ಚಿಕ್ಕಬಳ್ಳಾಪುರ: ರಾಜ್ಯದ ಪ್ರಸಿದ್ಧ ಚಾರಣ ತಾಣಗಳ ಟಿಕೆಟ್ ಬುಕ್ಕಿಂಗ್‌ನಲ್ಲಿ ನಡೆದ ಅವ್ಯವಹಾರ ಹಗರಣದ ಹಿನ್ನೆಲೆಯಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಟಿಕೆಟ್ ಬುಕ್ಕಿಂಗ್ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿದೆ.
ಇದರಿಂದಾಗಿ ರಾಜ್ಯದ 23 ಚಾರಣ ತಾಣಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹಾಗಾಗಿ ರಾಜ್ಯದ ಚಾರಣ ತಾಣಗಳ ಪ್ರವೇಶ ಕೂಡ ಸದ್ಯ ಬಂದ್ ಆಗಿದೆ.
‘ಚಾರಣದ ಟಿಕೆಟ್ ಬುಕ್ಕಿಂಗ್ ಅನ್ನು ಸಂಬಂಧಪಟ್ಟ ವಿಭಾಗ ನಿರ್ವಹಿಸುತ್ತವೆ.
ದಯವಿಟ್ಟು ಅವರೊಂದಿಗೆ ಸಂಪರ್ಕದಲ್ಲಿರಿ’ ಎಂದು ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ.
ಚಾರಣ ತಾಣಗಳಿಗೆ ಜುಲೈ 31ರಂದೇ ಮಂಡಳಿಯು ಟಿಕೆಟ್ ಬುಕ್ಕಿಂಗ್ ಸ್ಥಗಿತಗೊಳಿಸಿದೆ. ಅರಣ್ಯ ಇಲಾಖೆಯ ಐಸಿಟಿ ಕಚೇರಿ ಮೂಲಕ ಆಗಸ್ಟ್‌ನಿಂದ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ನಿರ್ವಹಣೆ ಮಾಡುವಂತೆ ಮಂಡಳಿ ಪತ್ರ ಬರೆದಿದೆ.
ಈ ಸಂಬಂಧ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಪುಷ್ಕರ್ ಅವರು ವಿವಿಧ ಜಿಲ್ಲೆಗಳ ಉಪ ಅರಣ್ಯ
ಸಂರಕ್ಷಣಾಧಿ ಕಾರಿಗೆ ಈ ಕುರಿತು ಪತ್ರ ಬರೆದಿದ್ದಾರೆ.
ಸದರಿ ಚಾರಣ ಪಥಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕೃತಿ ಮಾರ್ಗ ದರ್ಶಕರು ಹಾಗೂ ಚಾರಣ ಉಸ್ತು ವಾರಿಗಳಿಗೆ ಆಗಸ್ಟ್ 1ರಿಂದ ಪ್ರತಿ ತಿಂಗಳು ಮಾರ್ಗದರ್ಶಕರ ಶುಲ್ಕ ಮತ್ತು ಚಾರಣ ಉಸ್ತುವಾರಿ ಶುಲ್ಕವನ್ನು ಅರಣ್ಯ ಇಲಾಖೇ ಪಾವತಿಸಬೇಕು. ತರಬೇತಿ ಅವಶ್ಯವಿದ್ದಲ್ಲಿ ಮಾತ್ರ ಮಂಡಳಿ ನಡೆಸಿಕೊಡಲಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಚಾರಣ ಚಟುವಟಿಕೆ ಉತ್ತೇಜಿಸುವ ಮತ್ತು ರಾಜ್ಯದ ಚಾರಣ ತಾಣಗಳ ಅಭಿವೃದ್ಧಿ ದೃಷ್ಟಿಯಿಂದ 2017ರಲ್ಲಿ ಅರಣ್ಯ ಸಚಿವರು ಚಾರಣ ಚಟುವಟಿಕೆ ಗಳಿಗೆ ರಾಜ್ಯದಾದ್ಯಂತ ಚಾಲನೆ ನೀಡಿದ್ದರು. ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ 23 ಚಾರಣ ಕೇಂದ್ರಗಳಲ್ಲಿ 7 ವರ್ಷಗಳಿಂದ ಚಾರಣ ಚಟುವಟಿಕೆ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿತ್ತು.
ಆನ್‌ಲೈನ್ ಮತ್ತು ಆಫ್‌ಲೈನ್ ಟಿಕೆಟ್ ನೀಡಿ ನಿಸರ್ಗ ಮಾರ್ಗದರ್ಶಕರ ಸಹಯೋಗದಲ್ಲಿ ಚಾರಣ ನಡೆಸಲಾಗುತ್ತಿತ್ತು. ಚಾರಣ ತಾಣಗಳ ನಿರ್ವಹಣೆ ಜವಾಬ್ದಾರಿಯನ್ನು ಮಂಡಳಿ ಹೊತ್ತುಕೊಂಡಿದ್ದರೂ, ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಉಸ್ತುವಾರಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡಲಾಗಿತ್ತು.
ಟಿಕೆಟ್ ಬುಕ್ಕಿಂಗ್‌ನಲ್ಲಿ ಅಕ್ರಮ ನಡೆಯುತ್ತಿವೆ. ಕಾಯ್ದಿರಿಸದಿದ್ದರೂ ಅಕ್ರಮವಾಗಿ ಪ್ರವೇಶ ನೀಡಲಾಗುತ್ತಿದೆ. ವೆಬ್‌ಸೈಟ್ ನಿರ್ವಾಹಕರು ನಕಲಿ ಟಿಕೆಟ್ ನೀಡುತ್ತಿದ್ದಾರೆ. ಚಾರಣ ಸಂಸ್ಥೆಗಳು ಅವ್ಯವಹಾರದಲ್ಲಿ ಶಾಮೀಲಾಗಿವೆ ಎನ್ನುವ ಆರೋಪ ಕೇಳಿ ಬಂದಿತ್ತು.
ಚಿಕ್ಕಬಳ್ಳಾಪುರದ ಸ್ಕಂದಗಿರಿ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ನಲ್ಲಿ ನಡೆಯುತ್ತಿರುವ ಅವ್ಯವಹಾರದಲ್ಲಿ ಮಂಡಳಿ ಸಿಬ್ಬಂದಿ ಹಾಗೂ ವೆಬ್‌ಸೈಟ್ ನಿರ್ವಾಹಕರು ಶಾಮೀಲಾಗಿದ್ದಾರೆ ಎಂದು ಬೆಂಗಳೂರು ಟ್ರಕ್ಕಿಂಗ್ ಕಮ್ಯುನಿಟಿ ಸದಸ್ಯ ಲಿಖಿತ್ ಎಸ್.ನಾರಾಯಣ್ ಅವರು
ಅರಣ್ಯ ಸಚಿವ ಈಶ್ವರ್ ಖಂಡ್ರೆ
ಅವರಿಗೆ ದೂರು ನೀಡಿದ್ದರು. ಈ ದೂರಿನ ನಂತರ ಅಕ್ರಮ ಕುರಿತು ಮತ್ತಷ್ಟು ದೂರು ಸಚಿವರನ್ನು ತಲುಪಿದ್ದವು.
ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಅರಣ್ಯ ಸಚಿವರು ಸೂಚಿಸಿದ್ದರು. ಆರೋಪಗಳ ಹಿನ್ನೆಲೆಯಲ್ಲಿ ಸ್ಕಂದಗಿರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಡಲಾಯಿತು. ತನಿಖೆ ನಡೆಸಿ ವರದಿ ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಐವರು ಅಧಿಕಾರಿಗಳ ಸಮಿತಿ ಸಹ ರಚಿಸಿದ್ದರು.
ವೆಬ್‌ಸೈಟ್ ಅಭಿವೃದ್ಧಿ ನಂತರ ಚಾರಣಕ್ಕೆ ಅನುಮತಿ
ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ಗೆ ವೆಬ್‌ಸೈಟ್ ಅಭಿವೃದ್ಧಿ ಕೆಲಸ ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆಯುತ್ತಿದೆ. ಶುಲ್ಕ ನಿಗದಿ ಹೊಣೆಯನ್ನೂ ಇಲಾಖೆಗೆ ವಹಿಸಲಾಗಿದೆ. ವೆಬ್‌ಸೈಟ್ ಸಿದ್ಧವಾದ ನಂತರವೇ ಸ್ಕಂದಗಿರಿ ಸೇರಿದಂತೆ ಉಳಿದ ಚಾರಣ ಪಥಗಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ವೆಬ್‌ಸೈಟ್ ರೂಪಿಸಿದ ನಂತರ ಪರೀಕ್ಷಾರ್ಥ ಕೆಲಸ ಆಗಬೇಕು. ವೆಬ್‌ಸೈಟ್ ಕೆಲಸ ಶೇ 60ರಷ್ಟು ಆಗಿದೆ ಎನ್ನುವ ಮಾಹಿತಿ ಇದೆ. ಎಲ್ಲವನ್ನೂ ವ್ಯವಸ್ಥಿತವಾಗಿ ರೂಪಿಸಿದ ನಂತರವೇ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.