ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಮುಕ್ತ ‘ನಂದಿ’ ಹೆಸರಿಗಷ್ಟೇ ಸೀಮಿತ

ನಂದಿ ಗಿರಿಧಾಮದಲ್ಲಿಯೇ ಕಸಕ್ಕೆ ಬೆಂಕಿ, ದಾರಿಯಲ್ಲಿ ಕಾಣುವುದಿಲ್ಲ ಕಸದ ಬುಟ್ಟಿಗಳು
Last Updated 16 ಆಗಸ್ಟ್ 2022, 23:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದಾರಿಯಲ್ಲೆಲ್ಲ ಪ್ಲಾಸ್ಟಿಕ್ ಕಸ. ಅಲ್ಲಲ್ಲಿರುವ ಕಸದಡಬ್ಬಿ (ಡಸ್ಟ್ ಬಿನ್‌)ಗಳಲ್ಲಿ ಕಸವು ತುಂಬಿ ತುಳುಕುತ್ತಿದೆ. ವ್ಯಾಪಾರ ವಹಿವಾಟು ನಡೆಯುವ ಸ್ಥಳಗಳ ಸುತ್ತಮುತ್ತ ಕಸ. ‌ಎಳೆ ನೀರು ಕುಡಿದು ಕಾಯಿಗಳನ್ನು ಎಸೆದಿರುವುದು...ಇಷ್ಟೆಲ್ಲಾ ಕಂಡು ಬರುವುದುಪ್ರಸಿದ್ಧ ನಂದಿಗಿರಿಧಾಮದಲ್ಲಿ.

ನಂದಿ ರಾಜ್ಯದಲ್ಲಿಯೇ ಪ್ರಸಿದ್ಧವಾದ ಗಿರಿಧಾಮ.ಬೆಂಗಳೂರಿಗೆ ಸಮೀಪವಿರುವ ಗಿರಿಧಾಮಕ್ಕೆ ರಾಜ್ಯದ ನಾನಾ ಭಾಗಗಳ ಪ್ರವಾಸಿಗರಷ್ಟೇ ಅಲ್ಲ ಹೊರ ರಾಜ್ಯಗಳ ಜನರು ಭೇಟಿ ನೀಡುವರು. ಇಂತಿಪ್ಪ ನಂದಿಯ ಹಾದಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ಗಿರಿಧಾಮದ ಆರಂಭದಿಂದ ಪಯಣ ಅಂತಿಮವಾಗಿರುವ ಯೋಗ ನಂದೀಶ್ವರ ದೇಗುಲದ ಬಳಿಯವರೆಗೂ ಪ್ಲಾಸ್ಟಿಕ್ ಕಸ ಕಾಣುತ್ತದೆ. ಕುರ್‌ಕುರೆ, ಲೇಸ್ ಮತ್ತಿತರ ತಿಂಡಿ ತಿನಿಸುಗಳ ಕವರ್‌ಗಳು, ಕಾಫಿ, ಟೀ ಕಪ್‌ಗಳು, ಬಳಸಿ ಎಸೆದ ಪ್ಲೇಟ್‌ಗಳು, ನೀರಿನ ಬಾಟಲಿಗಳು ಎದ್ದು ಕಾಣುತ್ತವೆ. ಗಿರಿಧಾಮದಲ್ಲಿ ಕಾಣುವ ‘ನಂದಿಗಿರಿಧಾಮದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸಹಕರಿಸಿ. ಡಸ್ಟ್‌ಬಿನ್‌ಗಳನ್ನು ಬಳಸಿರಿ’ ಎನ್ನುವ ನಾಮಫಲಕಗಳು ವಾತಾವರಣಕ್ಕೆ ಅಣಕವಾಗಿ ಕಾಣುತ್ತವೆ.

ನಂದಿನಿ ಹಾಲಿನ ಬೂತ್ ಬದಿಯಲ್ಲಿಯೇ ಕಸಕ್ಕೆ ಬೆಂಕಿ:ಗಿರಿಧಾಮದಲ್ಲಿರುವ ನಂದಿನಿ ಹಾಲಿನ ಬೂತ್‌ನ ಸುತ್ತಲಿನ ವಾತಾವರಣ ನೋಡಿದರೆ ಸ್ವಚ್ಛತೆಯೇ ಮಾಯ ಎನ್ನುವಂತಿದೆ. ಬೂತ್ ಬದಿಯಲ್ಲಿಯೇ ಬಾಟಲಿಗಳನ್ನು, ಪ್ಲಾಸ್ಟಿಕ್‌ಗಳನ್ನು ಸುಟ್ಟು ಹಾಕಲಾಗಿದೆ. ಈ ಬೆಂಕಿಗೆ ಆಹುತಿಯಾದ ಸ್ಥಳದಲ್ಲಿ ಕುರುಹುಗಳಾಗಿ ಅಪಾರ ಪ್ರಮಾಣದ ಬಾಟಲಿಗಳು, ಪ್ಲಾಸ್ಟಿಕ್ ಮತ್ತಿತರ ವಸ್ತುಗಳ ಕಾಣುತ್ತವೆ. ಕಾಫಿ, ಟೀ ಕುಡಿದ ಲೋಟಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ.ಗಿರಿಧಾಮದ ಪ್ರಮುಖ ಸ್ಥಳದಲ್ಲಿ ಹೊರಗಿನವರು ಬೆಂಕಿ ಹಚ್ಚಲು ಸಾಧ್ಯವಿಲ್ಲ.ಗಿರಿಧಾಮದ ಮಯೂರ ಹೋಟೆಲ್ ಮುಂಭಾದಲ್ಲಿರುವ ನೀರಿನ ಕಾರಂಜಿಯ ಸುತ್ತಲೂ ಕಸವಿದೆ. ಈ ಸ್ಥಳ ಗಿರಿಧಾಮದ ಅಂತಿಮ ತಾಣವಾಗಿದೆ.

ಪ್ರವಾಸಿಗರ ದಟ್ಟಣೆಯು ಹೆಚ್ಚಿರುವ ನಂದಿಗಿರಿಧಾಮದ ರಸ್ತೆಗಳಲ್ಲಿ ಕಸಸಂಗ್ರಹದ ಬುಟ್ಟಿಗಳನ್ನು ಸಹ ಇಟ್ಟಿಲ್ಲ. ಗಿರಿಧಾಮದ ಪ್ರವೇಶ ದ್ವಾರದ ನಂತರ ಕೆಲವು ಕಡೆಗಳಲ್ಲಿ ಮಾತ್ರ ಬುಟ್ಟಿಗಳಿವೆ. ಅದನ್ನು ಹೊರತುಪಡಿಸಿ ಗಿರಿಧಾಮದಲ್ಲಿ ಹೆಚ್ಚಿನ ಕಡೆಗಳಲ್ಲಿ ಕಸದಬುಟ್ಟಿಗಳಿಲ್ಲ.

ಹೆಸರಿಗೆ ಸೀಮಿತವಾದ ಅಭಿಯಾನ:ನಂದಿ ಗಿರಿಧಾಮದ ಸರ್ವತೋಮುಖ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕಾರ್ಯಗಳ ಕುರಿತು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್ ರಾಜ್ ಸಿಂಗ್ ನೇತೃತ್ವದಲ್ಲಿ ನಂದಿ ಗಿರಿಧಾಮದ ನೆಹರೂ ಭವನದಲ್ಲಿಏ.8ರಂದು ಸಭೆ ನಡೆದಿತ್ತು.

ವಾಹನಗಳ ನಿಲುಗಡೆ, ಪ್ಲಾಸ್ಟಿಕ್ ಮುಕ್ತ ವಾತಾವರಣ, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ರಸ್ತೆಬದಿ ಸೋಲಾರ್ ದೀಪಗಳ ಅಳವಡಿಕೆ ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.

ಬೆಟ್ಟದಲ್ಲಿ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಸಂಪೂರ್ಣವಾಗಿ ಮುಕ್ತಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಮೇ 1 ರಂದು ಜಿಲ್ಲಾಡಳಿತ ಹಾಗೂ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಆ ಪ್ರಕಾರ ಮೇ 1ರಂದು ಪ್ಲಾಸ್ಟಿಕ್ ಮುಕ್ತ ಅಭಿಯಾನವೂ
ನಡೆಯಿತು. ಆದರೆ ನಂದಿಗಿರಿಧಾಮದಲ್ಲಿ ಮಾತ್ರ ಸ್ವಚ್ಛತೆಯ ವಿಚಾರವು ಅಭಿಯಾನದ ರೂಪು ಪಡೆದಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ ಗಿರಿಧಾಮದಲ್ಲಿ ಹೇರಳವಾಗಿ ಪ್ಲಾಸ್ಟಿಕ್ ಕಸ ತುಂಬಿದೆ.

‘ವಾರಾಂತ್ಯದ ಕಾರಣ ಹೆಚ್ಚಿದ ಕಸ’

‘ಶನಿವಾರ, ಭಾನುವಾರ ಮತ್ತು ಸೋಮವಾರ ರಜೆ ಇತ್ತು. ಈ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿಯೇ ಪ್ರವಾಸಿಗರು ಬೆಟ್ಟಕ್ಕೆ ಭೇಟಿ ನೀಡಿದ್ದು ಕಸ ಹೆಚ್ಚಿದೆ. ಇಬ್ಬರು ಸಿಬ್ಬಂದಿ ನಿತ್ಯವೂ ಕಸವನ್ನು ಸ್ವಚ್ಛಗೊಳಿಸುವರು’ ಎಂದು ಗಿರಿಧಾಮದಲ್ಲಿನ ಕೆಎಸ್‌ಟಿಡಿಸಿ ಸಿಬ್ಬಂದಿ ತಿಳಿಸುವರು.

‘ಸಿಬ್ಬಂದಿ ಕಸವನ್ನು ಬುಟ್ಟಿಗಳಲ್ಲಿ ತುಂಬಿಸಿದರೆ ಅಥವಾ ಪ್ರವಾಸಿಗರು ಕಸವನ್ನು ಬುಟ್ಟಿಗಳಿಗೆ ಹಾಕಿದರೂ ಮಂಗಗಳು ಅವುಗಳನ್ನು ಹೊರಗೆ ಎಳೆಯುತ್ತವೆ’ ಎಂದರು.

‘ಎಲ್ಲೆಂದರಲ್ಲಿ ಕಸ ಹಾಕಬಾರದು ಎಂದು ಪ್ರವಾಸಿಗರಿಗೆ ಹೇಳುವ ಮತ್ತು ಪ್ರವಾಸಿಗರ ವರ್ತನೆಗಳ ಮೇಲೆ ನಿಗಾವಹಿಸಲು ಅಲ್ಲಲ್ಲಿ ಸಿಬ್ಬಂದಿಯನ್ನು ನೇಮಿಸಬೇಕು. ಇಲ್ಲದಿದ್ದರೆ ಗಿರಿಧಾಮವು ಕಸದ ತೊಟ್ಟಿ ಆಗುತ್ತದೆ’ ಎಂದು ಬೆಂಗಳೂರಿನ ಪ್ರವಾಸಿಗ ಪ್ರದೀಪ್ ತಿಳಿಸಿದರು.

ಹೆಚ್ಚು ಜನರು ಬರುವ ಕಾರಣ ಅವ್ಯವಸ್ಥೆ ಆಗುತ್ತದೆ. ಕಸ ಹೆಚ್ಚುತ್ತದೆ. ಆದರೆ ಕಸ ಎಸೆಯುವವರ ಮೇಲೆ ನಿಗಾ ಅಗತ್ಯ. ನಿರ್ವಹಣೆ ಸಹ ಮುಖ್ಯ. ಕಸ ಎಸೆಯುವವರಿಗೆ ದಂಡ ಬೇಕಿದ್ದರೆ ವಿಧಿಸಲಿ.ಪ್ರವಾಸಿಗರು ಸಹ ತಮಗೂ ಜವಾಬ್ದಾರಿಗಳಿವೆ. ಎಲ್ಲೆಂದರಲ್ಲಿ ತಿಂದು ಕಸವನ್ನು ಎಸೆಯಬಾರದು ಎನ್ನುವ ಪ್ರಜ್ಞೆ ಬೆಳೆಸಿಕೊಳ್ಳಬೇಕು’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT