಿಸಿ ಸಿಬ್ಬಂದಿಯ ಮುಷ್ಕರದ ಬಿಸಿ ಜಿಲ್ಲಾ ಕೆಎಸ್‌ಆರ್‌ಟಿಸಿ ಮೇಲೆ ಹೆಚ್ಚಿನ ಹೊರೆಯಾಗಿದೆ. ಈ ನಾಲ್ಕು ದಿನಗಳಲ್ಲಿ ಸರಾಸರಿ ₹ 2.5 ಕೋಟಿ ನಷ್ಟ ಸಂಭವಿಸಿದೆ. ಐದನೇ ದಿನವಾದ ಭಾನುವಾರ ನಷ್ಟದ ಪ್ರಮಾಣ ₹ 3 ಕೋಟಿ ದಾಟುತ್ತದೆ ಎನ್ನುತ್ತವೆ ಸಂಸ್ಥೆ ಮೂಲಗಳು.

ಲಾಕ್‌ಡೌನ್, ಕೋವಿಡ್ ಭಯದ ಕಾರಣಕ್ಕೆ ಕಳೆದ ಒಂದು ವರ್ಷದಲ್ಲಿ ಸರಾಸರಿ ₹ 90ರಿಂದ ₹ 100 ಕೋಟಿ ಆದಾಯವನ್ನು ಸಂಸ್ಥೆ ಕಳೆದುಕೊಂಡಿದೆ. ಕೋವಿಡ್‌ ಮತ್ತು ಲಾಕ್‌ಡೌನ್‌ ಸಂದರ್ಭದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದ ಆದಾಯ ಇತ್ತೀಚೆಗೆ ಚೇತರಿಸಿಕೊಂಡಿತ್ತು. ಆದಾಯದಲ್ಲಿ ಪ್ರಗತಿ ಕಂಡು ನಷ್ಟ ಇಳಿಮುಖವಾಗಿತ್ತು. ಇದೀಗ ನೌಕರರ ಮುಷ್ಕರವು ದೊಡ್ಡ ಪೆಟ್ಟು ಕೊಟ್ಟಿದೆ.

ಮುಷ್ಕರದ ಮೊದಲ ದಿನವಾದ ಬುಧವಾರ (ಏ.7) ಜಿಲ್ಲೆಯಲ್ಲಿ ಯಾವ ಚಾಲಕರು, ನಿರ್ವಾಹಕರು ಕೆಲಸಕ್ಕೆ ಹಾಜರಾಗಲಿಲ್ಲ. ಎರಡನೇ ದಿನವಾದ ಗುರುವಾರ ಐದು ಬಸ್‌ಗಳು ಓಡಿದವು. ಶುಕ್ರವಾರ 12 ಬಸ್‌ಗಳು ಹಾಗೂ ಶನಿವಾರ 30 ಬಸ್‌ಗಳು ರಸ್ತೆಗೆ ಇಳಿದವು.

ಆದರೆ ಇದು ಸಂಸ್ಥೆಗೆ ಆದಾಯವಿರಲಿ ಖರ್ಚನ್ನೂ ಭರಿಸಲು ಕಷ್ಟವಾಗುತ್ತಿದೆ. ಚಿಕ್ಕಬಳ್ಳಾಪುರ ವಿಭಾಗ ವ್ಯಾಪ್ತಿಯಲ್ಲಿ ದೊಡ್ಡಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಗೌರಿಬಿದನೂರಿನಲ್ಲಿ ಕೆಎಸ್‌ಆರ್‌ಟಿಸಿ ಘಟಕಗಳಿವೆ. ಇಲ್ಲಿಂದ ಬೆಂಗಳೂರು, ಹಾಸನ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳು, ಆಂಧ್ರಪ್ರದೇಶ ವಿವಿಧ ಭಾಗಗಳಿಗೆ ಬಸ್‌ ಸಂಪರ್ಕವಿದೆ. ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗದಿಂದ ನಿತ್ಯ 560 ಬಸ್‌ಗಳು ಸಂಚರಿಸುತ್ತವೆ. ಮುಷ್ಕರಕ್ಕೂ ಮುನ್ನ 544 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದವು.

ಕೊರೊನಾ ಪೂರ್ವದಲ್ಲಿ ಸಂಸ್ಥೆಯು ನಿತ್ಯ ₹ 65 ಲಕ್ಷ ಆದಾಯ ಗಳಿಸುತ್ತಿತ್ತು. ಇತ್ತೀಚೆಗೆ ₹ 52ರಿಂದ 53 ಲಕ್ಷ ಆದಾಯ ಬರುತ್ತಿತ್ತು. ಇನ್ನೂ ಕೋವಿಡ್ ಪೂರ್ವದಲ್ಲಿದ್ದ ಆದಾಯ ಸಂಸ್ಥೆಗೆ ಬರುತ್ತಿರಲಿಲ್ಲ. ಈ ನಡುವೆಯೇ ಮುಷ್ಕರ ನಡೆದ ಪರಿಣಾಮ ಮತ್ತೆ ಆದಾಯ ಖೋತಾ ಆಗಿದೆ. ಸಿಬ್ಬಂದಿಯ ವೇತನ, ಡೀಸೆಲ್ ಇತ್ಯಾದಿ ವೆಚ್ಚಗಳು ಸೇರಿ ನಿತ್ಯ ₹ 70 ಲಕ್ಷ ಸಂಸ್ಥೆಗೆ ಅಗತ್ಯವಿದೆ.

ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದೆ ಎನ್ನುವ ಭಯದಿಂದ ಕೆಲದಿನಗಳಿಂದ ಸಂಚಾರ ದಟ್ಟಣೆಯಲ್ಲಿ ಮತ್ತೆ ವ್ಯತ್ಯಾಸವಾಗಿತ್ತು. ಕೊರೊನಾ ಎರಡನೇ ಅಲೆಯ ಭಯದಿಂದ ಪ್ರಯಾಣಿಕರ ಸಂಖ್ಯೆ ಕುಸಿದಿತ್ತು.

ವಾರಾಂತ್ಯದಲ್ಲಿ ಹೆಚ್ಚುತ್ತಿದ್ದ ಆದಾಯ: ಯುಗಾದಿ ಹಬ್ಬ ಬಂದಿದೆ. ಅಲ್ಲದೆ ಶನಿವಾರ, ಭಾನುವಾರ ಸಂಸ್ಥೆಗೆ ಆದಾಯ ಹೆಚ್ಚುತ್ತಿತ್ತು. ಈ ಎರಡು ದಿನಗಳಲ್ಲಿ ನಿತ್ಯ ಗರಿಷ್ಠ ₹ 80 ಲಕ್ಷ ಆದಾಯ ಬರುತ್ತಿತ್ತು. ಯುಗಾದಿ, ಸಾಲು ರಜೆಯ ಕಾರಣ ಈ ದಿನಗಳು ಆದಾಯಕ್ಕೆ ಒಳ್ಳೆಯ ಸಮಯವಾಗಿತ್ತು. ಆದರೆ ಈಗ ಎಲ್ಲವೂ ನಷ್ಟದ ಹಾದಿಯಲ್ಲಿದೆ ಎಂದು ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ. ಬಸವರಾಜು ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು