ಶನಿವಾರ, ಡಿಸೆಂಬರ್ 4, 2021
20 °C
ಈವರೆಗೆ ಕೇವಲ ಶೇ 16.59ರಷ್ಟು ಪ್ಲಾಟ್‌ಗಳ ಬೆಳೆ ಮಾತ್ರ ನೋಂದಣಿ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆಗೆ ನಿರಾಸಕ್ತಿ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಮೊಬೈಲ್ ಆ್ಯಪ್‌ ಮೂಲಕ ರೈತರು ಸುಲಭವಾಗಿ ತಮ್ಮ ಜಮೀನಿನಲ್ಲಿರುವ ಬೆಳೆಯನ್ನು ದಾಖಲಿಸಬಹುದಾದ ಬೆಳೆ ಸಮೀಕ್ಷೆಯ ಅವಕಾಶವನ್ನು ಬಳಸಿಕೊಳ್ಳಲು ಜಿಲ್ಲೆಯ ರೈತರು ನಿರಾಸಕ್ತಿ ತೋರಿಸಿದ್ದಾರೆ.

‘ನನ್ನ ಬೆಳೆ ನನ್ನ ಹಕ್ಕು’ ಘೋಷ ವಾಕ್ಯದಡಿ ರೈತ ತನ್ನ ಬೆಳೆಗೆ ತಾನೇ ಪ್ರಮಾಣಪತ್ರ ಕೊಟ್ಟಿಕೊಳ್ಳುವಂಥ ಈ ವಿನೂತನ ವ್ಯವಸ್ಥೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂಬ ಆಶಾವಾದ ಕೃಷಿ ಇಲಾಖೆ ಅಧಿಕಾರಿಗಳದ್ದು. ಆದರೆ ಈವರೆಗೆ ಆಗಿರುವ ಬೆಳೆ ಸಮೀಕ್ಷೆ ಯೋಜನೆ ಪ್ರಗತಿ ಅವಲೋಕಿಸಿದರೆ ಅನುಕೂಲ ಪಡೆದ ರೈತರ ಪ್ರಮಾಣ ಅಲ್ಪ.

ಆ್ಯಂಡ್ರಾಯ್ಡ್‌ ಫೋನ್‌ನಲ್ಲಿ ‘ರೈತರ ಬೆಳೆ ಸಮೀಕ್ಷೆ ಆ್ಯಪ್‌ 2020–21’ ಆ್ಯಪ್‌ ಅಳವಡಿಸಿಕೊಳ್ಳುವ ಮೂಲಕ ಸುಲಭವಾಗಿ ತಮ್ಮ ಜಮೀನಿನಲ್ಲಿರುವ ಬೆಳೆಯನ್ನು ದಾಖಲಿಸಬಹುದಾದ ವ್ಯವಸ್ಥೆ ಪರಿಚಯಿಸಿದರೂ ರೈತರು ಮಾತ್ರ ಬೆಳೆ ಸಮೀಕ್ಷೆಗೆ ಅಷ್ಟಾಗಿ ಮುಂದಾಗಿಲ್ಲ. ಜಿಲ್ಲೆಯಲ್ಲಿ ಈವರೆಗೆ ಕೇವಲ ಶೇ 16.59 ರಷ್ಟು ರೈತರು ಮಾತ್ರ ಈ ಯೋಜನೆ ಸದ್ಭಳಕೆ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ 6,48,321 ಬೆಳೆ ಸಮೀಕ್ಷೆ ಮಾಡುವ ಪ್ಲಾಟ್‌ಗಳಿವೆ. ಬೆಳೆ ಸಮೀಕ್ಷೆ ಆರಂಭಗೊಂಡು 15 ದಿನಗಳು ಕಳೆದರೂ ಈವರೆಗೆ ಜಿಲ್ಲೆಯಲ್ಲಿ 1,07,577 ಪ್ಲಾಟ್‌ಗಳಲ್ಲಿನ ಬೆಳೆಗಳನ್ನು ಮಾತ್ರ ರೈತರು ಸಮೀಕ್ಷೆ ನಡೆಸಿ ಮೊಬೈಲ್ ಆ್ಯಪ್‌ ಮೂಲಕ ನೋಂದಾಯಿಸಿದ್ದಾರೆ. ಇನ್ನೂ 5.40 ಲಕ್ಷ ಪ್ಲಾಟ್‌ಗಳ ನೋಂದಣಿ ಕಾರ್ಯ ನಡೆಯಬೇಕಿದೆ.

ವಿವಿಧ ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆಯ ಪ್ರಗತಿ ಶೇ 50 ರಷ್ಟು ತಲುಪಿದೆ. ಆದರೆ ಜಿಲ್ಲೆಯಲ್ಲಿ ಈವರೆಗೆ ಶೇ 25 ರಷ್ಟನ್ನು ತಲುಪಲು ಸಾಧ್ಯವಾಗಿಲ್ಲ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಯಾವೊಂದು ತಾಲ್ಲೂಕಿನಲ್ಲಿ ಸಹ ಯೋಜನೆಯ ಪ್ರಗತಿ ಆಶಾದಾಯಕವಾಗಿಲ್ಲ. ಮೊದಲ ಸ್ಥಾನದಲ್ಲಿರುವ ಚಿಂತಾಮಣಿ ತಾಲ್ಲೂಕಿನಲ್ಲಿ ಶೇ 23.67 ರಷ್ಟು ಪ್ರಗತಿಯಾಗಿದ್ದರೆ, ಕೊನೆಯ ಸ್ಥಾನದಲ್ಲಿರುವ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶೇ 9.28 ರೈತರು ಮಾತ್ರ ತಮ್ಮ ಬೆಳೆ ನೋಂದಾಯಿಸಿಕೊಂಡಿದ್ದಾರೆ.

ಪ್ರಕೃತಿ ವಿಕೋಪ, ಪ್ರವಾಹ, ಬರಗಾಲದ ಸಂದರ್ಭಗಳಲ್ಲಿ ಪರಿಹಾರ, ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಯೋಜನೆಯ ಪ್ರಯೋಜನ, ಸರ್ಕಾರದಿಂದ ಸಿಗುವ ನೆರವು ಪಡೆಯಲು ಬೆಳೆ ಸಮೀಕ್ಷೆ ಮಹತ್ವದ ನೋಂದಣಿಯಾಗಿದೆ. ಆದರೂ ಜಿಲ್ಲೆಯ ರೈತರಿಗೆ ಯೋಜನೆಯ ಮಹತ್ವ ಅರಿವಾಗುತ್ತಿಲ್ಲ ಎಂಬ ಬೇಸರ ಕೃಷಿ ಇಲಾಖೆ ಅಧಿಕಾರಿಗಳದ್ದು.

ಕೃಷಿ ಇಲಾಖೆ ಅಧಿಕಾರಿಗಳು, ನಿಯೋಜಿತ ಸಿಬ್ಬಂದಿಯೇ ಖುದ್ದಾಗಿ ಜಮೀನಿಗೆ ಬಂದು ಸಮೀಕ್ಷೆಗೆ ಕರೆದರೂ ರೈತರು ಬೆಳೆ ಸಮೀಕ್ಷೆಗೆ ಸಹಕಾರ ನೀಡಲು ಒಲುವು ತೋರುತ್ತಿಲ್ಲ. ರೈತರ ಈ ಅಸಹಕಾರ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಪ್ರಗತಿ ತೋರಿಸಲು ತಲೆನೋವು ತಂದಿಟ್ಟಿದೆ ಎನ್ನಲಾಗಿದೆ.

‘ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕುರಿತು ಸಾಕಷ್ಟು ಪ್ರಚಾರ ನಡೆಸಲಾಗಿದೆ. ಅರಿವು ಮೂಡಿಸಲಾಗಿದೆ. ಬೆಳೆ ಸಮೀಕ್ಷೆಗೆ ರೈತರು ಇನ್ನು ಸ್ವಲ್ಪ ಮುಂದೆ ಬರಬೇಕು. ಯೋಜನೆಯ ನಿಯಮಗಳ ಪ್ರಕಾರ ಮೊಬೈಲ್‌ ಆ್ಯಪ್‌ನಲ್ಲಿ ದಾಖಲಿಸುವ ಚಿತ್ರದಲ್ಲಿ ಬೆಳೆ ಮಾತ್ರವಲ್ಲ ರೈತ ಕೂಡ ಕಡ್ಡಾಯವಾಗಿ ಇರಬೇಕು. ಇದರಿಂದ ಭವಿಷ್ಯದಲ್ಲಿ ಅನೇಕ ಗೊಂದಲಗಳನ್ನು ತಪ್ಪಿಸಬಹುದಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾ ಹೇಳಿದರು.

‘ಬೆಳೆ ಸಮೀಕ್ಷೆ ವಿಧಾನವನ್ನು ತುಂಬಾ ಸರಳೀಕರಿಸಲಾಗಿದೆ. ರೈತರು ಆಸಕ್ತಿ ತೋರಿದರೆ ಖಂಡಿತ ಯೋಜನೆ ನಮ್ಮಲ್ಲಿ ಸಹ ಉತ್ತಮ ಪ್ರಗತಿ ಕಾಣಲಿದೆ. ಬೆಳೆ ಸಮೀಕ್ಷೆ ನೋಂದಣಿಗೆ ಸೆಪ್ಟೆಂಬರ್ 23ರ ವರೆಗೆ ಅವಕಾಶವಿದೆ. ಉಳಿದ ರೈತರು ಸಹ ಇಲಾಖೆಯೊಂದಿಗೆ ಸಹ ಕಾರ ನೀಡಬೇಕು’ ಎಂದು ತಿಳಿಸಿದರು.

ಸಮೀಕ್ಷೆ ವಿವರ ಪರಿಶೀಲಿಸಿ

ಬೆಳೆ ಸಮೀಕ್ಷೆ ಸರಿಯಾಗಿ ಆಗಿದೆಯೊ, ಇಲ್ಲವೋ ಎಂಬ ಗೊಂದಲದಿಂದ ರೈತರನ್ನು ಹೊರ ತರಲು ಗ್ರಾಮ ಪಂಚಾಯಿತಿಗಳಲ್ಲಿ ಆಯಾ ವ್ಯಾಪ್ತಿಯ ಹಳ್ಳಿಗಳ ರೈತರು ಮಾಡಿರುವ ಬೆಳೆ ಸಮೀಕ್ಷೆ ವಿವರ (ಬೆಳೆಗಳು, ವಿಸ್ತೀರ್ಣ) ಪ್ರಕಟಿಸಲಾಗುತ್ತಿದೆ.

ಸಮೀಕ್ಷೆ ವಿವರದಲ್ಲಿ ವ್ಯತ್ಯಾಸ ಕಂಡು ಬಂದರೆ, ತಕ್ಷಣ ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸುವ ಮೂಲಕ ಸರಿಪಡಿಸಿಕೊಳ್ಳಬಹುದು. ಇದರಿಂದ ಪ್ರತಿ ವರ್ಷ ಕಂಡು ಬರುತ್ತಿದ್ದ ಬೆಳೆ ಬದಲಾವಣೆ ಸಮಸ್ಯೆ ಈಗಲೇ ನಿವಾರಿಸಿಕೊಳ್ಳಬಹುದು. ವಿವರ ಪ್ರಕಟಗೊಳ್ಳುವುದರಿಂದ ಸಮೀಕ್ಷೆ ಮಾಡದ ರೈತರಿಗೂ ಜಾಗೃತಿ ಮೂಡಿಸಲು ಸಹಕಾರಿ ಆಗಲಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

***

ನಾವು ಸಾಕಷ್ಟು ಪ್ರಚಾರ ಮಾಡಿ, ಅರಿವು ಮೂಡಿಸಿದರೂ ಬೆಳೆ ಸಮೀಕ್ಷೆ ಮಹತ್ವ ರೈತರಿಗೆ ಅರ್ಥವಾಗುತ್ತಿಲ್ಲ. ರೈತರಲ್ಲಿ ಆಸಕ್ತಿ ಹೆಚ್ಚಾಗಬೇಕು

- ರೂಪಾ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು