ಶುಕ್ರವಾರ, ಜುಲೈ 1, 2022
23 °C
ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ತಿಂಗಳಿನಿಂದ ಹಣ ಬಿಡುಗಡೆಯಿಲ್ಲ

ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ತಿಂಗಳಿನಿಂದ ಬಿಡುಗಡೆಯಾಗದ ಮೊಟ್ಟೆ ಬಿಲ್

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಟ್ಟೆ ಬಿಲ್ ಆಗಿಲ್ಲ. ಇದು ಬಹಳಷ್ಟು ಅಂಗನವಾಡಿ ಕಾರ್ಯಕರ್ತೆಯರನ್ನು ಹೈರಾಣು ಮಾಡಿದೆ. ಬಿಲ್ ಬಾಕಿಯ ಕಾರಣ ಜಿಲ್ಲೆಯ ಕೆಲವು ಕಡೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮೊಟ್ಟೆ ವಿತರಣೆಗೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಫಲಾನುಭವಿಗಳಿಗೆ ಮೊಟ್ಟೆ ಸೂಕ್ತವಾಗಿ ಸಿಗುತಿಲ್ಲ.

ಗರ್ಭಿಣಿಯರು, ಬಾಣಂತಿಯರು ಮತ್ತು 3ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿಗಳಿಂದ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಸ್ವಂತ ಹಣದಿಂದ ಖರೀದಿಸಿ ನಂತರ್ ಬಿಲ್ ಪಡೆಯಬೇಕು. ತಿಂಗಳಿಗೆ ಗರ್ಭಿಣಿ, ಬಾಣಂತಿಯರಿಗೆ 25 ಹಾಗೂ ಮೂರರಿಂದ ಆರು ವರ್ಷದ ಮಕ್ಕಳಿಗೆ 9 ಮೊಟ್ಟೆಯನ್ನು ನೀಡಬೇಕಿದೆ. ಸರ್ಕಾರ ಒಂದು ಕೊಟ್ಟೆ ಖರೀದಿಸಲು ₹ 5 ನೀಡುತ್ತದೆ.

ಕಾರ್ಯಕರ್ತೆಯರಿಗೆ ಮಾಸಿಕ ₹ 10,000 ಗೌರವ ಧನ ಬರುತ್ತದೆ. ಈ ಹಣದಲ್ಲಿಯೇ ಜೀವನ ಸಾಗಿಸಬೇಕು. ಗೌರವಧನ ಸಹ ಕೆಲವು ವೇಳೆ ಆಯಾ ತಿಂಗಳಿಗೆ ಬಿಡುಗಡೆ ಆಗುವುದಿಲ್ಲ. ಹೀಗಿದ್ದಾಗ ಸಾಲ ಮಾಡಿ ಮೊಟ್ಟೆ ಖರೀದಿಸಿ ನೀಡಬೇಕು. ಈ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡರೆ ಒಳ್ಳೆಯದು ಎನ್ನುವುದು ಜಿಲ್ಲೆಯ ಬಹುತೇಕ ಅಂಗನವಾಡಿ ಕಾರ್ಯಕರ್ತೆಯ ಒತ್ತಾಯ.

ಕೆಲವು ಅಂಗನವಾಡಿಗಳಲ್ಲಿ ಹಣ ಬಿಡುಗಡೆಯಾಗದ ಕಾರಣ ಈಗ ಮೊಟ್ಟೆ ವಿತರಣೆಯೇ ನಿಂತಿದೆ! ಕೆಲವು ಕಡೆಗಳಲ್ಲಿ ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ಮೊಟ್ಟೆ ದೊರೆಯಲಾಗಿದೆ.

‘ಎರಡು ತಿಂಗಳಿನಿಂದ ಹಣ ಬಿಡುಗಡೆಯಾಗಿಲ್ಲ. ಆದ ಕಾರಣ ಬಾಗೇಪಲ್ಲಿ ತಾಲ್ಲೂಕಿನ  ನಾಲ್ಕೈದು ಅಂಗನವಾಡಿ ವೃತ್ತಗಳಲ್ಲಿ ಮೊಟ್ಟೆ ವಿತರಣೆ ನಿಲ್ಲಿಸಿದ್ದೇವೆ. ನಾವು ಈ ಸಂಕಷ್ಟದ ಸಮಯದಲ್ಲಿ ಎಲ್ಲಿಂದ ಹಣ ತರಲಿ. ಮೊಟ್ಟೆ ಬಿಲ್ ನೀಡದ ಹೊರತು ವಿತರಣೆ ಮಾಡುವುದಿಲ್ಲ ಎಂದು ಹೇಳಿದ್ದೇವೆ’ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿಯೂ ಆಗಿರುವ ಬಾಗೇಪಲ್ಲಿ ತಾಲ್ಲೂಕು ಗುಂಡ್ಲಪಲ್ಲಿ ಅಂಗನವಾಡಿ ಕಾರ್ಯಕರ್ತೆ ರತ್ನಮ್ಮ ತಿಳಿಸಿದರು.

‘ಒಂದು ದೊಡ್ಡ ಅಂಗನವಾಡಿ ಕೇಂದ್ರದಲ್ಲಿ ಸರಾಸರಿ ತಿಂಗಳಿಗೆ ₹ 6 ಸಾವಿರದಿಂದ ₹ 7 ಸಾವಿರದವರೆಗೆ ಮೊಟ್ಟೆಗೆ ವೆಚ್ಚ ಮಾಡಬೇಕಾಗುತ್ತದೆ. ಕೆಲವು ಕಡೆಗಳಲ್ಲಿ ಮೊಟ್ಟೆ ವಿತರಿಸಲೇಬೇಕು. ಇಲ್ಲದಿದ್ದರೆ ನಿಮ್ಮ ಮೇಲೆ ಕ್ರಮಜರುಗಿಸುತ್ತೇವೆ ಎಂದು ಮೇಲ್ವಿಚಾರಕಿಯರು ದಬ್ಬಾಳಿಕೆ ಮಾಡುತ್ತಿದ್ದಾರೆ. ಪ್ರತಿ ತಿಂಗಳು ಅಷ್ಟೊಂದು ಹಣವನ್ನು ನಾವು ಎಲ್ಲಿಂದ ತರಲಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ಮೊಟ್ಟೆ ಖರೀದಿಗೆ ಸರ್ಕಾರ ₹ 5 ನೀಡುತ್ತದೆ. ಆದರೆ ಮಾರುಕಟ್ಟೆಯಲ್ಲಿ ₹ 6 ಬೆಲೆ ಇದೆ. ನಾವು ಮೊಟ್ಟೆ ಖರೀದಿಸಿ ಕೊಂಡೊಯ್ಯುವಾಗ ಕೆಲವು ಒಡೆದು ಹೋಗುತ್ತವೆ. ಆದ್ದರಿಂದ ಈ ಜಂಜಾಟವೇ ಬೇಡ. ನಮ್ಮನ್ನು ಈ ಕೆಲಸದಿಂದ ಬಿಡುಗಡೆ ಮಾಡಲಿ’ ಎನ್ನುವರು ಅಂಗನವಾಡಿ ಕಾರ್ಯಕರ್ತೆಯೊಬ್ಬರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು