ಭಾನುವಾರ, ಆಗಸ್ಟ್ 1, 2021
25 °C
ಜಿಲ್ಲಾ ಅಭಿವೃದ್ಧಿ ಸಮನ್ವಯ, ಉಸ್ತುವಾರಿ ಸಮಿತಿ ಸಭೆಯಲ್ಲಿ ಸಂಸದ ಬಚ್ಚೇಗೌಡ ತಾಕೀತು

ನರೇಗಾ 100ರಷ್ಟು ಸಾಧನೆಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯಡಿ ಜಿಲ್ಲೆಗೆ ನಿಗದಿಪಡಿಸಿರುವ ಮಾನವ ದಿನಗಳ ಗುರಿಯನ್ನು ಪೂರ್ಣಗೊಳಿಸುವ ಮೂಲಕ ಶೇ 100ರಷ್ಟು ಸಾಧನೆ ಮಾಡಬೇಕು. ಈ ಸಂಬಂಧ ಆಯಾ ಇಲಾಖಾ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಉದ್ಯೋಗ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನರೇಗಾ ಯೋಜನೆ ಜಾರಿ ಮಾಡಿದೆ. ಗ್ರಾಮೀಣ ಭಾಗದ ಜನರಿಗೆ ಇದು ಅತ್ಯಂತ ಉತ್ತಮ ಯೋಜನೆಯಾಗಿದ್ದು, ಜಿಲ್ಲೆಯಾದ್ಯಂತ ಇದನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 18 ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ವಿವಿಧ ಹಂತಗಳಲ್ಲಿದ್ದು, ಎಲ್ಲವನ್ನೂ ಆದ್ಯತೆ ಮೆರೆಗೆ ಪೂರ್ಣಗೊಳಿಸಿ, ಬಡವರಿಗೆ ಸೂರು ಕಲ್ಪಿಸಿಕೊಡಬೇಕು. ಇದಲ್ಲದೆ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಮಾತನಾಡಿ, ಜಿಲ್ಲೆಯನ್ನು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಲಾಗಿದೆ. 2019-20ನೇ ಸಾಲಿನಲ್ಲಿ 68 ಸಮುದಾಯ ಶೌಚಾಲಯಗಳು ನಿಗದಿಯಾಗಿದ್ದು, ಈ ಪೈಕಿ 20 ಪೂರ್ಣಗೊಂಡಿವೆ. 48 ಶೌಚಾಲಯಗಳು ಪ್ರಗತಿಯಲ್ಲಿದ್ದು, ಶೀಘ್ರವೇ ಮುಗಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್‍ ಮಾತನಾಡಿ, ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 30 ಲಕ್ಷ ಮಾನವ ದಿನಗಳ ಗುರಿ ನಿಗದಿಯಾಗಿತ್ತು. ಆದರೆ ಈ‌ ಬಾರಿ 37.14 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ 124 ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರಸ್ತುತ 2020-21ನೇ ಸಾಲಿಗೆ ಒಟ್ಟು 38 ಲಕ್ಷ ಮಾನವ ದಿನಗಳ ಗುರಿಯನ್ನು ನಿಗದಿಪಡಿಸಲಾಗಿದ್ದು, ಈವರೆಗೆ 46 ಲಕ್ಷ ಮಾನವ ದಿನಗಳನ್ನು ಸೃಜಿಸಿ, ಶೇ 121ರಷ್ಟು ಸಾಧನೆ ಮಾಡಲಾಗಿದೆ.

ಇದಲ್ಲದೆ, 336 ಬಹು ಕಮಾನು ತಡೆಗೋಡೆ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ನದಿ ಪುನಶ್ಚೇತನ ಕಾರ್ಯಕ್ರಮದಡಿ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಪಾಲಾರ್ ನದಿ ಪುನಶ್ಚೇತನದಡಿ ಸುಮಾರು 400 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಅದೇ ರೀತಿ ಗೌರಿಬಿದನೂರು ತಾಲ್ಲೂಕಿನ ಉತ್ತರ ಪಿನಾಕಿನಿ ನದಿ ಪುನಶ್ಚೇತನ ಕಾರ್ಯಕ್ರಮದಡಿ ಸುಮಾರು 4000 ಕಾಮಗಾರಿಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಈಗಾಗಲೇ 670 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಮ್ಮ ಅಶ್ವತ್ಥನಾರಾಯಣಗೌಡ, ಉಪಕಾರ್ಯದರ್ಶಿ ನೋಮೇಶ್ ಕುಮಾರ್ ಹಾಗೂ ದಿಶಾ ಸಮಿತಿ ಸಭೆಯ ಸದಸ್ಯರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ
ನರೇಗಾ ಅನುಷ್ಠಾನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದ್ದು, ಯೋಜನೆಯಡಿ ಪ್ರಸ್ತುತ 2,01,422 ಕುಟುಂಬಗಳು ನೋಂದಾಯಿಸಿಕೊಂಡಿದ್ದು, ಇವರೆಲ್ಲರಿಗೂ ಉದ್ಯೋಗ ಚೀಟಿ ವಿತರಿಸಲಾಗಿದೆ. ಈ ಪೈಕಿ 1,15,980 ಕುಟುಂಬಗಳು ಕ್ರಿಯಾಶೀಲವಾಗಿ ಯೋಜನೆಯ ಪ್ರಯೋಜನ ಪಡೆಯುತ್ತಿವೆ. ಇನ್ನು ವಿವಿಧ ಇಲಾಖೆಗಳ ಒಗ್ಗೂಡಿಸುವಿಕೆಯಡಿ ಎಂದು ತೋಟಗಾರಿಕೆ ಇಲಾಖೆಯಿಂದ 2588 ಕಾಮಗಾರಿಗಳು, ರೇಷ್ಮೆ ಇಲಾಖೆಯ ವತಿಯಿಂದ 2561 ಕಾಮಗಾರಿಗಳು, ಅರಣ್ಯ ಇಲಾಖೆಯಿಂದ 508 ಕಾಮಗಾರಿಗಳು, ಕೃಷಿ ಇಲಾಖೆಯಿಂದ 261 ಕಾಮಗಾರಿಗಳು, 2925 ಕೃಷಿ ಹೊಂಡಗಳು, 6249 ಕಂದಕ ಬದು ನಿರ್ಮಾಣ ಕಾಮಗಾರಿಗಳು, 362 ಈರುಳ್ಳಿ ಉಗ್ರಾಣ ಘಟಕಗಳು, 97 ಎರೆಹುಳು ತೊಟ್ಟಿ ನಿರ್ಮಾಣ ಕಾಮಗಾರಿಗಳು ಕೈಗೆತ್ತಿಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್‍ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು