ಸೋಮವಾರ, ಜನವರಿ 20, 2020
19 °C
ಸಾರ್ವಕಾಲಿಕ ಬೆಲೆ ಏರಿಕೆಗೆ ತತ್ತರಿಸಿದ ಗ್ರಾಹಕರು, ಸಂಕಷ್ಟಕ್ಕೆ ಸಿಲುಕಿದ ಹೋಟೆಲ್ ಉದ್ಯಮ

ಸೇಬು ₹100, ಈರುಳ್ಳಿ ₹150! ಕಂಗಾಲಾದ ಗ್ರಾಹಕ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪ್ರವಾಹ ಮತ್ತು ಅತಿವೃಷ್ಟಿಯಿಂದ ಉಳ್ಳಾಗಡ್ಡಿ ಬೆಲೆ ಕಳೆದ ಕೆಲ ತಿಂಗಳಿಂದ ಏರಿಕೆಯಾಗುತ್ತಾ ಪ್ರಸ್ತುತ ₹150 ತಲುಪಿದೆ. ಈ ದುಬಾರಿ ದರ ಒಂದೆಡೆ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದರೆ, ಇನ್ನೊಂದೆಡೆ ಹೋಟೆಲ್‌ ಉದ್ಯಮದಲ್ಲಿ ಕಳವಳ ಉಂಟು ಮಾಡಿದೆ.

ಆಗಸ್ಟ್‌ ತಿಂಗಳವರೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ 20ರಿಂದ 25 ರವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಸೆಪ್ಟೆಂಬರ್ ಹೊತ್ತಿಗೆ ₹40 ಗಡಿ ದಾಟಿ ₹100 ಸಮೀಪಿಸಿತ್ತು. ನವೆಂಬರ್‌ನಲ್ಲಿ ಬೆನ್ನಲ್ಲೇ ಪುನಃ ₹40ರ ವರೆಗೆ ಇಳಿದ ಈರುಳ್ಳಿ ಗ್ರಾಹಕರು ನಿಟ್ಟುಸಿರುವ ಬಿಡುವ ಮುನ್ನವೇ ಸಾರ್ವಕಾಲಿಕ ದಾಖಲೆ ಎನ್ನಬಹುದಾದ ಬೆಲೆಗೆ ಸದ್ಯ ಮಾರಾಟವಾಗುತ್ತಿದೆ. ಈರುಳ್ಳಿಯ ಹೊಸ ಬೆಳೆ ಬರುವವರೆಗೆ ಅಂದರೆ ಕೆಲ ತಿಂಗಳು ಈ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಲಿದೆ ಎನ್ನುತ್ತಾರೆ ವರ್ತಕರು.

ದಿನನಿತ್ಯದ ತಿಂಡಿ, ತಿಂಡಿಸು, ಅಡುಗೆ, ಖಾದ್ಯಗಳ ತಯಾರಿಕೆಗೆ ಮುಖ್ಯ ಸರಕಾದ ಈರುಳ್ಳಿ ಬೆಲೆ ಏರಿಕೆಯಿಂದಾಗಿ ನಗರದ ಹೋಟೆಲ್‌, ರೆಸ್ಟೋರೆಂಟ್‌, ಡಾಬಾ, ಬೇಕರಿ ಮಾಲೀಕರು ಮಾತ್ರವಲ್ಲದೆ ಬೀದಿಬದಿಯ ತಳ್ಳುಗಾಡಿ ವ್ಯಾಪಾರಸ್ಥರು ಕೂಡ ಅತ್ತ ಬೆಲೆ ಏರಿಕೆ ಮಾಡಲಾಗದೆ, ಇತ್ತ ಈರುಳ್ಳಿ ಬೆಲೆ ಏರಿಕೆ ಭಾರ ತಡೆದುಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ಪರಿಣಾಮ, ಹೋಟೆಲ್‌, ರೆಸ್ಟೋರೆಂಟ್‌, ಡಾಬಾ, ಬೇಕರಿಗಳಲ್ಲಿ ಈರುಳ್ಳಿಯ ಬಳಕೆ ಪ್ರಮಾಣ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಗ್ರಾಹಕರಿಗೆ ಮಾಂಸಹಾರಿ ಊಟದ ಜತೆಗೆ ಕೆಲವೆಡೆ ಈರುಳ್ಳಿ ಸಿಗದಂತಾಗಿದೆ.

ದೇಶಕ್ಕೆ ಬೇಕಾಗುವ ಒಟ್ಟಾರೆ ಈರುಳ್ಳಿಯಲ್ಲಿ ಶೇ 50ರಷ್ಟು ಬೆಲೆ ಮಹಾರಾಷ್ಟ್ರದಲ್ಲಿಯೇ ಬೆಳೆಯಲಾಗುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದ ನೂರಾರು ಎಕರೆ ಪ್ರದೇಶದ ಈರುಳ್ಳಿ ಬೆಳೆ ಜಮೀನಿನಲ್ಲೇ ಕೊಳೆತು ಹೋಗಿದೆ. ಹೀಗಾಗಿ ಹೊಸ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತಿಲ್ಲ. ಈ ಹಿಂದೆ ಬೆಳೆದ ಈರುಳ್ಳಿ ದಾಸ್ತಾನಿನ ಬೆಲೆ ಸದ್ಯ ಗಗನಮುಖಿಯಾಗಿದೆ.

ನಗರದ ಮಾರುಕಟ್ಟೆಗೆ ಮುಖ್ಯವಾಗಿ ಪುಣೆ ಮಾರುಕಟ್ಟೆಯಿಂದ ಈರುಳ್ಳಿ ಆವಕವಾಗುತ್ತದೆ. ಸ್ಥಳೀಯ ಈರುಳ್ಳಿಗಿಂತಲೂ ದೊಡ್ಡ ಗಾತ್ರ ಪುಣೆ ಗಡ್ಡೆಗಳು ಬೇಗ ಕೊಳೆತು ಹೋಗುವುದಿಲ್ಲ. ಹೀಗಾಗಿ ಈಗ ಪುಣೆ ಒಣಗಿದ ಗಡ್ಡೆಗಳಿಗೆ ಬೇಡಿಕೆ ಹೆಚ್ಚು. ಸದ್ಯ ನಗರದಲ್ಲಿ ಸೇಬು ಹಣ್ಣು ಒಂದು ಕೆ.ಜಿಗೆ ₹100ರಂತೆ ಮಾರಾಟವಾಗುತ್ತಿದ್ದರೆ, ಪುಣೆ ಈರುಳ್ಳಿ ₹150ಕ್ಕೆ ಮಾರಾಟವಾಗುತ್ತಿದೆ. ಬೇರೆಡೆ ಬೆಳೆದ ಚಿಕ್ಕ ಗಾತ್ರದ ಹಸಿ ಈರುಳ್ಳಿ ₹100ರ ಗಡಿ ದಾಟಿ ಮಾರಾಟವಾಗುತ್ತಿದೆ.

‘ಈರುಳ್ಳಿ ದರ ಜಾಸ್ತಿಯಾಗಿದೆ ಅಂತ ಬೇಕರಿ ತಿನಿಸು ಬೆಲೆ ಏರಿಸಿದರೆ, ಈರುಳ್ಳಿ ದರ ಇಳಿದ ಮೇಲೆ ತಿನಿಸುಗಳ ಬೆಲೆ ಇಳಿಸುವುದು ಕಷ್ಟವಾಗುತ್ತದೆ. ಹಾಗಾಗಿ ಇದ್ದುದರಲ್ಲೇ ವ್ಯಾಪಾರ ನಡೆಸುತ್ತಿದ್ದೇವೆ. ದರ ಇದೇ ರೀತಿ ಮುಂದುವರಿದರೆ ಪಪ್ಸ್‌, ಖಾರಾ ಬನ್‌, ಟೋಸ್ಟ್‌ ಮುಂತಾದವುಗಳ ಬೆಲೆ ಏರಿಕೆ ಅನಿವಾರ್ಯವಾಗುತ್ತದೆ’ ಎನ್ನುತ್ತಾರೆ ನಗರದ ಗಣೇಶ್ ಬೇಕರಿ ಮಾಲೀಕ ರಾಘವೇಂದ್ರ.

‘ನಮ್ಮ ಹೋಟೆಲ್‌ನಲ್ಲಿ ಗ್ರೇವಿ, ಎಗ್‌ ಬುರ್ಜಿ, ದಾಲ್‌ ತಯಾರಿಸಲು ಹಾಗೂ ನಾನ್‌ ವೆಜ್‌ ಊಟದ ಜತೆಗೆ ಕೊಡಲು ವಿಪರೀತ ಈರುಳ್ಳಿ ಬಳಕೆಯಾಗುತ್ತದೆ. ಬೆಲೆ ಏರಿಕೆಯಾಗಿದೆ ಎಂದು ಹಾಗಂತ ಗ್ರಾಹಕರಿಗೆ ಈರುಳ್ಳಿ ಕೊಡುವುದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಡಾಬಾಗಳ ನಡುವೆ ಸ್ಪರ್ಧೆಯೂ ಹೆಚ್ಚಿರುವುದರಿಂದ ನಮ್ಮ ಲಾಭಾಂಶದಲ್ಲೇ ದುಬಾರಿ ಖರ್ಚು ಭರಿಸುತ್ತಿದ್ದೇವೆ’ ಎಂದು ವ್ಯಾಪಾರದ ಕಷ್ಟ–ನಷ್ಟವನ್ನು ತೋಡಿಕೊಂಡರು ಚಂದ್ರು ಮಿಲಿಟರಿ ಹೋಟೆಲ್ ಮಾಲೀಕರು.

‘ನನಗೆ ಈರುಳ್ಳಿ ದೋಸೆ ಅಂದ್ರೆ ತುಂಬಾ ಇಷ್ಟ. ಆದರೆ ಬೆಲೆ ಏರಿಕೆಯಿಂದಾಗಿ ಈಗ ಕೆಲ ಹೋಟೆಲ್‌ಗಳಲ್ಲಿ ಈರುಳ್ಳಿ ದೋಸೆ ಬೆಲೆ ಏರಿಕೆ ಮಾಡಿದ್ದಾರೆ. ಮತ್ತೆ ಕೆಲವರು ದೊಸೆಯಲ್ಲಿ ಈರುಳ್ಳಿ ವಾಸನೆಗೆ ಹಾಕಿದಂತೆ ಮಾಡುತ್ತಿದ್ದಾರೆ. ಹೀಗಾಗಿ ಈ ದೋಸೆ ಸವಿಯುವ ಆಸೆ ಸದ್ಯ ಹತ್ತಿಕ್ಕಿಕೊಂಡು ಬೇರೆ ತಿಂಡಿ ತಿನ್ನುತ್ತಿರುವೆ. ಇದು ಇನ್ನು ಎಷ್ಟು ದಿನ ಮುಂದುವರಿಯುತ್ತೋ ಎಂದು ಬೇಸರವಾಗುತ್ತದೆ’ ಎಂದು ಚಾಮರಾಜಪೇಟೆ ನಿವಾಸಿ ಶ್ರೀನಿವಾಸ್.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು